ಪಕ್ಕದ್ಮನೆ ಹುಡುಗಿ ಓಡಿಹೋದ್ಲು ಅಂತ ಐದು ತಿಂಗಳ ಗರ್ಭಿಣಿಗೆ ಥಳಿತ : ಹೊಟ್ಟೆಯಲ್ಲೇ ಕಣ್ಮುಚ್ಚಿದ ಕೂಸು

ಕೋಲಾರ : ನೆರೆ ಮನೆಯ ಹೆಣ್ಣು ಮಗಳು ಮತ್ತೋರ್ವನೊಂದಿಗೆ ಓಡಿ ಹೋಗಲು ಗರ್ಭಿಣಿ ಸಹಕಾರವೇ ಕಾರಣವೆಂದು ಆರೋಪಿಸಿ ಗರ್ಭಿಣಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.

ಹಲ್ಲೆಯಿಂದಾಗಿ ೫ ತಿಂಗಳ ಗರ್ಭಿಣಿಗೆ ಗರ್ಭಪಾತವಾಗಿದ್ದು ಭ್ರೂಣದಲ್ಲೇ ಶಿಶು ಮೃತಪಟ್ಟ ಅಮಾನವೀಯ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ತಾಲ್ಲೂಕಿನ ನೇರ್ನಹಳ್ಳಿ ಗ್ರಾಮದ ನಿವಾಸಿ ವರಲಕ್ಷ್ಮಿ ಹಲ್ಲೆಗೊಳಗಾಗಿದ್ದು, ಕೋಲಾರದ ಎಸ್‌ಎನ್‌ಆರ್ ಆಸ್ಪತ್ರೆಗೆ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಕಳೆದ ಭಾನುವಾರ ಆನಂದ್, ಶಾರದ, ಪಾಪಣ್ಣ, ಸರಸಮ್ಮ ಮತ್ತು ಆಕ್ಷಯ ಎಂಬುವವರು ಏಕಾಏಕಿ ಮನೆಯಲ್ಲಿ ಒಬ್ಬಳೇ ಇದ್ದ ವರಲಕ್ಷ್ಮಿ ಮೇಲೆ ಹಲ್ಲೆ ನಡೆಸಿ ತಮ್ಮ ಮನೆ ಮಗಳು ಓಡಿ ಹೋಗಲು ನೀನೇ ಕಾರಣವೆಂದು ನಿಂದಿಸಿದ್ದರು. ಅಲ್ಲದೆ ವರಲಕ್ಷ್ಮಿಯ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿ ಹೊಟ್ಟೆಗೆ ಒದ್ದಿದ್ದಾರೆ. ಹಲ್ಲೆಯ ತೀವ್ರತೆಯಿಂದಾಗಿ ಗರ್ಭಪಾತವಾಗಿದ್ದು ಹೊಟ್ಟೆಯಲ್ಲೇ ಮಗು ಸಾವಿಗೀಡಾಗಿದೆ.  ಬಳಿಕ ವರಲಕ್ಷ್ಮಿ ಗಂಡ ಹರೀಶ್ ಮನೆಗೆ ಬಂದು ಹೆಂಡತಿಯ ಸ್ಥಿತಿ ನೋಡಿ ಕೂಡಲೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಆಸ್ಪತ್ರೆಗೆ ದಾಖಲು ಮಾಡುವಷ್ಟರಲ್ಲಿ ಮಗು ಮೃತಪಟ್ಟಿದ್ದು, ಸದ್ಯ ವರಲಕ್ಷ್ಮಿ ಚೇತರಿಸಿಕೊಳ್ಳುತ್ತಿದ್ದಾಳೆ.

ಈ ಬಗ್ಗೆ ಕೋಲಾರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com