Acid attack victims : ಒಣ ಮಾತುಗಳು- ಅಚರಣೆಗಿಳಿಯದ ಭರವಸೆಗಳು…

ಅತ್ಯಾಚಾರ ಮತ್ತು ಆಸಿಡ್ ದಾಳಿಗೊಳಗಾದ ಸಂತ್ರಸ್ತರಿಗೆ ಕೊಡುವ ಪರಿಹಾರಗಳು ಕೇವಲ ಕಾಗದದ ಮೇಲೆಮಾತ್ರ ಚಂದ ಕಾಣುತ್ತದೆ.

 ಅತ್ಯಾಚಾರ ಮತ್ತು ಆಸಿಡ್ ದಾಳಿಗೆ ತುತ್ತಾದವರಿಗೆ ಹಣಕಾಸು ಪರಿಹಾರವನ್ನು ನೀಡುವ ನಿಟ್ಟಿನಲ್ಲಿ ಕಡ್ಡಾಯವಾದ ಒಂದು ಯೋಜನೆಯನ್ನು ತಯಾರಿಸಬೇಕೆಂದು ಸುಪ್ರಿಂಕೋರ್ಟು ಇತ್ತೀಚೆಗೆ ಒಂದು ಆದೇಶವನ್ನು ಹೊರಡಿಸಿದೆ. ಇಂಥಾ ಒಂದು ಕಡ್ಡಾಯ ನ್ಯಾಯಾಂಗ ನಿರ್ದೇಶನವೊಂದು ತುಂಬಾ ಹಿಂದೆಯೇ ಬರಬೇಕಿತ್ತು. ಆದರೂ ವಿವಿಧ ರಾಜ್ಯಗಳಲ್ಲಿ ಅಸ್ಥಿತ್ವದಲ್ಲಿರುವ ಈ ಬಗೆಯ ಯೋಜನೆಗಳ ಸ್ಥಿತಿಗತಿಗಳನ್ನೂ ಮತ್ತು ದೇಶದಲ್ಲಿ ಪ್ರಾರಂಭಿಸಿರುವ ಅತ್ಯಾಚಾರ ಸಂಬಂಧೀ ಬಿಕ್ಕಟ್ಟು ಕೇಂದ್ರಗಳಲ್ಲಿನ ಸ್ಥಿತಿಗತಿಗಳನ್ನೂ ಗಮನಿಸಿದರೆ ಹೇಗೆ ದಾಖಲಾತಿ ತಯಾರು ಮಾಡುವಿಕೆಯ ತ್ರಾಸದಾಯಕ ಪ್ರಕ್ರಿಯೆಗಳು, ಅಧಿಕಾರಶಾಹಿಯ ಸಂವೇದನಾ ಶೂನ್ಯತೆಗಳು ಮತ್ತು ಸಮಾಜ ತೋರುವ ನಿರ್ಲಕ್ಷ್ಯಗಳು ಎಷ್ಟೆಲ್ಲಾ ಅಡ್ಡಿ ಆತಂಕಗಳನ್ನು ಸೃಷ್ಟಿಸುತ್ತಿವೆ ಎಂಬುದು ಗೊತ್ತಾಗುತ್ತದೆ. ಸುಪ್ರೀಂಕೋರ್ಟಿನ ಹಿರಿಯ ವಕೀಲೆಯಾದ  ಇಂದಿರಾ ಜೈಸಿಂಗ್ ಅವರ ಪ್ರಕಾರ ೨೦೧೩ರ ನಂತರ ಸ್ಥಾಪಿಸಲಾದ ನಿರ್ಭಯ ನಿಧಿಯಿಂದ ಈವರೆಗೆ ೯ ರಾಜ್ಯಗಳ ಕೇವಲ ೧೨೩ ಅತ್ಯಾಚಾರ ಸಂತ್ರಸ್ತರು ಮಾತ್ರ ಪರಿಹಾರ ಪಡೆದುಕೊಂಡಿದ್ದಾರೆ. ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ (ಎನ್‌ಎಎಲ್‌ಎಸ್‌ಎ- ನಾಲ್ಸಾ)ದ ಪ್ರಕಾರ ದೇಶಾದ್ಯಂತ ಕೇವಲ ಶೇ.೫-೧೦ರಷ್ಟು ಲೈಂಗಿಕ ಹಿಂಸಾಚಾರ ಬಾಧಿತರು ಮಾತ್ರ ಈ ಬಗ್ಗೆ ಇರುವ ವಿವಿಧ ಯೋಜನೆಗಳಡಿ ಫಲಾನುಭವಿಗಳಾಗಿದ್ದಾರೆ.

ಈ ಯೋಜನೆಗಳಡಿ ಒದಗಿಸಬೇಕಾದ ಪರಿಹಾರ ಧನವನ್ನು ಪ್ರಕರಣದ ವಿಚಾರಣೆಯೊಂದಿಗೆ ಬೆರೆಸಬಾರದೆಂದೂ, ಘಟನೆಯು ನಡೆದ ತಕ್ಷಣ ಬಾಧಿತರು ಜಿಲ್ಲಾ ಅಥವಾ ರಾಜ್ಯ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರದ ಮೊತ್ತವನ್ನು ಪಡೆದುಕೊಳ್ಳಬಹುದೆಂದೂ ಸುಪ್ರೀಂ ಕೋರ್ಟು ಸ್ಪಷ್ಟಪಡಿಸಿದೆ. ಲೈಂಗಿಕ ಹಿಂಸಾಚಾರ ಅಥವಾ ಆಸಿಡ್ ದಾಳಿಗಳ ಘಟನೆಗಳು ನಡೆದಾಗ ದೂರಿಗಾಗಿ ಕಾಯದೆ ಕಾನೂನು ಸೇವಾ ಪ್ರಾಧಿಕಾರಗಳೂ ತಾವೇ ಸ್ವಯಂ ಪರಿಗಣನೆಗೆ ತೆಗೆದುಕೊಂಡು ಬಾಧಿತರಿಗೆ ಪರಿಹಾರವನ್ನು ವಿತರಿಸಬಹುದೆಂದೂ ಸಹ ಆ ಆದೇಶ ಸ್ಪಷ್ಟಪಡಿಸುತ್ತದೆ. ಎಲಾ ರಾಜ್ಯಗಳಿಗೂ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ಅನ್ವಯವಾಗುವಂತೆ ಕನಿಷ್ಟ ೫ ಲಕ್ಷ ರೂ.ದಿಂದ ಗರಿಷ್ಟ ೧೦ ಲಕ್ಷದವರೆಗೆ ಪರಿಹಾರವನ್ನು ನೀಡಬೇಕೆಂದು ಆದೇಶಿಸಲಾಗಿದೆ. ಅತ್ಯಾಚಾರ ಮತ್ತು ಕೊಲೆ ಹಾಗೂ ಸಾಮೂಹಿಕ ಅತ್ಯಾಚಾರದ ಪ್ರಕರಣಗಳಲ್ಲಿ ಗರಿಷ್ಟ ೧೦ ಲಕ್ಷ ರೂಪಾಯಿ ಪರಿಹಾರವಿದ್ದರೆ, ಅತ್ಯಾಚಾರ, ಅಸ್ವಾಭಾವಿಕ ಲೈಂಗಿಕ ಕಿರುಕುಳ, ಶೇ.೮೦ರಷ್ಟು ಶಾಶ್ವತ ವೈಕಲ್ಯಕ್ಕೆ ಗುರಿಯಾದರೆ, ಮತ್ತು ತೀವ್ರವಾದ ದೈಹಿಕ ಊನಗಳಿಗೆ ಗುರಿಯಾದಲ್ಲಿ ಕನಿಷ್ಟ ೫ ಲಕ್ಷಕ್ಕೆ ಮೇಲ್ಪಟ್ಟು ಪರಿಹಾರ ನೀಡಬೇಕೆಂದು ನಿಗದಿಯಾಗಿದೆ. ಆಸಿಡ್ ದಾಳಿಗಳ ಪ್ರಕರಣಗಳಲ್ಲಿ ಘಟನೆಯ ತೀವ್ರತೆಗೊಳಪಟ್ಟು ಕನಿಷ್ಟ ೫ ಲಕ್ಷದಿಂದ ೭ ಲಕ್ಷ ರೂ.ಗಳ ವರೆಗೆ ಪರಿಹಾರ ನೀಡಬೇಕೆಂದು ನಿಗದಿಯಾಗಿದೆ. ಘಟನೆ ಸಂಭವಿಸಿದ ೧೫ ದಿನಗಳೊಳಗೆ ಒಂದು ಲಕ್ಷ ರೂಪಾಯಿಗಳನ್ನು ಪಾವತಿ ಮಾಡುವುದಲ್ಲದೆ ನಂತರದ ಎರಡು ತಿಂಗಳಲ್ಲಿ ಪ್ರತಿ ತಿಂಗಳೂ ಎರಡು ಲಕ್ಷ ರೂಪಾಯಿಗಳನ್ನು ನೀಡಬೇಕೆಂದೂ ಆದೇಶಿಸಲಾಗಿದೆ. ಎರಡೂ ಬಗೆಯ ಪ್ರಕರಣಗಳಲ್ಲಿ ಭಾದಿತರು ಅಪ್ರಾಪ್ತ ವಯಸ್ಕರಾಗಿದ್ದರೆ ಪರಿಹಾರದ ಮೊತ್ತ ಶೇ. ೫೦ ರಷ್ಟು ಹೆಚ್ಚಾಗಲಿದೆ.

ಅತ್ಯಾಚಾರ ಮತ್ತು ಆಸಿಡ್ ಬಾಧಿತರಿಗೆ ತುರ್ತು ವೈದ್ಯಕೀಯ ವೆಚ್ಚಗಳಿಗೆ ಕೂಡಲೇ ಹಣದ ಅಗತ್ಯವಿರುತ್ತದೆ ಎಂಬುದನ್ನು ಗಣನೆಗೆ ತೆಗೆದುಕೊಂಡೇ ಕಾನೂನು ಸೇವಾ ಸಮಿತಿಗಳಿಗೆ ಘಟನೆಯನ್ನು ಸ್ವಯಂ ಪ್ರೇರಿತವಾಗಿ ಪರಿಗಣನೆಗೆ ತೆಗೆದುಕೊಳ್ಳುವ ಮತ್ತು ಪರಿಹಾರವನ್ನು ನೀಡುವ ಅಧಿಕಾರವನ್ನು ನೀಡಲಾಗಿದೆಯೆಂಬುದು ಸ್ಪಷ್ಟ. ಆಸಿಡ್ ದಾಳಿಗಳ ಪ್ರಕರಣಗಳಲ್ಲಿ ಕೂಡಲೇ ತುರ್ತು ಹಾಗೂ ದುಬಾರಿಯಾದ ಶಸ್ತ್ರಚಿಕಿತ್ಸೆಯನ್ನು ಹಲವು ಬಾರಿ ಮಾಡುವ ಅಗತ್ಯವಿರುತ್ತದೆ. ೨೦೧೨ರಲ್ಲಿ ದೆಹಲಿಯಲ್ಲಿ ನಿರ್ಭಯಾ ಪ್ರಕರಣ ಸಂಭವಿಸಿದ ನಂತರದಲ್ಲಿ ಕೇಂದ್ರ ಸರ್ಕಾರ ಮತು ಎಲ್ಲಾ ರಾಜ್ಯ ಸರ್ಕಾರಗಳು ಪೈಪೋಟಿಗೆ ಬಿದ್ದವರಂತೆ ಮಹಿಳಾ ಸುರಕ್ಷಾ ಮತ್ತು ಸಂತ್ರಸ್ತರ ಪರಿಹಾರದ ಯೋಜನೆಗಳನ್ನು ಘೋಷಿಸಿದ್ದವು. ೨೦೧೫ರಲ್ಲಿ ಕೇಂದ್ರ ಸರ್ಕಾರವು ಅತ್ಯಾಚಾರ, ಆಸಿಡ್ ದಾಳಿ, ವೇಶ್ಯಾವಾಟಿಕೆಯ ಉದ್ದೇಶದಿಂದ ಮಹಿಳೆಯರ ಸಾಗಾಟಿಕೆ, ಮತ್ತು ಗಡಿ ಪ್ರದೇಶಗಳಲ್ಲಿ ಗುಂಡು ಹಾರಾಟಗಳಲ್ಲಿ ಕೊಲ್ಲಲ್ಪಟ್ಟ ಮಹಿಳೆಯರ ಪರಿಹಾರಕ್ಕೆಂದು ೨೦೦ ಕೋಟಿ ರೂ.ನಷ್ಟು ಪ್ರಾಥಮಿಕ ನಿಧಿಯುಳ್ಳ ಕೇಂದ್ರೀಯ ಸಂತ್ರಸ್ತರ ಪರಿಹಾರ ನಿಧಿಯನ್ನು ಸ್ಥಾಪಿಸಿತು. ಈ ನಿಧಿಯು ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದೇ ಉದ್ದೇಶದಿಂದ ರೂಪಿಸಲಾದ ಯೋಜನೆಗಳಿಗೆ ಪೂರಕ ಸಹಕಾರ ನೀಡಬೇಕೆಂಬ ಆಶಯವೂ ಇದರೊಳಗೆ ಅಂತರ್ಗತವಾಗಿತ್ತು.

ಮಾದ್ಯಮಗಳು ಮತ್ತು ವಿವಿಧ ಅದ್ಯಯನಗಳು ಬಯಲು ಮಾಡಿರುವಂತೆ ಸಂತ್ರಸ್ಸ್ತ ಮಹಿಳೆಯರಿಗೆ ಮತ್ತು ಅವರ ಕುಟುಂಬದವರಿಗೆ ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳ ಜೊತೆ ಆಗಿರುವ ಅನುಭವಗಳು ಪರಿಸ್ಥಿತಿಯ ಬಗ್ಗೆ ದಾರುಣ ಚಿತ್ರಣವನ್ನು ನೀಡುತ್ತದೆ. ಉದಾಹರಣೆಗೆ ಆಸಿಡ್ ದಾಳಿಗೆ ಮತ್ತು ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತರ ಪರಿಹಾರಕ್ಕೆಂದು ಮಹಾರಾಷ್ಟ್ರದಲ್ಲಿ ರೂಪಿಸಲಾದ ಮಹಾರಾಷ್ಟ್ರ ಮನೋಧೈರ್ಯ ಯೋಜನೆಯು ಅನುಷ್ಠಾನವಾಗಿರುವ ರೀತಿಯನ್ನೇ ಗಮನಿಸಿ. ಮಾಹಾರಾಷ್ಟ್ರದಲ್ಲಿ ಲೈಂಗಿಕ ಕಿರುಕುಳಕ್ಕೆ ಬಲಿಯಾದ ಒಬ್ಬ ಅಪ್ರಾಪ್ತ ಬಾಲಕಿಂi ತಂದೆ ದಾಖಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯೊಂದರ ಬಗ್ಗೆ ಆದೇಶ ನೀಡಿದ ಬಾಂಬೆ ಹೈಕೋರ್ಟು ಲೈಂಗಿಕ ಕಿರುಕುಳಕ್ಕೆ ಗುರಿಯಾದವರಿಗೆ ಪರಿಹಾರ ನೀಡುವುದು ಸರ್ಕಾರದ ಕರ್ತವ್ಯವೆಂದು ಮಹಾರಾಷ್ಟ್ರ ಸರ್ಕಾರಕ್ಕೆ ಸ್ಪಷ್ಟ ಆದೇಶ ನೀಡಿತು. ಪ್ರಕರಣದ ಸತ್ಯಾಸತ್ಯತೆಯ ಪರಿಶೀಲನೆಯ ಬಗ್ಗೆ ಪ್ರಾಧಿಕಾರಗಳಿಗೆ ಯಾವುದೇ ಅಧಿಕಾರವಿಲ್ಲವೆಂದು ಕೋರ್ಟು ಸ್ಪಷ್ಟನೆ ನೀಡಿದ್ದರೂ, ಇಂಥಾ ಪ್ರಕರಣಗಳಾನ್ನು ನಿರ್ವಹಿಸುತ್ತಿರುವ ಮಾನವ ಹಕ್ಕು ಕಾರ್ಯಕರ್ತರುಗಳು ಹೇಳುವಂತೆ ಈ ಕಾನೂನು ಸೇವಾ ಸಮಿತಿಗಳು ಪ್ರಕರಣದ ಬಗ್ಗೆ ಇಲ್ಲಸಲ್ಲದ ಪ್ರಶ್ನೆಗಳನ್ನು ಕೇಳುತ್ತಾ, ವಿಚಾರಣೆ ಡೆಸುತ್ತ ಪರಿಹಾರ ಕೊಡಬೇಕೆ ಬೇಡವೇ ಎಂಬ ಬಗ್ಗೆ ತಮ್ಮದೇ ಆದ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇಂಥಾ ಪ್ರಕರಣಗಳ ಬಾಧಿತರಿಗೆ ಎಪ್‌ಐಆರ್ (ಪ್ರಥಮ ವರ್ತಮಾನ ವರದಿ) ದಾಖಲಾದ ತಕ್ಷಣ ಶೇ.೫೦ ರಷ್ಟು ಪರಿಹಾರ ಪಡೆದುಕೊಳ್ಳಲು ಮತ್ತು ಚಾರ್ಜ್‌ಶೀಟ್ (ಆರೋಪ ಪಟ್ಟಿ) ದಾಖಲಾದ ನಂತರ ಇನ್ನುಳಿದ ಪರಿಹಾರವನ್ನು ಪಡೆದುಕೊಳ್ಳುವ ಹಕ್ಕಿದೆ. ದೀರ್ಘಕಾಲದ ವಿಳಂಬ ಮತ್ತು ತ್ರಾಸದಾಯಕ ಪ್ರಕ್ರಿಯೆಗಳು ಈ ಯೋಜನೆಯ ಉದ್ದೇಶವನ್ನೇ ಹಾಳುಮಾಡುತ್ತವೆ. ಆದರಿಂದ ಒಮ್ಮೆ ಎಫ್‌ಐಆರ್ ದಾಖಲಾದ ಕೂಡಲೇ ಪೊಲೀಸರೇ ಆ ವಿಷಯವನ್ನು ಕಾನೂನು ಸೇವಾ ಪ್ರಾಧಿಕಾರಕ್ಕೆ ತಿಳಿಸುವುದನ್ನು ಕಡ್ಡಾಯಗೊಳಿಸಬೇಕೆಂದು ಕಾರ್ಯಕರ್ತರು ಆಗ್ರಹಿಸುತ್ತಿದ್ದಾರೆ. ಇದರಿಂದ ಸಂತ್ರಸ್ತರಿಗೆ ತ್ವರಿತವಾಗಿ ಪರಿಹಾರವನ್ನು ನೀಡಲು ಸಾಧ್ಯವಾಗುವುದು. ಸುಪ್ರೀಂಕೋರ್ಟಿಗೆ ನಾಲ್ಸಾ ನೀಡಿರುವ ವರದಿಯ ಪ್ರಕಾರ ೨೦೧೭ರಲ್ಲಿ ಆಂಧ್ರಪ್ರದೆಶದಲ್ಲಿ ದಾಖಲಾದ ೯೦೧ ಲೈಂಗಿಕ ದೌರ್ಜನ್ಯದ ಪ್ರಕರಣಗಳಲ್ಲಿ ಒಬ್ಬರಿಗೆ ಮಾತ್ರ ಪರಿಹಾರ ನೀಡಲಾಗಿದೆ ಮತ್ತು ಮಕ್ಕಳ ಮೇಲೆ ನಡೆದಿರುವ ಲೈಂಗಿಕ ಅಪರಾಧಗಳಲ್ಲಿ ೧೧ ಜನರಿಗೆ ಮಾತ್ರ ಪರಿಹಾರ ನೀಡಲಾಗಿದೆ. ರಾಜಸ್ಥಾನದಲ್ಲಿ ೨೦೧೭ರಲ್ಲಿ ೩೩೦೫ ಎಫ್‌ಐಆರ್ ಗಳು ದಾಖಲಾದರೂ ೧೪೦ ಸಂತ್ರಸ್ತರಿಗೆ ಮಾತ್ರ ಪರಿಹಾರ ದಕ್ಕಿದೆ. ಬಿಹಾರದಲ್ಲಿ ೧೧೯೯ ಎಫ್‌ಐಆರ್‌ಗಳು ದಾಖಲಾದರೂ ೮೨ ಜನರು ಮಾತ್ರ ಪರಿಹಾರವನ್ನು ಪಡೆದುಕೊಂಡಿದ್ದಾರೆ. ಇನ್ನು ನೀಡಲಾದ ಹಣದ ಮೊತ್ತದ ಪ್ರಶ್ನೆಗೆ ಬರುವುದಾದರೆ ಮಧ್ಯಪ್ರದೇಶದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ತುತ್ತಾದವರಿಗೆ ನೀಡಲಾಗಿರುವ ಸರಾಸರಿ ಮೊತ್ತ ಕೇವಲ ತಲಾ ರೂ.೬೦೦೦-೬೫೦೦.

ಹಾಗೆ ನೋಡಿದಲ್ಲಿ ನಾಲ್ಸಾ ಯೋಜನೆಯನ್ನು ಸಾಕಷ್ಟು ವಿವರವಾಗಿ  ರೂಪಿಸಲಾಗಿದ್ದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅವನ್ನು ಸಂತ್ರಸ್ತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಜಾರಿಗೆ ತರಬೇಕಷ್ಟೆ.

ಇತ್ತೀಚಿನ ದಿನಗಳಲ್ಲಿ ವಿಶ್ವಾದ್ಯಂತ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಂತ್ರಸ್ಥರ ಪರಿಹಾರದ ಹಕ್ಕಿಗೆ ಹೆಚ್ಚಿನ ಮಹತ್ವವನ್ನು ಕೊಡಲಾಗುತ್ತಿದೆ. ಭಾರತದ ಸುಪ್ರೀಂ ಕೋರ್ಟು ಸಹ ಆ ದಿಸೆಯಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ. ಸಂತ್ರಸ್ತರ ಪರಿಹಾರದ ಹಕ್ಕಿಗೆ ಒತ್ತು ಕೊಡುವುದರಿಂದ ಅವರ ತತ್‌ಕ್ಷಣದ ಬಾಧೆಗಳಿಂದ ಹೊರಬರಲು ಸಾಧ್ಯವಾಗುವುದಲ್ಲದೆ, ಅಪರಾಧಗಳ ಬಗ್ಗೆ ದೂರು ದಾಖಲಿಸುವ ಪ್ರವೃತ್ತಿಯೂ ಹೆಚ್ಚಬಹುದೆಂದು ಈ ಹಿಂದೆ ವರಿಷ್ಠ ನ್ಯಾಯಾಲಯವು ಅಭಿಪ್ರಾಯ ಪಟ್ಟಿತ್ತು. ಇಂಥಾ ಯೋಜನೆಗಳನ್ನು ಅನುಷ್ಠಾನ ಮಾಡಬೇಕಿರುವ ಸಂಸ್ಥೆಗಳು ಸಂತ್ರಸ್ತರನ್ನು ದಾನ-ಧರ್ಮಗಳಿಗಾಗಿ ಕಾದುಕೂತಿರುವರೆಂಬಂತೆ ನೋಡದೆ ಪರಿಹಾರವೆಂಬುದು ಸಂತ್ರಸ್ತರ ಹಕ್ಕೆಂಬುದನ್ನು ಈಗಲಾದರೂ ಅರ್ಥಮಾಡಿಕೊಳ್ಳಬೇಕಾದ ಅಗತ್ಯವಿದೆ.

ಅತ್ಯಾಚಾರ ಮಾಡುವ ಅಪರಾಧಿಗಳಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಹುಯಿಲೆಬ್ಬಿಸುವ ನಮ್ಮ ಸಮಾಜ ಲೈಂಗಿಕ ದೌರ್ಜನ್ಯ ಮತ್ತು ಆಸಿಡ್ ದಾಳಿಗಳಿಗೆ ತುತ್ತಾಗಿರುವ ಸಂತ್ರಸ್ತರಿಗೆ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸಲು ಮಾತ್ರ ಅಷ್ಟೇ ಉತ್ಸಾಹ ಮತ್ತು ಪ್ರಯತ್ನಗಳನ್ನು ತೋರದಿರುವುದು ನಿಜಕ್ಕೂ ಒಂದು ವಿಪರ್ಯಾಸ.

 

ಕೃಪೆ: Economic and Political Weekly

ಅನು: ಶಿವಸುಂದರ್

Leave a Reply

Your email address will not be published.