ಕಾಂಗ್ರೆಸ್‌ ಸಚಿವರ ಅಂತಿಮ ಪಟ್ಟಿ ಪರಮೇಶ್ವರ್ ಕೈಯಲ್ಲಿ  : ಹಿರಿಯರಲ್ಲಿ ಹೊಗೆಯಾಡುತ್ತಿದೆ ಅಸಮಾಧಾನ

ತುಮಕೂರು : ಸದ್ಯ ಎಲ್ಲರ ಚಿತ್ತ ಮೈತ್ರಿ ಸರ್ಕಾರದ ಉಪಮುಖ್ಯಮಂತ್ರಿಯತ್ತ ತಿರುಗಿದೆ. ಈಗಾಗಲೆ ಕಾಂಗ್ರೆಸ್‌ನಿಂದ ಸಚಿವರ ಅಂತಿಮ ಪಟ್ಟಿ ರೆಡಿಯಾಗಿದ್ದು, ಪಕ್ಷದ ಹಿರಿಯರಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ.

ಇತ್ತೀಚೆಗಷ್ಟೇ ಡಿಸಿಎಂ ಪರಮೇಶ್ವರ್‌ ಎರಡು ಬಾರಿ ಸಚಿವರಾದವರಿಗೆ ಈ ಬಾರಿ ಸಚಿವ ಸ್ಥಾನವಿಲ್ಲ ಎಂದಿದ್ದರು. ಇದಾದ ಬಳಿಕ ಪಕ್ಷದ ಹಿರಿಯರಲ್ಲಿ ಅಸಮಾಧಾನ ಶುರುವಾಗಿತ್ತು. ಈಗ ಪಕ್ಷದ ಸದಸ್ಯರನ್ನು ನಿಯಂತ್ರಿಸುವ ಎಲ್ಲಾ ಜವಾಬ್ದಾರಿಗಳೂ ಪರಮೇಶ್ವರ್‌ ಮೇಲಿದ್ದು, ಡಿಕೆಶಿ, ಸಿದ್ದರಾಮಯ್ಯ ಸೇರಿದಂತೆ ಎಲ್ಲರ ಜುಟ್ಟು ಪರಮೇಶ್ವರ್‌ ಕೈಯಲ್ಲಿದೆ.

ಈ ಮಧ್ಯೆಯೇ  ಇಂದು ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ‌ ನಾವು ಸಮ್ಮಿಶ್ರ ಸರ್ಕಾರ ಮಾಡಿದ್ದೇವೆ. ಕಾನೂನು ಚೌಕಟ್ಟಿನಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಅವಕಾಶ ಇದೆ‌. ಈ ಕುರಿತು ರಾಜ್ಯಪಾಲರಿಗೆ ಅನುಮತಿ‌ ಕೋರಿದ್ದೆವು. ರಾಜ್ಯಪಾಲರು ಕಾನೂನನ್ನ ಸ್ವಲ್ಪ ಬದಲಿಸಿ ಬಿಜೆಪಿಗೆ ಅವಕಾಶ ನೀಡಿದರು ಎಂದು ಡಿಸಿಎಂ ಪರಮೇಶ್ವರ್‌ ಹೇಳಿದ್ದಾರೆ.

5 ವರ್ಷ ನಾವು ಸುಭದ್ರವಾಗಿ ಸರ್ಕಾರ ನಡೆಸ್ತೀವಿ ಅನ್ನೋ ವಿಶ್ವಾಸ ಇದೆ. ಇದೇ 6 ರಂದು ಸಂಪುಟ ವಿಸ್ತರಣೆ ಆಗಲಿದೆ. ಅಂದೇ ಖಾತೆಗಳನ್ನ ಹಂಚಲಾಗುತ್ತದೆ. ಅಧಿಕಾರಿಗಳೊಟ್ಟಿಗೆ ನಾವು ಯಾವುದೇ ಲೋಪ ಇಲ್ಲದೇ ಆಡಳಿತ ನಡೆಸುತ್ತೇವೆ. ಸರಿಯಾದ‌ ಸಮಯಕ್ಕೆ ಮುಂಗಾರು ಬಂದಿದೆ. ರೈತರಿಗೆ ಸಮರ್ಪಕವಾಗಿ ಗೊಬ್ಬರ, ಬೀಜ ವಿತರಣೆಗೆ ನಾವು ಸೂಚನೆ‌ ನೀಡಿದ್ದೇವೆ. ರೈತರಿಗೆ ಎಷ್ಟು ಅಗತ್ಯ‌ ಇದೆ ಅದೆಲ್ಲಾ ಪೂರೈಕೆಯಾಗುತ್ತಿದೆ. ಯಾವುದೇ ಲೋಪವಿಲ್ಲದೇ ರೈತರ ಸಹಾಯಕ್ಕೆ ಕೆಲಸ ಮಾಡುವುದಾಗಿ ಹೇಳಿದ್ದಾರೆ.

ಪ್ರತಿಯೊಂದು ಜಿಲ್ಲೆಗೆ ಸಚಿವರನ್ನ ನೇಮಕ ಮಾಡುತ್ತೇವೆ. ತುಮಕೂರು‌ ಜಿಲ್ಲೆಗೆ ಡಿಸಿಎಂ ಆಗಿ ಪ್ರಥಮ ಬಾರಿಗೆ ಗೌರವ ಸಿಕ್ಕಿದೆ. ಈ ಅವಕಾಶವನ್ನು ವಿನಿಯೋಗ ಮಾಡಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಇನ್ನೂ ಹೆಚ್ಚಿನ ಯೋಜನೆಗಳು, ಕಾರ್ಯಕ್ರಮಗಳನ್ನ ಜಿಲ್ಲೆಗೆ ತರುತ್ತೇನೆ. ಡಿ.ಕೆ ಶಿವಕುಮಾರ್ ಪಕ್ಷದ ಒಬ್ಬ ಪ್ರಾಮಾಣಿಕ ಶಿಸ್ತಿನ ಸಿಪಾಯಿ. ಅವರಿಗೆ ಯಾವುದೇ ಅಸಮಾಧಾನ ಇಲ್ಲ.  ಪಕ್ಷ ಯಾವುದೇ ಜವಾಬ್ದಾರಿ ನೀಡಿದ್ರೂ ಅದನ್ನ ನಿಭಾಯಿಸುತ್ತಾರೆ. ಯಾರ್ಯಾರಿಗೆ ಸಚಿವ ಸ್ಥಾನ ಅನ್ನೋದು 6 ರಂದು ಗೊತ್ತಾಗಲಿದೆ. ಎಲ್ಲಾ ವರ್ಗದವರನ್ನೂ ಗಮನದಲ್ಲಿಟ್ಟುಕೊಂಡು ಸಚಿವ ಸ್ಥಾನ ಹಂಚುವುದಾಗಿ ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com