ಮುಂದಿನ ಐದು ವರ್ಷಗಳ ಕಾಲ ಸಮ್ಮಿಶ್ರಸರ್ಕಾರ ಸುಭದ್ರವಾಗಿರುತ್ತೆ – CM ಹೆಚ್.ಡಿ ಕುಮಾರಸ್ವಾಮಿ

ಬೆಂಗಳೂರು-ರಾಜ್ಯದಲ್ಲಿ ಮುಂದಿನ ಐದು ವರ್ಷಗಳ ಕಾಲ ಸಮ್ಮಿಶ್ರಸರ್ಕಾರ ಸುಭದ್ರವಾಗಿ ಸದೃಢವಾಗಿ ಸರ್ಕಾರ ನಡೆಸುತ್ತದೆ. ಯಾವುದೇ ಆತಂಕ ಬೇಡ ಎಂದು  ನೂತನ ಸಿಎಂ ಹೆಚ್.ಡಿ ಕುಮಾರಸ್ವಾಮಿ ಭರವಸೆ ನೀಡಿದರು.
ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ  ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ ಮಿತ್ರಪಕ್ಷಗಳಿಗೆ  ಧನ್ಯವಾದ ಅರ್ಪಿಸಿದರು. ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗಲಿಲ್ಲ. ಹೀಗಾಗಿ ಕಳೆದ ಒಂದು ವಾರದಿಂದ ಅಸ್ಥಿರತೆ ಉಂಟಾಗಿತ್ತು. ಇಂದಿನ ಅಸ್ಥಿರತೆಗೆ ರಾಜಕಾರಣಿಗಳು ಕಾರಣರಲ್ಲ. ರಾಜ್ಯದಲ್ಲಿ  ಯಾವುದೇ ಪಕ್ಷಕ್ಕೆ ಬಹುಮತ ಸಿಗದ ಹಿನ್ನೆಲೆ ರಾಷ್ಟ್ರೀಯ ಪಕ್ಷ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಎಸ್ ಪಿ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸಿದ್ದೇವೆ. ಇದಕ್ಕೆ ಕಾರಣರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ನಾನು ಇತ್ತೀಚಿನ ಬೆಳವಣಿಗೆಗಳನ್ನ ಸೂಕ್ಷ್ಮವಾಗಿ ಗಮನಿಸಿದ್ದೇನೆ.  ಅತ್ಯಂತ ಸುಭದ್ರ ಸದೃಢವಾಗಿ ಸರ್ಕಾರ ನಡೆಯುತ್ತೆ. ಯಾವುದೇ ಭಿನ್ನಭಿಪ್ರಾಯಗಳಿಗೆ ಅವಕಾಶ ಮಾಡಿಕೊಡಲ್ಲ. ನೂತನ ಸರ್ಕಾರದ ಬಗ್ಗೆ ಯಾವುದೇ ಅನುಮಾನ ಬೇಡ.
ರಾಜ್ಯದ ಅಭಿವೃದ್ದಿ ದೃಷ್ಟಿಯಿಂದ ಸಮ್ಮಿಶ್ರ ಸರ್ಕಾರ ಅನಿವಾರ್ಯ. ನಾಡಿದ್ದು ನಡೆಯುವ  ವಿಶ್ವಾಸ ಮತಯಾಚನೆಯಲ್ಲಿ ಗೆಲ್ಲುತ್ತೇವೆ.ನಮ್ಮ ಸರ್ಕಾರ ಅಸ್ಥಿರ ಸರ್ಕಾರ ಅನ್ನೋ ಭಾವನೆ ಇದ್ರೆ ಅದನ್ನ ತೆಗೆದು ಹಾಕಿ.
ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸಾಲಮನ್ನಾ ಮಾಡುತ್ತೇನೆ ಎಂದಿದ್ದೆ. ಅದನ್ನ ಯುಟರ್ನ್ ಎಂದು ಹೇಳುತ್ತಿದ್ದಾರೆ. ಆದರೆ ನಾನಿರುವುದು ಸಮ್ಮಿಶ್ರ ಸರ್ಕಾರದಲ್ಲಿ.  ಹೀಗಾಗಿ ಸಾಲಮನ್ನಾ ವಿಚಾರದಲ್ಲಿ ಕಾಂಗ್ರೆಸ್ ಜತೆ ಚರ್ಚಿಸಬೇಕಿದೆ. ಈ ಸಾಲ ಮನ್ನಾ ಬಗ್ಗೆ ಒಂದು ಬ್ಲ್ಯೂಪ್ರಿಂಟ್ ಇದೆ. ಸಾಲಮನ್ನಾ ಕ್ರೆಡಿಟ್ ಕಾಂಗ್ರೆಸ್ ಗೂ ಸಲ್ಲುವಂತೆ ಮಾಡುತ್ತೇನೆ ಎಂದು ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಎಲ್ಲರಿಗೂ ನ್ಯಾಯ, ಎಲ್ಲರಿಗೂ ಸೂರು ಸಿಗಬೇಕು. ಎಲ್ಲರಿಗೂ ಶಾಂತಿ ಸಿಗಬೇಕು. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಪ್ರಧಾನಿ ಮೋದಿ ಅವರ ಅಶ್ವಮೇಧಯಾಗ ಕುದುರೆಯನ್ನ ಕಟ್ಟಿಹಾಕಿದ್ದೇವೆ. ಜೀವ ಇಲ್ಲದ ಕುದುರೆಯನ್ನ ಹಿಡಿದು ಅಮಿತ್ ಶಾ ಆಟವಾಡಬೇಕು ಎಂದು ಟಾಂಗ್ ಕೊಟ್ಟರು.
ನಾನು ಚುನಾವಣೆ ವೇಳೆ ಸ್ಪಷ್ಟ ಬಹುಮತ ಬರದೇ ಇದ್ದರೆ, ಪ್ರತಿಪಕ್ಷದಲ್ಲಿ ಕುಳಿತುಕೊಳ್ಳುತ್ತೇನೆ ಎಂದು ಹೇಳಿದ್ದು ನಿಜ. ಆದರೆ, ದೇಶದ ಇವತ್ತಿನ ಪರಿಸ್ಥಿತಿಯಲ್ಲಿ ದೇಶದ ಹಲವು ಹಿರಿಯರ ಮಾರ್ಗದರ್ಶನ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಜತೆ ಹೋಗುವುದು ಅನಿವಾರ್ಯ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು. ಹೀಗಾಗೇ ನಾನು ಇದನ್ನು ಸಾಂದರ್ಭಿಕ ಶಿಶು ಎಂದು ಹೇಳಿದ್ದು ಎಂದರು.
ಬಿಜೆಪಿ ನಾಯಕರು ಬಹಳಷ್ಟು ಟೀಕೆಗಳನ್ನು ಮಾಡಿದ್ದಾರೆ. ಅವರಿಗೆ ಸದನದಲ್ಲೇ ಉತ್ತರ ಕೊಡುತ್ತೇನೆ. ನಾನು ಸಾಲಮನ್ನಾ ಮಾಡುವುದಿಲ್ಲ ಎಂದು ಎಲ್ಲಿ ಹೇಳಿಲ್ಲ. ಚುನಾವಣೆ ವೇಳೆ ಸ್ವತಂತ್ರ ಸರ್ಕಾರ ಬಂದರೆ 24 ಗಂಟೆಯೊಳಗೆ ಮಾಡುತ್ತೇನೆ ಎಂದು ಹೇಳಿದ್ದೆ. ಆದರೆ, ಇದೀಗ ನಾನು ಸಮ್ಮಿಶ್ರ ಸರ್ಕಾರದ ಭಾಗವಾಗಿದ್ದೇನೆ. ಎರಡೂ ಪಕ್ಷದ ಪ್ರಣಾಳಿಕೆಯಲ್ಲಿನ ಅಂಶಗಳನ್ನು ಪರಿಗಣಿಸಿ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಹೀಗಾಗಿ ವಿಚಾರ ಮಾಡಿ ಮಾಡುತ್ತೇನೆ ಎಂದು ಹೇಳಿದ್ದೇನೆ ಎಂದು ತಮ್ಮ ನಿಲುವು ಸಮರ್ಥಿಸಿಕೊಂಡರು. ಇದೇ ವೇಳೆ, ಕೆಲ ಮಾಧ್ಯಮಗಳ ವಿರುದ್ಧವೂ ಹರಿಹಾಯ್ಡರು.
ಆರ್ಥಿಕ ತಜ್ಞರ ಸಲಹೆ ಪಡೆದು ಹಾಗೂ ಬಹುಮತ ಸಾಬೀತಾದ ಬಳಿಕ ಸಾಲ ಮನ್ನಾ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ ಎಂದು ಸಿಎಂ ಹೇಳಿದರು. ಇದೇ ವೇಳೆ, ಯಾವುದೇ ಕಾರಣಕ್ಕೂ ಜನರಿಗೆ ಪ್ರತಿಭಟನೆಯ ಅಸ್ತ್ರ ಕೊಡುವುದಿಲ್ಲ ಎಂಬುದನ್ನು ಯಡಿಯೂರಪ್ಪ ಹೇಳಬಯಸುತ್ತೇನೆ ಎಂದು ತಿರುಗೇಟು ನೀಡಿದರು.
ಎಲ್ಲ ಜನರಿಗೂ ಹಿತ ನೀಡುವ ಸರ್ಕಾರ ನೀಡುವ ಭರವಸೆಯನ್ನು ಕುಮಾರಸ್ವಾಮಿ ನೀಡಿದರು. ಹಿಂದಿನ ಸರ್ಕಾರ ಆರಂಭಿಸಿರುವ ಯೋಜನೆಗಳನ್ನು ಮುಂದುವರೆಸುತ್ತೇನೆ. ಜನರಿಂದ ಜನರಿಗಾಗಿ ಜನರಿಗೋಸ್ಕರವಾಗಿರುವ ಸರ್ಕಾರ ನೀಡುತ್ತೇನೆ, ಹೊಸ ಬದಲಾವಣೆಗಾಗಿ ಬಯಸುತ್ತೇನೆ. ರಾಜಕೀಯ ಘಟನೆಗಳನ್ನು ಬದಿಗಿಟ್ಟು, ಅಭಿವೃದ್ಧಿ ಪರ ಆಡಳಿತ ನೀಡುತ್ತೇವೆ ಎಂದು ಕುಮಾರ ಸ್ವಾಮಿ ರಾಜ್ಯದ ಜನರಿಗೆ ಭರವಸೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com