ಕಾಂಗ್ರೆಸ್, JDSಗೆ ಮುಖಭಂಗ – ಬೋಪಯ್ಯ ನೇಮಕ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ

ಹಿರಿಯ ಶಾಸಕರನ್ನು ನೇಮಕ ಮಾಡದೆ ಕೆ.ಜಿ.ಬೋಪಯ್ಯ ಅವರನ್ನು ಹಂಗಾಮಿ ಸ್ಪೀಕರ್ ಆಗಿ ಆಯ್ಕೆ ಮಾಡಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದೆ.
ಈ ಮೂಲಕ ಕಾಂಗ್ರೆಸ್ ಗೆ ಮುಖಭಂಗವಾಗಿದ್ದು ಹಂಗಾಮಿ ಸ್ಪೀಕರ್ ಆಗಿ.ಕೆಜಿ ಬೋಪಯ್ಯ ಮುಂದುವರೆಯಲಿದ್ದಾರೆ. ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಸಿಕ್ರಿ, ಅಶೋಕ್ ಭೂಷಣ್ ಮತ್ತು ಎಸ್.ಎ.ಬೋಬ್ಡೆ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದರು.

ಕರ್ನಾಟಕ ರಾಜ್ಯಪಾಲರ ಆದೇಶವನ್ನು ನಾವು ಪರಿಶೀಲನೆ ಮಾಡಿದರೆ ನಾವು ನಿನ್ನೆ ನೀಡಿದ್ದ ತೀರ್ಪಿಗೆ ವಿರುದ್ದವಾಗುತ್ತದೆ. ನಾವು ಹಂಗಾಮಿ ಸ್ಪೀಕರ್ ಅವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಬೇಕಾಗುತ್ತದೆ. ಅವರ ವಿಚಾರಣೆ ನಡೆಸದೆ ನಾವು ಯಾವುದೇ ಆದೇಶ ನೀಡಲು ಸಾಧ್ಯವಿಲ್ಲ. ಇದಕ್ಕಾಗಿ ವಿಶ್ವಾಸ ಮತಯಾಚನೆ ಮುಂದೂಡಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಬೋಬ್ಡೆ ಹೇಳಿದರು.

ತ್ರಿಸದಸ್ಯ ಪೀಠವು ಬೋಪಯ್ಯ ಆಯ್ಕೆ ಕುರಿತು ಪ್ರಶ್ನಿಸಿದ್ದ ಅರ್ಜಿಯನ್ನು ವಜಾಗೊಳಿಸುವ ಮೂಲಕ ಅವರನ್ನೇ ಹಂಗಾಮಿ ಸ್ಪೀಕರ್ ಆಗಿ ಮುಂದುವರೆಯಲು ಸಮ್ಮತಿ ಸೂಚಿಸಿತು.

Leave a Reply

Your email address will not be published.