Number game : ಕರ್ನಾಟಕದಲ್ಲಿ ಶಾ ಆಟ ನಡೆಯಲ್ಲ, ನಡೆಯಲೂ ಬಿಡುವುದಿಲ್ಲ – ಸಿದ್ದರಾಮಯ್ಯ..

“ಸರ್ವೋಚ್ಛ ನ್ಯಾಯಾಲಯದ ತನ್ನ ಇತಿಹಾಸದಲ್ಲಿ ಮೈಲುಗಲ್ಲು ತೀರ್ಪು ನೀಡಿದೆ. ಪ್ರಜಾಪ್ರಭುತ್ವ, ಸಂವಿಧಾನವನ್ನು ರಕ್ಷಣೆ ಮಾಡುವಂತ ಕರ್ತವ್ಯವನ್ನು ಅವರು ನಿರ್ವಹಿಸಿದ್ದಾರೆ,” ಎಂದು ಹೇಳಿದ ಸಿದ್ದರಾಮಯ್ಯ, “ಸಂವಿಧಾನದಲ್ಲಿ ರಾಜ್ಯಪಾಲರ ಪಾತ್ರ ಮಹತ್ವದ್ದು. ಸಂವಿಧಾನವನ್ನು ಎತ್ತಿ ಹಿಡಿಯುವ ಜವಾಬ್ದಾರಿ ಅವರಿಗೆ ಇರುತ್ತದೆ. ಯಾವುದಾದರೂ ಪಕ್ಷದ ಪರವಾಗಿ, ಯಾರದೇ ಪರವಾಗಿ ತೀರ್ಮಾನ ತೆಗೆದುಕೊಳ್ಳುವ ಕೆಲಸವನ್ನು ಅವರು ಮಾಡಬಾರದು,” ಎಂದು ಆಕ್ರೋಶ ವ್ಯಕ್ತಪಡಿಸಿದರು.

“2018ರ ಚುನಾವಣೆಯಲ್ಲಿ ಇಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರದೇ ಇದ್ದಾಗ, ನ್ಯಾಯಾಲಯದ ವಿಧಿ, ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಆಧಾರವಾಗಿಟ್ಟುಕೊಂಡು ರಾಜ್ಯಪಾಲರು ತೀರ್ಮಾನ ಮಾಡಬೇಕಾಗಿತ್ತು. ಆದರೆ ಕರ್ನಾಟಕದ ರಾಜ್ಯಪಾಲರು ಸಂವಿಧಾನದ ವಿಧಿ ವಿಧಾನಗಳನ್ನು ಗಾಳಿಗೆ ತೂರಿ, ಸುಪ್ರೀಂ ಕೋರ್ಟ್ ತೀರ್ಪು ಕಡೆಗಣಿಸಿ ಬಿಜೆಪಿ ಮತ್ತು ಕೇಂದ್ರ ಸರಕಾರದ ಬಾಲ ಬಡುಕರಂತೆ ನಡೆದುಕೊಂಡಿದ್ದಾರೆ,” ಎಂದು ಅವರು ವಾಗ್ದಾಳಿ ನಡೆಸಿದರು. “ಸ್ಪಷ್ಟವಾಗಿ ಈ ಮಾತನ್ನು ಯಾಕೆ ಹೇಳುತ್ತಿದ್ದೇನೆ ಅಂದರೆ, ನಾನು ಖರ್ಗೆ, ಅಜಾದ್, ಗೆಹ್ಲೋಟ್, ಪರಮೇಶ್ವರ್, ಮೊಯ್ಲಿಯವರು ಮೊದಲೇ ರಾಜ್ಯಪಾಲರ ಬಳಿಗೆ ಹೋಗಿ ಭಾರತೀಯ ಜನತಾ ಪಕ್ಷಕ್ಕೆ ಬಹುಮತ ಇಲ್ಲ. ಅವರು 104 ಮಾತ್ರ ಗೆದ್ದಿದ್ದಾರೆ. 222 ಸ್ಥಾನಕ್ಕೆ ಚುನಾವಣೆ ನಡೆದಿದ್ದು ಅವರಿಗೆ ಬಹುಮತಕ್ಕೆ 112 ಸ್ಥಾನಗಳು ಬೇಕು. ಅವರಿಗೆ ಅಷ್ಟು ಸ್ಥಾನಗಳು ಇಲ್ಲ. 104ಕ್ಕಿಂತ ಒಂದು ಸ್ಥಾನವೂ ಅವರ ಬಳಿ ಹೆಚ್ಚಿಗೆ ಇಲ್ಲ. ಪಕ್ಷೇತರರೂ ನಮ್ಮ ಜೊತೆಗೆ ಇದ್ದಾರೆ. ಹೀಗಾಗಿ ನಮಗೆ ಆಹ್ವಾನ ಮಾಡಬೇಕು ಎಂದು ಮೂರು ಬಾರಿ ರಾಜ್ಯಪಾಲರಿಗೆ ಮನವಿ ಮಾಡಿಕೊಂಡಿದ್ದೆವು,” ಎಂದು ವಿವರಿಸಿದರು.

“ಯಡಿಯೂರಪ್ಪ ನಮ್ಮ ಜೊತೆಗೆ 104 ಶಾಸಕರು ಮಾತ್ರ ಇದ್ದಾರೆ ಎಂದು ಹೇಳಿದಾಗಲೂ ಬೇಕೆಂದೇ ರಾಜ್ಯಪಾಲರು ಯಡಿಯೂರಪ್ಪನವರನ್ನು ಸರಕಾರ ರಚನೆಗೆ ಆಹ್ವಾನಿಸಿದ್ದಾರೆ. ಇದು ಸಂವಿಧಾನ ವಿರೋಧಿ ಮತ್ತು ಕಾನೂನು ವಿರೋಧಿ,” ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
ಆನೆ ನಡೆದಿದ್ದೇ ದಾರಿ ಎಂದು ಹೊರಟಿದ್ದಾರೆ’ ವಸ್ತು ಸ್ಥಿತಿ ಹೀಗಿದ್ದರೂ 7 ದಿನದ ಬದಲಿಗೆ ರಾಜ್ಯಪಾಲರು 15 ದಿನ ಸಮಯ ನೀಡಿದ್ದರು. ನರೇಂದ್ರ ಮೋದಿ ಮತ್ತು ಅಮಿತ್ ಶಾ ಹೇಳಿದ ರೀತಿ ರಾಜ್ಯಪಾಲರು ತೀರ್ಮಾನ ತೆಗೆದುಕೊಂಡಿದ್ದಾರೆ. ಇಲ್ಲದಿದ್ದಲ್ಲಿ ಈ ರೀತಿಯ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ನಾನು ಇದನ್ನು ಮತ್ತೊಮ್ಮೆ ಖಂಡಿಸುತ್ತಿದ್ದೇನೆ ಎಂದರು. ಯಾರೇ ಆಗಲಿ ಪ್ರಜಾಪ್ರಭುತ್ವವನ್ನು ಕೊಲೆ ಮಾಡುವ ಕೆಲಸ ಮಾಡಬಾರದು. ಮೋದಿ ಮತ್ತು ಶಾಗೆ ಸಂವಿಧಾನ ಪ್ರಜಾಪ್ರಭುತ್ವದ ಬಗ್ಗೆ ಗೌರವವಿಲ್ಲ. ಆನೆ ನಡೆದಿದ್ದೇ ದಾರಿ ಎಂದು ಹೊರಟಿದ್ದಾರೆ. ಇದು ಪ್ರಜಾಪ್ರಭುತ್ವ, ಸಂವಿಧಾನದ ಸ್ಪಷ್ಟ ಉಲ್ಲಂಘನೆ. ಅದಕ್ಕೇ ಸುಪ್ರೀಂ ಕೋರ್ಟ್ ನವರು ಈ ಆದೇಶ ನೀಡಿದ್ದಾರೆ ಎಂದು ಅವರು ವಿಶ್ಲೇಷಿಸಿದರು.

ಸರಿಯಾಗಿ ಕುದುರೆ ವ್ಯಾಪಾರ ಮಾಡು ‘ “ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಈ ರೀತಿ ಸಮಯ ನೀಡಿರುವ ಉದಾಹರಣೆಯೇ ಇಲ್ಲ. 7 ದಿನ ಕೇಳಿದರೆ 15 ದಿನ ನೀಡುತ್ತಾರೆ. ರಾಜ್ಯದ ರಾಜ್ಯಪಲಾರು ಬಿಜೆಪಿ ಜೊತೆ ಕೈಜೋಡಿಸಿದ್ದಾರೆ. ಮೋದಿ, ಅಮಿತ್ ಶಾ ಜೊತೆಗೆ ಮಾತಾಡಿಕೊಂಡು 15 ದಿನ ಕೊಟ್ಟಿದ್ದಾರೆ. ಯಡಿಯೂರಪ್ಪನವರಿಗೆ ಮೂರ್ಖ ನೀನು 7 ದಿನ ಕೇಳಿದ್ಯಾ, 15 ದಿನ ತೆಗೋ ಸರಿಯಾಗಿ ಕುದುರೆ ವ್ಯಾಪಾರ ಮಾಡು ಎಂದು ಸಮಯ ನೀಡಿದ್ದಾರೆ,” ಎಂದು ಅವರು ವ್ಯಂಗ್ಯವಾಡಿದರು. “ಬಿಜೆಪಿಯವರು ಜನಾರ್ದನ ರೆಡ್ಡಿ ಜೊತೆಗೆ ಏನು ಮಾತಾಡಿದ್ದಾರೆ, ಏನು ಹೇಳಿದ್ದಾರೆ ಎಂಬ ಬಗ್ಗೆ ಎಲ್ಲಾ ರೆಕಾರ್ಡಿಂಗ್ ಇದೆ. ಅದನ್ನು ಬಿಡುಗಡೆ ಮಾಡುತ್ತೇವೆ. ಈಗ ಬಿಡುಗಡೆ ಮಾಡುವುದಿಲ್ಲ. ಈಗಲೇ ಬಿಡುಗಡೆ ಮಾಡಿದರೆ ವಿಷಯಾಂತರ ಆಗುತ್ತದೆ ಈಗ ಬಿಡುಗಡೆ ಮಾಡುವುದಿಲ್ಲ,” ಎಂದು ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಹೇಳಿದರು.

ಸುಪ್ರೀಂ ಕೋರ್ಟ್ ನಿಂದ ಕಪಾಳ ಮೋಕ್ಷ ಅನೈತಿಕವಾಗಿ ಸರಕಾರ ರಚನೆ ಮಾಡಲು ಹೋಗಿದ್ದಕ್ಕೆ ಇಂದು ಸುಪ್ರೀಂ ಕೋರ್ಟ್ ಕಪಾಳ ಮೋಕ್ಷ ಮಾಡಿದೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ಇದೇ ವೇಳೆ ಪತ್ರಕರ್ತರು ಆನಂದ್ ಸಿಂಗ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಆನಂದ್ ಸಿಂಗ್ ದೆಹಲಿಯಲ್ಲಿದ್ದಾರೆ. ನಮ್ಮ ಜೊತೆಗೆ ಇದ್ದಾರೆ. ಅವರು ಬರುತ್ತಾರೆ. ಪ್ರತಾಪ್ ಗೌಡ ಪಾಟೀಲ್ ನಮಗೆ ಸಹಿ ಮಾಡಿದ್ದಾರೆ. 15ನೇ ತಾರೀಕು ಬಂದು ಸಹಿ ಮಾಡಿ ಹೋಗಿದ್ದಾರೆ. ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಆನಂದ್ ಸಿಂಗ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದು ಬಿಜೆಪಿ ಸರಕಾರದ ನಾಚಿಕೆಗೇಡು ನಡೆ. ಅಮಿತ್ ಶಾ ಅವರು ಬೇರೆ ರಾಜ್ಯದಲ್ಲಿಯೂ ಇದೇ ಬೆದರಿಸುವ ತಂತ್ರ ಮಾಡಿದ್ದಾರೆ,” ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಿಸಿದ್ದಾರೆ. ಅಮಿತ್ ಶಾ ಅವರ ಆಟ ಕರ್ನಾಟಕದಲ್ಲಿ ನಡೆಯುವುದಿಲ್ಲ; ನಡೆಯಲೂ ಬಿಡುವುದಿಲ್ಲ ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಗುಡುಗಿದ್ದಾರೆ.

Leave a Reply

Your email address will not be published.