Karnataka election : ಕರಾವಳಿ : ಹಿಂದುತ್ವಕ್ಕೇ ಆಶ್ಚರ್ಯಾಘಾತದ ಫಲಿತಾಂಶ!

ಇದು ಅನಿರೀಕ್ಷಿತ-ಅಚ್ಚರಿ-ಆಘಾತಕಾರಿ ಫಲಿತಾಂಶ!!
ಹಿಂದೂತ್ವದ ಚಂಡಮಾರುತ ಇಷ್ಟು ದೊಡ್ಡ ಮಟ್ಟದಲ್ಲಿ ಕರಾವಳಿಗೆ ಅಪ್ಪಳಿಸಬಹುದೆಂಬ ಅಂದಾಜು ಕಾಂಗ್ರೆಸಿಗರಿಗೆ ಬಿಡಿ, ಖುದ್ದು ಧರ್ಮಕಾರಣದ ಪಾರಂಗತ ಸಂಘಿ ಸರದಾರರಿಗೂ ಇರಲಿಲ್ಲ. ಹಿಂದೂತ್ವದ ಅಂಡರ್ ಕರೆಂಟ್‍ನ ಪ್ರವಾಹಕ್ಕೆ ಲಾಟ್-ಪುಟ್ ಚೆಡ್ಡಿಗಳೆಲ್ಲ ತೇಲುತ್ತ ವಿಧಾನಸೌಧದ ಪಡಸಾಲೆಗೆ ಬಂದು ಕುಂತಿವೆ! ಕಲ್ಲಡ್ಕದ ಕೋಮುಕ್ರೌರ್ಯದ ಸರಣಿ ಅನಾಹುತ, ಬಂಟ್ವಾಳದ ಶರತ್ ಮಡಿವಾಳನ ಕಗ್ಗೊಲೆ, ಹೊನ್ನಾವರದ ಪರೇಶ್ ಮೇಸ್ತನ ನಿಗೂಢ ಸಾವು, ಸುರತ್ಕಲ್‍ನ ದೀಪಕ್‍ರಾವ್ ಹತ್ಯೆ ಮತ್ತು ಅದರಾಚೆ-ಈಚೆಯ ಮತಾಂಧ ಭಾವೋದ್ವೇಗ ಕರಾರುವಾಕ್ಕಾಗಿ ಗ್ರಹಿಸಿ ನಗದೀಕರಿಸಿಕೊಳ್ಳಲು ಬಿಜೆಪಿ ಪರಿವಾರ ಯಶಸ್ಸಾಗಿದೆ.


ಕಾಂಗ್ರೆಸ್‍ನ ಶಾಸಕರು ಅದೆಷ್ಟೇ ಅಭಿವೃದ್ಧಿ ಕೆಲಸ ಮಾಡಿದರೂ ಅದ್ಯಾವುದೂ ಲೆಕ್ಕಕ್ಕೇ ಬರದಂತೆ ಹಿಂದೂತ್ವದ ಹುಚ್ಚೆಬ್ಬಿಸಿದ್ದ ಸಂಘಿ ಪಡೆ ಕರಾವಳಿಯ ತ್ರಿವಳಿ ಜಿಲ್ಲೆಗಳ ಒಟ್ಟು 19 ಕ್ಷೇತ್ರದಲ್ಲಿ ಅನಾಮತ್ತು 16 ಸ್ಥಾನ ಬಾಚಿಕೊಂಡಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ನಡೆದ ಹಿಂದೂತ್ವ ವರ್ಸಸ್ ಮನುಷ್ಯತ್ವದ ಕಾದಾಟದಲ್ಲಿ ಕೇಸರಿಗಳ ರಕ್ತರಂಜಿತ ರಾಜಕಾರಣ ಮೇಲ್ಗೈ ಸಾಧಿಸಿರುವುದು ದುರಂತವೇ ಸರಿ. ಸುಳ್ಳುಗಳನ್ನು ವ್ಯವಸ್ಥಿತವಾಗಿ ಹಬ್ಬಿಸಿ ಹಿಂದೂ ಮತಗಳು ಧ್ರುವೀಕರಣಗೊಳ್ಳುವಂತೆ ಬಿಜೆಪಿ ಪ್ರತಿ ಕ್ಷೇತ್ರದಲ್ಲಿ ಆಟ ಆಡಿತ್ತು. ಬಂಟ್ವಾಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಮಾನಾಥ ರೈ ಹಿಂದೂಗಳು ವಿರೋಧಿ-ಸಾಬಿಗಳ ಪರ ಎಂದು ಗುಲ್ಲು ಎಬ್ಬಿಸಿದ್ದರೆ, ಭಟ್ಕಳದಲ್ಲಿ ಕಾಂಗ್ರೆಸ್‍ನ ಶಾಸಕ ಮಂಕಾಳ ವೈದ್ಯ ಗೆದ್ದರೆ ಕಸಾಯಿಖಾನೆಗೆ ಅವಕಾಶ ಕೊಡ್ತಾರೆಂದು ಅಪಪ್ರಚಾರ ನಡೆಸಲಾಗಿತ್ತು. ಕಾಂಗ್ರೆಸ್‍ನ ಸಭೆಗಳಲ್ಲಿ ಪಾಕಿಸ್ತಾನದ ಬಾವುಟ ಹಾರಾಡಿದೆ ಎಂದು ಕಲಾತ್ಮಕವಾಗಿ ಸುಳ್ಳು ಸುದ್ದಿ ಹರಡಲಾಗಿತ್ತು.
ಇಂಥ ಹಿಂದೂತ್ವದ ಹಿಕಮತ್ತು ಬಿಜೆಪಿಯಲ್ಲಿ ಬಚಾವ್ ಮಾಡಿದೆ. ಮಂಗಳೂರು ದಕ್ಷಿಣದಲ್ಲಿ ಬಿಜೆಪಿಯ ವೇದವ್ಯಾಸ ಕಾಮತ್‍ಗೆ ತಾನು ಗೆಲ್ಲುವ ಭರವಸೆಯೇ ಇರಲಿಲ್ಲ. ಸಂಸದ ನಳೀನ್ ಕುಟೀಲ್ ಮತ್ತು ಸಂಘದ ರಿಂಗ್ ಮಾಸ್ಟರ್ ಕಲ್ಲಡ್ಕ ಭಟ್ರ ದ್ವೇಷಾಸೂಯೆಗೆ ಕಾಮತ್ ಬಲಿಯಾಗಿ ನಯ-ವಿನಯದ ಜೆ.ಆರ್.ಲೋಬೋ ಗೆಲ್ಲುತ್ತಾರೆಂಬುದು ಬಿಜೆಪಿಗೆ ಮತ ಹಾಕಿದವರೂ ಲೆಕ್ಕ ಹಾಕಿದ್ದರು. ಬಂಟ್ವಾಳದಲ್ಲಿ ರಮಾನಾಥ ರೈ ಸೋಲಿಗೆ ಹಿಂದೂತ್ವದ ಗ್ಯಾಂಗು ಒಂದು ತಿಂಗಳು ಹಗಲಿರುಳು ಬೆವರಿಳಿಸಿದೆ. ಹಿಂದುಗಳ ಮತ ಕ್ರೋಢೀಕರಿಸಲು ಭಜರಂಗಿಗಳು ಮಾಡದ ಮಸಲತ್ತಿಲ್ಲ. ಇದನ್ನು ಸರಿಯಾಗಿ ಎದುರಿಸಲು ರೈ ಪಡೆಯಿಂದ ಆಗಲೇ ಇಲ್ಲ. ಮತದಾನದ ದಿನ ಹತ್ತಿರ ಬಂದಾಗ ಬಿಜೆಪಿ ಗೆಲ್ಲುವ ಸಂಕೇತಗಳು ಕಾಣಿಸಿಕೊಳ್ಳತೊಡಗಿತ್ತು. ಆದರೆ ಪಕ್ಕದ ಪುತ್ತೂರಿನಲ್ಲಿ ಕೆಲಸಗಾರ್ತಿ-ಜನಾನುರಾಗಿ ಶಾಸಕಿ ಶಕುಂತಲಾ ಶೆಟ್ಟಿ ಸೋತಿರುವುದು ಬಿಜೆಪಿಗರನ್ನೇ ಬೆಚ್ಚಿಬೀಳಿಸಿದೆ. ಜಿಲ್ಲೆಯಾದ್ಯಂತ ಹಿಂದೂತ್ವದ ಅಂಡರ್ ಕರೆಂಟ್ ಶಕು ಅಕ್ಕನಿಗೆ ಹೊಡೆದದ್ದು ದುರಂತ.


ಸುಳ್ಯದಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆಯಿತ್ತು. ಎರಡು ದಶಕದ ಹಿಂದೆ ಸುಳ್ಯ ದಾರಿಯಲ್ಲಿ ಸಂಚರಿಸುತ್ತಿದ್ದ ಪೇಜಾವರರ ಕಾರಿಗೆ ಬ್ಯಾರಿ ಸಾಬಿಗಳು ಕಲ್ಲು ಎಸೆದರೆಂಬ ಪ್ರತೀತಿಯ ನಂತರ ಸುಳ್ಯ ಬಿಜೆಪಿಯ ಭದ್ರಕೋಟೆಯಂತಾಗಿದೆ. ವಿಚಿತ್ರವೆಂದರೆ ಬೆಳ್ತಂಗಡಿಯಲ್ಲಿ ಜನಪರ ನಿಲುವಿನ ಹಿರಿಯ ಶಾಸಕ ವಸಂತ ಬಂಗೇರಾ ಸೋತಿರುವುದು. ಬ್ರಹ್ಮಕಲಶೋತ್ಸವ, ಹಿಂದೂತ್ವದ ಹಿಕಮತ್ತುಗಳಲ್ಲಿ ಕಳೆದ ಮೂರ್ನಾಲ್ಕು ವರ್ಷದಿಂದ ತೊಡಗಿಸಿಕೊಂಡಿದ್ದ ಹೈಕೋರ್ಟ್ ವಕೀಲನೆಂಬ ‘ಆರೋಪ’ದ ಹರೀಶ್ ಪೂಂಜಾ ಹಣ ನೀರಿನಂತೆ ಹರಿಸುತ್ತಿದ್ದರು. ಗಣಿ ಧನಿಗಳ ಕಳ್ಳ ಗಂಟು ಬೆಳ್ತಂಗಡಿಯಲ್ಲಿ ಪೂಂಜಾ ವ್ಯಯಿಸುತ್ತಿದ್ದಾರೆಂಬ ಸುದ್ದಿಯೂ ಇತ್ತು. ಇದಕ್ಕೆ ಸಮಾನಾಂತರವಾಗಿ ಶಾಸಕ ಬಂಗೇರ ಅನಾರೋಗ್ಯದಿಂದ ನಿಷ್ಕ್ರಿಯರಾಗಿದ್ದರು. ಕೆಲವು ಹಳ್ಳಿಗಳಲ್ಲಿ ಕನಿಷ್ಠ ರಸ್ತೆಗಳೂ ಇರಲಿಲ್ಲ. ಜತೆಗೆ ಹಿಂದುತ್ವದ ಅಮಲು ಸೇರಿಕೊಂಡು ಪೂಂಜಾನೆಂಬ ಬಂಟರ ಪೋರ ಆತನಿಗರಿವಿಲ್ಲದೆ ಎಮ್ಮೆಲ್ಲೆ ಆಗಿದ್ದಾನೆ. ಮುಂಗೋಪ, ಎಡವಟ್ಟು ಕಾರ್ಯವೈಖರಿ ಮತ್ತು ಸ್ವಪಕ್ಷದ ಯುವಪಡೆಯ ಮಿಥನ್ ರೈನಂಥವರನ್ನು ಎದುರು ಹಾಕಿಕೊಂಡಿದ್ದು, ಇವೆಲ್ಲಕ್ಕೆ ಮುಲ್ಕಿ-ಮೂಡಬಿದರೆಯಲ್ಲಿ ಅಭಯಚಂದ್ರ ಜೈನ್ ಬೆಲೆತೆತ್ತಿದ್ದಾರೆ. ಕ್ಷೇತ್ರದವನೇ ಅಲ್ಲದ ಉಮಾನಾಥ ಕೋಟ್ಯಾನ್ ಗೆದ್ದಿದ್ದಾರೆ.
ಮಂಗಳೂರು ಉತ್ತರದಲ್ಲಿ ಬಿಜೆಪಿ ಭರತ್ ಶೆಟ್ಟಿ ಸೆಕ್ಸ್ ಸಿಡಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಆತನ ಬಗ್ಗೆ ಪಾರ್ಟಿಯಲ್ಲೇ ಬೇಸರವಿತ್ತು ನೇರ ಆಮಿತ್ ಶಾ ಅಂಗಳದಲ್ಲೇ ಲಾಬಿ ಮಾಡಿಸಿ ಟಿಕೆಟ್ ತಂದಿದ್ದ ಭರತ್ ಶೆಟ್ಟಿಗೆ ಎಮ್ಮೆಲ್ಲೆ ಮಾಡಿರುವುದು ಸುರತ್ಕಲ್‍ನಲ್ಲಿ ದೊಡ್ಡ ಮತಾಂಧ ಹವಾ ಎಬ್ಬಿಸಿದ್ದ ದೀಪಕ್‍ರಾವ್ ತರುಣನ ಹತ್ಯೆ ಪ್ರಕರಣ ಒಂದೇ. ಕಾಂಗ್ರೆಸ್‍ನ ಬಾವಾ ಮಾಡಿರುವ ಜನಪರ ಅಭಿವೃದ್ಧಿ, ಹಿಂದೂ-ಮುಸ್ಲಿಮ್ ಎನ್ನದೆ ಜನರೊಂದಿಗೆ ಬೆರೆವ ರೀತಿ ನೀತಿ ಕಂಡ ಜನರು ಆತ ಸೋಲುತ್ತಾರೆಂದು ಭಾವಿಸಿರಲಿಲ್ಲ ಆತ ಹಿಂದೂತ್ವದ ಸುನಾಮಿಗೆ ಸಿಲುಕಿ ತತ್ತರಿಸಿದ್ದಾನೆ. ಪಾಪ! ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಕುಲದ ಹೆಸರೇಳಲು ಗೆದ್ದಿರುವುದು ಮಂತ್ರಿ ಯು.ಟಿ.ಖಾದರ್ ಒಬ್ಬರೇ. ಹಿಂದೂತ್ವದ ಅಲೆಯ ನಡುವೆಯೂ ಆತ ಹಿಂದೂಗಳ ಮತ ಒಂದಿಷ್ಟು ಪಡೆದಿರುವುದು ಬಚಾಯಿಸಿದೆ.


ಪಕ್ಕದ ಉಡುಪಿಯ ಎಲ್ಲ 5 ಕ್ಷೇತ್ರದಲ್ಲೂ ಬಿಜೆಪಿ ಗೆದ್ದು ಬೆಚ್ಚಿಬಿದ್ದಿದೆ. ಕಾರ್ಕಳದಲ್ಲಿ ಬಿಜೆಪಿಯ ಸುನಿಲ್‍ಕುಮಾರ್ ಎಂಬ ನಕಲಿ ಬಿಲ್ಲವ ಜಾತಿ ಮತ್ತು ಹಣದ ದಾಳ ಬಳಸಿ ಗೆಲ್ಲುತ್ತಾರೆಂದು ವಿಶ್ಲೇಷಿಸಲಾಗಿತ್ತು. ಸರಳ, ಸಜ್ಜನ, ಹಣವಿಲ್ಲದ ಜಾತಿ ಬಲವಿಲ್ಲದ ಮಾಜಿ ಶಾಸಕ ಗೋಪಾಲ ಭಂಡಾರಿಗೆ ಸ್ವಪಕ್ಷದ ಹೊಟ್ಟೆಕಿಚ್ಚು ಹಾನಿಮಾಡಿದೆ. ಹಾಗಂತ ಪಕ್ಕದ ಕಾಪು ಕ್ಷೇತ್ರದಲ್ಲಿ ಮಾಜಿ ಮಂತ್ರಿ ವಿನಯಕುಮಾರ್ ಸೊರಕೆ ಸೋಲಿಗೆ ಕಾರಣಗಳೇ ಇರಲಿಲ್ಲ. ಬಿಜೆಪಿ ಅಭ್ಯರ್ಥಿ ಲಾಲಾಜಿ ಮೆಂಡನ್ ಆ ಪಕ್ಷದವರಿಗೆ ಬೇಡದ ಪೀಡೆಯಾಗಿದ್ದರು. ಕ್ಷೇತ್ರದ ಬಹುಸಂಖ್ಯಾತ ಬಿಲ್ಲವರು ಬಿಜೆಪಿ ಮಾಡಿದ ಮೋಸ, ವಂಚನೆ ಸಹಿಸಿಕೊಂಡು ಸ್ವಸಂಕುಲದ ಸೊರಕೆಗೆ ಬಲಿ ಪಡೆದಿರುವುದು ವಿಚಿತ್ರ ದುರಂತ. ಹಿಂದೂತ್ವದಿಂದ ತಲೆ ತೊಳೆದುಕೊಂಡಿದ್ದ ಬಿಲ್ಲವರು ಬಿಜೆಪಿ ಗೆಲ್ಲಿಸಿದ್ದಾರೆ. ಸೊರಕೆ ಈ ಐದು ವರ್ಷ ಜತನದಿಂದ ಕ್ಷೇತ್ರ ಪೊರೆದದ್ದು ಆತನಿಗೆ ಫಾಯ್ದೆಯೇ ಆಗಿಲ್ಲ.
ಉಡುಪಿಯಲ್ಲಿ ಮಂತ್ರಿ ಪ್ರಮೋದ್ ಮಧ್ವರಾಜ್‍ನ ಮಳ್ಳಾಟಗಳೇ ಆತನಿಗೆ ಮುಳುವಾಗಿದೆ. ಕಾಂಗ್ರೆಸ್‍ನ ಮಂತ್ರಿಯಾಗಿದ್ದುಕೊಂಡೇ ಬಿಜೆಪಿ ಜತೆ ಚಕ್ಕಂದವಾಡಿದ್ದ ಪ್ರಮೋದ್‍ಗೆ ಆತ ಮಾಡಿದ ಪ್ರಗತಿ ಕೆಲಸಗಳ್ಯಾವುವೂ ಕೈಹಿಡಿದಿಲ್ಲ. ರಂಗೀಲಾ ರಘುಪತಿ ಭಟ್ಟ ಮತದಾನಕ್ಕೆ ಒಂದೆರಡು ದಿನವಿರುವಾಗ ಹಣ ಹಂಚಿದ್ದು ಆತನ ಗೆಲ್ಲಿಸಿದೆ. ಕುಂದಾಪುರದಲ್ಲಿ ಜಾತಿಯ ನಾಜೂಕಯ್ಯ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಗೆಲುವು ನಿರೀಕ್ಷಿತವೇ ಆಗಿತ್ತು. ಭೂಗತ ರೌಡಿ ಇಮೇಜಿನ ಕಾಂಗ್ರೆಸ್ ಹುರಿಯಾಳು ರಾಕೇಶ್ ಮಲ್ಲಿ ಸೋಲುತ್ತಾರೆಂಬುದು ಎಲ್ಲರಿಗೂ ಗೊತ್ತಿತ್ತು. ಬೈಂದೂರಿನಲ್ಲಿ ದುರಹಂಕಾರಿ ಸುಕುಮಾರ ಶೆಟ್ಟಿ ಗೆಲ್ಲುತ್ತಾರೆಂದು ಬಿಜೆಪಿಗರು ಕನಸು-ಮನಸಲ್ಲೂ ಎಣಿಸಿರಲಿಲ್ಲ. ಸ್ವಪಕ್ಷದವರೂ ಈತನ ಕಂಡು ಮೂಗುಮುರಿಯುತ್ತಿದ್ದರು. ಕಾಂಗ್ರೆಸ್‍ನ ಗೋಪಾಲ ಪೂಜಾರಿಯನ್ನು ಹಿಂದೂತ್ವ ಚಂಡಮಾರುತ ನುಂಗಿಹಾಕಿದೆ. ಅಭಿವೃದ್ಧಿ ಕೆಲಸ, ಕಾಮಗಾರಿಗಳೆಲ್ಲ ಹಿಂದುತ್ವದ ಕರ್ಮಕಾರಣ ಪರಿಗಣನೆಗೆ ಬರದಂತೆ ಮಾಡಿರುವುದು ಉಡುಪಿ ಜಿಲ್ಲೆಯ ಐದು ಕ್ಷೇತ್ರಗಳ ಫಲಿತಾಂಶದಲ್ಲಿ ಎದ್ದು ಕಾಣುವ ಅಂಶ!
ಉತ್ತರ ಕನ್ನಡದಲ್ಲಿ ಒಟ್ಟು ಆರು ಕ್ಷೇತ್ರದಲ್ಲಿ ನಾಲ್ಕರಲ್ಲಿ ಬಿಜೆಪಿ ಗೆದ್ದಿದೆ. ಹಳಿಯಾಳದಲ್ಲಿ ಹಳೇಹುಲಿ ದೇಶಪಾಂಡೆ, ಪಕ್ಕದ ಯಲ್ಲಾಪುರದಲ್ಲಿ ಶಾಸಕ ಶಿವರಾಮ ಹೆಬ್ಬಾರ ಪ್ರಯಾಸದಿಂದ ದಡ ಸೇರಿದ್ದಾರೆ. ಯಲ್ಲಾಪುರದಲ್ಲಿ ಬಿಜೆಪಿ ಸೋಲಿಗೆ ಕೇಂದ್ರಮಂತ್ರಿ ಅನಂತ್ಮಾಣಿಯ ಕಿತಾಪತಿಯೇ ಕಾರಣವೆಂದು ಸಂಘಿಗಳೇ ಹೇಳುತ್ತಾರೆ. ಆತನಿಗೆ ಬಿಜೆಪಿ ಅಭ್ಯರ್ಥಿ ವಿ.ಎಸ್.ಪಾಟೀಲರ ತಲೆ ಕಂಡರಾಗದು; ಹಾಗೆಯೇ ಕಾಂಗ್ರೆಸ್‍ನ ಶಿವರಾಮ ಹೆಬ್ಬಾರ ಎಂಬ ಸ್ವಜಾತಿ ಬಂಧುವೆಂದರೆ ಬಲುಪ್ರೀತಿ. ಬಿಜೆಪಿಯ ಕಟ್ಟಾ ಬೆಂಬಲಿಗರಾದ ಹವ್ಯಕರೂ ಯಲ್ಲಾಪುರದಲ್ಲಿ ಬಿಜೆಪಿಗೆ ಕೈಕೊಟ್ಟಿದ್ದಾರೆ. ಜಾತಿ ಕಾರಣಕ್ಕೆ `ಎಂಗ್ಳ ಮಾಣಿ’ ಹೆಬ್ಬಾರ್‍ಗೆ ಮತಹಾಕಿ ಗೆಲ್ಲಿಸಿಕೊಂಡಿದ್ದಾರೆ. ಸ್ವರ್ಣವಲ್ಲಿ ಮಠದ ಸ್ವಾಮೀಜಿಯೂ ಸ್ವಜಾತಿ ಹೆಬ್ಬಾರ್ ಪರವಾಗಿ ರಹಸ್ಯ ಫರ್ಮಾನು ಹೊರಡಿಸಿದ್ದರು.


ಶಿರಸಿಯಲ್ಲಿ ಬಿಜೆಪಿಯ ಕಾಗೇರಿ ಮಾಣಿ ಗೆದ್ದಿರುವುದು ಅನಿರೀಕ್ಷಿತ. ಎರಡು ಬಾರಿ ಶಾಸಕನಾಗಿದ್ದ ಕಾಗೇರಿಗೆ ಆ್ಯಂಟಿ ಇನ್‍ಕಂಬೆನ್ಸಿ ಜೊತೆಗೆ ಸ್ವಪಕ್ಷದ ಕೇಂದ್ರ ಮಂತ್ರಿ ಅನಂತ್ಮಾಣಿ ಕೈತೊಳೆದು ಬೆನ್ನು ಹತ್ತಿದ್ದರು. ಕಾಂಗ್ರೆಸ್‍ನ ಭೀಮಣ್ಣ ನಾಯ್ಕನಿಗೆ ಬಹುಸಂಖ್ಯಾತ ಸ್ವಜಾತಿಯ ದೀವರ ಓಟು ದಂಡಿಯಾಗಿ ಬೀಳಬೇಕಿತ್ತು. ಆದರೆ ಹೊನ್ನಾವರದ ಪರೇಶ್ ಮೇಸ್ತ ಸಾವಿನ ನಂತರದ ಗಲಭೆಯ ನೇರ ಪರಿಣಾಮ ಶಿರಸಿಯಲ್ಲಾಗಿತ್ತು. ಗಲಭೆ ಹೊತ್ತಲ್ಲೆ ನೂರಾರು ಹಿಂದುಗಳು ಜೈಲು-ಕೋರ್ಟು ಅಲೆಯಬೇಕಾಗಿ ಬಂದದ್ದು ಹಿಂದೂಗಳ ಕೆರಳಿಸಿತ್ತು. ಇದು ಅನಂತ್ಮಾಣಿಯ ವಿರೋಧದ ನಡುವೆಯೂ ಕಾಗೇರಿಯನ್ನು ಕಾಪಾಡಿದೆ. ಹಿಂದುತ್ವ ಒಂದಿಲ್ಲದಿದ್ದರೆ ಕಾಗೇರಿ ಗೆಲ್ಲುವ ಛಾನ್ಸೇ ಇರಲಿಲ್ಲ!


ಘಟ್ಟದ ಕೆಳಗಿನ ಕಾರವಾರದಲ್ಲಿ ಹಾಲಿ ಶಾಸಕ ಸೈಲ್ ಮತ್ತು ಮಾಜಿಶಾಸಕ ಆನಂದ ಆಸ್ನೋಟಿಕರ್ ನಕಾರ ಕಂಡು ಬೇಸತ್ತ ಮತದಾರರು ಬಿಜೆಪಿಯ ರೂಪಾಲಿ ನಾಯಕರನ್ನು ಶಾಸಕಿ ಮಾಡಿದ್ದಾರೆ. ಆಕೆಯು ಕಳೆದೊಂದು ವರ್ಷದಿಂದ “ಗಣಿ ದಂಧೆ’’ ಯಲ್ಲಿ ದುಡಿದ ದುಡ್ಡನ್ನು ಧಾರಾಳವಾಗಿ ಖರ್ಚುಮಾಡಿ ಪಕ್ಷಕಟ್ಟಿಕೊಂಡಿದ್ದರು. ಬದಲಾವಣೆಯ ತುಡಿತದ ಮತದಾರರು ಕಾರವಾರ, ಅಂಕೋಲದಲ್ಲಿ ಬಿಜೆಪಿ ಗೆಲ್ಲಿಸಿದ್ದಾರೆ. ರೂಪಾಲಿಯನ್ನು ಸುತ್ತುವರೆದಿರುವ ಪಳಗಿದ ಪುಢಾರಿಗಳು ಆಕೆಯ ಹೆಸರು ಬಲುಬೇಗ ಕೆಡಿಸುವ ಸಾಧ್ಯತೆ ಇದೆ. ಆಕೆಯ ಜೊತೆಗಿರುವ ಬೆರಕೆಗಳ ಜಾತಕವೇ ಆಗಿದೆ!! ಕುಮಟಾದಲ್ಲಿ ಒಳ್ಳೆಯ ಶಾಸಕಿ ಎಂದು ಹೆಸರು ಗಳಿಸಿದ್ದ ಶಾರದಾ ಶೆಟ್ಟಿ ಸೋತಿದ್ದು ಆಕೆಯ ಪುತ್ರ ರವಿ ಶೆಟ್ಟಿಯ ಸುಲಿಗೆ, ಸೊಕ್ಕು ಮತ್ತು ಅಧಿಕಪ್ರಸಂಗದಿಂದ. ರವಿಶೆಟ್ಟಿಯ ರಗಳೆಗಳ ಜತೆಗೆ ಪರೇಶ್‍ಮಿಸ್ತ ಸಾವಿನ ನಂತರದ ಗಲಭೆ, ಬಿಜೆಪಿಯ ದಿನಕರಶೆಟ್ಟಿಯನ್ನು ಸ್ವಪಕ್ಷದ ಬಂಡಾಯದ ನಡುವೆಯೂ ಗೆಲ್ಲಿಸಿದೆ. ದಿನಕರಶೆಟ್ಟಿ ಪಟಾಲಂನ ಕಳ್ಳ ಕಂಟ್ರಾಕ್ಟ್‍ಗಳು ಕುಮಟೆ, ಹೊನ್ನಾವರದಲ್ಲಿ ಹಗಲುದರೋಡೆ ಮಾಡುವ ಸಾಧ್ಯತೆ ಇದೆ. ದಿನಕರಶೆಟ್ಟಿ ಹಣದ ಹಪಾಹಪಿ ಬಿಟ್ಟು ಕ್ಷೇತ್ರದ ಉದ್ಧಾರಕ್ಕೆ ಗಮನ ಕೊಡಬೇಕು. ಇಲ್ಲದಿದ್ದರೆ ಗಂಡಾಂತರ ತಪ್ಪಿದ್ದಲ್ಲ.
ಭಟ್ಕಳದಲ್ಲಿ ಶಾಸಕ ಮಂಕಾಳು ವೈದ್ಯ ಸೋಲುವುದಿಲ್ಲವೆಂದು ಲೆಕ್ಕ ಹಾಕಲಾಗಿತ್ತು. ಸಾವಿರಾರು ಕೋಟಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದ ವೈದ್ಯನ ವಿರುದ್ಧ ಕ್ಷೇತ್ರ ಬಹುಸಂಖ್ಯಾತ ದೀವರು ತಿರುಗಿಬಿದ್ದಿದ್ದರು. ಬಿಜೆಪಿಯ ಸುನಿಲ್ ನಾಯಕ್ ಎಂಬ ಹುಂಬ ಹುಡುಗನ ಪಡೆ ಮಂತ್ರಿ ಅನಂತ್ ಮಾಣಿಯ ಬೋಧನೆಯಂತೆ ಮತಾಂಧ ಕಾವು ಕ್ಷೇತ್ರದಲ್ಲಿ ಏರಿತ್ತು .ಪಾಕಿಸ್ತಾನದ ಧ್ವಜ ಮಂಕಾಳು ವೈದ್ಯರ ಸಭೆಯಲ್ಲಿ ಹಾರಾಡುತ್ತಿದೆ, ಆತ ಭಟ್ಕಳದಲ್ಲಿ ದನ ಕಡಿಯುವ, ಕಸಾಯಿಖಾನೆ ಮಾಡಲು ನೆರವು ನೀಡುವುದಾಗಿ ನವಾಯಿತ ಸಾಬಿಗಳಿಗೆ ಆಶ್ವಾಸನೆ ಕೊಟ್ಟು “ತಂಜೀಮ್’’ ( ನವಾಯಿತರ ಪ್ರಶ್ನಾತೀತ ಧಾರ್ಮಿಕ ಸಂಸ್ಥೆ) ಬೆಂಬಲ ಪಡೆದಿದ್ದಾರೆಂಬ ಸುಳ್ಳು ಸುದ್ದಿ ಹಿಂದೂಗಳ ನಡುವೆ ಹಬ್ಬಿಸಲಾಗಿತ್ತು. ಹೀಗಾಗಿ ಇವರ ಮೇಲಿನ ಸಿಟ್ಟಿನ ಸೇರುಗಾರ ಮೊಗೇರರು ಕಾಂಗ್ರೆಸ್‍ಗೆ ಮತಹಾಕಲಿಲ್ಲ. ಭಟ್ಖಳದಲ್ಲಿ ಬಿಜೆಪಿ ಗೆದ್ದಿರುವುದು ಪಕ್ಕಾ ಮತಾಂಧಮುಯ್ಯಿಗೆ ಹೊರತು ಮನುಷ್ಯತ್ವದ ಜನತಂತ್ರದಿಂದಲ್ಲ. ಕ್ಷೇತ್ರದ ಒಳಿತಿಗಾಗಿ, ನೊಂದವರ ನೆರವಿಗಾಗಿ ಹಗಲಿರುಳೂ ಕೆಲಸ ಮಾಡಿದ್ದ ಮಂಕಾಳು ವೈದ್ಯ ಸೋತಿರುವುದು ಭಟ್ಕಳ ದೌರ್ಭಾಗ್ಯವೇ ಸರಿ.ಇದು ಕೆಲವೇ ದಿನಗಳಲ್ಲಿ ಖಾತ್ರಿಯಾಗಲಿದೆ.
ಕರಾವಳಿಯಲ್ಲಿ ಹಿಂದೂತ್ವದ ಹುಚ್ಚು ಕೆರಳಿಸಿ ಸಂಘಪರಿವಾರ ಬಂಪರ್‍ಬೆಳೆ ಕುಯ್ದಿದೆ. ಕರಾವಳಿಯ ಗ್ರಹಚಾರ ಹೆಂಗಿದೆಯೋ?!
 ನಹುಷ

Leave a Reply

Your email address will not be published.

Social Media Auto Publish Powered By : XYZScripts.com