ಲೋಕಸಭೆ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದ ಬಿಜೆಪಿಗೆ ನಷ್ಟವಿಲ್ಲ : ಶ್ರೀರಾಮುಲು

ಕೊಪ್ಪಳದ ಬಿಜೆಪಿ ಕಚೇರಿಯಲ್ಲಿ ಶ್ರೀರಾಮುಲು ಹೇಳಿಕೆ ನೀಡಿದ್ದು, ಮೋದಿ ಸರ್ಕಾರದ ನಾಲ್ಕು ವರ್ಷಗಳ ಸಾಧನೆ ಕುರಿತು ಮಾತನಾಡಿದ್ದಾರೆ. ’70 ವರ್ಷಗಳ ಇತಿಹಾಸ ನೋಡಿದರೆ, ಕೇವಲ ನಾಲ್ಕು ವರ್ಷದಲ್ಲಿ ಮೋದಿ ಸರಕಾರ ಅಭಿವೃದ್ಧಿ ಮಾಡಿದೆ. ಪೇಜಾವರ ಶ್ರೀಗಳು ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಮಾಡಿಲ್ಲ ಅಂತ ಹೇಳಿದ್ದಾರೆ. ರಾಜ್ಯದ ಅಭಿವೃದ್ಧಿಗಾಗಿ ಮೋದಿ ಸರ್ಕಾರ ಇನ್ನಷ್ಟು ಶ್ರಮಿಸಬೇಕಾಗಿತ್ತು ಅಂತ ಪೇಜಾವರ ಶ್ರೀಗಳು ಹೇಳಿದ್ದಾರೆ’

ರೈತರ ಸಾಲಮನ್ನಾ ಕುರಿತು ಶ್ರೀರಾಮುಲು ಹೇಳಿಕೆ ನೀಡಿದ್ದು, ‘ ನಮ್ಮ ಸರ್ಕಾರ ಇದ್ದಲ್ಲಿ ಅಲ್ಲಿನ ಮಂತ್ರಿಗಳು ಸಂಪನ್ಮೂಲ ಕ್ರೋಢೀಕರಿಸಿ ಸಾಲಮನ್ನಾ ಮಾಡುತ್ತಿದ್ದಾರೆ. ಸಿಎಂ ಕುಮಾರಸ್ವಾಮಿ ತಮ್ಮ ಪ್ರಣಾಳಿಕೆಯಂತೆ ನಡೆದುಕೊಳ್ಳಲಿ. ರೈತರ ಸಾಲಮನ್ನಾ ಮಾಡಬೇಕು. ಅದು ನಮ್ಮ ಮೊದಲ ಹೋರಾಟವಾಗಿದೆ. ಒಂದು ತಿಂಗಳ ಸಮಯ ಕೊಡುತ್ತೇವೆ ರೈತರ ಸಾಲಮನ್ನಾ ಮಾಡಲಿ. ಮಾಡದಿದ್ದರೆ ನಿರಂತರ ಹೋರಾಟ ಮಾಡುತ್ತೇವೆ

ಸದನದಲ್ಲಿ ರೈತರನ್ನು ಕರೆದು ನಾಟಕೀಯ ರಾಜಕೀಯ ಮಾಡಬೇಡಿ. ಮೊದಲು ರೈತರ ಸಾಲ ಮನ್ನಾ ಮಾಡಲು ಮುಂದಾಗಲಿ. ಮೊನ್ನೆ ಬದಾಮಿಯಲ್ಲಿ ರೈತನೊಬ್ಬ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೇವಲ ರೈತರೊಂದಿಗೆ ಚರ್ಚಿಸಿದರೆ ಸಾಲದು ರೈತರ ಕಷ್ಟಕ್ಕೆ ಸ್ಪಂದಿಸಬೇಕು.ರೈತರು ಸಾಲ ಮಾಡಿದ್ದು ರಾಜ್ಯದ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ, ಅದನ್ನು ರಾಜ್ಯದ ಮುಖ್ಯಮಂತ್ರಿಗಳು ಮನ್ನಾ ಮಾಡಬೇಕು.

ಬಿಜೆಪಿ ಬಹುಮತ ಕುರಿತು ಹೇಳಿಕೆ ನೀಡಿದ ರಾಮುಲು ‘ ನಾವು ಯಾವುದೇ ಕುದುರೆ ವ್ಯಾಪಾರ ನಡೆಸಿಲ್ಲ. ನಾವು 104 ಸ್ಥಾನಗಳನ್ನು ಗೆದ್ದಿದ್ದೇವೆ. ನಮಗೆ ಸರ್ಕಾರ ಬೀಳಿಸುವ ಕೆಟ್ಟ ಯೋಚನೆ ಇಲ್ಲ. ಅಂತ ಕೀಳು ಮಟ್ಟಕ್ಕೆ ಬಿಜೆಪಿ ಇಳಿಯುವುದಿಲ್ಲ. ಮೈತ್ರಿ ಸರ್ಕಾರ ಮಾಡಿಕೊಂಡಿರುವ ಕಾಂಗ್ರೆಸ್ ಜೆಡಿಎಸ್ ಅಭಿವೃದ್ಧಿ ಕೆಲಸಗಳಿಗೆ ಸ್ಪಂದಿಸಲಿ ‘

ಐಟಿ ರೈಡ್ ಕುರಿತು ರಾಮುಲು ಹೇಳಿಕೆ ನೀಡಿದ್ದು, ‘ ಕಾನೂನು ಪ್ರಕಾರ ಐಟಿ ರೈಡ್ ನಡೆಯುತ್ತಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರ ಕೈವಾಡವಿಲ್ಲ. ನಮ್ಮ ಬಿಜೆಪಿ ನಾಯಕರ ಮೇಲೆ ಕೂಡ ರೈಡ್ ನಡೆದಿವೆ. ಡಿಕೆಶಿ ಕಾನೂನಿಗಿಂತ ದೊಡ್ಡವರಲ್ಲ. ಇತಿಹಾಸದಲ್ಲಿ ಯಾವುದೇ ಸಮ್ಮಿಶ್ರ ಸರ್ಕಾರ ಹೆಚ್ಚು ಕಾಲ ಆಡಳಿತ ನಡೆಸಿದ ಉದಾಹರಣೆಗಳಿಲ್ಲ. ಈ ಮೈತ್ರಿ ಸರ್ಕಾರಕ್ಕೂ ಹೆಚ್ಚು ಉಳಿಗಾಲವಿಲ್ಲ. ಮತ್ತೆ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರುತ್ತದೆ. ಉಪಚುನಾವಣೆಗಳಿಂದ ಬಿಜೆಪಿಗೆ ಏನು ನಷ್ಟವಿಲ್ಲ. ಉಪಚುನಾವಣೆಗಳು ದಿಕ್ಸೂಚಿ ಆಗಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಲೋಕಸಭೆ ಚುನಾವಣೆಗೆ ಮೈತ್ರಿ ಮಾಡಿಕೊಂಡರು ಬಿಜೆಪಿಗೆ ನಷ್ಟವಿಲ್ಲ. ದೇಶದಲ್ಲಿ ಮತ್ತೆ ಮೋದಿ ಸರ್ಕಾರ ಬರುತ್ತೆ. ಯಾವ ತೃತೀಯರಂಗಗಳು ಮೋದಿನ ಏನು ಮಾಡೋಕೆ ಆಗುವುದಿಲ್ಲ ‘ ಎಂದು ಕೊಪ್ಪಳದಲ್ಲಿ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.