IPL-ಪ್ಲೇ ಆಫ್ : CSK-SRH ಕ್ವಾಲಿಫೈಯರ್ : ಯಾರಿಗೆ ಒಲಿಯಲಿದೆ ಫೈನಲ್ ಟಿಕೆಟ್..?

11ನೇ ಐಪಿಎಲ್ ಟೂರ್ನಿಯ ಲೀಗ್ ಪಂದ್ಯಗಳೆಲ್ಲವೂ ಮುಕ್ತಾಯಗೊಂಡಿದ್ದು, ಪ್ಲೇ ಆಫ್ ಹಂತಕ್ಕೆ ಯಾವ ತಂಡಗಳು ಪ್ರವೇಶಿಸಲಿವೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಸನ್ ರೈಸರ್ಸ್ ಹೈದರಾಬಾದ್, ಚೆನ್ನೈ ಸೂಪರ್ ಕಿಂಗ್ಸ್, ಕೋಲ್ಕತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಪ್ಲೇ ಆಫ್ ಪ್ರವೇಶಿಸಿವೆ.

ಉಳಿದಂತೆ ಕಳೆದ ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕಿಂಗ್ಸ್ ಇಲೆವನ್ ಪಂಜಾಬ್ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ತಂಡಗಳು ನಿರಾಸೆ ಅನುಭವಿಸಿ ಟೂರ್ನಿಯಿಂದ ಹೊರ ನಡೆದಿವೆ.

ಟಾಪ್ 4 ತಂಡಗಳ ಪ್ಲೇ ಆಫ್ ಸೆಣಸಾಟಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಮಂಗಳವಾರ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಜಯಶಾಲಿಯಾದ ಟೀಮ್ 11ನೇ ಐಪಿಎಲ್ ಟೂರ್ನಿಯ ಫೈನಲ್ ಪ್ರವೇಶಿಸಲಿದೆ.

ಪಾಯಿಂಟ್ಸ್ ಪಟ್ಟಿಯಲ್ಲಿ ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನದಲ್ಲಿರುವ ಹೈದರಾಬಾದ್ ಹಾಗೂ ಚೆನ್ನೈ ತಂಡಗಳ ಕಾದಾಟ ಅಭಿಮಾನಿಗಳಲ್ಲಿ ಕುತೂಹಲವನ್ನು ಇಮ್ಮಡಿಗೊಳಿಸಿದೆ. ಚೆನ್ನೈ ತಂಡದಲ್ಲಿ ಅಂಬಟಿ ರಾಯುಡು, ಸುರೇಶ್ ರೈನಾ, ಬಿಲ್ಲಿಂಗ್ಸ್, ಧೋನಿಯಂತಹ ಟಿ-20 ಸ್ಪೆಷಲಿಸ್ಟ್ ಬ್ಯಾಟ್ಸಮನ್ ಗಳಿದ್ದಾರೆ. ಶೇನ್ ವಾಟ್ಸನ್, ಡ್ವೇನ್ ಬ್ರಾವೋ, ರವೀಂದ್ರ ಜಡೇಜಾರಂತಹ ಆಲ್ರೌಂಡರ್ ಗಳಿದ್ದಾರೆ. ದೀಪಕ್ ಚಹರ್, ಹರಭಜನ್ ಸಿಂಗ್, ಇಮ್ರಾನ್ ತಾಹಿರ್ ಬೌಲಿಂಗ್ ಬಲ ಎನಿಸಿದ್ದಾರೆ.

ಸನ್ ರೈಸರ್ಸ್ ಹೈದರಾಬಾದ್ ಬ್ಯಾಟಿಂಗ್ ವಿಭಾಗ ಶಿಖರ್ ಧವನ್, ಕೇನ್ ವಿಲಿಯಮ್ಸನ್, ಮನೀಶ್ ಪಾಂಡೆಯವರಂತಹ ಆಟಗಾರರನ್ನು ಹೊಂದಿದೆ. ರಾಶಿದ್ ಖಾನ್, ಆಲ್ರೌಡರ್ ಶಾಕಿಬ್ ಅಲ್ ಹಸನ್, ಭುವನೇಶ್ವರ್ ಕುಮಾರ್ ರನ್ನು ಒಳಗೊಂಡ ಬಲಿಷ್ಠ ಬೌಲಿಂಗ್ ಪಡೆಯನ್ನು ಹೊಂದಿದೆ.

ಮೊದಲ ಕ್ವಾಲಿಫೈಯರ್ ಪಂದ್ಯ ಕಾತರವನ್ನು ಹೆಚ್ಚಿಸಿ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

Leave a Reply

Your email address will not be published.

Social Media Auto Publish Powered By : XYZScripts.com