ದಂಪತಿಯ ಏಕಾಂತದ ವಿಡಿಯೋಗಳನ್ನು ಕದ್ದ ನಿರ್ದೇಶಕ….ಎಂತಾ ಕೆಲ್ಸ ಮಾಡ್ಬಿಟ್ಟ !!

ಬೆಂಗಳೂರು : ದಂಪತಿ ಪ್ರವಾಸಕ್ಕೆ ಹೋಗಿದ್ದ ವೇಳೆ ಖಾಸಗಿ ವಿಡಿಯೋಗಳನ್ನು ಕದ್ದು 5 ಕೋಟಿ ರೂ ನೀಡುವಂತೆ ಬ್ಲಾಕ್‌ಮೇಲ್‌ ಮಾಡುತ್ತಿದ್ದ ಸಿನಿಮಾ ನಿರ್ದೇಶಕ ಸೇರಿದಂತೆ  ನಾಲ್ವರನ್ನು ಸೈಬರ್‌ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಕೆಂಗೇರಿಯ ಕಾನ್ಸೆಪ್ಟ್‌ ಸಿಟಿ  ಲೇಔಟ್‌ನ ಸಂತೋಷ್‌ ಕುಮಾರ್‌, ಪ್ರಶಾಂತ್‌ ಮಲೆಯೂರು, ಸುರೇಶ್‌, ಪ್ರದೀಪ್‌ ಬಂಧಿತರು. ಬಂಧಿತರಿಂದ ಪೊಲೀಸರು   ಲ್ಯಾಪ್‌ಟಾಪ್‌,  ತಲಾ 5 ಮೊಬೈಲ್‌ಗಳು, ಸಿಮ್‌ಕಾರ್ಡ್‌ಗಳು, ಮೂರು ಎಟಿಎಂ ಕಾರ್ಡ್‌ ಹಾಗೂ ಪೆನ್‌ಡ್ರೈವ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಸಿನಿಮಾ ನಿರ್ದೇಶಕರಾಗಿರುವ ಆರೋಪಿ ಸಂತೋಷ್‌ ಕುಮಾರ್‌, ಗ್ರ್ಯಾಂಡ್‌ ಸಹಾರಾ ಮೂವಿ ಪ್ರೊಡಕ್ಷನ್‌ ಹೆಸರಿನ ಪ್ರೊಡಕ್ಷನ್‌ ಹೌಸ್‌ ತೆರೆದಿದ್ದ. ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕ್ರಿಯಾ ಸಮಿತಿಯ ಸದಸ್ಯನೂ ಆಗಿರುವ ಈತ ಇನ್ನೊಬ್ಬ ಆರೋಪಿ ಪ್ರಶಾಂತ್‌, ಸಹಾಯಕ ನಿರ್ದೇಶಕ. ಉಳಿದಿಬ್ಬರು ಆರೋಪಿಗಳು ಸೇರಿ ಪ್ರೊಡಕ್ಷನ್ ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದರು.ಸಹಾಯಕ ನಿರ್ದೇಶಕನಾಗಿ ಕನ್ನಡ, ತೆಲುಗು ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ಸಂತೋಷ್, ‘ಮೈಸೂರಲ್ಲಿ ರಾಜಾರಾಣಿ’ ಹೆಸರಿನ ಕನ್ನಡ ಸಿನಿಮಾವನ್ನು ಸ್ವತಂತ್ರವಾಗಿ ನಿರ್ದೇಶಿಸಲು ಯೋಜನೆ ರೂಪಿಸಿದ್ದ. ಅದಕ್ಕೆ ನಿರ್ಮಾಪಕರಾಗುವಂತೆ ಪರಿಚಯಸ್ಥರೇ ಆಗಿದ್ದ ದಂಪತಿಯನ್ನು ಕೋರಿದ್ದ.

ಆದರೆ, ಹಣ ನೀಡಲು ದಂಪತಿ ನಿರಾಕರಿಸಿದ್ದರು. ಅದೇ ಕಾರಣಕ್ಕೆ ಅವರಿಬ್ಬರ ಖಾಸಗಿ ದೃಶ್ಯಗಳನ್ನು ಸಂಗ್ರಹಿಸಿದ್ದ ಆರೋಪಿಗಳು, ಅವುಗಳನ್ನು ದಂಪತಿಯ ವಾಟ್ಸ್‌ಆ್ಯಪ್‌ಗೆ ಕಳುಹಿಸಿದ್ದರು. ಅದೇ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುವುದಾಗಿ ಬೆದರಿಸಿದ್ದರು. ಆ ರೀತಿ ಮಾಡಬಾರದೆಂದರೆ 5 ಕೋಟಿ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ದಂಪತಿ ಮೇ 16ರಂದು ದೂರು ನೀಡಿದ್ದರು. ಹಣ ನೀಡುವುದಾಗಿ ಹೇಳಿ ಆರೋಪಿಗಳನ್ನು ಕೆಂಗೇರಿಗೆ ಕರೆಸಿಕೊಂಡು ಬಂಧಿಸಲಾಗಿದೆ. ಆರೋಪಿ ಸಂತೋಷ್‌ಕುಮಾರ್, ದೂರುದಾರ ದಂಪತಿಗೆ ಪರಿಚಯಸ್ಥನಾಗಿದ್ದರಿಂದ ಎಲ್ಲರೂ ಒಟ್ಟಿಗೆ ಹೊರ ರಾಜ್ಯದ ಪ್ರವಾಸಕ್ಕೆ ಹೋಗಿದ್ದರು. ಅದೇ ವೇಳೆ ಆರೋಪಿ, ಪ್ರವಾಸ ತಾಣಗಳ ಫೋಟೊ ಹಾಗೂ ವಿಡಿಯೊಗಳನ್ನು ಸೆರೆ ಹಿಡಿದಿದ್ದ.

ಅದೇ ಫೋಟೊ ಹಾಗೂ ವಿಡಿಯೊಗಳನ್ನು ವರ್ಗಾವಣೆ ಮಾಡುವುದಾಗಿ ಹೇಳಿದ್ದ ಆರೋಪಿ, ಪತಿಯ ಮೊಬೈಲ್‌ ಪಡೆದುಕೊಂಡಿದ್ದ. ನಂತರ, ಅವರ ಮೊಬೈಲ್‌ನಲ್ಲಿದ್ದ ದಂಪತಿಯ ಏಕಾಂತದ ವಿಡಿಯೊಗಳನ್ನು ತನ್ನ ಮೊಬೈಲ್‌ಗೆ ವರ್ಗಾವಣೆ ಮಾಡಿಕೊಂಡಿದ್ದ. ಅವುಗಳನ್ನು ಇಟ್ಟುಕೊಂಡು ದಂಪತಿಗೆ ಬೆದರಿಕೆ ಹಾಕುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

Leave a Reply

Your email address will not be published.