Karnataka election 2018 : ಥರ್ಡ್ ಪ್ಲೇಸ್ ಈಶ್ವರಪ್ಪ ಫಸ್ಟ್ ಕ್ಲಾಸ್ ಗೆದ್ದಿದ್ದು ಹೇಗೆ?

ಅಂತೂಇಂತೂ ಬ್ರಿಗೇಡ್ ಈಶ್ವರಪ್ಪ ಶಿವಮೊಗ್ಗ ಸಿಟಿಯಲ್ಲಿ ಗೆದ್ದು ನಿಟ್ಟುಸಿರು ಬಿಟ್ಟಿದ್ದಾರೆ. ಎತ್ತಿಂದೆತ್ತ ಲೆಕ್ಕ ಹಾಕಿದರೂ ಕಳೆದ ಸಲದ ಮೂರನೇ ಸ್ಥಾನ ಬಿಟ್ಟು ಮೇಲಕ್ಕೇಳುವ ಲಕ್ಷಣಗಳೇ ಈ ಚುನಾವಣೆಯ ಕೊನೆಯ ಕ್ಷಣದವರೆಗೆ ಈಶ್ವರಪ್ಪ ಮೊಗದಲ್ಲಿ ಕಾಣಿಸುತ್ತಿರಲಿಲ್ಲ. ತಾನು ಪಕ್ಷ ಬಿಟ್ಟು ಹೋಗಲು ಕಾರಣವಾಗಿದ್ದ, ವಾಪಾಸು ಬಂದಾಗಲೂ ರಾಯಣ್ಣ ಬ್ರಿಗೇಡ್ ಕಟ್ಟಿಕೊಂಡು ವಿಪರೀತ ಕಾಟ ಕೊಟ್ಟಿದ್ದ ಈಶ್ವರಪ್ಪರನ್ನು ಸೋಲಿಸಿ, ಅವರ ರಾಜಕೀಯ ಬದುಕಿಗೆ ಇತಿಶ್ರೀ ಹಾಡಲು ಸ್ವತಃ ಯಡ್ಯೂರಪ್ಪನವರೇ ಸಕಲ ಸನ್ನದ್ಧರಾಗಿದ್ದು ವಾಸ್ತವ. ಹಾಗೆ ನೋಡಿದರೆ ಈಶ್ವರಪ್ಪನಿಗೆ ಟಿಕೇಟು ಕೊಡೋದೇ ಯಡ್ಯೂರಪ್ಪನವರಿಗೆ ಇಷ್ಟವಿರಲಿಲ್ಲ. ಅದಕ್ಕೆಂದೇ ಕಳೆದ ಸಲದ ಕೆಜೆಪಿ ಹುರಿಯಾಳು ರುದ್ರೇಗೌಡರನ್ನು ಜಿಲ್ಲಾಧ್ಯಕ್ಷ ಮಾಡಿ, ಚುನಾವಣಾ ಮುಂಚೂಣಿಗೆ ತರುವ ಪ್ರಯತ್ನ ಮಾಡಿದ್ದೂ ಉಂಟು.


ಹೈಕಮಾಂಡ್ ಒತ್ತಡಕ್ಕೆ ಮಣಿದು ಟಿಕೇಟ್ ಕನ್ಫರ್ಮ್ ಮಾಡಿದ ಮೇಲೂ ಈಶ್ವರಪ್ಪರಿಗೆ ಸೋಲಿನ ರುಚಿ ತೋರಿಸಲು ಮಾಡಬೇಕಾದ ಮಸಲತ್ತುಗಳನ್ನೆಲ್ಲ ಯಡ್ಯೂರಪ್ಪ ಅಣಿ ಮಾಡಿಟ್ಟಿದ್ದರು. ಕೊನೇ ಕ್ಷಣದವರೆಗೆ ಕ್ಷೇತ್ರದೊಳಗೆ ಕಾಲಿಟ್ಟ ಎಂತವರಿಗೇ ಆದರೂ ಈಶ್ವರಪ್ಪನ ಮೂರನೇ ಸ್ಥಾನದ ದುರಂತ ಭವಿಷ್ಯ ಮುಖಕ್ಕೆ ರಾಚುತ್ತಿತ್ತು. ಅಂತದ್ದರಲ್ಲಿ ಬ್ರಾಹ್ಮಣ ಮತಗಳು ಗಣನೀಯ ಸಂಖ್ಯೆಯಲ್ಲಿರುವ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಅದೇ ಬ್ರಾಹ್ಮಣ ಸಮುದಾಯದ ಕೆ.ಬಿ.ಪ್ರಸನ್ನ ಕುಮಾರ್‍ರನ್ನು ಹಿಂದಿಕ್ಕಿ ಬರೋಬ್ಬರಿ ಐವತ್ತು ಸಾವಿರ ಲೀಡ್‍ನಲ್ಲಿ ಈಶ್ವರಪ್ಪ ಗೆಲುವಿನ ಪತಾಕೆ ಹಾರಿಸುತ್ತಾರೆಂದರೆ ಹೇಗೆ ಸಾಧ್ಯ ಅನ್ನೋದು ಜನರನ್ನು ಕಾಡುತ್ತಿದೆ.
ಒನ್ಸ್ ಎಗೇನ್, ಈಶ್ವರಪ್ಪನವರ ಈ ಗೆಲುವಿನ ಹಿಂದೆ ಕೆಲಸ ಮಾಡಿರೋದು ಅದೇ ಹೈಕಮಾಂಡ್! ಶತಾಯಗತಾಯ ಕರ್ನಾಟಕದಲ್ಲಿ ಕಾಂಗ್ರೆಸ್ಸನ್ನು ಅಧಿಕಾರದಿಂದ ದೂರ ಇಡಬೇಕೆಂದು ನಿರ್ಧರಿಸಿಕೊಂಡಿದ್ದ ಬಿಜೆಪಿ ಹೈಕಮಾಂಡ್‍ಗೆ ಒಂದೊಂದು ಸೀಟೂ ಮುಖ್ಯವೆನ್ನುವುದು ಮನದಟ್ಟಾಗಿ ಹೋಗಿತ್ತು. ಅದಕ್ಕೋಸ್ಕರ ಆಂತರಿಕ ಕಚ್ಚಾಟದಿಂದ ಕೈತಪ್ಪಿ ಹೋಗಬಹುದಾಗಿರುವ ಕ್ಷೇತ್ರಗಳನ್ನು ಪಟ್ಟಿ ಮಾಡಿ ಸಂಬಂಧಪಟ್ಟವರ ತಲೆಮೇಲೆ ಮೊಟಕುವ ಪ್ರಯತ್ನಕ್ಕೆ ಬಿಜೆಪಿ ಹೈಕಮಾಂಡ್ ಮುಂದಾದಾಗ ಆ ಪಟ್ಟಿಯಲ್ಲಿ ಮೊದಲು ಕಾಣಿಸಿಕೊಂಡಿದ್ದೇ ಈಶ್ವರಪ್ಪನವರ ತವರುಮನೆ. ಸ್ವತಃ ಯಡ್ಯೂರಪ್ಪನವರೇ ಈಶ್ವರಪ್ಪನನ್ನು ಮಣಿಸಲು ರಹಸ್ಯ ಸಿದ್ಧತೆ ಮಾಡಿಕೊಂಡಿರೋದನ್ನು ಖಾತ್ರಿಪಡಿಸಿಕೊಂಡ ಅಮಿತ್ ಶಾ, ಯಡ್ಯೂರಪ್ಪನನ್ನು ಕರೆದು `ನಿಮ್ಮ ಸಿಎಂ ಆಗೋ ಕನಸು ನನಸಾಗಬೇಕು ಅಂದ್ರೆ, ನೀವು ಈಶ್ವರಪ್ಪನನ್ನು ಗೆಲ್ಲಿಸಿಕೊಳ್ಳಲೇಬೇಕು. ಅಕಸ್ಮಾತ್ ಆಯಪ್ಪ ಸೋತರೆ, ಅದಕ್ಕೆ ನೀವೇ ಜವಾಬ್ಧಾರರಾಗ್ತೀರಿ. ಆಮೇಲಿನ ಬೆಳವಣಿಗೆಗಳಿಗೆ ನಾವು ಹೊಣೆಯಲ್ಲ’ ಅನ್ನೋ ಸಾಫ್ಟ್ ಎಚ್ಚರಿಕೆ ರವಾನಿಸಿದ್ದರು. ಆನಂತರವೇ ಯಡ್ಯೂರಪ್ಪ ತನ್ನೆಲ್ಲಾ ರಣತಂತ್ರಗಳನ್ನು ರಿವರ್ಸ್ ಮಾಡಿ, ಈಶ್ವರಪ್ಪನನ್ನು ಗೆಲ್ಲಿಸಿಕೊಳ್ಳಲು ದಾಳ ಉರುಳಿಸಿದ್ದು. ಲಿಂಗಾಯತ ಮತಗಳು ಸಾಲಿಡ್ಡಾಗಿ ಈಶ್ವರಪ್ಪನಿಗೆ ಒಲಿದು ಬರುವಂತೆ ಫರ್ಮಾನು ಹೊರಡಿಸಿದ್ದಲ್ಲದೇ, ಸ್ಥಳೀಯ ಆರೆಸ್ಸೆಸ್ ನಾಯಕರನ್ನು ಬಳಸಿಕೊಂಡು ಈ ಸಲ ಬಿಜೆಪಿ ಅಧಿಕಾರಕ್ಕೆ ಬಂದ್ರೇನೆ ಬ್ರಾಹ್ಮಣ ಸಮುದಾಯಕ್ಕೆ ಅನುಕೂಲ, ಹಾಗಾಗಿ ಜಾತ್ಯಸ್ಥ ಅಂತ ಪ್ರಸನ್ನ ಕುಮಾರ್‍ಗೆ ಓಟ್ ಹಾಕುವ ಬದಲು ಕಮಲದ ಚಿಹ್ನೆಗೆ ಮತ ಹಾಕುವಂತೆ ಅಂಡರ್ ಕರೆಂಟ್ ಹರಿಸಿದ್ದರು. ಅದು ಈಶ್ವರಪ್ಪನವರನ್ನು ಅನಾಮತ್ತು ಮೂರನೇ ಸ್ಥಾನದಿಂದ ಮೇಲಕ್ಕೇರಿಸಿ, ಐವತ್ತು ಸಾವಿರ ಲೀಡ್‍ಗಳಲ್ಲಿ ಗೆಲ್ಲಿಸಿದೆ.


ಅಂದಹಾಗೆ, ಗೆದ್ದರೂ ಪಕ್ಷದೊಳಗೆ ಈಶ್ವರಪ್ಪರನ್ನು ಈ ಋಣಭಾರ ಭರ್ಜರಿಯಾಗೇ ಮೆತ್ತಗಾಗಿಸಲಿದೆ. ಅಂತದ್ದೊಂದು ಸಣ್ಣ ಸ್ಯಾಂಪಲ್ ಕೂಡಾ ಈಗಾಗಲೇ ಘಟಿಸಿದೆ. ಫಲಿತಾಂಶ ಹೊರಬಿದ್ದು ಅಧಿಕಾರದ ಹೊಸ್ತಿಲಿಗೆ ಬಂದು ಅಂಡು ಸುಟ್ಟ ಬೆಕ್ಕಿನಂತಾಗಿದ್ದ ಬಿಜೆಪಿಯು ಪಕ್ಷೇತರರು, ಕಾಂಗ್ರೆಸ್-ಜೆಡಿಎಸ್ ಅತೃಪ್ತರಿಗೆ ಗಾಳ ಹಾಕುವ ಪ್ರಯತ್ನದಲ್ಲಿತ್ತು. ಆಗ ರಾಣೇಬೆನ್ನೂರಿನಿಂದ ಕೋಳಿವಾಡರನ್ನು ಮುಕ್ಕಿಸಿ ಬಂದ ಕೆಪಿಜೆಪಿಯ ಆರ್.ಶಂಕರ್‍ನನ್ನು ಬಿಜೆಪಿ ಸಂಪರ್ಕಿಸಿ ಕುದುರಿಸಿಕೊಂಡಿದ್ದುಂಟು. ಆತ ಜಾತಿಯಲ್ಲಿ ಕುರುಬನಾದ್ದರಿಂದ ಮತ್ತು ಈಶ್ವರಪ್ಪನ ಕಳ್ಳುಬಳ್ಳಿ ಸಂಬಂಧಿಕನೂ ಆದ್ದರಿಂದ ಆತನನ್ನು ನಿಭಾಯಿಸುವ ಹೊಣೆಯನ್ನು ಈಶ್ವರಪ್ಪನಿಗೇ ಹೈಕಮಾಂಡ್ ವಹಿಸಿತ್ತು. ಆದರೆ ಈಶ್ವರಪ್ಪ ಕೊಂಚ ಮೈಮರೆತಿದ್ದರಿಂದ ಬೆಳಿಗ್ಗೆ ಬಿಜೆಪಿ ಜೊತೆಗಿದ್ದ ಶಂಕರ್ ಸಂಜೆಯ ವೇಳೆಗಾಗಲೇ ಸಿದ್ದರಾಮಯ್ಯನವರ ಪಡಸಾಲೆಯಲ್ಲಿ ಮುಖ ತೋರಿಸಿ ಜೈ ಅಂದ. ಇದರಿಂದ ಸಿಟ್ಟಿಗೆದ್ದ ಬಿಜೆಪಿ ಹೈಕಮಾಂಡ್ ಪ್ರತಿನಿಧಿ ಪ್ರಕಾಶ್ ಜಾವ್ಡೇಕರ್, ಈಶ್ವರಪ್ಪನನ್ನು ಕರೆಸಿಕೊಂಡು `ಒಬ್ಬ ಎಮ್ಮೆಲ್ಲೆನ ನಿಮ್ಮ ಕೈಲಿ ನಿಭಾಯಿಸೋಕೆ ಆಗಲ್ವೇನ್ರೀ? ಇದಕ್ಕೋಸ್ಕರನೇನಾ ನಾವು ಯಡ್ಯೂರಪ್ಪಾಜಿಯ ಮನವೊಲಿಸಿ ನಿಮ್ಮನ್ನು ಗೆಲ್ಲಿಸಿಕೊಂಡದ್ದು. ನಿಮ್ಮ ಈ ಹೊಣೆಗೇಡಿತನದ ವಿರುದ್ಧ ಅಮಿತ್ ಶಾಜಿಗೆ ಕಂಪ್ಲೇಂಟ್ ಮಾಡ್ತೀನಿ’ ಅಂತ ಲೆಫ್ಟ್‍ರೈಟ್ ಕ್ಲಾಸ್ ತಗೊಂಡಿದ್ದರು. ಯಡ್ಯೂರಪ್ಪನವರ ಮರ್ಜಿಯಲ್ಲಿ ಗೆದ್ದಿರೋ ಈಶ್ವರಪ್ಪನೋರಿಗೆ ಭವಿಷ್ಯದಲ್ಲಿ ಇಂಥ ದೈನೇಸಿ ಬಹುಮಾನಗಳು ಸಾಕಷ್ಟು ಕಾದಿವೆ…
 ಮಾಚಯ್ಯ

Leave a Reply

Your email address will not be published.

Social Media Auto Publish Powered By : XYZScripts.com