Karnataka election : ಕರ್ನಾಟಕ ಮಾದರಿ ಅಭಿವೃದ್ಧಿಗೆ ಸೋಲಾಗಿದೆ – ಸಮಾಜವಿಜ್ಞಾನಿ..

 

ನವ ಸಮಾಜಶಾಸ್ತ್ರ, ರಾಜಕೀಯ-ಸಮಾಜಶಾಸ್ತ್ರ, ಜಾಗತೀಕರಣದ ವಿಶೇಷ ಒಳನೋಟಗಳನ್ನು ಹೊಂದಿರುವ ಸಮಾಜವಿಜ್ಞಾನಿ ಪ್ರೊ. ಮುಜಾಫರ್ ಅಸ್ಸಾದಿ ದೆಹಲಿಯ ಜೆಎನ್‍ಯುವಿನಲ್ಲಿ ಎಂಎ, ಎಂಫಿಲ್. ಪಿಎಚ್‍ಡಿ ಸಂಪಾದಿಸಿದ್ದಾರೆ. ಮೈಸೂರು ವಿವಿಯಲ್ಲಿ ಪ್ರಾಧ್ಯಾಪಕರಾಗಿರುವ ಅವರು ಈಗ ರಾಯಚೂರಿನ ಹೊಸ ವಿವಿಯ ರಚನೆಯ ಹೆಚ್ಚುವರಿ ಕೆಲಸವನ್ನೂ ನಿಭಾಯಿಸುತ್ತಿದ್ದಾರೆ.

ಧಾರವಾಡದಲ್ಲಿ ‘ಬಹುÀತ್ವ ಭಾರತ’ ಕಾರ್ಯಕ್ರಮಕ್ಕೆ ಬಂದಾಗ ಅವರೊಡನೆ ನಡೆದ ಮಾತುಕತೆ ಇಲ್ಲಿದೆ:

* ನೀವು ಚುನಾವಣೆಗೂ ಮೊದಲು  ‘New India model V/s  Subaltern model’  ( ನವ ಭಾರತದ ಮಾದರಿ ವರ್ಸಸ್ ತಳ ಸಮುದಾಯದ ಅಭಿವೃದ್ಧಿ ಮಾದರಿ) ಎಂದು ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ಲೇಖನ ಬರೆದಿದ್ದಿರಿ. ಫಲಿತಾಂಶ ಬಂದ ಮೇಲೆ ನಿಮಗೆ ಏನನ್ನಿಸಿತು?

ಅಸ್ಸಾದಿ: ಇಲ್ಲಿ ನ್ಯೂ ಇಂಡಿಯಾ ಮಾಡೆಲ್ ಗೆದ್ದಿದೆ. ಸಬಾಲ್ಟರ್ನ್ ಮಾಡೆಲ್‍ಗೆ ಸೋಲಾಗಿದೆ. ಅಂದರೆ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಪಾದಿಸುವ ಕೈಗಾರಿಕರಣದ, ಮೆಟ್ರೊ ಕೇಂದ್ರಿತ ಅಭಿವೃದ್ಧಿ ಎದುರು ಸಿದ್ದರಾಮಯ್ಯ ದಿಟ್ಟತನದಿಂದ ಜಾರಿಗೆ ತರಲು ಯತ್ನಿಸಿದ ಸಬಾಲ್ಟರ್ನ್ ಮಾದರಿ ಅಂದರೆ ತಳ ಸಮುದಾಯಗಳ, ನಿರ್ಲಕ್ಷಿತರನ್ನು ಒಳಗೊಂಡ ಗ್ರಾಮೀಣ ಕೇಂದ್ರಿತ ಅಭಿವೃದ್ಧಿ ಮಾದರಿಗೆ ಹಿನ್ನಡೆಯಾಗಿದೆ. ಇದೇ ಇವತ್ತಿನ ಅಪಾಯ.

ಕಾಂಗ್ರೆಸ್‍ನ ಶೇಕಡಾವಾರು ಮತಗಳಿಕೆ ಪ್ರಮಾಣ ಶೇ.2ರಷ್ಟು ಹೆಚ್ಚಿದೆ. ಜೆಡಿಎಸ್ ಗಳಿಸಿದ ಮತಪ್ರಮಾಣವನ್ನು ಇದಕ್ಕೆ ಸೇರಿಸಿದರೆ ಬಿಜೆಪಿ-ವಿರೋಧಿ ಮತಗಳ ಪ್ರಮಾಣವೇ ಜಾಸ್ತಿಯಿದೆ. ಹೀಗಾಗಿ ಸಮಾಧಾನ ಪಟ್ಟುಕೊಳ್ಳಬಹುದಲ್ಲ?

ಅಸ್ಸಾದಿ: ಇಲ್ಲ ಇಲ್ಲ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶೇಕಡಾವಾರು ಮತಪ್ರಮಾಣದ ಆಧಾರದಲ್ಲಿ ಯಾರಿಗೆ ಅಧಿಕಾರ ಎಂದು ನಿರ್ಧರಿಸುವುದಿಲ್ಲ. ಅಚಿತಿಮವಾಗಿ ಎಷ್ಟು ಸೀಟುಗಳು ಸಿಕ್ಕವು ಎಂಬುದೇ ಇಲ್ಲಿ ಮುಖ್ಯ. ಹೀಗಾಗಿ ಇಲ್ಲಿ ಬಿಜೆಪಿ ಅಂದರೆ ಅದು ಪ್ರತಿಪಾದಿಸುವ ನ್ಯೂ ಇಂಡಿಯಾ ಮಾಡೆಲ್ ಗೆದ್ದಿದೆ ಎಂದೇ ಅರ್ಥ.

* ವರ್ತಮಾನದಲ್ಲಿ ಸಬಾಲ್ಟರ್ನ್ ಮಾಡೆಲ್‍ನ ಮಹತ್ವವೇನು?

ಅಸ್ಸಾದಿ: ಮೋದಿ ಪ್ರತಿಪಾದಿಸುವ ನ್ಯೂ ಇಂಡಿಯಾ ಮಾಡೆಲ್ ಏನಿದೆಯಲ್ಲ, ಅದು ಗುಜರಾತ್ ಮಾಡೆಲ್ಲು. ಇದು ಕೈಗಾರಿಕೃತ ಭಾರತದ ಜೊತೆಗೆ ವೈಬ್ರಂಟ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾದಂತಹ ಉಪ ಯೋಚನಾ ಲಹರಿಗಳನ್ನು ಪ್ರೋತ್ಸಾಹಿಸುತ್ತದೆ. ಇದು ಹೆಚ್ಚಿನ ಆರ್ಥಿಕ ದರ ವೃದ್ಧಿಯಲ್ಲಿ ಅಭಿವೃದ್ಧಿ ಕಾಣ ಬಯಸುತ್ತದೆ. ಇದು ಬಂಡವಾಳಶಾಹಿ ಕನ್ನಡಕದಿಂದ ಅಭಿವೃದ್ಧಿಯನ್ನು ನೋಡುತ್ತದೆ.

ಸಬಾಲ್ಟರ್ನ್ ಅಂದರೆ ಸಿದ್ದರಾಮಯ್ಯ ಕಟ್ಟಿಕೊಡಲು ಯತ್ನಿಸಿದ ಕರ್ನಾಟಕ ಮಾಡೆಲ್ಲು ದಲಿತರು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಅಗತ್ಯಗಳನ್ನು ಪೂರೈಸುತ್ತಲೇ ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಗೆ ಆದ್ಯತೆ ನೀಡುತ್ತದೆ. ಇಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿ ಭಾಗ್ಯದಂತಹ ಜನಪ್ರಿಯ ಮತ್ತು ಜನಪರ ಕಾರ್ಯಕ್ರಮಗಳು ಮುಖ್ಯವಾಗುತ್ತವೆ. ಹೆಚ್ಚೂ ಕಡಿಮೆ ಇದು ವೆಲ್ಫೇರ್ ಸ್ಟೇಟ್ (ಕಲ್ಯಾಣ ರಾಜ್ಯ)ನ ಪ್ರತಿಬಿಂಬವಾಗಿದೆ.

* ಎರಡರ ಮೂಲ ಆಶಯಗಳೇ ತದ್ವಿರುದ್ಧ ಅಲ್ಲವೇ?

ಅಸ್ಸಾದಿ: ಅದು ಹೌದಾದರೂ ಕೆಲವೇ ಕೆಲವು ಕಡೆ ಈ ಎರಡು ಮಾಡೆಲ್‍ಗಳು ಪರಸ್ಪರ ಸಂಧಿಸುತ್ತವೆ. ಆದರೆ ಮೋದಿಯ ಮಾಡೆಲ್‍ನ ದೊಡ್ಡ ಅಪಾಯವೆಂದರೆ ಅದು ಸಾಂಸ್ಕøತಿಕ ರಾಷ್ಟ್ರೀಯತೆಯ ಹೆಸರಲ್ಲಿ ಹಿಂದೂತ್ವವನ್ನು ಹೇರ ತೊಡಗಿದೆ. ತನ್ನೆಲ್ಲ ವಿಫಲತೆಗಳನ್ನು ಮುಚ್ಚಿಕೊಳ್ಳಲು ಅದು ಈ ಮುಖವನ್ನು ಜನರ ಮುಂದಿಟ್ಟು ಹಿಂದೂಗಳ ಧ್ರುವೀಕರಣಕ್ಕೆ ಯತ್ನಿಸುತ್ತದೆ.

* ಕರ್ನಾಟಕ ಮಾಡೆಲ್ಲು ದೇಶದ ಇತರ ಭಾಗಗಳಿಗೂ ಅನ್ವಯಿಸುವುದೇ?

ಅಸ್ಸಾದಿ: ಕೆಲವರು ಇದು ಇತರ ಪ್ರದೇಶಗಳಲ್ಲಿ ಸರಿ ಬರದು ಎಂದು ವಾದ ಮಂಡಿಸುತ್ತಾರೆ. ಇದು ಅರ್ಧಸತ್ಯ. ಮೂಲತ: ಕರ್ನಾಟಕ ಮಾಡೆಲ್ಲು ಸ್ಪಷ್ಟವಾಗಿ ಈ ರಾಜ್ಯದ ಸಾಮಾಜಿಕ-ಆರ್ಥಿಕ-ರಾಜಕೀಯ ಆಶೋತ್ತರಗಳಿಗೆ ಪೂರಕವಾಗಿದೆ. ಇದನ್ನು ಗುಜರಾತ್, ಕೇರಳ ಮಾಡೆಲ್ಲುಗಳೊಂದಿಗೆ ಹೋಲಿಸಲಾಗದು. ಇದರಲ್ಲಿರುವ ಮೂಲ ಆಶಯಗಳು ಯಾವ ಪ್ರದೇಶದಲ್ಲಾದರೂ ಅನ್ವಯವಾಗುತ್ತವೆ.

* ಇಂತಹ ಒಂದು ಮಾಡೆಲ್ಲು ಕಟ್ಟಲು ಯತ್ನಿಸಿದ ಸಿದ್ದರಾಮಯ್ಯರಿಗೆ ದೊಡ್ಡ ಹಿನ್ನಡೆಯಾಯಿತಲ್ಲ?

ಅಸ್ಸಾದಿ: ಇದು ದುರಂತ. ಅವರ ಕಾರ್ಯಕ್ರಮಗಳ ಫಲಾನುಭವಿಗಳು ರಾಜಕೀಯ ನಿರ್ಣಯವೊಂದನ್ನು ರೂಪಿಸುವಷ್ಟು ಪ್ರಬಲವಾಗಿಲ್ಲ, ಸಂಘಟನಾತ್ಮಕವಾಗಿಲ್ಲ. ಆದರೆ ಅದೇ ಜನ ಜಾತಿ ಹೆಸರಲ್ಲಿ ಸಂಘಟಿತಗೊಂಡು, ಸುಳ್ಳು ಪ್ರಚಾರಗಳನ್ನು ನಂಬಿ ಬಿಜೆಪಿಯನ್ನು ಬೆಂಬಲಿಸಿದರು. ಈ ಸಲ ಸಿದ್ದರಾಮಯ್ಯರ ಪರ ಗಟ್ಟಿಯಾಗಿ ನಿಂತಿದ್ದು ಕುರುಬರು ಮತ್ತು ಮುಸ್ಲಿಮರು ಮಾತ್ರ. ಮೈಸೂರಿನಲ್ಲಿ ಒಕ್ಕಲಿಗರು ಸಾರಾಸಗಟಾಗಿ ಜೆಡಿಎಸ್ ಪರ ನಿಂತರು. ಕರಾವಳಿಯಲ್ಲಿ ‘3ಬಿ’ (ಬಂಟರು, ಬಿಲ್ಲವರು, ಬ್ರಾಹ್ಮಣರು), ಮುಂಬೈ ಕರ್ನಾಟಕದಲ್ಲಿ ‘ಲಿಬ್ರಾ’ (ಲಿಂಗಾಯತರು-ಬ್ರಾಹ್ಮಣರು, ಮಧ್ಯ ಕರ್ನಾಟಕದಲ್ಲಿ ಲಿಬ್ರಾ+ಎಡದಲಿತರು ಬಿಜೆಪಿಗೇ ಸಾಲಿಡ್ಡಾಗಿ ವೋಟ್ ಮಾಡಿದರು ಎನಿಸುತ್ತದೆ. ಸಿದ್ರಾಮಯ್ಯ ಒಬ್ಬ ಹಿಂದುಳಿದ ಜಾತಿಗೆ ಸೇರಿದವರಾಗಿದ್ದರಿಂದ ಮೇಲ್ಜಾತಿಗಳು ಮತ್ತು ಮೀಡಿಯಾಗಳಿಗೆ ಅವರ ಬಗ್ಗೆ ಅಸಹನೆ ಇದ್ದೇ ಇತ್ತು. 2013ರಲ್ಲಿ ಯಡಿಯೂರಪ್ಪ ತಮ್ಮ ಭ್ರಷ್ಟಾಚಾರಗಳಿಂದಾಗಿ ಸೋತರ, ಈಗ ಸಿದ್ದರಾಮಯ್ಯ ತಮ್ಮ ಕಾರ್ಯಕ್ರಮಗಳಿಂದಾಗಿಯೇ ಸೋತರೇನೋ ಎನಿಸುತ್ತಿದೆ.

* ‘ಬಹುತ್ವ ಭಾರತ’ ಮತ್ತು ಬಿಜೆಪಿಯ ಏಕರೂಪಿ ಸಮಾಜಗಳ ಕುರಿತು ಹೇಳಿ.

ಅಸ್ಸಾದಿ: ಬಹುತ್ವದ ಪರಿಕಲ್ಪನೆ ಈಗ ಮೂಡಿದ್ದಲ್ಲ. ಪ್ರಾಚೀನ ಕಾಲದಿಂದಲೂ ಈ ದೇಶ ಅದನ್ನು ಜತನದಿಂದ ಕಾಪಾಡಿಕೊಂಡು ಬಂದಿದೆ. ವೈದಿಕಶಾಹಿಯಿಂದ ಕೆಲವೊಮ್ಮೆ ಹಿನ್ನಡೆಯಾದರೂ ಬಹುತ್ವ ಮುಕ್ಕಗದೇ ಉಳಿದುಕೊಂಡು ಬಂದಿದೆ. ಆದರೆ ಸಂಪೂರ್ಣ ಬಹುಮತದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಬಹತ್ವ ಅಪಾಯಕ್ಕೆ ಸಿಲುಕುತ್ತಿದೆ. ವ್ಯಾಪಕವಾದ ಜನಾಂದೋಲನಗಳ ಮೂಲಕ ನಾವು ಬಹುತ್ವವನ್ನು ಉಳಿಸಿಕೊಳ್ಳಬೇಕಿದೆ.

* ಧರ್ಮ ಸಂಕೇತಗಳ ಮೂಲಕ ಬಿಜೆಪಿ ಆಡುವ ಆಟದಿಂದ ಅದಕ್ಕೆ ದೊಡ್ಡ ಲಾಭವಾಗುತ್ತಿದೆಯಾ?

ಅಸ್ಸಾದಿ: ಖಂಡಿತ ಹೌದು. ಕೇಸರಿ ಬಣ್ಣ, ಭಗವಾಧ್ವಜ, ತ್ರಿಶೂಲದಂತಹ ಸಂಕೇತಗಳ ಮೂಲಕ ಅಲ್ಸಂಖ್ಯಾತರಲ್ಲಿ ಭಯವನ್ನು ಮತ್ತು ಅಮಾಯಕ ಹಿಂದೂಗಳಲ್ಲಿ ಗೆಲುವನ್ನು ತುಂಬಲು ಯತ್ನಿಸಿ ಸಫಲವಾಗಿದೆ. ಮುಸ್ಲಿಮರ ಗಡ್ಡ, ಟೋಪಿಗಳಂತಹ ಸಂಕೇತಗಳನ್ನು ಅದು ‘ಉಗ್ರವಾದ’ದೊಂದಿಗೆ ಸಮೀಕರಿಸಿ, ಹಿಂದೂಗಳ ಧ್ರುವೀಕರಣ ಮಾಡುತ್ತಿದೆ. ಬಿಜೆಪಿಯ ಸುಳ್ಳುಗಳಿಗೆ ಬಲಿಯಾಗಿರುವ ಯುವಸಮೂಹವನ್ನು ತಿದ್ದಲು ನಾವು ಎಲ್ಲ ಬಗೆಯ ದಾರಿಗಳನ್ನು ಬಳಸಿಕೊಳ್ಳಬಹುದು.

ಬಾಕ್ಸ್

ಲಿಂಗಾಯತರ ಬಡಾವಣೆಯಲ್ಲಿ ಮನೆ ಸಿಗಲ್ಲ

ಕೆಲವೊಮ್ಮೆ ಹೆಸರಿನ ಸಂಕೇತಗಳೇ ಅಲ್ಪಸಂಖ್ಯಾತರಿಗೆ ಅಪಾಯ ತರುತ್ತಿವೆ. ಮುಜಾಫರ್ ಎನ್ನುವ ನನ್ನ ಹೆಸರು ಕೂಡ ಅಂತಹ ಸಂಕೇತವೇ. ರಾಯಚೂರಿನಲ್ಲಿ ಸ್ಥಾಪನೆಯಾಗಿರುವ ಹೊಸ ವಿಶ್ವವಿದ್ಯಾಲಯದ ರೂಪುರೇಷೆಗಳನ್ನು ರಚಿಸಲು ನನ್ನು ಅಲ್ಲಿಗೆ ನೇಮಿಸಿದ್ದಾರೆ. ಅಲ್ಲಿನ ನನ್ನ ಅಧ್ಯಾಪಕ ಮಿತ್ರರಲ್ಲಿ ನಿಮ್ಮ ಬಡಾವಣೆಯಲ್ಲಿ ಯಾವುದಾದರೂ ಭಾಡಿಗೆ ಮನೆ ಇದ್ದರೆ ನೋಡಿ ಎಂದೆ. ಅಯ್ಯೋ ನಾವಿರುವ ಬಡಾವಣೆಯಲ್ಲಿ ಲಿಂಗಾಯತರೇ ಜಾಸ್ತಿ. ಅಲ್ಲಿ ಪ್ರಯತ್ನಿಸಲೇ ಬೇಡಿ. ನಿಮಗೆ ಖಂಡಿತ ಅಲ್ಲಿ ಮನೆ ಸಿಗುವುದಿಲ್ಲ ಎಂದರು. ಇದು ನನ್ನ ಸ್ವಾನುಭವ. ಕರಾವಳಿಗೆ ಹೋದಾಗ ನನ್ನ ಹಿಂದೂ ಗೆಳತಿಯೊಂದಿಗೆ ಹೊಟೆಲ್‍ಗಳಲ್ಲಿ ತಿಂಡಿ ತಿನ್ನುವಾಗಲೂ ಒಂದಲ್ಲ ಎರಡು ಸಲ ವಿಚಾರ ಮಾಡುವಂತಹ ಪರಿಸ್ಥಿತಿಯಿದೆ.

ಸಂದರ್ಶನ

ಪಿ.ಕೆ. ಮಲ್ಲನಗೌಡರ್

Leave a Reply

Your email address will not be published.

Social Media Auto Publish Powered By : XYZScripts.com