ಶಾಸಕರನ್ನು ಕಾಯುತ್ತಿದ್ದಾರೆ ಡಿಕೆಶಿ : ಆನಂದ್‌ ಸಿಂಗ್‌ ಭೇಟಿಯಾಗಿ ಬಿಜೆಪಿಗೆ ಹೋಗದಂತೆ ಮನವಿ

ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಅಸ್ತಿತ್ವ ಕ್ಕೆ ಬರಲು ಕ್ಷಣಗಣನೆ ಪ್ರಾರಂಭವಾಗಿದೆ. ಆದರೆ ಇಷ್ಟಾದರೂ ಆಪರೇಷನ್‌ ಕಮಲದ ಭೀತಿ ಇನ್ನೂ ಕಡಿಮೆಯಾಗಿಲ್ಲ.
  ಇದಕ್ಕೆ ಪುಷ್ಠಿ ಎಂಬಂತೆ ಕಾಂಗ್ರೆಸ್‌ ಹಿರಿಯ ಮುಖಂಡ ಡಿ.ಕೆ ಶಿವಕುಮಾರ್‌  ಇಂದು ಮತ್ತೆ ಸಚಿವ ಆನಂದ್‌ ಸಿಂಗ್‌ ಅವರನ್ನು ಭೇಟಿ ಮಾಡಿದ್ದು, ಮತ್ತೆ ಬಿಜೆಪಿಗೆ ಸೇರ್ಪಡೆಯಾಗದಂತೆ ಮನವಿ ಮಾಡಿದ್ದಾರೆ.

ಇಂದು ಬೆಳಗ್ಗೆ ಆನಂದ್‌ ಸಿಂಗ್‌ ಉಳಿದುಕೊಂಡಿರುವ ಹಿಲ್ಟನ್‌ ಹೊಟೆಲ್‌ಗೆ ತೆರಳಿದ ಡಿ.ಕೆ ಶಿವಕುಮಾರ್‌, ಆನಂದ್ ಸಿಂಗ್‌ ಜೊತೆ ಚರ್ಚೆ ನಡೆಸಿದರು. ಮತ್ತೆ ಬಿಜೆಪಿಗೆ ಹೋಗಬೇಡಿ. ನೀವು ಹಿರಿಯ ಶಾಸಕ ಎಂಬ ಕಾರಣಕ್ಕಾದರೂ ಸ್ಥಾನಮಾನ ದೊರೆಯುತ್ತದೆ. ನಿಮಗೆ ಯಾವುದೇ ಬೆದರಿಕೆ ಬಂದರೂ ನಿಮ್ಮ ಜೊತೆ ನಾವಿದ್ದೇವೆ ಎಂದು ಭರವಸೆ ನೀಡಿದ್ದಾರೆ.
ಇನ್ನು ಈ ಹಿಂದೆ ನಡೆದ ವಿಶ್ವಾಸಮತ ಯಾಚನೆ ವೇಳೆ ಶಾಸಕ ಆನಂದ್ ಸಿಂಗ್ ಮತ್ತು ಶಾಸಕ ಪ್ರತಾಪ್ ಗೌಡ ಪಾಟೀಲ್ ನಾಪತ್ತೆಯಾಗಿ ಕಾಂಗ್ರೆಸ್ ಪಾಳಯದಲ್ಲಿ ಆತಂಕ ಮೂಡಿಸಿದ್ದರು. ಬಳಿಕ ಡಿಕೆ ಸಹೋದರರು ನಡೆಸಿದ ಕಾರ್ಯಾಚರಣೆ ಫಲವಾಗಿ ಅವರು ವಿಧಾನಸಭೆಗೆ ಆಗಮಿಸಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಲ್ಲದೇ ಇಬ್ಬರೂ ನಾಯಕರಿಗೆ ಪಕ್ಷದ ವಿಪ್ ಜಾರಿ ಮಾಡಲಾಗಿತ್ತು.

Leave a Reply

Your email address will not be published.