ಖ್ಯಾತ ತಬಲಾ ವಾದಕ ಪಂಡಿತ್ ರವೀಂದ್ರ ಯಾವಗಲ್ ಅವರಿಗೆ ‘ಲಯಶ್ರೀ ಕಮಲ’ ಪ್ರಶಸ್ತಿ

ಕಲ್ಲೂರ ಮಹಾಲಕ್ಷ್ಮಿ ತಬಲಾ ಮಹಾವಿದ್ಯಾಲಯದ ವತಿಯಿಂದ ಆಯೋಜಿಸಲಾಗಿದ್ದ 33ನೇ ವಾರ್ಷಿಕ ‘ತಬಲಾ ಉತ್ಸವ’ ಕಾರ್ಯಕ್ರಮ ಬೆಂಗಳೂರಿನಲ್ಲಿ ಶನಿವಾರ ಜರುಗಿತು. ಜಯನಗರದ ಜೆಎಸ್ಎಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕನ್ನಡದ ಖ್ಯಾತ ಕವಿ, ಲೇಖಕ ಎಚ್.ಎಸ್ ವೆಂಕಟೇಶ ಮೂರ್ತಿ ಆಗಮಿಸಿದ್ದರು.

ಸಮಾರಂಭದಲ್ಲಿ ನಾಡಿನ ಖ್ಯಾತ ತಬಲಾ ವಾದಕರಾದ ಪಂಡಿತ್ ರವೀಂದ್ರ ಯಾವಗಲ್ ಅವರಿಗೆ ‘ಲಯಶ್ರೀ ಕಮಲ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪ್ರತಿ ವರ್ಷವೂ ನಡೆಯುವ ‘ತಬಲ ಉತ್ಸವ’ ದಲ್ಲಿ, ಕಲ್ಲೂರ ಮಹಾಲಕ್ಷ್ಮಿ ವಿದ್ಯಾಲಯದ ವತಿಯಿಂದ ನಾಡಿನ ಶ್ರೇಷ್ಟ ತಬಲಾ ಕಲಾವಿದರಿಗೆ ಲಯಶ್ರೀ ಕಮಲ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.  ಡಾ. ರಾಜಗೋಪಾಲ್ ಕಲ್ಲೂರ್ಕರ್ ಅವರು 1985ರಲ್ಲಿ ಕಲ್ಲೂರ ಮಹಾಲಕ್ಷ್ಮಿ ಮಹಾವಿದ್ಯಾಲಯವನ್ನು ಸ್ಥಾಪಿಸಿದ್ದರು.

ಪ್ರಶಸ್ತಿ ಸ್ವೀಕರಿಸಿದ ನಂತರ ಪಂಡಿತ್ ರವೀಂದ್ರ ಯಾವಗಲ್ ಸೋಲೋ ತಬಲಾ ವಾದನ ಪ್ರಸ್ತುತ ಪಡಿಸಿದರು. ರವೀಂದ್ರ ಯಾವಗಲ್ ಅವರಿಗೆ ಶ್ರೀ ರಂಜನ್ ಕುಮಾರ್ ಬ್ಯೋರಾ ಅವರು ವೈಯೋಲಿನ್ ಸಾಥ್ ನೀಡಿದರು. ಇದೇ ಸಂದರ್ಭದಲ್ಲಿ ಕಲ್ಲೂರ ಮಹಾ ವಿದ್ಯಾಲಯದ 8 ಜನ ವಿದ್ಯಾರ್ಥಿಗಳಿಂದ ಸಮೂಹ ತಬಲಾ ವಾದನ ಕಾರ್ಯಕ್ರಮ ನಡೆಯಿತು.

ನಂತರ ಸಿದ್ಧಾರ್ಥ್ ಬೆಲ್ಮಣ್ಣು ಅವರ ಗಾಯನ ಹಾಗೂ ಷಡಜ್ ಗೋಡ್ಖಿಂಡಿ ಬಾನ್ಸುರಿ ಜುಗಲ್ ಬಂದಿ ಕಾರ್ಯಕ್ರಮ ಜರುಗಿತು. ಇವರಿಗೆ ಕಲ್ಲೂರ ತಬಲಾ ಮಹಾ ವಿದ್ಯಾಲಯದ ವಿದ್ಯಾರ್ಥಿ ರೂಪಕ್ ಕಲ್ಲೂರ್ಕರ್ ತಬಲಾ ಸಾಥ್ ನೀಡಿದರು. ಸಿದ್ಧಾರ್ಥ್ ಬೆಲ್ಮಣ್ಣು ಅವರ ಕಂಠದಲ್ಲಿ ಹಾಗೂ ಷಡಜ್ ಗೋಡ್ಖಿಂಡಿಯವರ ಬಾನ್ಸುರಿಯಲ್ಲಿ ಹೊಮ್ಮಿದ ರಾಗ ‘ಬಿಹಾಗ್’ ಸಂಗೀತ ಪ್ರಿಯ ಕೇಳುಗರ ಮನಸೂರೆಗೊಂಡಿತು.

Leave a Reply

Your email address will not be published.

Social Media Auto Publish Powered By : XYZScripts.com