“I am with ದಿನೇಶ್‌ ಅಮೀನ್ ಮಟ್ಟು” : ರೋಹಿತ್‌ ಚಕ್ರತೀರ್ಥ ಕೊಲೆಯ ಸುಪಾರಿ ಹಿಂದಿನ ಸತ್ಯಾಸತ್ಯತೆಯ ಡಿಟೇಲ್ಸ್‌ ಇಲ್ಲಿದೆ…

ಇತ್ತೀಚಿನ ದಿನಗಳಲ್ಲಿ ಬಲಪಂಥ-ಎಡಪಂಥೀಯರ ನಡುವಿನ ಸಮರ ಹೆಚ್ಚಾಗುತ್ತಿದೆ. ಧರ್ಮ, ಜಾತಿಯ ಹೆಸರಿನಲ್ಲಿ ಪ್ರಗತಿಪರರು, ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಗಳು ನಡೆಯುತ್ತಿವೆ. ಈ ಮಧ್ಯೆ ಮಾಜಿ ಸಿಎಂ ಸಿದ್ದರಾಮಯ್ಯನವರ ಮಾಧ್ಯಮ ಸಲಹೆಗಾರರಾಗಿದ್ದ ದಿನೇಶ್‌ ಅಮೀನ್‌ ಮಟ್ಟು ಅವರ ಮೇಲೆ ಕೊಲೆಯ ಆರೋಪ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ವಿಶ್ವವಾಣಿ ಪತ್ರಿಕೆಯ ಅಂಕಣಕಾರ, ಲೇಖಕ, ರೋಹಿತ್ ಚಕ್ರತೀರ್ಥ ಅವರನ್ನು  ಕೊಲ್ಲಲು ಮಾಜಿ ಸಿಎಂ ಸಿದ್ದರಾಮಯ್ಯನವರ ಮಾದ್ಯಮ ಸಲಹೆಗಾರ ದಿನೇಶ್ ಅಮೀನ್‌ ಮಟ್ಟು ಅವರು ಸೂಚಿಸಿದ್ದರು ಎಂದು ಭಾಸ್ಕರ್‌ ಪ್ರಸಾದ್‌ ಹೆಸರಿನ ವ್ಯಕ್ತಿ ಆರೋಪಿಸುತ್ತಿದ್ದು, ಎಲ್ಲೆಡೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ದಿನೇಶ್‌ ಅಮೀನ್‌ ಮಟ್ಟು ಅವರು, ರೋಹಿತ್‌ ಚಕ್ರತೀರ್ಥ ಸೇರಿದಂತೆ ಅವರನ್ನು ವಿರೋಧಿಸುವವರ ಮೇಲೆ ಸೇಡು ತೀರಿಸಿಕೊಳ್ಳುವ ಯತ್ನ ನಡೆಸಿದ್ದಾರೆ ಎಂದು ಬಿ.ಆರ್‌ ಭಾಸ್ಕರ್‌ ಪ್ರಸಾದ್‌ ಶುಕ್ರವಾರ ತಮ್ಮ ಫೇಸ್‌ಬುಕ್‌  ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ವಿಷಯ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಎಲ್ಲೆಡೆ ದಿನೇಶ್‌ ಅಮೀನ್‌ ಮಟ್ಟು ಅವರ ಪರ ಬೆಂಬಲ ಕೇಳಿ ಬರುತ್ತಿದೆ.

ಈ ಭಾಸ್ಕರ್‌ ಪ್ರಸಾದ್‌,  ಈ ಹಿಂದೆ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದು, ನೆಲಮಂಗಲದ ವಾಸಿಯಾಗಿದ್ದಾರೆ. ಉಡುಪಿಯಲ್ಲಿ ಪ್ರವೀಣ್ ಪೂಜಾರಿ ಹತ್ಯೆಯಾದಾಗ ಇದನ್ನು ಖಂಡಿಸಿ ಉಡುಪಿ ಚಲೋ ನಡೆಸಿದ್ದರು. ಅಲ್ಲದೆ ವಿಜಯಪುರದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವಾದಾಗ ಪ್ರತಿಭಟನೆ ನಡೆಸಿದ್ದು ಸೇರಿದಂತೆ ಅನೇಕ ಚಳುವಳಿಗಳಲ್ಲಿ ಭಾಗವಹಿಸಿದ್ದರು.

ಅಷ್ಟೇ ಅಲ್ಲದೆ  ಈ ಬಾರಿಯ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷದಿಂದ ಅರವಿಂದ ಲಿಂಬಾವಳಿಯವರ ವಿರುದ್ಧ ಸ್ಪರ್ಧಿಸಿ ಕೇವಲ 1500  ಮತ ಪಡೆದು ಹೀನಾಯವಾಗಿ ಸೋಲನುಭವಿಸಿದ್ದರು. ಚುನಾವಣೆಯಲ್ಲಿ ಸೋತ ಬಳಿಕ ಭಾಸ್ಕರ್‌ ಪ್ರಸಾದ್‌ ತೀರ ಹತಾಶರಾಗಿದ್ದರು ಎಂದು ಬಲ್ಲ ಮೂಲಗಳು ತಿಳಿಸಿವೆ.

ಅನೇಕ ವರ್ಷಗಳ ಕಾಲ ಬಿಜೆಪಿಯಲ್ಲಿ ದುಡಿದಿದ್ದ ಇವರು ಇತ್ತೀಚಿನ ದಿನಗಳಲ್ಲಿ ಪ್ರಗತಿಪರ ಎನಿಸಿಕೊಂಡು ಹೊಸ ವರಸೆ ಶುರು ಮಾಡಿದ್ದರು.

ಈ ವ್ಯಕ್ತಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ತಾನು ಅಂಬೇಡ್ಕರ್‌ ಜಯಂತಿಗಾಗಿ ಕೆಲಸ ಮಾಡಿದ್ದೆ, ಆ ಕೆಲಸ ಮಾಡಿದ್ದೆ, ಸರ್ಕಾರಕ್ಕಾಗಿ ಈ ಕೆಲಸ ಮಾಡಿದ್ದೆ ಎಂದು ದಾಖಲೆಗಳನ್ನು ಹಿಡಿದುಕೊಂಡು ಈ ಹಿಂದೆ ಸಿದ್ದರಾಮಯ್ಯನವರ ಮುಖ್ಯಮಂತ್ರಿ ಸಲಹೆಗಾರರಾಗಿದ್ದ ದಿನೇಶ್ ಅಮೀನ್‌ ಮಟ್ಟು ಅವರ ಬಳಿ ಹೋಗಿದ್ದರು. ಆದರೆ ಆ ದಾಖಲಾತಿಗಳನ್ನೆಲ್ಲ ಪರಿಶೀಲನೆ ಮಾಡಿದ ಬಳಿಕ ಆ ಕೆಲಸಗಳಿಗೆ ಸರ್ಕಾರಿ ಆದೇಶ ಇರಲಿಲ್ಲ ಎಂದು ತಿಳಿದುಬಂದಿದ್ದು, ಭಾಸ್ಕರ್‌ ಪ್ರಸಾದ್‌ ನನ್ನು ವಾಪಸ್‌ ಕಳಿಸಿದ್ದರು. ಈ ಘಟನೆ ನಡೆದ ಮೇಲಿಂದ ದಿನೇಶ್‌ ಅಮೀನ್‌ ಮಟ್ಟು ಅವರ ಮೇಲೆ ಸೇಡು ತೀರಿಸಿಕೊಳ್ಳಲು ಭಾಸ್ಕರ್‌ ಕಾಯುತ್ತಿದ್ದರು ಎಂದು ಬಲ್ಲ ಮೂಲಗಳು ಏನ್‌ಸುದ್ದಿಗೆ ತಿಳಿಸಿವೆ.

ಅಲ್ಲದೆ ಈ ಭಾಸ್ಕರ್‌ ಪ್ರಸಾದ್‌ ಅನುಮಾನಾಸ್ಪದ ಹಾಗೂ ಕ್ರಿಮಿನಲ್‌ ಹಿನ್ನೆಲೆಯುಳ್ಳವರಾಗಿದ್ದು, ಈ ವ್ಯಕ್ತಿಯ ಬಗ್ಗೆ ಈಗ ಎಲ್ಲಾ ವಿಚಾರಗಳೂ ಒಂದೊಂದಾಗಿಯೇ ಹೊರಬರುತ್ತಿದೆ. ಇವರು ಚುನಾವಣೆಗೆ ನಿಲ್ಲುವಾಗ ಇವರ ಮೇಲೆ ದಾಖಲಾಗಿದ್ದ ಕೇಸ್‌ಗಳ ಪಟ್ಟಿ ಸಹ ದೊರೆತಿದೆ.

ಈ ಪ್ರಕರಣ ಸಂಬಂಧ ರೋಹಿತ್ ಚಕ್ರತೀರ್ಥ ಸಹ ಪ್ರತಿಕ್ರಿಯಿಸಿದ್ದು ಫೇಸ್‌ಬುಕ್‌ ಪೋಸ್ಟ್‌ ನೋಡಿದ್ದೇನೆ. ಇಂತಹ ಗಂಭೀರ ವಿಷಯದ ಬಗ್ಗೆ ರಾಜ್ಯದ ಪೊಲೀಸ್‌ ಇಲಾಖೆ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದು ನಂಬಿರುವುದಾಗಿ ಹೇಳಿದ್ದಾರೆ. ಈ ವಿಚಾರದ ಬಗ್ಗೆ ಪೊಲೀಸರು ಆಸಕ್ತಿ ತೋರಿಸದಿದ್ದಲ್ಲಿ ಮುಂದಿನ ಕ್ರಮದ ಬಗ್ಗೆ ಯೋಚಿಸುವುದಾಗಿ ಹೇಳಿದ್ದಾರೆ.

ಇನ್ನು ದಿನೇಶ್‌ ಅಮೀನ್‌ ಮಟ್ಟು ಅವರ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದ್ದು I AM WITH DINESH AMEEN MATTU ಹೆಸರಿನಲ್ಲಿ ಅಭಿಯಾನ ಶುರುವಾಗಿದೆ. ಅಲ್ಲದೆ ಈ ರೀತಿ ಯಾವುದೇ ಹುರುಳಿಲ್ಲದ ಆರೋಪ ಮಾಡಿರುವ  ಭಾಸ್ಕರ್‌ ಪ್ರಸಾದ್ ವಿರುದ್ಧ ದಿನೇಶ್ ಅಮೀನ್‌ ಮಟ್ಟು ಅವರು ಡಿ.ಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ ಎಂಬ ಮಾಹಿತಿ ಸಿಕ್ಕಿದೆ.

ಈತ ದಿನೇಶ್‌ ಅಮೀನ್‌ ಮಟ್ಟು ಅವರ ಬಗ್ಗೆ ಬರೆದದ್ದೇನು ಇಲ್ಲಿದೆ ಮಾಹಿತಿ…..

ಪ್ರಗತಿಪರರು ಎಂದರೆ ಯಾರು?…….
ಪ್ರಗತಿಪರರು ಯಾರ ಕೊಲೆಗೂ ಸುಪಾರಿ ಕೊಡಲ್ಲ ಅಲ್ವೇ. ನಿಜ ಹೇಳಿ ಮಿಸ್ಟರ್ ದಿನೇಶ್ ಅಮಿನ್.

ಸ್ವತಃ ಆಟಗಾರರೇ ಮಸುಕು ತೆಗೆದ ಮೇಲೆ, ಮುಸುಕಿನ ಒಳಗೆ ನಡೆದಿದ್ದ, ನಿಯಮ ಮೀರಿದ ಆಟಗಳ ಬಗ್ಗೆ ನಾವೀಗ ಮಾತಾಡದೇ ಹೋದರೇ, ಮುಸುಕಿನೊಳಗೆ ನಡೆದಿದ್ದ ಕಳ್ಳಾಟಗಳನ್ನೇ ಸತ್ಯದ ಹೋರಾಟವೆಂದು ಬಗೆದು, ನಂಬಿ, ನನ್ನಣ್ಣ ತಮ್ಮಂದರು ದಾರಿ ತಪ್ಪಿ ಹೋಗುವ ಅಪಾಯವಿರುವುದರಿಂದ ನಾವೀಗ ಮಾತನಾಡಲೇಬೇಕಲ್ಲವೇ?
ನಿಯಮ ಮೀರಿದ ಆಟಗಾರನನ್ನು ಅಂಗಳದಿಂದ ಹೊರ ಹಾಕಲು ತರ್ಡ್ ಅಂಪೈರ್ಗಳೂ ಇರುತ್ತಾರೆ ಅನ್ನೋದನ್ನ ಮರೆತರೆ ಹೇಗೆ ಆಟಗಾರರೆ‌.

ಪ್ರಗತಿಪರರು ಎಂದರೆ ಯಾರು?

ಬಾಗ – 1

ಪ್ರಗತಿಪರರು,
“ಚಲೋ ಉಡುಪಿ”ಯ ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಕಾಂಗ್ರೆಸ್‌ನ ನಾಯಕರೆನ್ನಿಸಿಕೊಂಡ! ಬಿ.ಕೆ.ಹರಿಪ್ರಸಾದ್, ಖಾದರ್, ಮದ್ವರಾಜ್, ಡಿಸೋಜಾ ಮುಂತಾದವರು ಇರಲೇಬೇಕೆಂದು ಹಠ ಹಿಡಿಯಬಾರದು.
“ಚಲೋ ಉಡುಪಿ” ಕಾಂಗ್ರೆಸ್‌ನ ತೊತ್ತಲ್ಲ. ಇಲ್ಲಿ ನಿಮ್ಮ ವಯಕ್ತಿಕ ಹಿತಾಸಕ್ತಿಗಳಿಗೆ ಅವಕಾಶವಿಲ್ಲ ಎಂದು ಪಟ್ಟು ಹಿಡಿದು, ಚಲೋ ಉಡುಪಿಯ ಘನತೆಯನ್ನು ಕಾಪಾಡಿದವರ ಮೇಲೆ ವಿಷಕಾರಬಾರದು. ತಮ್ಮ ಮೂಗಿನ ನೇರಕ್ಕೆ ನಡೆಯುವ ಮಹಿಳಾ ಮಣಿಗಳ ಮೂಲಕ ತಮ್ಮ ಆಜ್ಞೆ ದಿಕ್ಕರಿಸಿದವರ ಕುಟುಂಬದ ಬಗ್ಗೆ ಕೆಟ್ಟ ಮಾತುಗಳನ್ನಾಡಿಸಿ ವಯಕ್ತಿಕ ತೇಜೋವದೆ ಮಾಡಬಾರದು.

ಪ್ರಗತಿಪರರು,
“ಚಲೋ ತುಮಕೂರು” ಸಂದರ್ಭದಲ್ಲಿ ತನ್ನ ಹಳೇ ಸಂಬಂದಗಳ ಪ್ರಭಾವ ಬಳಸಿ, ನ್ಯಾಯ ಕೇಳಿ ಹೋದ ಹೋರಾಟಗಾರರನ್ನು ಕಳ್ಳರು! ಕ್ರಿಮಿನಲ್‌ಗಳು! ಅವರಿಗೆ ಸ್ಥಳೀಯರ್ಯಾರೂ ಸಹಕರಿಸಬೇಡಿ ಎಂದು, ತಮ್ಮ ಫೋನ್, ಇಂಟರ್ನೆಟ್ ಬಳಸಿ, ಸುಳ್ಳು ಪ್ರಚಾರದ ಹುನ್ನಾರ ನಡೆಸಿದರೂ ಆಟಗಾರರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತೂ ನೀಡದೇ, ಸ್ಥಳೀಯೆಲ್ಲ ಸೇರಿ, ಕೊನೆಗೂ “ಚಲೋ ತುಮಕೂರು” ಸಕ್ಸಸ್ ಆಗಿ, ಆಪಾದಿತರು ಗಡಿಪಾರಾದಾಗ. ಆಟಗಾರರು ಮಖಭಂಗ ಅನುಭವಿಸಬಾರದು.

ಪ್ರಗತಿಪರರು,
“ಚಲೋ ಗುಡಿಬಂಡೆ” ಸಮಯದಲ್ಲಿ ದಿಗ್ಭಾಂತರಾಗಿ, ನನಗೂ ಅದಕ್ಕೂ ಸಂಬಂಧವೇ ಇಲ್ಲವೆಂದು ಕೈ ಚೆಲ್ಲಿ ಕೂರಬಾರದು.

ಪ್ರಗತಿಪರರು,
” ನಾನೂ ಗೌರಿ” ಪ್ರತಿಭಟನಾ ಸಮಾವೇಶದಲ್ಲಿ, ಕಾಂಗ್ರೆಸ್ ವಿರೋಧಿಗಳ್ಯಾರೂ ಕಮಿಟಿಯಲ್ಲಿ ಇರಬಾರದು. ಹಾಗೇನಾದರೂ ಇದ್ದರೆ ನಾನು ಇರಲ್ಲ ಎಂದು ಹಠ ಹಿಡಿದು ಸಾಧಿಸಿ, ಕೊನೆಗೆ “ನಾನೂ ಗೌರಿ” ಕಾರ್ಯಕ್ರಮದ ಗೆಲುವು ನಮ್ಮದೇ, ನಾನೇ ಇದರ ರೂವಾರಿ ಎಂದು ಮುಸುಕಿನಲ್ಲಾದರೂ ಸಾದಿಸಬಾರದು. ಮತ್ತು, ವಾಕಿಟಾಕಿ ಹಿಡಿದು ಫೋಸ್ ಕೊಡಬಾರದು.

ಪ್ರಗತಿಪರರು,
” ಚಲೋ ಬಿಜಾಪುರ್” ಸಮಯದಲ್ಲಿ, ನ್ಯಾಯ ಕೇಳಿ ಹೋದ ಹೋರಾಟಗಾರರನ್ನು ಇದೇ ಕಾಂಗ್ರೆಸ್ ಸರ್ಕಾರದ ಕಾಲಾಳುಗಳು ಬಂದಿಸಿದಾಗ, ಹೋರಾಟಗಾರರನ್ನು ಬಿಡುಗಡೆ ಮಾಡಿ, ಎಂದು ಮುಖ್ಯಮಂತ್ರಿಗಳನ್ನು ಬೇಟಿ ಮಾಡಲು ಹೋದ, ಉಡುಪಿಯ ಹೋರಾಟಗಾರರನ್ನು, ಮುಖ್ಯಮಂತ್ರಿಗಳ ಮುಂದೆಯೇ, ಅವಮಾನಿಸಿ ಕಳಿಸಬಾರದು.

ಪ್ರಗತಿಪರರು,
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ, ಹಲವು ನಿಗಮ ಮತ್ತು ಮಂಡಳಿಗಳಿಗೆ ನೇಮಕವಾದ, ಸಾಹಿತಿಗಳು, ಹೋರಾಟಗಾರರು, ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪರ ಪ್ರಚಾರಕ್ಕೆ ಬರಲಿಲ್ಲ ಎಂದು ಗೋಳಾಡಬಾರದು.

ಮುಂದುವರೆಯುತ್ತದೆ…………
ಬಾಗ- 2 ನ್ನು ಓದಿ ಎದೆ ಹೊಡೆದುಕೊಂಡರೆ ನಾನು ಜವಾಬ್ದಾರನಲ್ಲ. ಸಾವಾಕಸ ಮಾಡಿ ಕಾಯುತ್ತಿರಿ ಮಿಸ್ಟರ್ ಅಮಿನ್. ನೀವು ಆ ಪಾಪಿಯೊಬ್ಬನ ಕೊಲೆಗೆ ರೂಪಿಸಿದ್ದ ದಾಖಲೆಗಳೊಂದಿಗೆ ಬರುತ್ತೇನೆ.

– ಬಿ.ಆರ್. ಭಾಸ್ಕರ್ ಪ್ರಸಾದ್.

 

Leave a Reply

Your email address will not be published.