Karnataka Election 2018 : ಬದಲಾದ ಟ್ರೆಂಡ್ಸ್ ಅರಳಿದ ಕಮಲ… ಎಡುವಿದ ಕಾಂಗ್ರೆಸ್…

2018 ರ ಚುನಾವಣೆ ಫಲಿತಾಂಶ ಅತಂತ್ರವಾಗಿದೆ, ತಂತ್ರಗಳು ಆರಂಭವಾಗಿವೆ. ರೆಸಾರ್ಟ್ ರಾಜಕಾರಣ, ಕುದುರೆ ವ್ಯಾಪಾರಕ್ಕೆ ವೇದಿಕೆ ಸಜ್ಜುಗೊಳ್ಳುತ್ತಿದೆ, ಕೇಸರಿ ಪಕ್ಷದ ಅಧ್ಯಕ್ಷ ಅಮಿತ್ ಶಾ ಅಖಾಡಕ್ಕೆ ಇಳಿದಾಗಿದೆ. ಪ್ರಧಾನ ಮಂತ್ರಿ ಸ್ಥಾನವನ್ನೇ ಕೆಳ ಮಟ್ಟಕ್ಕೆ ಇಳಿಸಿಕೊಂಡಿರುವ, ಸುಳ್ಳುಗಳನ್ನೇ ಸತ್ಯವೆಂದು ನಂಬಿಸುವ ಜಾದುಗಾರ ನರೇಂದ್ರ ಮೋದಿ ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಸರ್ಕಾರ ರಚನೆ ಮಾಡುವುದರಿಂದ ಹಿಂದೆ ಸರಿಯುವುದಿಲ್ಲ ಎಂದು ತೊಡೆ ತಟ್ಟಿದ್ದಾರೆ.

ಜನರಿಂದ ಜನರಿಗೋಸ್ಕರ ಜನರೇ ಸೇರಿ ಕೊಳ್ಳೆ ಹೊಡೆಯುವ ಪ್ರಜಾಪ್ರಭುತ್ವದಲ್ಲಿ ನಡೆಯುವುದು ನಂಬರ್ ಗೇಮ್ ಆದ್ರೂ ಸಹ ಸಂವಿಧಾನಿಕ ಸ್ಥಾನಗಳಾದ ರಾಜಭವನದ ಮೂಲಕ ಅಧಿಕಾರ ಪಡೆಯುವ ಹುನ್ನಾರ ಭಾರತೀಯ ಜನತಾ ಪಕ್ಷದ್ದಾಗಿದೆ.

ತಳ ಸಮುದಾಯದ, ಬಹುಜನರ ಹಿತ ಕಾಯಲು ಹೊರಟ ಸಿದ್ದರಾಮಯ್ಯ ಇನ್ನಿಲ್ಲದಂತೆ ನೆಲಕಚ್ಚಿದ್ದಾರೆ. ಸಮಾಜದ ಮೇಲ್ವರ್ಗದ ಜನರನ್ನು ಬಿಟ್ಟು ಕೇವಲ ಅಹಿಂದ ತಳ ಸಮುದಾಯದ ಮತ್ತು ಅಲ್ಪಸಂಖ್ಯಾತರ ನಂಬಿ ಚುನಾವಣೆ ಗೆಲ್ಲಲಾಗುವುದಿಲ್ಲ ಎಂಬ ಕಟು ಸತ್ಯ ಮತ್ತೊಮ್ಮೆ ಸಾಬೀತಾಗಿದೆ, ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿದ್ದ ಸಿದ್ದರಾಮಯ್ಯ ಜಾರಿಗೆ ತಂದ ಅನ್ನಭಾಗ್ಯ ಅವರ ಕೈ ಹಿಡಿಯಲಿಲ್ಲ, ಜನಪ್ರಿಯ ಇಂದಿರಾ ಕ್ಯಾಂಟೀನ್, ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ಮತ್ತು ಕನ್ನಡದ ಅಸ್ಮಿತೆ ಯಾವುದೂ ಕೂಡ ಅಹಿಂದ ನಾಯಕನನ್ನು ಕೈ ಹಿಡಿಯಲಿಲ್ಲ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಮರಳಿ ಅಧಿಕಾರ ತಂದುಕೊಡಲಿಲ್ಲ.

ಹಲವು ಕಾರಣಗಳಿಗೆ ಮಹತ್ವ ಪಡೆದುಕೊಂಡಿದ್ದು 2018ರ ಚುನಾವಣೆಯಲ್ಲಿ ಕೋಮು ಶಕ್ತಿಗಳನ್ನು ಹಿಂದಿಕ್ಕುವಲ್ಲಿ ಕನ್ನಡ ನಾಡು ಸಂಪೂರ್ಣ ವಿಫಲವಾಗಿದೆ. ಚುನಾವಣೆ ಹತ್ತಿರ ಬಂದಾಗ ಲಿಂಗಾಯತ ಪ್ರತ್ಯೇಕ ಧರ್ಮದ ದಾಳ ಉರುಳಿಸಿ ಯುದ್ಧ ಗೆಲ್ಲುತ್ತೇವೆ ಎಂಬ ಹುಮ್ಮಸ್ಸಿನಲ್ಲಿ ಹೊರಟಿದ್ದ ಕಾಂಗ್ರೆಸ್ ಗಾಡಿ ಹಳಿ ತಪ್ಪರದ್ದೆಲ್ಲಿ ಅಂತ ನೋಡಲು ಹೊರಟರೆ ಕಾಣುವ ಸಂಗತಿಗಳು ಇಲ್ಲಿವೆ.

ಕರಾವಳಿ ಕರ್ನಾಟಕ

2013                                                                                                      2018

ಬಿಜೆಪಿ    ಕಾಂಗ್ರೆಸ್     ಜೆಡಿಎಸ್     ಇತರರು                             ಬಿಜೆಪಿ    ಕಾಂಗ್ರೆಸ್     ಜೆಡಿಎಸ್     ಇತರರು

03           13              00           03                                      13           03                           00           00

2013ರಲ್ಲಿ ಬಲಪಂಥೀಯ ಕೋಮುವಾದದ ಪ್ರಯೋಗ ಶಾಲೆಯಾದ ಕರಾವಳಿಯಲ್ಲಿ, ಹದಿಮೂರು ಸ್ಥಾನಗಳನ್ನು ಗೆದ್ದ ಕಾಂಗ್ರೆಸ್, ಈಗ ಕೇವಲ ಮೂರು ಸ್ಥಾನಗಳಿಗೆ ಕುಸಿದಿದೆ. ಎಲ್ಲಾ ಸಮೀಕ್ಷೆಗಳಲ್ಲಿ ಮುಂದಿದ್ದ ಹಲವು ನಾಯಕರು ಹೇಳಿ ಹೆಸರು ಇಲ್ಲದೇ ಕೊಚ್ಚಿಹೋಗಿದ್ದಾರೆ. ದುರ್ಬಲ ಅಭ್ಯರ್ಥಿಗಳ ಎದುರು ಕಾದಿರ್ ಬಿಟ್ಟರೆ ಉಳಿದ  ಘಟಾನುಘಟಿಗಳು ಮಂತ್ರಿಗಳು ಮಂಡಿಯೂರಿದ್ದಾರೆ.  ಮೇಲ್ವರ್ಗದ ಜನರ ಪೋಲರೈಜೇಶನ್, ಇದನ್ನು ಅರಿಯದ ತಳಸಮುದಾಯ ಅವರ ಸಂಚಿಗೆ ಬಲಿಯಾಗಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಶಕ್ತಿಶಾಲಿ ಬಂಟ ಸಮುದಾಯದ ಅಭ್ಯರ್ಥಿಗಳಿಗೆ ಮೋಗವೀರ ಮತ್ತು ಪೂಜಾರ್ ಸಮುದಾಯದ ಸಂಪೂರ್ಣ ಬೆಂಬಲ ಮತ್ತು ಆರೆಸ್ಸೆಸ್ ನ ಕಾರ್ಯತಂತ್ರ ಜನಪರವಾಗಿರುವ ಅಭಯಚಂದ್ರ ಜೈನ್ ಮೋಹಿನುದ್ದಿನ ಭಾವಾ, ಲೋಬೋ ಮತ್ತು ರಮಾನಾಥ ರೈರನ್ನು ಸೋಲಿಸುವಲ್ಲಿ ಯಶಸ್ವಿಯಾಗಿದೆ.

 

 

ಮಧ್ಯ ಕರ್ನಾಟಕ

2013                                                                                                       2018

ಬಿಜೆಪಿ    ಕಾಂಗ್ರೆಸ್     ಜೆಡಿಎಸ್     ಇತರರು                             ಬಿಜೆಪಿ    ಕಾಂಗ್ರೆಸ್     ಜೆಡಿಎಸ್     ಇತರರು

02           18                     10 02                                           21           07                           04           00

ಈ ಬಾರಿ ಭಾರತೀಯ ಜನತಾ ಪಕ್ಷ ನೂರರ ಗಡಿ ದಾಟಲು ಮಹತ್ವದ ಕೊಡುಗೆ ನೀಡಿದ ಭಾಗವೆಂದರೆ ಅದು ಮಧ್ಯ ಕರ್ನಾಟಕ. 2013ರಲ್ಲಿ ಎರಡು ಸ್ಥಾನಕ್ಕೆ ಕುಸಿದಿದ್ದ ಕೇಸರಿ ಪಕ್ಷ 2018ಕ್ಕೆ 21ಕ್ಕೆ ಲಾಂಗ್ಜಂಪ್ ಮಾಡಿದೆ. ಕಾಂಗ್ರೆಸ್ 18 ರಿಂದು ಏಳು ಕ್ಕೆ ಕುಸಿದರೆ ಜೆಡಿಎಸ್ ಹತ್ತರಿಂದ 4ಕ್ಕೆ ಇಳಿದಿದೆ. ಆಂಜನೇಯ ಎಸ್ ಎಸ್ ಮಲ್ಲಿಕಾರ್ಜುನ್ ಎಂಬ ನಿರುಪಯುಕ್ತ ಸಚಿವರ ವೈಫಲ್ಯ ಈ ಭಾಗದ ಕೈ ನಾಯಕರ ದರ್ಪ ಲಿಂಗಾಯತರ ಪೋಲರೈಜೇಶನ್ ಮತ್ತು ಕೇಸರಿ ಪಕ್ಷಗಳ ಪರ ಮಠಗಳ ವಕಾಲತ್ತು ಜನ ಕೈ ಪಾಳಯದಿಂದ ಕಮಲ ಕಡೆ ಜಾರುವಂತೆ ಮಾಡಿತು …

ಹಳೇ ಮೈಸೂರು

2013                                                              2018

ಬಿಜೆಪಿ    ಕಾಂಗ್ರೆಸ್     ಜೆಡಿಎಸ್     ಇತರರು                             ಬಿಜೆಪಿ    ಕಾಂಗ್ರೆಸ್     ಜೆಡಿಎಸ್     ಇತರರು

05           24                21            05                                       11           17                           25           02

ಮುಖ್ಯಮಂತ್ರಿಯವರ ತವರು ಭಾಗದಲ್ಲಿ ಕಾಂಗ್ರೆಸ್ ಗೆ 2-13 ಕ್ಕಿಂತ ಹೆಚ್ಚಿನ ಬಲ ಬರಬೇಕಾಗಿತ್ತು ಆದರೆ ಅದು ಇಪ್ಪತ್ತ ನಾಲ್ಕರಿಂದ ಹದಿನೇಳಕ್ಕೆ ಕುಸಿತ ಕಂಡಿದೆ ಇಲ್ಲಿ ಉಪ ಚುನಾವಣೆಯಲ್ಲಿ ಗೆದ್ದ ಎರಡು  ಗೆದ್ದ ಎರಡು ಕ್ಷೇತ್ರಗಳು ಸೇರಿದಂತೆ ಮಹದೇವಪ್ಪ, ಜಯಚಂದ್ರ, ಮಂಜು ರಂತಹ ಸಚಿವರು ಜೊತೆಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋತಿದ್ದಾರೆ. ಇದಕ್ಕೆ ಸಮಾಜವಾದಿ ಸಿದ್ದರಾಮಯ್ಯನವರ ಪುತ್ರ ವ್ಯಾಮೋಹ ಒಂದು ಕಾರಣವಾದರೆ, ಕೆಳಜಾತಿಯ ನಾಯಕತ್ವದ ವಿರುದ್ಧ ಕುದಿಯುತ್ತಿರುವ ಲಿಂಗಾಯಿತ ಮತ್ತು ಒಕ್ಕಲಿಗ ಸಮುದಾಯಗಳು ಒಂದಾದ ಸಮೀಕರಣವೂ ಇನ್ನೊಂದು ಕಾರಣ,

 

ಮಂಬೈ ಕರ್ನಾಟಕ

2013                                                                                           2018

ಬಿಜೆಪಿ    ಕಾಂಗ್ರೆಸ್     ಜೆಡಿಎಸ್     ಇತರರು                             ಬಿಜೆಪಿ    ಕಾಂಗ್ರೆಸ್     ಜೆಡಿಎಸ್     ಇತರರು

13             31                01        02                                       30               17          02           00

ಕರಾವಳಿ ಕೋಮುವಾದದ ಪ್ರಯೋಗಶಾಲೆ, ಆದರೆ ಮುಂಬೈ ಕರ್ನಾಟಕ ಪ್ರಾಂತ್ಯ ಕೇಸರಿ ಪಕ್ಷದ ಭದ್ರಕೋಟೆ.  ಲಿಂಗಾಯತರ ಪ್ರಾಬಲ್ಯವಿರುವ ಇಲ್ಲಿ ಕಳೆದ ಬಾರಿ ಕಾಂಗ್ರೆಸ್ 31 ಸ್ಥಾನ ಗೆದ್ದು ಹೊಸ ಅಲೆ ಹುಟ್ಟು ಹಾಕಿತ್ತು. ಈ ಬಾರಿ ಅದು ಕೇವಲ ಹದಿನೇಳಕ್ಕೆ ಕುಸಿತ ಕಂಡಿದೆ ಬಿಜೆಪಿ ಹದಿಮೂರರಿಂದ ಮೂವತ್ತಕ್ಕೆ ಏರಿಕೆ ಕಂಡಿದೆ ಲಿಂಗಾಯತ ಪ್ರತ್ಯೇಕ ಧರ್ಮದ ಹೊಡೆತ ಕೈ ಪಕ್ಷಕ್ಕೆ ಬಿದ್ದಿದೆ.  ಮಹಾದಾಯಿ ವಿಚಾರವನ್ನು ಬಳಸಿಕೊಳ್ಳುವಲ್ಲಿ ಕೈ ನಾಯಕರ ವೈಫಲ್ಯ ಜೊತೆಗೆ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಮುಂಚುಣಿಯಲ್ಲಿದ್ದ ಮಠಗಳ ತಟಸ್ಥ ನಿಲುವು ಕೈ ಪಕ್ಷಕ್ಕೆ ಭಾರೀ ಹೊಡೆತ ನೀಡಿದೆ. ಪಂಚಪೀಠಗಳ ಬಹಿರಂಗ ಕಾರ್ಯಾಚರಣೆ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಹೊಡೆತ ನೀಡಿದೆ…

ಹೈದ್ರಾಬಾದ್ ಕರ್ನಾಟಕ

2013                                                                                                   2018

ಬಿಜೆಪಿ    ಕಾಂಗ್ರೆಸ್     ಜೆಡಿಎಸ್     ಇತರರು                             ಬಿಜೆಪಿ    ಕಾಂಗ್ರೆಸ್     ಜೆಡಿಎಸ್     ಇತರರು

05             23                 05              07                             15              21                        04           00

ಕಾಂಗ್ರೆಸ್ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದಿಂದ ಹೈದರಾಬಾದ್ ಕರ್ನಾಟಕದಲ್ಲಿ ಕೈ ಪಕ್ಷಕ್ಕೆ ಭಾರೀ ಹೊಡೆತ ಬಿದ್ದಿಲ್ಲ. ಕೇವಲ ಎರಡು ಸ್ಥಾನಗಳನ್ನು ಕಳೆದುಕೊಂಡಿದೆ ಆದರೆ ಕೆಜೆಪಿ ಮತ್ತು ಬಿಅಸ್ ಆರ್ ಪಕ್ಷಗಳಿಂದ ಹರಿದು ಹಂಚಿ ಹೋಗಿದ್ದ ಸ್ಥಾನಗಳನ್ನು ಮರಳಿ ಪಡೆದ ಬಿಜೆಪಿ ಪಕ್ಷ ಐದು ಸ್ಥಾನಗಳಿಂದ ಹದಿನೈದಕ್ಕೆ ತನ್ನ ಬಲವನ್ನು ಹೆಚ್ಚಿಸಿಕೊಂಡಿದೆ .…ಇಲ್ಲಿಯೂ ಸಹ ಮೇಲ್ಜಾತಿಗಳ ಒಂದುಗೂಡುವಿಕೆಯ ಮುಖ್ಯ ಪರಿಣಾಮ ಬೀರಿದೆ ..

ಬೆಂಗಳೂರು ಮಹಾನಗರ

2013                                                                                                2018

ಬಿಜೆಪಿ    ಕಾಂಗ್ರೆಸ್     ಜೆಡಿಎಸ್     ಇತರರು                             ಬಿಜೆಪಿ    ಕಾಂಗ್ರೆಸ್     ಜೆಡಿಎಸ್     ಇತರರು

02           18                 10         02                                           11           13         02           00

ಇಡೀ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ಏನಾದರೂ ಹೆಚ್ಚಿನ ಬಲ ಬಂದಿದ್ದರೆ ಅದು ಮಹಾನಗರದಲ್ಲಿ ಮಾತ್ರ.. ಕಳೆದ ಬಾರಿ ಕಾಂಗ್ರೆಸ್ ಪಕ್ಷದಲ್ಲಿ ಹದಿಮೂರು ಸ್ಥಾನಗಳನ್ನು ಗೆದ್ದುಕೊಂಡಿತ್ತು ಈ ಬಾರಿಯೂ ಕೇವಲ ಇಪ್ಪತ್ತಾರು ಸ್ಥಾನಗಳಲ್ಲಿ ಚುನಾವಣೆ ನಡೆದರೂ ಅದರಲ್ಲಿ ಹದಿಮೂರು ಸ್ಥಾನವನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.ಕಡಿಮೆ ಪ್ರಮಾಣದ ವೋಟಿಂಗ್ ಸಹ ಕಾಂಗ್ರೆಸ್ ಗೆಲುವನ್ನು ತಡೆಯುವಲ್ಲಿ ವಿಫಲವಾಗಿದೆ. ನಗರದ ಜನರು, ಮಧ್ಯಮ ವರ್ಗದವರು ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ಕೊಡುತ್ತಾರೆ ಎಂಬ ಈವರೆಗಿನ ನಂಬಿಕೆಯನ್ನು ಈ ಇಲೆಕ್ಷನ್ ಸುಳ್ಳು ಮಾಡಿದೆ. ಇಲ್ಲಿ ಭಾರತೀಯ ಜನತಾ ಪಕ್ಷ ಕೇವಲ ಹನ್ನೊಂದು ಸ್ಥಾನಗಳನ್ನು ಗೆದ್ದರೆ, ಜೆಡಿಎಸ್ ಕೇವಲ ಎರಡು ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.

ಒಟ್ಟಾರೆ ಕರ್ನಾಟಕದ ಚುನಾವಣಾ ಫಲಿತಾಂಶವನ್ನು ಹೀಗೆ ವಿಶ್ಲೇಷಿಸಬಹುದು. 1. ಕರ್ನಾಟಕ ಸರಕಾರದ ಕಳೆದ ಐದು ವರ್ಷಗಳ ಸಫಲತೆ ಮತ್ತು ವೈಫಲ್ಯಗಳು ಜನರ ಆದ್ಯತೆಯೇ ಆಗಿಲ್ಲ. ಕಾಂಗ್ರೆಸ್ ನೇತೃತ್ವದ ಸರಕಾರ ಹಗರಣಗಳಿಲ್ಲದೆ, ಭ್ರಷ್ಟಾಚಾರದ ಪ್ರಕರಣಗಳಿಲ್ಲದೆ, ಜಾರಿ ಮಾಡಿದ ಹಲವು ಜನಪ್ರಿಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನ ಪರಾಮರ್ಶೆ ಮಾಡಲು ಹೋಗಿಲ್ಲ. 2. ದೇಶದ ವರ್ತಮಾನದ ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ ಸನ್ನಿವೇಶಗಳು ಜನರ ಮೇಲೆ ಯಾವ ಪರಿಣಾಮ ಬೀರಿಲ್ಲ. 3. ಹಿಂದುಳಿದ ಸಮುದಾಯಕ್ಕೆ ಸೇರಿದ ಒಬ್ಬ ಮನುಷ್ಯ ಮುಖ್ಯಮಂತ್ರಿಯಾಗಿ ಐದು ವರ್ಷ ಪೂರೈಸಿದ್ದು ಮತ್ತು ಆತ ಜನಪ್ರಿಯನಾಗಿದ್ದು ಹಲವು ಪಾಳೇಗಾರಿ ಮನಸ್ಥಿತಿಯ ಜನಸಮುದಾಯಗಳಿಗೆ ಇರಸುಮುರುಸು ಉಂಟು ಮಾಡಿತ್ತು. 4. ಲಿಂಗಾಯ್ತ ಪ್ರತ್ಯೇಕ ಧರ್ಮ ಮತ್ತು ಒಳಮೀಸಲಾತಿ ವಿಷಯಗಳು ಭೂತಾಕಾರ ತಾಳಿ ಜನರ ಮನಸ್ಸಿನಾಳಕ್ಕಿಳಿದವು. ದಲಿತರನ್ನು, ಶೂದ್ರರನ್ನು ನಾಯಿ ನರಿಗಳಿಗೆ ಹೋಲಿಸದ್ದು, ಮುಸ್ಲಿಮರ ಓಟನ್ನೇ ನಿರಾಕರಿಸಿದ್ದು, ಬೆಂಕಿ ಹಚ್ಚುವ, ದಾಂದಲೆ ಮಾಡುತ್ತೇವೆಂದ ಪಕ್ಷಗಳ ಗುಂಡಾ ವರ್ತನೆಗಳು ಜನರನ್ನು ಒಂದಿಂಚೂ ಕದಲಿಸಲಿಲ್ಲ. 5. ರಾಜ್ಯದ ಎರಡು ಪ್ರಬಲ ಜಾತಿಗಳು, ಮುಖ್ಯಮಂತ್ರಿಯಾದರೆ ಅದು `ನಮ್ಮ’ ಸಮುದಾಯದವರೇ ಆಗಬೇಕು ಎಂದು ಹಠ ಹಿಡಿದವರಂತೆ ಹಳೆಮೈಸೂರು ಮತ್ತು ಉತ್ತರ ಕರ್ನಾಕಟದಲ್ಲಿ ಓಟು ಮಾಡಿದವು. ಈ ಪ್ರಬಲ ಸಮುದಾಯಗಳ ಕುರುಡು ನಡೆಯು ಚುನಾವಣೆಯನ್ನು ಮತ್ತೆಲ್ಲಿಗೋ ನಡೆಸಿಕೊಂಡು ಹೋಯಿತು. 6. ಅತಂತ್ರ ಫಲಿತಾಂಶ ಬಂದಿದೆ. ಮತ್ತೆ ರಾಜ್ಯದ ಪ್ರಬಲ ಜಾತಿಗಳ ರಾಜಕಾರಣಿಗಳು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸ್ಥಾನಗಳನ್ನು ಹಂಚಿಕೊಳ್ಳುವ ಲೆಕ್ಕಾಚಾರದಲ್ಲಿ ತೊಡಗಿವೆ. ಈ ಚುನಾವಣೆ ಮತ್ತೆ ಪ್ರಬಲ ಜಾತಿಗಳ ದೃವೀಕರಣಕ್ಕೆ ದಾರಿ ಮಾಡಿಕೊಟ್ಟಿಡಿದ್ದನ್ನು ಬಿಟ್ಟರೆ, ಜಾತ್ಯಾತೀತ ಪ್ರಜಾಪ್ರಭುತ್ವದ ಸಾಧ್ಯತೆಯನ್ನು ನಾಶ ಮಾಡಿದೆ. ಮರೆತಿದ್ದೆ, ಈ ಚುನಾವಣಾ ಫಲಿತಾಂಶ 24/7 ಟಿವಿ ನ್ಯೂಸ್ ಚಾನಲ್ ಗಳಿಗೆ ಯಥೇಚ್ಚ ಆಹಾರವನ್ನು ತಿಂಗಳುಗಟ್ಟಲೆ ತಿನ್ನಲು ಮತ್ತು ಮೆಲುಕು ಹಾಕಲು ಉತ್ಪಾದನೆ ಮಾಡಿಕೊಟ್ಟಿದೆ.

ಸು – NIL

Leave a Reply

Your email address will not be published.

Social Media Auto Publish Powered By : XYZScripts.com