ಪವರ್‌ ಕಳೆದುಕೊಂಡ ಕಾಂಗ್ರೆಸ್‌ನ ಟ್ರಬಲ್ ಶೂಟರ್‌ ಡಿಕೆಶಿ : ರೇವಣ್ಣ ಪಾಲಿಗೆ ಒಲಿದ ಇಂಧನ ಖಾತೆ

ಬೆಂಗಳೂರು : ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದ ಹೀರೋ ಡಿ.ಕೆ ಶಿವಕುಮಾರ್‌ ಪವರ್‌ ಖಾತೆಯನ್ನು ಕಳೆದುಕೊಂಡಿದ್ದಾರೆ. ಕಾಂಗ್ರೆಸ್‌ ಕಷ್ಟಕಾಲದಲ್ಲಿದ್ದಾಗ ಎಲ್ಲವನ್ನು ಎದುರಿಸಿ ಶಾಸಕರನ್ನು ಹದ್ದಿನ ಕಣ್ಣಿಟ್ಟು ಕಾದು ಕರ್ನಾಟಕದಲ್ಲಿ ಕಾಂಗ್ರೆಸ್‌ ಉಳಿಯುವಂತೆ ಮಾಡಿದ್ದ ಡಿಕೆಶಿ ಸದ್ಯ ಬಲಹೀನರಾದಂತೆ ಕಾಣುತ್ತಿದ್ದಾರೆ.

ಕಾಂಗ್ರೆಸ್‌ಗಾಗಿ ಇಷ್ಟೆಲ್ಲಾ ಶ್ರಮ ವಹಿಸಿದ್ದರೂ, ಸಮ್ಮಿಶ್ರ ಸರ್ಕಾರದಲ್ಲಿ ಅವರಿಗೆ ಇಂಧನ ಖಾತೆ ನೀಡಲು ನಿರಾಕರಿಸಲಾಗಿದೆ. ಇಂಧನ ಖಾತೆ ಮರಳಿ ಪಡೆಯಲು ಶಿವಕುಮಾರ್ ಪಟ್ಟ ಪ್ರಯತ್ನ ವ್ಯರ್ಥವಾಗಿದೆ. ಈ ಖಾತೆ ಜೆಡಿಎಸ್ ಪಾಲಾಗಿದ್ದು, ಮುಖ್ಯಮಂತ್ರಿ ಕುಮಾರ ಸ್ವಾಮಿ ಸಹೋದರ ಎಚ್.ಡಿ ರೇವಣ್ಣ ಆ ಖಾತೆ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಇಂಧನ ಖಾತೆಗಾಗಿ ಕಳೆದ ಕೆಲವು ದಿನಗಳಿಂದ ರೇವಣ್ಣ ಮತ್ತು ಡಿಕೆಶಿ ಲಾಬಿ ನಡೆಸಿದ್ದರು. ಆದರೆ ತಾವು ಯಾವುದೇ ಸ್ಥಾನಕ್ಕಾಗಿ ಲಾಬಿ ನಡೆಸಿಲ್ಲ ಎಂದು ಡಿಕೆಶಿ ಹೇಳಿದ್ದಾರೆ. ಹಣಕಾಸು ಖಾತೆ ಜೆಡಿಎಸ್ ಗೆ ಎಂದು ತೀರ್ಮಾನವಾಗಿತ್ತು, ಆದರೆ ಶುಕ್ರವಾರ ಮಧ್ಯಾಹ್ನದವರೆಗೂ ಇಂಧನ ಖಾತೆ ಯಾರಿಗೆ ಎಂಬ ಗೊಂದಲವಿತ್ತು, ಆದರೆ ಅಂತಿಮವಾಗಿ ರಾಹುಲ್ ಗಾಂಧಿ ಮಧ್ಯಸ್ಥಿಕೆಯಿಂದ ಸಮಸ್ಯೆ ಬಗೆಹರಿದಿದೆ.

ಇನ್ನು ಡಿಕೆ ಶಿವಕುಮಾರ್ ಗೃಹ ಅಥವಾ ಜಲ ಸಂಪನ್ಮೂಲ ಖಾತೆ ಪಡೆಯಲು ಉತ್ಸುಕರಾಗಿದ್ದಾರೆ ಎನ್ನಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com