ಚುನಾವಣೆಗೂ ಮುನ್ನ ಕಾಂಗ್ರೆಸ್ ಜೊತೆಗಿನ ಹೊಂದಾಣಿಕೆ ಬಗ್ಗೆ ಸೂಕ್ಷ್ಮ ನೀಡಿದ್ದ ದೊಡ್ಡ ಗೌಡರು…!

ನಾಗೇಶ್ ಕೆ ಎನ್

ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಸೂಕ್ಷ್ಮ ಮೇ ೮ ರಂದು ಜೆ.ಡಿ.ಎಸ್. ವರಿಷ್ಠ ದೇವೇಗೌಡ ನೀಡಿದ್ದರು. ಅಂದು  ಹಿರಿಯ ಪತ್ರಕರ್ತರೊಂದಿಗೆ  ಮಾತನಾಡಿದ  ದೇವೇಗೌಡರು ಕಾಂಗ್ರೆಸ್ ಪರಿಸ್ಥಿತಿಯನ್ನು ಅರಿತುಕೊಂಡು ಪ್ರಾದೇಶಿಕ ಪಕ್ಷಗಳೊಂದಿಗೆ ಹೊಂದಾಣಿಕೆ ಬಗ್ಗೆ ಭವಿಷ್ಯ ನುಡಿದಿದ್ದರು. ಅದರ  ವಿಡಿಯೋ ನೋಡಿ.

ಅಂದು ಸ್ಥಳೀಯ ಕಾರ್ಯಕರ್ತರನ್ನು ಉದ್ದೇಶಿಸಿ ದೇವೇಗೌಡರ ಮಾತಿನ ಕೆಲ ಮುಖ್ಯ ಸಂಗತಿಗಳು ಇಲ್ಲಿವೆ.

ಮೇ ತಿಂಗಳ ೮ ನೆಯ ದಿನ. ಶಿಡ್ಲಘಟ್ಟದಲ್ಲಿ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರ ಭಾಷಣ ಆಲಿಸಲು ಬಿರು ಬಿಸಿಲು ಲೆಕ್ಕಿಸದೆ ಸಾವಿರಾರು ಕಾರ್ಯಕರ್ತರು ಕಾಯುತ್ತಿದ್ದರು.  ೧೨.೩೦ ಕ್ಕೆ ಆರಂಭವಾಗಬೇಕಿದ್ದ ಸಭೆ ೩.೩೦ ಗಂಟೆಗೆ ಆರಂಭವಾಯಿತು.

ವೇದಿಕೆಯ ಮೇಲೆ  ಹತ್ತಾರು ನಾಯಕರು ನೂರಾರು ಕಾರ್ಯಕರ್ತರು ಜಮಾಯಿಸಿದ್ದರು. ನಾನು ಮತ್ತು ದಿ ವೀಕ್ ಪತ್ರಿಕೆಯ ಬರ್ಖಾ ಧತ್ ಪೋಡಿಯಂ ಬಳಿಯೇ ವೇದಿಕೆಯ ಮೇಲೆ ಚಕಳಮಕಳ ಹಾಕಿ ಕುಳಿತು ಗೌಡರು ಭಾಷಣ ಆಲಿಸಿದೆವು. ಆರಂಭದಲ್ಲಿ ಬರ್ಖಾಧತ್ ರನ್ನು ಉದ್ದೇಶಿಸಿ ಮಾತನಾಡಿದ ದೇವೆಗೌಡರು ’ ಎನ್ ಡಿ ಟಿ ವಿ ಯ ಬರ್ಖಾ ಧತ್ ಬಂದಿದ್ದಾರೆ, ರಾಷ್ಟ್ರ ಮಟ್ಟದಲ್ಲಿ ಈ ಚುನಾವಣೆ ಎಷ್ಟು ಮುಖ್ಯ ಎಂದು ತಿಳಿಯಬೇಕು’ ಎಂದವರು ಜೆ.ಡಿ.ಎಸ್  ಭಾಜಪ ಜೊತೆ ಹೋಗುತ್ತದೆ, ಎಂದು ಗುಲಾಮ್ ನಬಿ ಆಜಾದ್  ತಳಬುಡವಿಲ್ಲದೆ ಮಾತನಾಡಿದ್ದಾರೆ. ಆ ಮಾತಿಗೆ ಅರ್ಥವೇ ಇಲ್ಲ. ನಮ್ಮದು ಸೆಕ್ಯುಲರ್ ಪಕ್ಷ ಎಂದು ವಾಗ್ಧಾಳಿ ನಡೆಸಿದರು. ಭಾಷಣದುದ್ದಕ್ಕೂ ಮೂರ್ನಾಲ್ಕು ಸಾರಿ ಗುಲಾಮ್ ನಬಿ ಆಜಾದ್ ರನ್ನು ಮೂದಲಿಸಿದರು. ದೇಶದ ವಿವಿಧ ಭಾಗಗಳಲ್ಲಿ ಕೋಮುಗಲಬೆ ಆದ ಬಗ್ಗೆ ಮಾತನಾಡಿ ಆಗ ಇವರೇನು ಮಾಡಿದರು ಎಂದು ಪ್ರಶ್ನಿಸಿದರು.

ಅಷ್ಠರ ನಡುವೆ ಇನ್ನು ಇಪ್ಪತ್ತು ದಿನಗಳಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹೇಳುವುದನ್ನು ಮರೆಯಲಿಲ್ಲ.

ಕುಮಾರ ಸ್ವಾಮಿ ಮುಖ್ಯಮಂತ್ರಿ ಆದ ೬ ತಿಂಗಳ ಒಳಗಾಗಿ ಶಿಡ್ಲಘಟ್ಟ ಭಾಗಕ್ಕೆ ನೀರಾವರಿ ಯೋಜನೆ ಜಾರಿಗೆ ತರುವುದಾಗಿ ಆಶ್ವಾಸನೆ ಕೊಟ್ಟರು. ನಂಜುಂಡಪ್ಪ ವರದಿಯಲ್ಲಿ ಹೇಳಿರುವಂತೆ ಅತ್ಯಂತ ಹಿಂದುಳಿದ ಜಿಲ್ಲೆಯಾದ ಕೋಲಾರಕ್ಕೆ ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ಕೊಟ್ಟರು.

ಭಾಷಣ ಮುಗಿದ ನಂತರ ಬರ್ಖಾ ಧತ್ ರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಕಾಂಗ್ರೆಸ್ ಹಾಗೂ ಭಾಜಪ ಎರಡೂ ರಾಷ್ಟ್ರೀಯ ಪಕ್ಷಗಳು ತನ್ನ ಶತ್ರುಗಳೆಂದೇ ಹೇಳಿದರು. ಯಾವುದು ದೊಡ್ಡ ಶತ್ರು ಎಂದಾಗಲೂ ಎರಡೂ ಏಕರೂಪದ ಶತ್ರುಗಳು ಎಂದವರು ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳನ್ನು ನಾಶ ಮಾಡುತ್ತವೆ ಎಂದು ಆಪಾದಿಸಿದರು.

ದೇಶದಲ್ಲಿ ಕಾಂಗ್ರೆಸ್ ಈಗಾಗಲೇ ಅಸ್ತಿತ್ವ ಕಳೆದುಕೊಂಡಿದೆ. ಭಾ ಜಪ ದ ಮುಷ್ಠಿಯಿಂದ ದೇಶವನ್ನು ಬಿಡಿಸಿಕೊಳ್ಳುವ ತುರ್ತು ಅರ್ಥ ಮಾಡಿಕೊಂಡರೆ ಮಾತ್ರ ಕಾಂಗ್ರೆಸ್ ಗೆ ಇತರೆ ಪ್ರಾದೇಶಿಕ ಪಕ್ಷಗಳು ಬೆಂಬಲಿಸುತ್ತವೆ.  ಇಲ್ಲವಾದರೆ  ಕಾಂಗ್ರೆಸ್ಸಿಗೂ ಭವಿಷ್ಯವಿಲ್ಲ ಎಂದು ಹೇಳಿದರಲ್ಲದೆ. ಅತಂತ್ರ ಸಂದರ್ಭದಲ್ಲಿ ಕಾಂಗ್ರೆಸ್ ಜೊತೆ ಹೋಗುವ ತಮ್ಮ ಮನದಾಳದ ಬಯಕೆಯನ್ನೂ ಬಿಚ್ಚಿಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು. (ಆ ವಿಡಿಯೋ ತುಣುಕನ್ನು ನೋಡಿ)

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಪಾತ್ರವೇನು ನೀವು ಮತ್ತೆ ಪ್ರಧಾನಿ ಹುದ್ದೆಯ ರೇಸ್ ನಲ್ಲಿರುವಿರಾ ಎಂಬ ಪ್ರಶ್ನೆಗೆ ವಯಸ್ಸಿನ ವಿಚಾರ ಮುಂದಿಟ್ಟು, ಆ ಬಗ್ಗೆ ಗೊತ್ತಿಲ್ಲ ಆದರೆ ಈಗಾಗಲೇ ೨೦೧೩ ರಲ್ಲಿ ದೆಹಲಿಯಲ್ಲಿ ನಾನು  ಮಾಯಾವತಿಯವರನ್ನು ಬೆಂಬಲಿಸುವುದಾಗಿ ಹೇಳಿದ್ದೆ. ಈಗಲೂ ಅದನ್ನೇ ಹೇಳುತ್ತಿದ್ದೇನೆ ಎಂದರು.

ದೊಡ್ಡ ಗೌಡರ ಏರಿಯಲ್ ವ್ಯೂ ಕರ್ನಾಟಕಕ್ಕೆ ಈಗ ಅರ್ಥವಾಗತೊಡಗಿದೆ.

Leave a Reply

Your email address will not be published.

Social Media Auto Publish Powered By : XYZScripts.com