ಗದಗ, ಶಿವಮೊಗ್ಗಕ್ಕೂ ಕಾಲಿಟ್ಟ ಮಹಾಮಾರಿ ನಿಫಾ : ಜನರಲ್ಲಿ ಶುರುವಾಯ್ತು ಆತಂಕ

ಗದಗ :ಕೇರಳದಲ್ಲಿ 10 ಮಂದಿಯನ್ನು ಬಲಿ ಪಡೆದಿದ್ದ ಮಾಹಾಮಾರಿ ನಿಫಾ ವೈರಸ್‌ ಶಿವಮೊಗ್ಗ ಹಾಗೂ ಗದಗ ಜಿಲ್ಲೆಯಲ್ಲೂ ಪತ್ತೆಯಾಗಿರುವ ಶಂಕೆ  ವ್ಯಕ್ತವಾಗಿದೆ.

ಗದಗ ಜಿಲ್ಲೆ ರೋಣ ತಾಲೂಕಿನ ವ್ಯಕ್ತಿಯೋರ್ವನಿಗೆ ನಿಫಾ ವೈರಸ್ ಇದೆ ಎಂದು ಶಂಕಿಸಲಾಗಿದೆ. ಸೋಂಕಿತ ವ್ಯಕ್ತಿಗೆ ಗದಗ ಜಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ವಿಶೇಷ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಈ ವ್ಯಕ್ತಿ ಕೆಲ ತಿಂಗಳ ಕಾಲ ಕೇರಳದ ಕ್ಯಾಲಿಕಟ್ ಸಮೀಪದಲ್ಲಿ ಕೆಲಸದಲ್ಲಿದ್ದರು. ಇತ್ತೀಚೆಗೆ ಗದಗ ಜಿಲ್ಲೆಯ ತವರೂರಿಗೆ ಮರಳಿದಾಗ ಕಳೆದ ಒಂದೆರಡು ವಾರಗಳಿಂದ ಜ್ವರ, ತಲೆನೋವು, ವಾಂತಿ, ಕೆಮ್ಮು, ಸುಸ್ತು ಹೀಗೆ ನಿಫಾ ವೈರಸ್‌ನ ಲಕ್ಷಣಗಳು ಈ ವ್ಯಕ್ತಿಗೆ ಗೋಚರವಾಗಿವೆ.

ಈ ಹಿನ್ನಲೆಯಲ್ಲಿ ಶಂಕಿತ ವ್ಯಕ್ತಿಯ ರಕ್ತದ ಮಾದರಿಯನ್ನು ಪುಣೆಯ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ರಕ್ತದ ಮಾದರಿ ಸಂಗ್ರಹಿಸಿ, ಪುಣೆಯ ಎನ್‌ಐವಿ ಲ್ಯಾಬ್‌ಗೆ ರಕ್ತ ಪರೀಕ್ಷೆಗಾಗಿ ರವಾನಿಸಿದ್ದಾರೆ. ೪೮ ಗಂಟೆಗಳಲ್ಲಿಪ್ರಯೋಗಾಲಯದ ವರದಿ ಬರಲಿದ್ದು, ಆನಂತರ ಹೆಚ್ಚಿನ ಚಿಕಿತ್ಸೆ ನೀಡುವುದಾಗಿ ಜಿಮ್ಸ್ ಆಡಳಿತ ವೈದ್ಯಾಧಿಕಾರಿ ಎ.ಬಿ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.

ಇದಲ್ಲದೇ ನಿಫಾ ವೈರಸ್​ ಶಿವಮೊಗ್ಗದಲ್ಲೂ ಪತ್ತೆಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ಮಿಥುನ್(28) ಎಂಬ ಯುವಕನಲ್ಲಿ ಶಂಕಿತ ನಿಫಾ ವೈರಸ್ ಕಾಣಿಸಿಕೊಂಡಿದೆ.​ ಮಿಥುನ್ ಇತ್ತೀಚೆಗಷ್ಟೇ ಕೇರಳದಿಂದ ತನ್ನ ಸ್ವಗ್ರಾಮ ಸಿರಿವಂತೆಗೆ ಬಂದಿದ್ದ.

ಮಿಥುನ್​ಗೆ ಪ್ರತ್ಯೇಕ ವಾರ್ಡಿನಲ್ಲಿ ವೆಂಟಿಲೇಟರ್ ವ್ಯವಸ್ಥೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದ್ದು, ರಕ್ತದ ಮಾದರಿಯನ್ನು ಪುಣೆಯ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಇನ್ನು ಮೂರು ದಿನದ ಬಳಿಕ ರಕ್ತದ ಪರೀಕ್ಷೆ ವರದಿ ಬರಲಿದೆ ಎನ್ನಲಾಗಿದ್ದು,

ಆಸ್ಪತ್ರೆಗೆ ಸಾಗರದ ಉಪವಿಭಾಗೀಯ ಆರೋಗ್ಯ ಇಲಾಖೆ ಆಧಿಕಾರಿಗಳ ದೌಡಾಯಿಸಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ‌ ನಿಫಾ ಸಂಬಂಧ ಹೈ ಅಲರ್ಟ್ ಘೋಷಿಸಲಾಗಿದೆ ಅಂತ ತಿಳಿದು ಬಂದಿದೆ.

Leave a Reply

Your email address will not be published.

Social Media Auto Publish Powered By : XYZScripts.com