Number game : ಏಕ್ ದಿನ್ ಕಾ ಸುಲ್ತಾನ್ ಕಚೇರಿಗೆ ಬೀಗ ವರ್ಗಾವಣೆ ಆದೇಶ ವಾಪಸ್ ..

 ಬೂಕನಕೆರೆ ಸಿದ್ದಲಿಂಗಪ್ಪ ಯಡ್ಯೂರಪ್ಪನವರು ಕರ್ನಾಟಕ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ  ಸ್ವೀಕರಿಸಿದ 24 ಗಂಟೆಯಲ್ಲೇ ಸಿಎಂ ಕಚೇರಿಗೆ ಬೀಗ ಬಿದ್ದಿದೆ. ಶ್ರೀಯುತರು ನಿನ್ನೆಯಷ್ಟೇ ವಿಧಾನಸೌಧದ 3ನೇ ಮಹಡಿಯ ಸಿಎಂ ಕಚೇರಿ ಪ್ರವೇಶಿಸಿ, ಸಿಎಂ ಕುರ್ಚಿಯ ವಾಸ್ತುದೋಷವನ್ನು ಪತ್ತೆಮಾಡಿ ಕುರ್ಚಿಯನ್ನು ಬೇರೆ ದಿಕ್ಕಿಗೆ ಬದಲಿಸಿದ್ದರು. ಮಂತ್ರಘೋಷಗಳೊಂದಿಗೆ ಕುರ್ಚಿಗೆ ಪೂಜೆ ಸಲ್ಲಿಸಿ  ಸಿಎಂ ಕುರ್ಚಿಯ ಮೇಲೆ ಆಸೀನರಾಗಿದ್ದರು. ಇಷ್ಟೆಲ್ಲಾ ವಾಸ್ತು, ಪೂಜೆ ಎಲ್ಲವನ್ನೂ ನೆರವೇರಿಸಿದರೂ ಮರುದಿನವೇ ಅವರ ಕಚೇರಿಗೆ ವಿಧಾನಸೌಧದ ಸಿಬ್ಬಂದಿ ಬೀಗ ಜಡಿದದ್ದು ಮಾತ್ರ ದುರಂತವೇ ಸರಿ.

ಯಾಕೆ  ಹೀಗಾಯಿತೆಂದು ಕೆದಕಿ ನೋಡಿದರೆ, ಈ ಅವಾಂತರಕ್ಕೆ ಸ್ವತಃ ಯಡ್ಯೂರಪ್ಪನವರೇ ಕಾರಣ ಎಂಬುದು ನಿಚ್ಚಳವಾಗಿದೆ. ಮಾನ್ಯ ಯಡ್ಯೂರಪ್ಪನವರು ಹೇಗಾದರೂ ಮಾಡಿ ತಮ್ಮ ಅಧಿಕಾರ ಉಳಿಸಿಕೊಳ್ಳಬೇಕೆಂಬ ಆತುರದಲ್ಲಿ ಮತ್ತಷ್ಟು ಎಡವಟ್ಟುಗಳನ್ನು ಮಾಡಿಕೊಂಡಿದ್ದಾರೆ. ಸದನದಲ್ಲಿ ಬಹುಮತ ಸಾಬೀತುಪಡಿಸುವುದಕ್ಕೂ ಮೊದಲೇ  ಹಲವು ಆಡಳಿತಾತ್ಮಕ ಆದೇಶಗಳನ್ನು ಹೊರಡಿಸಿಬಿಟ್ಟಿದ್ದಾರೆ. ಆಯಕಟ್ಟಿನ ಸ್ಥಾನಗಳಲ್ಲಿದ್ದ ಹಲವು ಐಪಿಎಸ್ ಅಧಿಕಾರಿಗಳನ್ನು ಎತ್ತಂಗಡಿ ಮಾಡಿ ತಮಗೆ ಬೇಕಾದವರನ್ನು ಆ ಸ್ಥಾನಗಳಿಗೆ ತಂದುಕೊಂಡಿದ್ದಾರೆ. ಅಷ್ಟು ಮಾತ್ರವಲ್ಲ, ತಮ್ಮ ಕೈಗೆ ಸಿಗದೆ ತಪ್ಪಿಸಿಕೊಂಡು ರೆಸಾರ್ಟ್ ಯಾತ್ರೆಯಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ಶಾಸಕರು ತಂಗಿದ್ದ ರೆಸಾರ್ಟ್ ಗೆ ಒದಗಿಸಿದ್ದ ಪೊಲೀಸ್ ರಕ್ಷಣೆಯನ್ನು ಹಿಂತೆಗೆದುಕೊಂಡಿದ್ದಾರೆ. ಇದರ ಹಿಂದೆ ಯಡ್ಯೂರಪ್ಪ ಮತ್ತು ಅವರ ಪಕ್ಷದ ಲೆಕ್ಕಾಚಾರ ಏನಿತ್ತೋ ದೇವರೇ ಬಲ್ಲ. ಆದರೆ ಇದರ ಹಿಂದೆ ಏನೋ ಅಪಾಯವಿದೆ ಎಂದು ಭಾವಿಸಿದ ರೆಸಾರ್ಟ್ ಶಾಸಕರು ಈಗಲ್ಟನ್  ರೆಸಾರ್ಟ್ನಿಂದ ಪೇರಿ ಕಿತ್ತು ಸೀದಾ ಹೈದರಾಬಾದ್ ಕಡೆ ಗುಳೇ ಹೋಗಿದ್ದು  ಬೇರೆ ವಿಷಯ.


ಆದರೆ ಬಹುಮತ ಸಾಬೀತುಪಡಿಸುವ ಮೊದಲೇ ಇಂಥಾ ಆಡಳಿತಾತ್ಮಕ ಆದೇಶಗಳನ್ನು ಹೊರಡಿಸುವಂತಿಲ್ಲ ಎಂದು ಸುಪ್ರಿಂ ಕೋರ್ಟ್ ಕಿವಿ ಹಿಂಡಿ ಬುದ್ಧಿ ಹೇಳಿತು. ಈ ಆದೇಶದನ್ವಯ ವರ್ಗಾವಣೆ ಆದೇಶ ರದ್ದಾಗಿದ್ದು ಮಾತ್ರವಲ್ಲದೆ, ವಿಧಾನಸೌಧದ ಸಿಬ್ಬಂದಿ ಸಿಎಂ ಕಚೇರಿಗೆ ಬೀಗ ಜಡಿದಿದ್ದಾರೆ. ಈಗಾಗಲೇ ಹಲವು ನಕಾರಾತ್ಮಕ ದಾಖಲೆಗಳನ್ನು ಮಾಡಿರುವ ಯಡ್ಯೂರಪ್ಪನವರ ದಾಖಲೆಪಟ್ಟಿಗೆ ಈಗ ಹೊಸದೊಂದು ದಾಖಲೆ ಸೇರ್ಪಡೆಯಾದಂತಾಗಿದೆ. ದೇಶದ ಇತಿಹಾಸದಲ್ಲಿ ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ಕಚೇರಿಗೆ ಬೀಗ ಜಡಿಸಿಕೊಂಡ ನೂತನ ದಾಖಲೆ ಯಡ್ಯೂರಪ್ಪನವರಿಗೆ ಖಂಡಿತಾ ಬೇಕಿರಲಿಲ್ಲ.

Leave a Reply

Your email address will not be published.

Social Media Auto Publish Powered By : XYZScripts.com