Cricket : ಇಂಡಿಯನ್ ಪ್ರಿಮಿಯರ್ ಲೀಗ್ ಸೀಸನ್ -11 ಹೈಲೈಟ್ಸ್..

ವಿರುಪಾಕ್ಷ ಸ್ವಾಮಿ ಶಹಾಪುರ

ಏಪ್ರಿಲ್ 7 ರಂದು ಆರಂಭಗೊಂಡು ಸುಮಾರು 50 ದಿನಗಳ ಪರ್ಯಂತ ನಡೆದ ಇಂಡಿಯನ್ ಪ್ರಿಮಿಯರ್ ಲೀಗ್ ಎಂಬ ಟಿ-20 ಕ್ರಿಕೆಟ್ ನ ಹಬ್ಬ ಸೋಮವಾರ ಮುಕ್ತಾಯಗೊಂಡಿದೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಮೂರನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಹಿಂದೆ ಎರಡು ಬಾರಿಯ ಚಾಂಪಿಯನ್ ಆಗಿದ್ದ ಚೆನ್ನೈ ತಂಡ ಮತ್ತೊಮ್ಮೆ ಟ್ರೋಫಿ ಜಯಿಸಿರುವುದು ಅಚ್ಚರಿಯ ಸಂಗತಿಯೇನಲ್ಲ, ಆದರೆ ಫೈನಲ್ ಪಂದ್ಯದಲ್ಲಿ ರೋಚಕ ಹಣಾಹಣಿಯನ್ನು ನಿರೀಕ್ಷಿಸುತ್ತಿದ್ದ ಅಭಿಮಾನಿಗಳಿಗೆ ಮಾತ್ರ ನಿರಾಸೆಯಾಗಿದ್ದು ಮಾತ್ರ ಸುಳ್ಳಲ್ಲ. ಬಲಿಷ್ಠ ಬೌಲಿಂಗ್ ಪಡೆಯನ್ನು ಹೊಂದಿದ್ದ ಸನ್ ರೈಸರ್ಸ್ ತಂಡ, ವಾಂಖೇಡೆಯಲ್ಲಿ ಶೇನ್ ವಾಟ್ಸನ್ ಅಬ್ಬರದ ಎದುರು ನಿರುತ್ತರವಾಯಿತು.

Image result for csk 2018 ipl champions

ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವರ್ಷಗಳ ಕಾಲ ನಿಷೇಧಕ್ಕೊಳಗಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಈ ಬಾರಿ ಭಾಗವಹಿಸುವ ಅವಕಾಶ ಪಡೆದಿದ್ದವು. ಟೂರ್ನಿಯ ಆರಂಭದಲ್ಲಿಯೇ ತಮಿಳುನಾಡಿನ ಕಾವೇರಿ ಕಾರ್ಯಕರ್ತರ ಪ್ರತಿಭಟನೆಯ ಬಿಸಿ ಐಪಿಎಲ್ ಗೆ ತಟ್ಟಿತು. ಚೆನ್ನೈ ಆಟಗಾರರಾದ ಫಾಫ್ ಡು ಪ್ಲೆಸಿಸ್ ಹಾಗೂ ರವೀಂದ್ರ ಜಡೇಜಾರತ್ತ ಶೂ ಎಸೆಯುವಷ್ಟರ ಮಟ್ಟಿಗೆ ಪ್ರತಿಭಟನೆ ಅತಿರೇಕಕ್ಕೆ ಹೋದದ್ದು ಮಾತ್ರ ಖೇದದ ಸಂಗತಿ. ಈ ಹಿನ್ನೆಲೆಯಲ್ಲಿ ಚೆಪಾಕ್ ಅಂಗಳದಲ್ಲಿ ನಡೆಯಬೇಕಿದ್ದ ಚೆನ್ನೈ ತವರಿನ ಪಂದ್ಯಗಳು ಪುಣೆಗೆ ಸ್ಥಳಾಂತರಗೊಂಡವು.

Related image

ಐಪಿಎಲ್ ಆರಂಭಕ್ಕೂ ಮುನ್ನವೇ ಆರ್ಸೀಬಿ ಅಭಿಮಾನಿಗಳ ಈ ಸಲ ಕಪ್ ನಮ್ದೇ ಎಂಬ ಘೋಷಣೆ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಸದ್ದು ಮಾಡಿತ್ತು. ಫೇಸ್ಬುಕ್ ಪ್ರೊಫೈಲ್ ಪಿಕ್ಚರ್, ವಾಟ್ಸಾಪ್ ಡಿಪಿ, ಇನ್ಸ್ಟಾಗ್ರಾಮ್ ನ ಸ್ಟೇಟಸ್, ಟ್ವಿಟರ್ ನ ಟ್ರೆಂಡ್  ಹೀಗೆ ಎಲ್ಲ ಕಡೆ ಈ ಸಲ ಕಪ್ ನಮ್ದೇ ಎಂಬ ಘೋಷವಾಕ್ಯ ರಾರಾಜಿಸಿತ್ತು. ಆರ್ಸೀಬಿ ಪ್ರದರ್ಶನ ಇಳಿಮುಖವಾಗಿ ಪ್ಲೇ ಆಫ್ ತಲುಪುವುದೂ ಸಹ ಕಷ್ಟ ಎಂಬಂತಾಗಿ, ಪಾಯಿಂಟ್ಸ್ ಟೇಬಲ್ ನಲ್ಲಿ ಕೆಳಗಿಳಿಯತೊಡಗಿದಂತೆ ಈ ಸಲ ಕಪ್ ನಮ್ದೇ ಕೂಡ ಸೋಶಿಯಲ್ ಮೀಡಿಯಾದಿಂದ ನಿಧಾನವಾಗಿ ಮರೆಯಾಗತೊಡಗಿತು.

Image result for ab de villiers 2018 IPL

ಆರ್ಸೀಬಿ ತಂಡದ ಮಧ್ಯಮಕ್ರಮಾಂಕದ ಬ್ಯಾಟಿಂಗ್ ವೈಫಲ್ಯ ಹಾಗೂ ಬಿಗಿ ಬೌಲಿಂಗ್ ಪ್ರದರ್ಶನದ ಕೊರತೆ ಎದ್ದು ಕಾಣುತ್ತಿತ್ತು. ಆರ್ಸೀಬಿಯ ‘ಲೋನ್ ವಾರಿಯರ್’ ಡಿವಿಲಿಯರ್ಸ್ ಕೆಲವು ಪಂದ್ಯಗಳನ್ನು ಸ್ವಂತ ಬಲದ ಮೇಲೆ ಗೆದ್ದುಕೊಟ್ಟರು. ಚಿನ್ನಸ್ವಾಮಿಯಲ್ಲಿ ನಡೆದ ಸನ್ ರೈಸರ್ಸ್ ಎದುರಿನ ಪಂದ್ಯದಲ್ಲಿ ಬೌಂಡರಿ ಲೈನ್ ಬಳಿ ಡಿವಿಲಿಯರ್ಸ್ ಹಿಡಿದ ಕ್ಯಾಚ್ ಈ ಐಪಿಎಲ್ ನ ಸ್ಮರಣೀಯ ಕ್ಷಣಗಳಲ್ಲಿ ಒಂದು. ಡೀಪ್ ಸ್ಕ್ವೇರ್ ಲೆಗ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಡಿವಿಲಿಯರ್ಸ್, ಅಲೆಕ್ಸ್ ಹೇಲ್ಸ್ ಬಾರಿಸಿದ ಚೆಂಡನ್ನು ಬಲಗಡೆಗೆ ಹಾರಿ ಒಂದೇ ಕೈಯಲ್ಲಿ ಹಿಡಿದ ಕ್ಯಾಚ್, ಅಭಿಮಾನಿಗಳನ್ನು ಒಂದು ಕ್ಷಣ ಮೂಕವಿಸ್ಮಿತರನ್ನಾಗಿಸಿತ್ತು. ಚೆಂಡಿನ ಜಡ್ಜ್ ಮೆಂಟ್, ಜಿಗಿತದ ಟೈಮಿಂಗ್, ಹಿಡಿತಕ್ಕೆ ಪಡೆದ ರೀತಿ ಅಭಿಮಾನಿಗಳ ಮನದಲ್ಲಿ ಬಹುಕಾಲ ಅಚ್ಚಳಿಯದೇ ಉಳಿಯಲಿದೆ.

Related image

ಕನ್ನಡಿಗ ಕೆ.ಎಲ್ ರಾಹುಲ್ ಈ ಸಲ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿದ್ದರು. ರಾಹುಲ್ ಅವರನ್ನು ರಿಟೇನ್ ಮಾಡಿಕೊಳ್ಳದಿರುವ ನಿರ್ಧಾರ ಅಷ್ಟೇನು ಜಾಣತನದ್ದಾಗಿರಲಿಲ್ಲ ಎಂದು ಆರ್ಸೀಬಿ ಫ್ರಾಂಚೈಸಿಗೆ ಅನಿಸಿದ್ದರೆ ಆಶ್ಚರ್ಯವಿಲ್ಲ.

Image result for k l rahul kxip

ಟೂರ್ನಿಯಲ್ಲಿ 614 ರನ್ ಗಳಿಸಿದ ಡೆಲ್ಲಿ ಡೇರ್ಡೆವಿಲ್ಸ್ ಓಪನಿಂಗ್ ಬ್ಯಾಟ್ಸಮನ್ ರಿಷಭ್ ಪಂತ್ ಟೀಮ್ ಇಂಡಿಯಾದ ಬಾಗಿಲನ್ನು ಸ್ವಲ್ಪ ಜೋರಾಗಿಯೇ ಬಡಿದಿದ್ದಾರೆ. ಸನ್ ರೈಸರ್ಸ್ ಎದುರು 63 ಎಸೆತಗಳಲ್ಲಿ 128 ರನ್ ಬಾರಿಸಿದ್ದ ರಿಷಭ್, ತಾನೊಬ್ಬ ಸ್ಫೋಟಕ ಆರಂಭಿಕ ಬ್ಯಾಟ್ಸಮನ್ ಆಗುವ ಸಾಮರ್ಥ್ಯ ಹೊಂದಿದ್ದೇನೆ ಎಂಬ ವಿಷಯವನ್ನು ಆಯ್ಕೆಗಾರರಿಗೆ ಮನದಟ್ಟು ಮಾಡಿಸಿದ್ದಾರೆ.

Image result for rishabh pant DD 128

ಎಡಗೈ ಬ್ಯಾಟ್ಸಮನ್ ಗೌತಮ್ ಗಂಭೀರ್, ‘ ತಂಡವನ್ನು ನನ್ನಿಂದ ಸಮರ್ಥವಾಗಿ ಮುನ್ನಡೆಸಲು ಸಾಧ್ಯವಾಗುತ್ತಿಲ್ಲ ‘ ಎಂಬ ಕಾರಣ ನೀಡಿ ಡೆಲ್ಲಿ ತಂಡದನಾಯಕನ ಜವಾಬ್ದಾರಿಯಿಂದ ಹಿಂದೆ ಸರಿದದ್ದು ಅನೀರಿಕ್ಷಿತವಾಗಿತ್ತು. ಗಂಭೀರ್ ಬದಲು ಡೆಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ವಹಿಸಿಕೊಂಡಶ್ರೇಯಸ್ ಅಯ್ಯರ್ ತಮ್ಮಲ್ಲಿ ನಾಯಕತ್ವದ ಲಕ್ಷಣಗಳಿವೆ ಎಂಬುದನ್ನು ತೋರಿಸಿದ್ದಾರೆ. ಶ್ರೇಯಸ್ ಅಯ್ಯರ್ ಕ್ಯಾಪ್ಟನ್ ಆದ ನಂತರ ಡೆಲ್ಲಿ ಪ್ರದರ್ಶನದಲ್ಲಿ ಕೊಂಚ ಮಟ್ಟಿನ ಸುಧಾರಣೆ ಕಂಡು ಬಂದಿದ್ದು ಗಮನಾರ್ಹ.

Related image

ಬಾಲ್ ಟ್ಯಾಂಪರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷೇಧಕ್ಕೊಳಗಾದ ವಾರ್ನರ್ ಬದಲು ವಿಲಿಯಮ್ಸನ್ ಅವರಿಗೆ ಸನ್ ರೈಸರ್ಸ್ ನಾಯಕನ ಜವಾಬ್ದಾರಿ ಹೊರಿಸಲಾಯಿತು. ಫೈನಲ್ ವರೆಗೆ ಕೊಂಡೊಯ್ದ ಕೇನ್ ವಿಲಿಯಮ್ಸನ್, ಹೆಚ್ಚು ಆಕ್ರಮಣಕಾರಿ ಹೊಡೆತಗಳಿಗೆ ಕೈ ಹಾಕದೆ, ಕ್ಲಾಸಿಕ್ಶೈಲಿಯ ಬ್ಯಾಟಿಂಗ್ ನಡೆಸಿಯೂ ಟಿ-20 ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಲು ಸಾಧ್ಯವಿದೆ ಎಂದು ಸಾಬೀತು ಪಡಿಸಿದರು. ಸನ್ ರೈಸರ್ಸ ತಂಡವನ್ನು ಫೈನಲ್ ವರೆಗೆ ಕೊಂಡೊಯ್ಯುವಲ್ಲಿ ಕೇನ್ ನಾಯಕತ್ವದ ಜೊತೆಗೆ ಅವರ ವೈಯಕ್ತಿಕ ಬ್ಯಾಟಿಂಗ್ ಪ್ರದರ್ಶನವೂ ಕಾರಣವಾಗಿದೆ.

Image result for kane williamson srh IPL 2018

ಪ್ರತೀ ಐಪಿಎಲ್ ಸೀಸನ್ ಕೂಡ, ಒಬ್ಬ ಪ್ರತಿಭಾವಂತ ಆಟಗಾರನನ್ನು ಜಾಗತಿಕ ಕ್ರಿಕೆಟ್ ನ ಹೊಸ ಸ್ಟಾರ್ ಆಗಿ ರೂಪಿಸುವ ವೇದಿಕೆಯಾಗಿ ಕೆಲಸ ಮಾಡುತ್ತದೆ. ಅದೇ ಸಮಯಕ್ಕೆ, ಜಾಗತಿಕ ಕ್ರಿಕೆಟ್ ನಲ್ಲಿ ಮ್ಯಾಚ್ ವಿನ್ನರ್ ಗಳಾಗಿ ಮೆರೆದ ಶ್ರೇಷ್ಠರನ್ನು ನಿರ್ದಾಕ್ಷಿಣ್ಯವಾಗಿ ತೆರೆಮರೆಗೆ ಸರಿಯುವಂತೆ ಮಾಡುತ್ತದೆ. ಯುವರಾಜ್ ಸಿಂಗ್, ಹರಭಜನ್ ಸಿಂಗ್, ಗೌತಮ್ ಗಂಭೀರ್, ಬ್ರೆಂಡನ್ ಮೆಕ್ಕಲಂ ಅವರಂತಹ ಸೀನಿಯರ್ ಆಟಗಾರರು ವೈಫಲ್ಯ ಅನುಭವಿಸಿದರೆ, ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ ಅವರ ಪ್ರದರ್ಶನ ನಿರಾಶಾದಾಯಕವಾಗಿತ್ತು.

Image result for yuvraj harbhajan 2018 IPL

ರಿಷಭ್ ಪಂತ್, ಶುಭಮನ್ ಗಿಲ್, ಪೃಥ್ವಿ ಷಾ ಕೆಲವುಯುವ ಆಟಗಾರರು ಟೀಮ್ ಇಂಡಿಯಾದ ಬೆಂಚ್ ಸ್ಟ್ರೆಂಗ್ತ್ ಕುರಿತು ಭರವಸೆಯನ್ನು ಮೂಡಿಸಿದ್ದಾರೆ. ಈ ಸೀಸನ್ ನಲ್ಲಿ ತನ್ನದೇ ವಿಶಿಷ್ಟ ಛಾಪು ಮೂಡಿಸಿದ ಪ್ಲೇಯರ್ ರಾಶಿದ್ ಖಾನ್ ತೋರಿದ ಅದ್ಭುತ ಪ್ರದರ್ಶನ ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು. ಬ್ಯಾಟಿಂಗ್ ಲೋಕದ ದಿಗ್ಗಜರೆನಿಸಿಕೊಂಡ ಮಾಸ್ಟರ್ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ‘ದಿ ವಾಲ್’ ಖ್ಯಾತಿಯರಾಹುಲ್ ದ್ರಾವಿಡ್ ಇಬ್ಬರೂ ‘ ರಾಶಿದ್ ಖಾನ್ ಸದ್ಯವಿಶ್ವದ ಬೆಸ್ಟ್ ಟಿ-20 ಬೌಲರ್ ‘ ಎಂದು ಹೊಗಳಿ ಟ್ವೀಟ್ ಮಾಡಿದ್ದರು.

Related image

ಸನ್ ರೈಸರ್ಸ್ ಸ್ಪಿನ್ನರ್ ರಾಶಿದ್ ಖಾನ್ ಕ್ವಾಲಿಫೈಯರ್-2 ಪಂದ್ಯದಲ್ಲಿ ತೋರಿದ ಆಲ್ರೌಂಡ್ ಪ್ರದರ್ಶನದ ಕುರಿತು ಅಫಘಾನಿಸ್ತಾನದ ಪ್ರಧಾನಿ ಅಶ್ರಫ್ ಘನಿಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದರು. ತಮ್ಮದೇಶದ ಕ್ರಿಕೆಟಿಂಗ್ ಹೀರೊ ರಾಶಿದ್ ಖಾನ್ ಗೆ ಐಪಿಎಲ್ನಲ್ಲಿ ಆಡಿ ಪ್ರತಿಭೆಯ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿದ್ದಕ್ಕಾಗಿ ಅಶ್ರಫ್ ಘನಿ ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ್ದರು. ‘ ರಾಶಿದ್ ನಮ್ಮ ದೇಶದ ಆಸ್ತಿಯಿದ್ದಂತೆ, ಅವನನ್ನು ನಾವು ಯಾರಿಗೂ ಬಿಟ್ಟು ಕೊಡುವುದಿಲ್ಲ ‘ ಎಂದು ಅವರು ತಮಾಷೆ ಮಾಡಿದ್ದರು.

Image result for ashraf ghani rashid khan

ಕ್ರೀಡೆ, ಬಾಲಿವುಡ್, ಹಣ, ಗ್ಲಾಮರ್ ಎಲ್ಲದರ ಮಿಶ್ರಣವಾಗಿರುವ ಐಪಿಎಲ್, ಕ್ರಿಕೆಟ್ ಪ್ರಿಯರಿಗೆ ಭರ್ತಿ ಮನರಂಜನೆಯನ್ನು ಒದಗಿಸಿ ಒಂದು ವರ್ಷದ ಮಟ್ಟಿಗೆ ಗುಡ್ ಬೈ ಹೇಳಿದೆ. ಇನ್ನು ಮುಂದೆ ಕಿರುತೆರೆ ಧಾರಾವಾಹಿ ಹಾಗೂ ಕ್ರಿಕೆಟ್ ನೋಡಲು ಮನೆಮಂದಿ ನಡುವೆ ರಿಮೋಟ್ ಗಾಗಿ ನಡೆಯುತ್ತಿದ್ದ ಜಗಳ ಕೊಂಚ ಮಟ್ಟಿಗೆ ಕಡಿಮೆಯಾಗಬಹುದು..

Leave a Reply

Your email address will not be published.