Number game : ಸ್ಪೀಕರ್‌ ಆಗಿ ಬೋಪಯ್ಯ ನೇಮಕ : ಪ್ರಶ್ನಿಸಿ ಸುಪ್ರೀಂಗೆ ಕಾಂಗ್ರೆಸ್ ….

ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ಬಿಜೆಪಿಯ ಕೆಜಿ ಬೋಪಯ್ಯರನ್ನು ರಾಜ್ಯಪಾಲ ವಜೂಭಾಯಿ ವಾಲಾ ನೇಮಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಅತ್ಯಂತ ಹಿರಿಯ, 8 ಬಾರಿಯ ಶಾಸಕ ಆರ್. ವಿ. ದೇಶಪಾಂಡೆಯವರನ್ನು ಬದಿಗೊತ್ತಿ 5 ಬಾರಿಯ ಶಾಸಕ ಕೆಜಿ ಬೋಪಯ್ಯರನ್ನು ನೇಮಿಸಿದ್ದಕ್ಕೆ ಕಾಂಗ್ರೆಸ್ ಆಕ್ರೋಶಗೊಂಡಿದ್ದು ಸುಪ್ರೀಂ ಕೋರ್ಟ್ ಗೆ  ಈ ಸಂಬಂಧ ದೂರು ನೀಡಲು ನಿರ್ಧರಿಸಿದೆ.

ಈ ಸಂಬಂಧ ದೆಹಲಿಯಲ್ಲಿ ಮಾತನಾಡಿರುವ ಕಾಂಗ್ರೆಸ್ ನಾಯಕ ಮತ್ತು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, “ಬಿಜೆಪಿ ನಡೆ ನಿಯಮಾವಳಿಗೆ ವಿರುದ್ಧವಾಗಿದೆ. ಸಾಮಾನ್ಯವಾಗಿ ಅತ್ಯಂತ ಹಿರಿಯ ನಾಯಕರು ಈ ಹುದ್ದೆಯನ್ನು ಅಲಂಕರಿಸಬೇಕು,” ಎಂದು ಬೋಪಯ್ಯ ನೇಮಕಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಉಮೇಶ್ ಕತ್ತಿ ಮತ್ತು ಕಾಂಗ್ರೆಸಿನ ಆರ್.ವಿ. ದೇಶಪಾಂಡೆ 8ನೇ ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಆದರೆ ಇವರನ್ನೆಲ್ಲಾ ಬದಿಗೊತ್ತಿ ರಾಜ್ಯಪಾಲರು 5 ಬಾರಿ ಶಾಸಕ ಕೆಜಿ ಬೋಪಯ್ಯರನ್ನು ಹಂಗಾಮಿ ಸಭಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ.  ಶನಿವಾರ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಬಿಜೆಪಿಗೆ ನೆರವು ನೀಡುವ ಉದ್ದೇಶದಿಂದ ರಾಜ್ಯಪಾಲರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದೆ.

ಬೋಪಯ್ಯ ಅವರು ಪಕ್ಷಪಾತಿ ಧೋರಣೆ ಅನುಸರಿಸುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದೆ.
ರಾಜ್ಯಪಾಲರ ನಿರ್ಧಾರದ ಕುರಿತು ಟ್ವಿಟ್ಟರ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಶಾಸಕ ದಿನೇಶ್ ಗುಂಡೂರಾವ್, ಇದು ಗೌರವಾನ್ವಿತ ರಾಜ್ಯಪಾಲರ ಆಘಾತಕಾರಿ ನಿರ್ಧಾರವಾಗಿದೆ. ಅತಿ ಹಿರಿಯ ಶಾಸಕರನ್ನು ಹಂಗಾಮಿ ಸ್ಪೀಕರ್‌ ಆಗಿ ನೇಮಿಸಬೇಕು ಎಂದು ಸಂವಿಧಾನ ಹೇಳುತ್ತದೆ. ಅದರ ಪ್ರಕಾರ ಆರ್‌.ವಿ. ದೇಶಪಾಂಡೆ ಅವರನ್ನು ನೇಮಿಸಬೇಕಿತ್ತು. ರಾಜ್ಯಪಾಲ ವಜೂಭಾಯಿ ವಾಲಾ ಅವರು ಬಿಜೆಪಿ ಏಜೆಂಟರಂತೆ ವರ್ತಿಸುತ್ತಿರುವುದು ಖೇದಕರ ಸಂಗತಿ ಎಂದು ಗುಂಡೂರಾವ್ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com