ಎಚ್‌ಡಿಕೆ, ಡಿಕೆಶಿ ನನ್ನ ವೈರಿಗಳು, ಯಾವತ್ತಿದ್ದರೂ ಅವರನ್ನು ಎದುರುಹಾಕಿಕೊಳ್ಳುತ್ತೇನೆ ಎಂದ ಬಿಜೆಪಿ ನಾಯಕ…

ರಾಮನಗರ : ಚನ್ನಪಟ್ಟಣದ ಜನ ಅಭಿವೃದ್ಧಿಗಿಂತಲೂ ಹೆಚ್ಚಾಗಿ ಕುಮಾರಸ್ವಾಮಿ ಸಿಎಂ ಅಭ್ಯರ್ಥಿ ಎಂದು ಅವರನ್ನ ಗೆಲ್ಲಿಸಿದ್ದಾರೆ, ನನ್ನನ್ನ ಸೋಲಿಸಿದ್ದಾರೆ ಎಂದು ಚನ್ನಪಟ್ಟಣದ ಮಾಜಿ ಶಾಸಕ ಸಿ.ಪಿ ಯೋಗೀಶ್ವರ್ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಒಕ್ಕಲಿಗರನ್ನ ಕಡೆಗಣಿಸಿದರು, ಹೀಯಾಳಿಸಿದರು ಎಂದು ಹಳೇ ಮೈಸೂರು ಭಾಗದ ಜನರಲ್ಲಿ ಭಾವನೆ ಇತ್ತು, ಹಾಗಾಗಿ ಅವರಿಗೆ ಜಯಸಿಕ್ಕಿದೆ ಎಂದಿದ್ದಾರೆ.


ಕುಮಾರಸ್ವಾಮಿಯವರು ಚನ್ನಪಟ್ಟಣದಿಂದ ಗೆದ್ದಿರುವುದು ಖುಷಿಯ ವಿಚಾರ. ಚನ್ನಪಟ್ಟಣ ಮುಖ್ಯಮಂತ್ರಿಗಳ ಕ್ಷೇತ್ರವಾಗಿದೆ. ಕುಮಾರಸ್ವಾಮಿಯವರು ಕ್ಷೇತ್ರದ ಅಭಿವೃದ್ದಿಯನ್ನ ಚೆನ್ನಾಗಿ ಮಾಡಲಿ. ಸ್ತ್ರೀ ಶಕ್ತಿ ಸಾಲಮನ್ನಾ, ರೈತರ ಸಾಲಮನ್ನಾ, ವೃದ್ದರಿಗೆ ಭತ್ಯೆ ಕೊಡುವುದಾಗಿ ಹೇಳಿದ್ದ ಅವರ ಭರವಸೆಗಳಿಗೆ ಜನ ಮರುಳಾಗಿದ್ದಾರೆ. ಅವರು ಕೊಟ್ಟಿರುವ ಭರವಸೆಗಳನ್ನ ಜನರಿಗೆ ಪೂರೈಸಲಿ, ಚನ್ನಪಟ್ಟಣದ ಬಿಜೆಪಿ ಕಾರ್ಯಕರ್ತರು ಅವರಿಗೆ ಬೆಂಬಲ ಕೊಡುವುದಾಗಿ ಹೇಳಿದ್ದಾರೆ.
ಹೆಚ್.ಡಿ.ಕೆ ಹಾಗೂ ಡಿ.ಕೆ.ಶಿ ನನ್ನ ರಾಜಕೀಯ ವೈರಿಗಳು ಎಂದಿರುವ ಯೋಗೀಶ್ವರ್‌, ಅವರನ್ನ ಇವತ್ತು ಎದುರು ಹಾಕಿಕೊಳ್ಳುತ್ತೇವೆ, ಮುಂದೆನೂ ಎದುರು ಹಾಕಿಕೊಳ್ಳುತ್ತೇವೆ. ಕುಮಾರಸ್ವಾಮಿಯವರ ಕಣ್ಣೀರಿನ ಮುಂದೆ ನನ್ನ ನೀರಾವರಿ ಯೋಜನೆ ಕೊಚ್ಚಿಹೋಗಿದೆ, ಅವರಿಗೆ ಶುಭಕೋರುತ್ತೇನೆ. ನನಗೆ ಅಧಿಕಾರ ಇರಲಿ, ಇಲ್ಲದೇ ಇರಲಿ ನಾನು ಈ ತಾಲ್ಲೂಕಿನವನು ಇಲ್ಲೇ ಇರುತ್ತೇನೆ.  ನಾನು ಯಾವ ಚುನಾವಣೆಗೂ ಹಿಂದೆ ಸರಿಯಲ್ಲ, ಕುಮಾರಸ್ವಾಮಿಯವರ ಕುಟುಂಬದ ವಿರುದ್ಧ ಮೂರು ಚುನಾವಣೆ ಎದುರಿಸಿದ್ದೇನೆ. ಪಕ್ಷ ಸೂಚಿಸಿದರೆ ಚುನಾವಣೆಗೆ ನಿಲ್ಲಲ್ಲು ಸಿದ್ದ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com