ನಿಮ್ಮ ನಿಮ್ಮಲ್ಲೇ ಬಡಿದಾಡಿಕೊಳ್ಳೋದನ್ನು ಬಿಟ್ಟು ಬನ್ನಿ ಮತ್ತೆ ಚುನಾವಣೆ ಎದುರಿಸೋಣ : HDK ಗೆ BSY ಸವಾಲ್

ಶಿವಮೊಗ್ಗ : ಪದವೀಧರ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರಚಾರ ನಡೆಸಿ ಬಂದಿದ್ದೇನೆ.  ರಾಜ್ಯದಲ್ಲಿ ನಡೆಯುತ್ತಿರುವ ಆರು ವಿಧಾನಪರಿಷತ್ ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿ ನೂರಕ್ಕೆ ನೂರು ಗೆಲ್ಲುವ ವಿಶ್ವಾಸವಿದೆ. ಪ್ರಸ್ತುತ ರಾಜ್ಯದಲ್ಲಿ ಅಧಿಕಾರದಲ್ಲಿರುವ ಭ್ರಷ್ಟ ಸರ್ಕಾರವನ್ನು ನೋಡಿದ ಪ್ರಜ್ಞಾವಂತ ಮತದಾರರು ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌ ಯಡಿಯೂರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಈ ಹಿಂದೆ ರಾಜ್ಯದ ಜನ ಮುಲಾಜಿನಲ್ಲಿದ್ದೇನೆ ಎಂದು ಹೇಳುತ್ತಿದ್ದ ಕುಮಾರಸ್ವಾಮಿ ಇದೀಗ ಕಾಂಗ್ರೆಸ್ ಮುಲಾಜಿನಲ್ಲಿದ್ದೇನೆ ಎನ್ನುವ ಮೂಲಕ ಮತದಾರರಿಗೆ ಅಪಮಾನ ಮಾಡಿದ್ದಾರೆ.ಎಚ್.ಡಿ.ಕುಮಾರಸ್ವಾಮಿ ತಾನು ಅದೃಷ್ಟದ ಮುಖ್ಯಮಂತ್ರಿ‌. ರಾಜ್ಯದ ಜನತೆ ಆಯ್ಕೆ ಮಾಡಿದ ಮುಖ್ಯಮಂತ್ರಿ ಎಂದು ಇಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಮತದಾರರನ್ನು ಅಪಮಾನ ಮಾಡಿದ್ದಾರೆ. ಮುಖ್ಯಮಂತ್ರಿ ಕೂಡಲೇ ರಾಜ್ಯದ ಜನರ ಕ್ಷಮೆಯನ್ನು ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಹಿಂದಿನ ಸರ್ಕಾರವೇ ಸಣ್ಣ ರೈತರ ಸಾಲ ಮನ್ನಾ ಮಾಡಿದೆ. ನಿಮ್ಮ ಹೊಸ ಯೋಜನೆಯಿಂದ ನೂರಕ್ಕೆ ಐದು ಜನರಿಗೂ ಉಪಯೋಗವಾಗುವುದಿಲ್ಲ.  ರೈತರ ಕಣ್ಣಿಗೆ ಮಣ್ಣೆರಚುವ ಕೆಲಸವನ್ನು ಅಪ್ಪ ಮಕ್ಕಳು ಮಾಡುತ್ತಿದ್ದಾರೆ. ನಾನು ಇಪ್ಪತ್ತು ದಿನ ಕಾಯುತ್ತೇನೆ. ಯೋಜನೆ ಹೇಗೆ ಅನುಷ್ಟಾನಗೊಳಿಸುತ್ತಾರೆ ಎಂಬುದನ್ನು ನೋಡಿ ಬಳಿಕ ಹೋರಾಟದ ರೂಪುರೇಷೆ ಸಿದ್ಧಪಡಿಸುತ್ತೇನೆ ಎಂದಿದ್ದಾರೆ.

ನಾವು ವಿರೋಧ ಪಕ್ಷದಲ್ಲಿದ್ದು ಕೊಂಡು ಕೆಲಸ ಮಾಡುತ್ತೇವೆ. ಕಾಂಗ್ರೆಸ್ ಜೆಡಿಎಸ್ ಅವರು ಈಗಾಗಲೇ ಬಡಿದಾಡಿಕೊಳ್ಳುತಿದ್ದಾರೆ. ಅದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಪ್ರಜಾತಂತ್ರ ವ್ಯವಸ್ಥೆ ಬಗ್ಗೆ ಗೌರವವಿದ್ದಲ್ಲಿ ಸರ್ಕಾರ ವಜಾ ಮಾಡಿ ಜನರ ಮುಂದೆ ಹೋಗೋಣ. ಜನರಿಗೆ ಗೊತ್ತಿದೆ ಬಿಜೆಪಿಗೆ ಅನ್ಯಾಯವಾಗಿದೆ ಎಂದು. ಸರ್ಕಾರ ವಿಸರ್ಜಿಸಿ ಬನ್ನಿ ಮತ್ತೆ ಜನರ ಎದುರು ಹೋಗೋಣ ಎಂದು ಯಡಿಯೂರಪ್ಪ ಸವಾಲು ಹಾಕಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com