ಕುಮಾರಸ್ವಾಮಿ ಜುಟ್ಟು, ಯಡಿಯೂರಪ್ಪನ ಕನಸು ಈಗ ರಾಜ್ಯಪಾಲರ ಬುಟ್ಟಿಯಲ್ಲಿ…..

ಕರ್ನಾಟಕ ಚುನಾವಣೆ ಫಲಿತಾಂಶ ಹೊರಬಂದಿದ್ದು. ಅತಂತ್ರ ವಿಧಾನಸಭೆ ಸೃಷ್ಠಿಯಾಗಿದೆ. ಕಾಂಗ್ರೆಸ್ ಜೆಡಿಎಸ್ ಮೈತ್ರಿ  ಉಂಟಾಗಿದ್ದು, ಸರ್ಕಾರ ರಚನೆ ಕಸರತ್ತು ಮುಂದುವರೆದಿದೆ.
15ನೇ ವಿಧಾನಸಭೆಗಾಗಿ ಮೇ 12ರಂದು ಚುನಾವಣೆ ನಡೆದಿದ್ದು, ಮೇ 15ರಂದು ಫಲಿತಾಂಶ ಹೊರಬಂದಿದೆ. ಕಾಂಗ್ರೆಸ್ ಜತೆ ಮೈತ್ರಿಗೆ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಸಮ್ಮತಿಸಿದ್ದಾರೆ. ಕರುನಾಡಲ್ಲಿ ಕುಮಾರ ಪರ್ವ ಆರಂಭವಾಗಲು ದಿನಗಣನೆ ನಡೆದಿದೆ. ಈ ನಡುವೆ ಬಿಜೆಪಿ ಕೂಡಾ ಅತಿದೊಡ್ಡ ಪಕ್ಷವಾಗಿರುವುದರಿಂದ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಮುಂದಾಗಿದೆ. ಈ ಸಂದರ್ಭದಲ್ಲಿ ರಾಜ್ಯಪಾಲ ವಜುಭಾಯಿ ವಾಲ ಮುಂದಿರುವ  ಆಯ್ಕೆಗಳು ಇಲ್ಲಿವೆ…

ಈಗ 222 ಕ್ಷೇತ್ರಗಳ ಫಲಿತಾಂಶ ಇಲ್ಲಿದೆ
* ಬಲಾಬಲ 222/224: ಬಿಜೆಪಿ 104, ಕಾಂಗ್ರೆಸ್ 78, ಜೆಡಿಎಸ್ 38, ಇತರೆ 2
* ಅಧಿಕಾರ ಸ್ಥಾಪನೆಗೆ ಬೇಕಾದ ಸಂಖ್ಯೆ : 112

ವಜುಭಾಯಿ ವಾಲ  ಮುಂದಿರುವ ಆಯ್ಕೆ- 01

ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ)ಕ್ಕೆ ಸರ್ಕಾರ ರಚನೆ ಮಾಡಲು ಅವಕಾಶ ನೀಡಬಹುದು.
ಸರ್ಕಾರ ರಚನೆ ಮಾಡಿ, ಬಹುಮತ ಸಾಬೀತುಪಡಿಸುತ್ತೇವೆ ಎಂದು ಬಿಜೆಪಿಯ ಸಿಎಂ ಅಭ್ಯರ್ಥಿ, ಶಿಕಾರಿಪುರದ ಶಾಸಕ ಬಿಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ.
ತಮ್ಮ ಬಳಿ 112 ಶಾಸಕರಿದ್ದಾರೆ ಎಂದು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡಬೇಕಾಗುತ್ತದೆ. ಇದು ಒಮ್ಮತವಾದರೆ, ಸರ್ಕಾರ ರಚಿಸಲು ಸೂಚಿಸಬಹುದು. ನಿಗದಿತ ಅವಧಿಯಲ್ಲಿ ಬಹುಮತ ಸಾಬೀತು ಪಡಿಸಬೇಕಾಗುತ್ತದೆ. ಇದು ಕುದುರೆ ವ್ಯಾಪರಾಕ್ಕೆ ದಾರಿ ಮಾಡಿಕೊಡುತ್ತದೆ.

 ಆಯ್ಕೆ 02

ಭಾರತೀಯ ಜನತಾ ಪಕ್ಷ ಕ್ಕೆ ಸರ್ಕಾರ ರಚನೆ ಮಾಡಲು ಅವಕಾಶ ನೀಡಿದರೂ, ಬಹುಮತ ಸಾಬೀತುಪಡಿಸಲು ಬೇಕಾದ ಸಂಖ್ಯೆ ಇಲ್ಲ ಎಂದೆನಿಸಿದರೆ ಅತಿದೊಡ್ಡ ಪಕ್ಷ ಹಾಗೂ ಇತರೆ, ಪಕ್ಷೇತರರ ನೆರವು ಪಡೆದು ಸಂಖ್ಯಾಬಲ ತೋರಿಸುವಂತೆ ಸೂಚಿಸಬಹುದು.

ಆಯ್ಕೆ 03
ಚುನಾವಣೋತ್ತರ ಮೈತ್ರಿ ಸಾಧಿಸಿ, ಮೈತ್ರಿ ಸರ್ಕಾರಕ್ಕೆ ಮುಂದಾಗುವ ಎರಡು ಅಥವಾ ಎರಡಕ್ಕಿಂತ ಹೆಚ್ಚು ಪಕ್ಷಗಳಿಗೆ ಅವಕಾಶ ನೀಡಬಹುದು. ಸರ್ಕಾರ ರಚನೆ ಮಾಡಲು ಅತಿದೊಡ್ಡ ಪಕ್ಷ  ಹಕ್ಕು ಮಂಡನೆ ಮಾಡಿದ್ದರೂ ಮೈತ್ರಿ ಸರ್ಕಾರ ಸಾಧಿಸಿದ ಪಕ್ಷಗಳಿಗೆ ಅವಕಾಶ ನೀಡಬಹುದು. ಈ ಅಧಿಕಾರ ರಾಜ್ಯಪಾಲರ ಕೈಲಿರುತ್ತದೆ.  ಆ ಪಕ್ಷ ಬಹುಮತ ಸಾಬೀತುಪಡಿಸಲು ಕಾಲಾವಕಾಶ ಕೋರಿ, ಸದನದಲ್ಲಿ ವಿಶ್ವಾಸಮತ ಗಳಿಸಬೇಕಾಗುತ್ತದೆ.

ಆಯ್ಕೆ 04

ಜನಾದೇಶ ಅತಿದೊಡ್ಡ ಪಕ್ಷ ಅಥವಾ ಮ್ಯಾಜಿಕ್ ನಂಬರ್ ದಾಟುವ ವಿಶ್ವಾಸ ಹೊಂದಿರುವ ಮೈತ್ರಿಕೂಟ ಅಲ್ಲದೆ, ಚುನವಣೋತ್ತರ ಮೈತ್ರಿ ಸಾಧಿಸಿದ ಎರಡು ಅಥವಾ ಎರಡಕ್ಕಿಂತ ಹೆಚ್ಚು ಪಕ್ಷಗಳು ಜತೆಗೆ ಬಾಹ್ಯ ಬೆಂಬಲ ಪಡೆದ ಪಕ್ಷೇತರ ನೆರವಿನಿಂದ ಸರ್ಕಾರ ರಚನೆಯಾಗುವ ವಿಶ್ವಾಸ ಉಂಟಾದರೆ, ರಾಜ್ಯಪಾಲರು ಅಂಥ ಮೈತ್ರಿಕೂಟಕ್ಕೆ ಸರ್ಕಾರ ರಚನೆ ಮಾಡಿ, ವಿಶ್ವಾಸಮತ ಗಳಿಸುವಂತೆ ಕೋರಬಹುದು. ಇಲ್ಲವೆ ರಾಷ್ಟ್ರಪತಿ ಅಧಿಕಾಕ್ಕೆ ಶಿಫಾರಸ್ಸು ಮಾಡಬಹುದು.

ಗೋವಾ ಹಾಗೂ ಮಣಿಪುರದಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದರೂ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ. ಮಣಿಪುರದಲ್ಲಿ 60 ಕ್ಷೇತ್ರಗಳಲ್ಲಿ ಬಿಜೆಪಿ 21, ಕಾಂಗ್ರೆಸ್ 28ಗಳಿಸಿತ್ತು. ಆದರೆ, ಪಕ್ಷೇತರರನ್ನು ತಮ್ಮ ತೆಕ್ಕೆಗೆ ಹಾಕಿಕೊಂಡ ಬಿಜೆಪಿ ಅಧಿಕಾರ ಸ್ಥಾಪಿಸಿತು.

ಗೋವಾದಲ್ಲಿ 40 ಕ್ಷೇತ್ರಗಳಲ್ಲಿ ಕಾಂಗ್ರೆಸ್ 17, ಬಿಜೆಪಿ 13 ಸ್ಥಾನ ಗಳಿಸಿತ್ತು. ಆದರೆ, ಬಿಜೆಪಿ ಮೈತ್ರಿ ಸಾಧಿಸಿ, ಸರ್ಕಾರ ರಚಿಸಿತು.

Leave a Reply

Your email address will not be published.