ವಿಜಯಪುರ : ಮಕ್ಕಳ ಕಳ್ಳರಿಗೆ ಬಲಿಯಾದಳಾ ಬಾಲಕಿ….: ಗಡ್ಡ ಬಿಟ್ಟಿದ್ದ ಅಪರಿಚಿತರಿಂದ ಕೊಲೆ…!?

ವಿಜಯಪುರ : ಮಕ್ಕಳ ಕಳ್ಳರ ಹಾವಳಿ ಮಧ್ಯೆ ಮನೆಯಿಂದ ನಾಪತ್ತೆಯಾಗಿದ್ದ ಬಾಲಕಿ ಇಂದು ಬೆಳಿಗ್ಗೆ ಶವವಾಗಿ ಪತ್ತೆಯಾದ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ವಿದ್ಯಾ ನಗರದ ನಿವಾಸಿ 8ವರ್ಷದ ಜ್ಯೋತಿ ಕೊರೆ ಶವವಾಗಿ ಪತ್ತೆಯಾದ ಬಾಲಕಿ. ನಿನ್ನೆ ಸಾಯಂಕಾಲ 6 ಗಂಟೆಗೆ ಮನೆಯಿಂದ ಆಡಲು ಹೋಗಿದ್ದ ಬಾಲಕಿ ರಾತ್ರಿಯಾದ್ರು ವಾಪಸ್ ಆಗಿರಲಿಲ್ಲ. ಇದ್ರಿಂದ ಗಾಬರಿಗೊಂಡ ಪೋಷಕರು ತಡ ರಾತ್ರಿಯವರೆಗೂ ಹುಡುಕಾಟ ನಡೆಸಿ ಬಳಿಕ ಸಿಂದಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಆದರೆ ಬೆಳಿಗ್ಗೆ ವಿದ್ಯಾನಗರ ಸಮೀಪದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಬಾಲಕಿ ಜ್ಯೋತಿ ಶವ ಪತ್ತೆಯಾಗಿದೆ. ಸದ್ಯ ಸ್ಥಳದಲ್ಲಿ ಜ್ಯೋತಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ನಿನ್ನೆ ಸಿಂದಗಿ ಪಟ್ಟಣದಲ್ಲಿ ಗಡ್ಡ ಬಿಟ್ಟುಕೊಂಡ ಕೆಲ ಅಪರಿಚಿತ ವ್ಯಕ್ತಿಗಳು ಅನುಮಾನಾಸ್ಪದವಾಗಿ ಅಡ್ಡಾಡುತ್ತಿದ್ದಾರೆ ಎಂದು ಗುಲ್ಲೆದ್ದಿತ್ತು. ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ಶಂಕೆ ಬೆನ್ನಲ್ಲೇ ಬಾಲಕಿ ನಾಪತ್ತೆಯಾಗಿ ಏಕಾಏಕಿ ಶವವಾಗಿ ಪತ್ತೆಯಾಗಿರೋದು ಅನುಮಾನಕ್ಕೆ ಕಾರಣವಾಗಿದೆ.

ಇನ್ನು ಅನುಮಾನಾಸ್ಪದ ವ್ಯಕ್ತಿಗಳು ಬಂದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೂ ಅವರು ಅಸಡ್ಯೆ ತೋರಿದ್ದರು ಎನ್ನಲಾಗಿದೆ. ಸದ್ಯ ಜ್ಯೋತಿಯನ್ನ ಅಪಹರಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published.