ಅರಣ್ಯ ಇಲಾಖೆಗೆ ಬ್ರಾಂಡ್‌ ಅಂಬಾಸಿಡರ್‌ ಆದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌

ಪ್ರಾಣಿ, ಪಕ್ಷಿಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ಚಲನಚಿತ್ರ ನಟ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿಯಾಗಿ ನೇಮಕಗೊಳ್ಳುವ ಮೂಲಕ ಇತರೆ ನಟರಿಗೂ ಮಾದರಿಯಾಗಿದ್ದಾರೆ.

ಗುಜರಾತ್‌ನ ಅರಣ್ಯ ಇಲಾಖೆಗೆ ಬಾಲಿವುಡ್‌ನ ಬಿಗ್ ಬಿ ಅಮಿತಾಬ್‌ ಬಚ್ಚನ್ ಅವರನ್ನ ರಾಯಭಾರಿಯನ್ನಾಗಿ ನೇಮಕ ಮಾಡಿದ ಬೆನ್ನಲ್ಲೇ ಕರ್ನಾಟಕದ ಅರಣ್ಯ ಇಲಾಖೆಯವರು ಸದಾ ಪ್ರಾಣಿ ಪಕ್ಷಿಗಳ ಬಗ್ಗೆ ಅಪಾರ ಪ್ರೀತಿ ಮತ್ತು ಕಾಳಜಿ ಹೊಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನ ರಾಯಭಾರಿಯನ್ನಾಗಿ ನೇಮಿಸಿದೆ.
ಈ ಹುದ್ದೆಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಒಪ್ಪಿಗೆ ಸೂಚಿಸುವ ಮೂಲಕ ಪ್ರಾಣಿ ಮತ್ತು ಪರಿಸರದ ಮೇಲಿರುವ ಪ್ರೀತಿಯನ್ನ ತೋರಿಸಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್. ಈಗಾಗಲೇ ಅರಣ್ಯ ಇಲಾಖೆಯವರು ರಾಯಭಾರಿಯಾಗಿ ನೇಮಕಗೊಂಡಿರುವ ಪತ್ರ ನೀಡಿದ್ದು, ವಿಶ್ವಭೂಮಿ ದಿನಾಚರಣೆ , ಪರಿಸರ ದಿನಾಚರಣೆ, ವನಮಹೋತ್ಸವ ಹಾಗೂ ಇನ್ನಿತರ ಅರಣ್ಯ ಇಲಾಖೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅರಣ್ಯ ಹಾಗೂ ವನ್ಯ ಜೀವಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ.

ದರ್ಶನ್ ಈಗಾಗಲೇ ಮೈಸೂರು ಮೃಗಾಲಯಲ್ಲಿ ಹುಲಿ, ಆನೆ ಸೇರಿದಂತೆ ಹಲವಾರು ಪ್ರಾಣಿಗಳನ್ನ ದತ್ತು ಪಡೆದು ಪ್ರಾಣಿಗಳ ಪಾಲನೆಗೆ ಸಹಕರಿಸುತ್ತಿದ್ದಾರೆ. ಅದರಂತೆ ನಗರದ ಹೊರವಲಯದಲ್ಲಿರುವ ಕೆಂಪಯ್ಯನ ಹುಂಡಿಯಲ್ಲಿರುವ ತಮ್ಮ ಫಾರಂ ಹೌಸ್‌ನಲ್ಲಿ ಕುದುರೆ ಸೇರಿದಂತೆ ಹಲವಾರು ಪ್ರಾಣಿ ಪಕ್ಷಗಳನ್ನ ಸಾಕುತ್ತಿದ್ದಾರೆ. ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ಫಾರಂ ಹೌಸ್‌ಗೆ ಆಗಮಿಸುವ ದರ್ಶನ್ ಕುದುರೆ ಸವಾರಿ ಮಾಡಿ ಪ್ರಾಣಿ ಪಕ್ಷಗಳ ಜೊತೆ ಕಾಲ ಕಳೆಯುತ್ತಾರೆ.
ಜೂನ್ 5 ರಂದು ಪರಿಸರ ದಿನಾಚರಣೆ ಅಂಗವಾಗಿ ರಾಜ್ಯಾದ್ಯಂತ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮಕ್ಕಾಗಿಯೇ ನಿರ್ಮಿಸುತ್ತಿರುವ ಪ್ಲಾಂಟ್ ಎ ಟ್ರಿ ಎಂಬ ಸಾಕ್ಷ್ಯ ಚಿತ್ರ ನಿರ್ಮಾಣ ಮಾಡಲಾಗುತ್ತಿದೆ. ಅಂದು ಸಾವಿರಾರು ಗಿಡಗಳನ್ನು ಸಹ ನೆಡಲಾಗುತ್ತಿದೆ. ಕಾಡ್ಗಿಚ್ಚು ಹಾಗೂ ಅರಣ್ಯ ಸಂರಕ್ಷಣೆ ಕುರಿತು 90 ನಿಮಿಷಗಳ ಸಾಕ್ಷ್ಯ ಚಿತ್ರದಲ್ಲಿ ಈಗಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸುಮಾರು 20 ಸೆಕೆಂಡ್‌ ಕಾಣಿಸಿಕೊಳ್ಳಲಿದ್ದಾರೆ. ಈ ಸಾಕ್ಷ್ಯ ಚಿತ್ರಕ್ಕೆ ದರ್ಶನ್ ಹಣ ಪಡೆದಿಲ್ಲ ಎನ್ನಲಾಗಿದೆ.
ಸದ್ಯದಲ್ಲಿಯೇ ಪ್ಲಾಂಟ್ ಎ ಟ್ರಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ದರ್ಶನ್ ಚಿತ್ರೀಕರಣ ನಡೆಯುವ ಮಲೆಮಹದೇಶ್ವರ ಬೆಟ್ಟ, ಬಂಡಿಪುರ, ನಾಗರಹೊಳೆ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಅರಣ್ಯ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ.
ಈ ಎಲ್ಲಾ ಕಾರ್ಯಗಳಿಗೆ ದರ್ಶನ್ ಸ್ವಯಂ ಪ್ರೇರಣೆಯಿಂದಲೇ ಒಪ್ಪಿಕೊಂಡಿದ್ದಾರೆ. ದರ್ಶನ್ ಅವರೊಳಗೊಬ್ಬ ವನ್ಯ ಪ್ರೇಮಿ ಇದ್ದಾನೆ. ಅವರು ಅರಣ್ಯ, ವನ್ಯಜೀವಿ ಬಗ್ಗೆ ತೋರುವ ಪ್ರೀತಿ ಇತರರಿಗೆ ಮಾದರಿಯಾಗಿದೆ. ಅಲ್ಲದೆ ಇಲಾಖೆಯ ಯಾವುದೇ ಜಾಗೃತಿ ಕೆಲಸಗಳಿಗೆ ಮುಂದೆ ನಿಂತು ಸಹಕರಿಸುತ್ತಾರೆ. ಹೀಗಾಗಿ ಅರಣ್ಯ ಇಲಾಖೆ ದರ್ಶನ್ ಅವರನ್ನ ರಾಯಭಾರಿಯಾಗಿ ನೇಮಿಸಿದೆ ಎಂದು ಮಹದೇಶ್ವರ ಬೆಟ್ಟದ ವನ್ಯ ಜೀವಿ ಸಂರಕ್ಷಿತ ಪ್ರದೇಶದ ಡಿಸಿಎಫ್ ವಿ.ಏಡುಕೊಂಡ ತಿಳಿಸಿದ್ದಾರೆ

21 thoughts on “ಅರಣ್ಯ ಇಲಾಖೆಗೆ ಬ್ರಾಂಡ್‌ ಅಂಬಾಸಿಡರ್‌ ಆದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌

Leave a Reply

Your email address will not be published.

Social Media Auto Publish Powered By : XYZScripts.com