ತುಮಕೂರು : ಶಿರಾ ಬಳಿ ಲಾರಿ-ಬಸ್ ಭೀಕರ ಅಪಘಾತ : ಏಳು ಜನರ ದುರ್ಮರಣ

ತುಮಕೂರು : ಶಿರಾ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಏಳು ಜನ ಸಾವನ್ನಪ್ಪಿದ್ದಾರೆ. ಖಾಸಗಿ ಬಸ್ಸೊಂದು ಹಿಂಬದಿಯಿಂದ ಲಾರಿಗೆ ಡಿಕ್ಕಿಯಾದ ಪರಿಣಾಮ ಬಸ್ ನಲ್ಲಿದ್ದ ಏಳು ಮಂದಿ ಪ್ರಯಾಣಿಕರು ಸಾವಿಗೀಡಾಗಿದ್ದಾರೆ. ಸಿಗಂದೂರಿನಿಂದ ಶಿರಾ ಕಡೆ ಬರುತ್ತಿದ್ದ ಹನುಮಾನ್ ಟ್ರಾವೆಲ್ಸ್ ಬಸ್ ಅಪಘಾತಕ್ಕೀಡಾಗಿದೆ.

ಅನುಷ(07),ಸವಿತಾ(20),ರತ್ನಮ್ಮ(38),ಶಂಕರ(35),ಅಶ್ವತ್ತನಾರಾಯಣ(50) ಸೇರಿ ಇನ್ನಿಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. ಸ್ಥಳದಲ್ಲಿ ಮೂರು ಮಂದಿ ಸಾವನ್ನಪ್ಪಿದ್ದು, ಆಸ್ಪತ್ರೆಯಲ್ಲಿ ನಾಲ್ಕು ಮಂದಿ ಕೊನೆಯುಸಿರೆಳೆದಿದ್ದಾರೆ.

ಶಿರಾ ರಾಷ್ಟ್ರೀಯ ಹೆದ್ದಾರಿ-48 ಬಳಿಯ ಜೈಹಿಂದ್ ಹೋಟೆಲ್ ಬಳಿ ದುರ್ಘಟನೆ ನಡೆದಿದೆ. ಬಸ್‌ನಲ್ಲಿದ್ದ ಉಳಿದ 20 ಜನರಿಗೆ ಗಾಯಗಳಾಗಿವೆ. ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ತೆರಳಿ ಬಸ್ ವಾಪಸ್ಸಾಗುತ್ತಿತ್ತು.

ಮೃತ ದುರ್ದೈವಿಗಳು ಶಿರಾ ಹಾಗೂ ಪಟ್ಟನಾಯಕನಹಳ್ಳಿ ನಿವಾಸಿಗಳಾಗಿದ್ದಾರೆ. ಶಿರಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು ಗಾಯಾಳುಗಳು ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com