Sandalwood news : ರಾಯಣ್ಣನಾಯ್ತು, ದುರ್ಯೋಧನನಾಯ್ತು ಇಗ ರಾವಣನ ಸರದಿ..

ನಟ ದರ್ಶನ್‌ಗೆ ಪೌರಾಣಿಕ ಪಾತ್ರಗಳು ಖುಲಾಯಿಸಿರುವಂತೆ ಕಾಣುತ್ತೆ. ಸಂಗೊಳ್ಳಿ ರಾಯಣ್ಣನ ಐತಿಹಾಸಿಕ ಅವತಾರದಲ್ಲಿ ಭರ್ಜರಿ ಹಿಟ್ ಆಗಿದ್ದ ದರ್ಶನ್ ಇದೀಗ ‘ಮುನಿರತ್ನ ಕುರುಕ್ಷೇತ್ರದಲ್ಲಿ ಕೌರವೇಶ್ವರನ ಗೆಟಪ್ ಹಾಕಿ ಶೂಟಿಂಗ್ ಮಾಡುತ್ತಿದ್ದಾರೆ. ಭಾರೀ ಬಜೆಟ್‌ನ, ಬಹುತಾರಾಗಣದ ಈ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಅದು ರಿಲೀಸ್‌ಗೆ ರೆಡಿಯಾಗುವ ಮೊದಲೇ ದರ್ಶನ್ ಮತ್ತೊಂದು ಪೌರಾಣಿಕ ಸಿನಿಮಾದಲ್ಲಿ ಆಕ್ಟ್ ಮಾಡಲಿದ್ದಾರೆ ಎಂಬ ಸುದ್ದಿ ಗಾಂಧಿನಗರದ ದಿಕ್ಕಿನಿಂದ ತೇಲಿಬರುತ್ತಿದೆ. ಸದ್ಯ ದ್ವಾಪರಯುಗದ ದುರ್ಯೋಧನನ ಪಾತ್ರಕ್ಕೆ ಬಣ್ಣ ಹಚ್ಚಿರುವ ದರ್ಶನ್ ಆ ಹೊಸ ಸಿನಿಮಾದಲ್ಲಿ ತ್ರೇತಾಯುಗದ ಪರಮ ಶಿವಭಕ್ತ ರಾವಣೇಶ್ವರನ ಕಾಸ್ಟ್ಯೂಮ್ ತೊಡಲಿದ್ದಾರೆ ಅನ್ನೋದು ಆ ಸುದ್ದಿ. ಈಗಾಗಲೇ ಸ್ಕ್ರಿಪ್ಟ್ ತಯಾರಿ ಮುಗಿದಿದ್ದು ದರ್ಶನ್‌ಗೆ ಸಿಕ್ಕಾಪಟ್ಟೆ ಇಷ್ಟವಾಗಿದೆಯಂತೆ. ಕುರುಕ್ಷೇತ್ರ ಮುಗಿಸಿ, ಒಂದೆರಡು ಕಮರ್ಷಿಯಲ್ ಮೂವಿಗಳಿಗೆ ಫಿನಿಶಿಂಗ್ ಕೊಟ್ಟ ನಂತರ ರಾವಣನಾಗಿ ಅಬ್ಬರಿಸಲಿದ್ದಾರಂತೆ.

ಅಂದಹಾಗೆ, ಕಣಗಾಲ್ ಪ್ರಭಾಕರ್ ಶಾಸ್ತ್ರಿಗಳ ‘ಪ್ರಚಂಡ ರಾವಣ’ ನಾಟಕದಲ್ಲಿ ಲಂಕೇಶ್ವರನಾಗಿ ತಮ್ಮ ಕಂಚಿನ ಕಂಠ, ಸುಡುವ ಕಣ್ಣುಗಳಿಂದ ಕನ್ನಡಿಗರ ಮನಗೆದ್ದಿದ್ದ ನಟಭಯಂಕರ ವಜ್ರಮುನಿಯ ನಂತರ ರಾವಣನನ್ನು ಬೆಳ್ಳಿತೆರೆ ಮೇಲೆ ಜೀವಂತವಾಗಿಸುವ ಪ್ರಯತ್ನಗಳೇ ನಡೆದಿಲ್ಲ. ರಾವಣನ ಪಾತ್ರ ನೆನಪಿಸಿಕೊಂಡ ಕೂಡಲೇ ವಜ್ರಮುನಿಯ ಆರ್ಭಟ ಕನ್ನಡಿಗರ ಕಣ್ಣಮುಂದೆ ಬಂದು ನಿಲ್ಲುತ್ತೆ. ನಟ ದೇವರಾಜ್ ಪ್ರಚಂಡ ರಾವಣನ ಅವತಾರ ಹೊತ್ತರಾದರೂ ವಜ್ರಮುನಿಯ ಲಂಕೇಶ ಪ್ರಭೆಯಿಂದ ಜನರನ್ನು ಆಚೆಗೆ ತರುವ ಪ್ರಯತ್ನ ಅವರಿಂದ ಆಗಲಿಲ್ಲ. ಈ ಸುದ್ದಿ ನಿಜವೇ ಆದರೆ, ದರ್ಶನ್‌ರ ರಾವಣೇಶ್ವರನ ಅಬ್ಬರವನ್ನು ಜನ ಹೇಗೆ ಸ್ವೀಕರಿಸುತ್ತಾರೊ ನೋಡಬೇಕು.

Leave a Reply

Your email address will not be published.

Social Media Auto Publish Powered By : XYZScripts.com