ಪರಿಸರ ದಿನಾಚರಣೆ ದಿನವೇ ರಾಜ್ಯದ ಜನರ ಮೇಲೆ ತೆರಿಗೆಯ ಬರೆ ಎಳೆದ ಕುಮಾರಸ್ವಾಮಿ

ಬೆಂಗಳೂರು : ಪರಿಸರದ ಮೇಲೆ ತೀವ್ರ ಹಾನಿ ಉಂಟು ಮಾಡುವ ಪ್ಲಾಸ್ಟಿಕ್ ಬಳಕೆ ತಡೆಗಟ್ಟಲು ಪ್ಲಾಸ್ಟಿಕ್ ವಸ್ತುಗಳ ಉತ್ಪನ್ನ ಮತ್ತು ಮಾರಾಟದ ಮೇಲೆ ಶೇಕಡ ಐದರಷ್ಟು ತೆರಿಗೆ ವಿಧಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದಲ್ಲಿ ಪರಿಸರ ಸಂರಕ್ಷಣೆಗೆ  ಶಾಲಾ ಮಕ್ಕಳನ್ನು ಪ್ರೋತ್ಸಾಹಿಸಿ ವಿನೂತನ ಕಾರ್ಯಕ್ರಮ ರೂಪಿಸಿದ ಶಿಕ್ಷಕರು ಹಾಗೂ ಪರಿಸರ ಸಂರಕ್ಷರನ್ನು ಸನ್ಮಾನಿಸಲಾಯಿತು. ಈ ವೇಳೆ ಮಾತನಾಡಿದ ಅವರು ರಾಜ್ಯದಲ್ಲಿ ಪ್ಲಾಸ್ಟಿಕ್ ನಿಷೇಧ ಹೇರಿದ್ದರೂ ಅದರ ಬಳಕೆ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿ ಕಡಿಮೆಯಾಗಿಲ್ಲ. ಪ್ಲಾಸ್ಟಿಕ್ ಉತ್ಪನ್ನ, ಮಾರಾಟ ಮತ್ತು ಬಳಕೆ ನಿರ್ಬಂಧಿಸುವ ಅನೇಕ ಕಾನೂನುಗಳು ಜಾರಿಯಲ್ಲಿದ್ದರೂ ಪ್ಲಾಸ್ಟಿಕ್ ಬಳಕೆ ಮಾತ್ರ ಅವ್ಯಾಹತವಾಗಿ ಮುಂದುವರೆದಿದೆ. ಇದಕ್ಕೆ ಕಡಿವಾಣ ಹಾಕಲು ಪ್ಲಾಸ್ಟಿಕ್ ವಸ್ತುಗಳ ಉತ್ಪನ್ನ ಹಾಗೂ ಮಾರಾಟದ  ಪ್ರಮಾಣ ಕಡಿಮೆ ಮಾಡಲು ಹೆಚ್ಚುವರಿ ತೆರಿಗೆ ವಿಧಿಸುವುದರಿಂದ ಪ್ಲಾಸ್ಟಿಕ್ ಬಳಕೆ ನಿಯಂತ್ರಣಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಪರಿಸರದ ಸಂರಕ್ಷಣೆಗೆ ಅನೇಕ ಕಾನೂನುಗಳನ್ನು ಜಾರಿಗೆ ತಂದರು. ಪರಿಸರದ ಮೇಲಾಗುವ ದುಷ್ಪರಿಣಾಮವನ್ನು ಪೂರ್ಣಪ್ರಮಾಣದಲ್ಲಿ  ತಡೆಯಲು ಇದುವರೆಗೂ ಸಾಧ್ಯವಾಗಿಲ್ಲ. ಎಪ್ಪತ್ತು-ಎಂಬತ್ತರ ದಶಕಗಳಲ್ಲಿ ಬೆಂಗಳೂರು ಮಹಾ ನಗರದಲ್ಲಿ ಬೇಸಿಗೆ ಸಮಯದಲ್ಲಿಯೂ ಉಣ್ಣೆ ಬಟ್ಟೆಗಳನ್ನು ತೊಡಬೇಕಾದ ಸ್ಥಿತಿ ಇತ್ತು. ಇದೀಗ ಪರಿಸರ ಮಾಲಿನ್ಯದಿಂದ ಉಂಟಾಗಿರುವ ಕಲುಷಿತ ವಾತಾವರಣದಿಂದಾಗಿ ಅನೇಕ ರೋಗ ರುಜಿನಗಳು ಉಲ್ಬಣಗೊಂಡಿವೆ. ಹೀಗೆಯೇ ಮುಂದುವರೆದಲ್ಲಿ ಮುಂದಿನ ಜನಾಂಗಕ್ಕೆ ಶುದ್ಧವಾದ ಗಾಳಿ – ಶುದ್ಧವಾದ ನೀರು ದೊರೆಯುವುದೂ ಕಷ್ಟಕರವಾಗಲಿದೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com