ಪ್ರಧಾನಿ ಮೋದಿ ಸರ್ಕಾರದ ನಾಲ್ಕು ವರ್ಷಗಳು…ಕಾಳಿಗಿಂತ ಜೊಳ್ಳೇ ಜಾಸ್ತಿ…

ಭಾರತೀಯ ಜನತಾ ಪಕ್ಷದ ನಾಲ್ಕು ವರ್ಷದ ಆಡಳಿತವನ್ನು ಸಾಂಸ್ಥಿಕ ಮತ್ತು ಮಾನವೀಯ ಘನತೆಯ ಮೂಸೆಯಲ್ಲಿಟ್ಟು ವಿಶ್ಲೇಷಿಸಬೇಕು.

ಯಾವುದೇ ಪಕ್ಷದ ನೇತೃತ್ವದಲ್ಲಿರುವ ಯಾವುದೇ ಸರ್ಕಾರದ ಆಡಳಿತವನ್ನು ಅವು ಮಾನವೀಯ ಮತ್ತು ಸಾಂಸ್ಥಿಕ ಘನತೆಯನ್ನು ಎಷ್ಟರಮಟ್ಟಿಗೆ ಎತ್ತಿಹಿಡಿದವು ಎಂಬುದರ ಆಧಾರದ ಮೇಲೆಯೇ ವಿಶ್ಲೇಷಿಸಬೇಕು. ಮತ್ತೊಂದು ಕಡೆ ತಮ್ಮ ಆಡಳಿತದ ಕೊನೆಯ ವರ್ಷದಲ್ಲಿ ತಮ್ಮ ಸರ್ಕಾರದ ಆಳ್ವಿಕೆಯ ಪರಾಮರ್ಶೆಯನ್ನು ವ್ಯಾವಹಾರಿಕ ದೃಷ್ಟಿಯಲ್ಲಿ ಮಾಡಿಕೊಳ್ಳುವುದು ಸ್ವಾಭಾವಿಕವಾಗಿದ್ದು ಅದು ಭಾರತೀಯ ಜನತಾ ಪಕ್ಷವನ್ನೂ ಒಳಗೊಂಡಂತೆ ಆಯಾ ಪಕ್ಷಗಳಿಗೆ ಬಿಟ್ಟದ್ದು. ಆದರೆ ಪ್ರಭುತ್ವದ ಅಂಗಸಂಸ್ಥೆಗಳು ಮಾನವೀಯ ಮೌಲ್ಯಗಳನ್ನು ಮಾತ್ರವಲ್ಲದೇ ಪ್ರಭುತ್ವದ ಘನತೆಯನ್ನೂ ಬಲವಾಗಿ ನೆಲೆಯೂರಿಸಬೇಕೆಂದು ಬಯಸುವವರು ಪ್ರಸ್ತುತ ಸರ್ಕಾರದ ಮೌಲಿಕ ವಿಶ್ಲೇಷಣೆಯನ್ನು ಕೇವಲ ನಾಲ್ಕು ವರ್ಷಗಳಿಗೆ ಮಾತ್ರ ಸೀಮಿತಗೊಳಿಸಿ ಮಾಡಲಾಗದು. ಅದೇ ಸಮಯದಲ್ಲಿ  ಜನತೆಯ ನೈತಿಕ ಕಾಳಜಿಯನ್ನು ಮತ್ತು ಘನತೆಯನ್ನು ಯಾವುದೇ ಪ್ರಭುತ್ವ ಅಥವಾ ಅದರ ಅಂಗಸಂಸ್ಥೆಗಳು ಎಂದಿಗೂ ಕಾಪಾಡುವುದಿಲ್ಲ ಎಂಬಂಥ ಅರಾಜಕವಾದಿ ನಿಲುವನ್ನು ಸಹ ಹೊಂದಲು ಸಾಧ್ಯವಿಲ್ಲ.

ಹಾಗಿದ್ದಲ್ಲಿ ಹಾಲೀ ಸರ್ಕಾರದ ಆಳ್ವಿಕೆಯ ಅವಧಿಯ ಕಾಲಘಟ್ಟದಲ್ಲೇ ಪ್ರಭುತ್ವದ ಘನತೆಯ ಪ್ರಶ್ನೆಯನ್ನು ಏಕೆ ಎತ್ತಲಾಗುತ್ತಿದೆ? ಏಕೆಂದರೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿರುವ ಈ ಅವಧಿಯಲ್ಲೇ ಗೋ-ರಕ್ಷಕರು, ಸಾಮಾಜಿಕ ಜಾಲತಾಣಗಳಲ್ಲಿನ ಟ್ರೋಲುಗಳು, ಮತ್ತು ನೈತಿಕ ಹಾಗೂ ಸಾಂಸ್ಕೃತಿಕ ಪೊಲೀಸರೆಂಬ ಪರ್ಯಾಯ ಅಧಿಕಾರ ಕೇಂದ್ರಗಳು ಸಮಾಜದ ಒಂದು ಸಮುದಾಯದ ಮೇಲೆ ಪರ್ಯಾಯ ಅಧಿಕಾರವನ್ನೇ ನಡೆಸುತ್ತಾ ಸರ್ಕಾರದ ಘನತೆಯನ್ನೇ ಪ್ರಶ್ನಿಸುವಂತೆ ಮಾಡಿದ್ದಾರೆ.

ಒಂದು ಪ್ರಭುತ್ವದ ಘನತೆಯು ಅಧಿಕಾರದ ಮೇಲೆ ತನಗಿರುವ ಸರ್ವಾಧಿಕಾರವನ್ನು ಅದು ತನ್ನ ಜನತೆಯ ನೈತಿಕ ಕಲ್ಯಾಣ ಮತ್ತು ಘನತೆಯನ್ನು ಎತ್ತಿಹಿಡಿಯಲು ಹೇಗೆ ಬಳಸುತ್ತದೆ ಎಂಬುದನ್ನು ಆಧರಿಸಿರುತ್ತದೆ. ಪ್ರಭುತ್ವವು ಈ ಗುರಿಯನ್ನು ಮಾನವೀಯ ಮೌಲ್ಯಗಳನ್ನು ಸಾಕಾರ ಮಾಡಲು ಅಡ್ಡಿಯಾಗುತ್ತಿರುವ ಶಕ್ತಿಗಳ ಮೇಲೆ ತನ್ನ ಸಾಂಸ್ಥಿಕ ಅಧಿಕಾರವನ್ನು ಬಳಸಿ ಪಳಗಿಸುವ ಮೂಲಕ ಸಾಧಿಸಬಹುದು. ಹೀಗಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಈ ಪರ್ಯಾಯ ಅಧಿಕಾರ ಕೇಂದ್ರಗಳು ಹಿಂದೆಂದೂ ಇಲ್ಲದಷ್ಟು ಮಟ್ಟಿಗೆ ಹೇಗೆ ಹೆಚ್ಚಿಕೊಂಡವು ಎಂದು ನಾವು ಬಿಜೆಪಿ ವಕ್ತಾರರನ್ನು ಕೇಳಲೇ ಬೇಕಿದೆ. ಬಿಜೆಪಿಯ ಕಾರ್ಯಕರ್ತರ ಪ್ರಕಾರ ಹಾಲಿ ಪ್ರಧಾನ ಮಂತ್ರಿಗಳು ಭಾರತ ಕಂಡ ನಾಯಕರಲ್ಲೇ ಅತ್ಯಂತ ಬಲಿಷ್ಟ ನಾಯಕರಾಗಿರುವುದರಿಂದ ಈ ಪ್ರಶ್ನೆಯನ್ನು ಕೇಳುವುದು ಇನ್ನೂ ಹೆಚ್ಚು ಸಮಂಜಸವಾಗಿದೆ.

ಈ ಪರ್ಯಾಯ ಅಧಿಕಾರ ಕೇಂದ್ರಗಳು ಗುಜರಾತಿನ ಊನಾದಲ್ಲಿ ಮಾಡಿದಂತೆ ಬಹಿರಂಗವಾಗಿ ದಲಿತರಿಗೆ ಅಪಮಾನ ಮಾಡುತ್ತಾರೆ. ಹಾಗೂ ಕೆಲವು ಸಮುದಾಯಗಳು ತಮ್ಮ ಸಾಂಸ್ಕೃತಿಕ ಸ್ವಾತಂತ್ರ್ಯವನ್ನು ಅನುಭವಿಸಲು ಕೀಳರಿಮೆ ಪಡುವಂತೆಯೂ ಹಾಗೂ ತಮಗೆ ಎಟಕುವ ಮತ್ತು ಲಭ್ಯವಿರುವ ಆಹಾರವನ್ನು  ತಿನ್ನುವ ಹಕ್ಕನ್ನೂ ಸಹ ಚಲಾಯಿಸದಂತೆಯೂ ನೋಡಿಕೊಂಡಿದ್ದಾರೆ. ಸ್ವಘೋಷಿತ ಸಸ್ಯಾಹಾರಿ ಪ್ರತಿಪಾದಕರು ಹುಟ್ಟುಹಾಕಿರುವ ಸಸ್ಯಾಹಾರಿ ಪುಂಡಾಟಿಕೆಯು ಉಳಿದವರ ಅಸ್ಥಿತ್ವದ ಹಕ್ಕನ್ನೂ ಆ ಮೂಲಕ ಅವರ ಘನತೆಯನ್ನೂ ಕಸಿದುಕೊಳ್ಳುತ್ತಿದೆ. ಈ ಶಕ್ತಿಗಳನ್ನು ನಿಯಂತ್ರಿಸುವಲ್ಲಿ ಬಿಜೆಪಿ ಸರ್ಕಾರ ಅಹಾಯಕತೆಯನ್ನು ಅನುಭವಿಸುತ್ತಿದೆಯೇ? ಹಾಗಿದ್ದಲ್ಲಿ ಅದು ಭಾರತ ಸಂವಿಧಾನದಿಂದ ದತ್ತವಾದ ತನ್ನ ಘನತೆಯನ್ನು ತಾನೇ ಕಳೆದುಕೊಳ್ಳುತ್ತಿಲ್ಲವೇ? ಕಳೆದ ನಾಲ್ಕು ವರ್ಷಗಳಲ್ಲಿ ಅತಿರೇಕಕ್ಕೆ ತಲುಪಿರುವ ಸಾಮೂಹಿಕ ಪುಂಡಾಟಿಕೆ, ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಸಂಘಟಿತ ಟ್ರೋಲಿಂಗ್,ಕಥುವಾ ಅತ್ಯಾಚಾರ ಪ್ರಕರಣದಲ್ಲಿ ಆದಂತೆ ಕ್ರಿಮಿನಲ್ ಪ್ರಕರಣದ ತನಿಖೆಗೆ ಅಡ್ಡಿಪಡಿಸುವುದು, ಇವೇ ಇನ್ನಿತ್ಯಾದಿ ಪ್ರಕರಣಗಳು ದೇಶದಲ್ಲಿ ಪ್ರಭುತ್ವವು ನಿಯಂತ್ರಿಸಲಾಗದ ಕೆಲವು ಸಂವಿಧಾನ ಬಾಹಿರ ಸಾಮಾಜಿಕ ಶಕ್ತಿಗಳಿವೆ ಎಂಬ ಅಬಿಪ್ರಾಯವನ್ನು ಗಟ್ಟಿಗೊಳಿಸಿದೆ ಎಂಬುದರಲ್ಲಿ ಅತಿಶಯೋಕ್ತಿಯೇನೂ ಇಲ್ಲ.

ಉದಾರವಾದಿ ಪ್ರಜಾತಂತ್ರದ ಸಂಸ್ಥೆಗಳು ಜನತೆಯ ಆತ್ಮಗೌರವವನ್ನು ಎತ್ತಿಹಿಡಿಯಬೇಕೆಂದು ನಿರೀಕ್ಷಿಸಲಾಗುತ್ತದೆ. ಅಲಕ್ಷಿತ ಸಮುದಾಯಗಳಿಗೆ ಸೇರಿದ ಜನರು ಜ್ನಾನದ ಉತ್ಪಾದನೆಯಲ್ಲಿ ಭಾಗವಹಿಸುತ್ತಾ ಆತ್ಮ ಗೌರವವನ್ನು ಸಂಪಾದಿಸಿಕೊಳ್ಳಬಹುದು. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ನಮ್ಮ ಶೈಕ್ಷಣಿಕ ಸಂಸ್ಥೆಗಳು ಈ ಆದರ್ಶಗಳಿಂದ ದೂರಸರಿದಿವೆ ಮತ್ತು ಅವು ಸಮಾನತೆ ಮತ್ತು ಸಾಮಾಜಿಕ ನ್ಯಾಯಗಳಂಥ ಪರಿಕಲ್ಪನೆಗಳ ಬಗ್ಗೆ ಅಸಹನೆಯನ್ನು ಬೆಳೆಸುವ ಕೇಂದ್ರಗಳಾಗಿಬಿಟ್ಟಿವೆ. ಉನ್ನತ ಶಿಕ್ಷಣದಲ್ಲಿ ಸಂಭವಿಸುತ್ತಿರುವ ನೈತಿಕ ಅಧಃಪತನಕ್ಕೆ ಒಂದು ದುರಂತಮಯ ಉದಾಹರಣೆಯೆಂದರೆ ರೋಹಿತ್ ವೇಮುಲ.

ಅಂತಿಮವಾಗಿ ಒಂದು ಸರ್ಕಾರದ ಘನತೆಯು ನೈಜ ಸತ್ಯಗಳನ್ನು ಗ್ರಹಿಸಿ ಅದನ್ನು ಮುಖಾಮುಖಿಯಾಗಿ ಎದುರಿಸುವ ನೈತಿಕ ಸ್ಥೈರ್ಯದಲ್ಲಿ ಅಡಕವಾಗಿರುತ್ತದೆ. ಉದಾಹರಣೆಗೆ ತೀವ್ರ ಹತಾಶೆ, ಅಸಹಾಯಕತೆ ಮತ್ತು ವ್ಯಕ್ತಿಗತ ಘನತೆಗೆ ಆಗುತ್ತಿರುವ ತೀವ್ರ್ರ ಅಪಮಾನಗಳಿಂದಾಗಿ ಸಂಭವಿಸುತ್ತಿರುವ ರೈತರ ಆತ್ಮಹತ್ಯೆಗಳು. ಬಿಜೆಪಿ ಸರ್ಕಾರವು ಈ ಸತ್ಯವನ್ನು ಎದುರಾಗಲು ನಿರಾಕರಿಸುತ್ತದೆ. ಅದರ ಬದಲಿಗೆ ಅದು ಈಡೇರಿಸಲು ಅಸಾಧ್ಯವಾದ ಭರವಸೆಗ ಮಹಾಪೂರವನ್ನು ಹರಿಸುವ ಮೂಲಕ ತಾನು ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡುತ್ತಿದ್ದೇನೆಂಬ ಭ್ರಮೆಯನ್ನು ಮೂಡಿಸುತ್ತಿದೆ. ಬಿಜೆಪಿಯ ಭರವಸೆಗಳಾದ ಅಚ್ಚೆ ದಿನ್ ಕೇವಲ ಊಹಾತ್ಮಕವಾಗಿದ್ದು ಸಾಕಾರವಾಗುತ್ತಿರುವ ಸತ್ಯವಲ್ಲ. ಮತ್ತೊಂದು ಉದಾಹರಣೆಯೆಂದರೆ ನೋಟು ನಿಷೇಧ. ಅದರಲ್ಲಿ ಸಾಕಾರಗೊಂಡ ಸತ್ಯವೆಂದರೆ ನೂರಕ್ಕೂ ಹೆಚ್ಚು ಜನರ ಸಾವು ಮತ್ತು ಲಕ್ಷಾಂತರ ಜನರ ಬದುಕಿನ ವಿನಾಶ. ಅದನ್ನು ಹೊರತು ಪಡಿಸಿ  ಭರವಸೆ ಕೊಟ್ಟದ್ದು ಏನೂ ಸಾಕಾರವಾಗಲಿಲ್ಲ.

ಇತ್ತೀಚಿಗೆ ನಡೆದ ಉಪಚುನಾವಣೆಗಳಲ್ಲಿ ಬಿಜೆಪಿ ಅನುಭವಿಸುತ್ತಿರುವ ಸಾಲು ಸಾಲು ಸೋಲುಗಳಿಂದ ಒಂದಂತೂ ಅರ್ಥವಾಗುತ್ತದೆ. ಬಿಜೆಪಿ ನೀಡುವ ಅತಿರಂಜಿತ ಭರವಸೆಗಳಲ್ಲಿ ಅಂತರ್ಗತವಾಗಿರುವ ಭ್ರಮಾಬಲವು ಭಾರತದ ಮತದಾರನ ರಾಜಕೀಯ ಸಂವೇದನೆಯ ಮೇಲೆ ಮಾಡುತ್ತಿದ್ದ ಪ್ರಭಾವವು ನಿಧಾನವಾಗಿ ಕಡಿಮೆಯಾಗುತ್ತಿದೆ. ಈ ಕಟು ಸತ್ಯವನ್ನು ಅರ್ಥಮಾಡಿಕೊಂಡಿರುವ ಬಿಜೆಪಿ ಈಗ ತಮ್ಮ ಪರಮೋಚ್ಚ ನಾಯಕನ ವ್ಯಕ್ತಿಗತ ತ್ಯಾಗದ ಕಥನಗಳನ್ನು ಬಿತ್ತರಿಸುತ್ತಿದೆ. ವ್ಯಕ್ತಿಗತ ತ್ಯಾಗದ ಕಥನಗಳು ನಿಜಕ್ಕೂ ಒಂದು ಅಮೂಲ್ಯ ಪ್ರಚಾರ ಸಂಪನ್ಮೂಲವೇ ಆಗಿದ್ದರೂ ಅದು ಜನತೆಯಲ್ಲಿ ಹೆಚ್ಚೆಚ್ಚು ಮಾನವೀಯ ಕಾಳಜಿಯನ್ನು ಹುಟ್ಟುಸುವಂಥಾ ಯೋಜನೆಗಳಲ್ಲಿ ಮಾತ್ರ ಅಧಿಕವಾಗಿ ಸಫಲವಾಗುತ್ತವೆ. ಆದರೆ ವೈಯಕ್ತಿಕ ತ್ಯಾಗದ ಕಥನಗಳನ್ನು ಒಂದು ಪಕ್ಷದ ಮನುಷ್ಯ ವಿರೋಧಿ ಕಾರ್ಯಸೂಚಿಗಳಿಗೆ ಬಳಸುತ್ತಿದ್ದರೆ ಅದನ್ನು ಒಪ್ಪಲಾಗದು.

 

ಕೃಪೆ: Economic and Political Weekly

ಅನು: ಶಿವಸುಂದರ್

 

Leave a Reply

Your email address will not be published.

Social Media Auto Publish Powered By : XYZScripts.com