ದೇಶದ ಅಭಿವೃದ್ಧಿಯ ಜೊತೆ ಕರ್ನಾಟಕದ ಅಭಿವೃದ್ಧಿಗೆ ಹೆಗಲು ಕೊಡ್ತೀವಿ : ವಿಜಯೋತ್ಸವ ಭಾಷಣದಲ್ಲಿ ಮೋದಿ ಹೇಳಿಕೆ

ದೆಹಲಿ : ಭಾಷಾ ಅಡಚಣೆ ಮಧ್ಯೆಯೂ ಕರ್ನಾಟಕದ ಜನ ನನ್ನನ್ನು ಪ್ರೀತಿಯಿಂದ ನೋಡಿ ರಾಜ್ಯದಲ್ಲಿ ಬಿಜೆಪಿಯನ್ನು ಗೆಲ್ಲಿಸಿದ್ದಾರೆ.  ಕರ್ನಾಟಕದ ಗೆಲುವು ಸಾಮಾನ್ಯ ಗೆಲುವಲ್ಲ, ಇದೊಂದು ಅಭೂತಪೂರ್ವ ಗೆಲುವು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ದೆಹಲಿಯಲ್ಲಿ ಕರ್ನಾಟಕ ಚುನಾವಣೆಯ ವಿಜಯೋತ್ಸವ ಆಚರಣೆ ವೇಳೆ ಮಾತನಾಡಿದ ಮೋದಿ, ಕರ್ನಾಟಕದಲ್ಲಿ ಬಿಜೆಪಿಯನ್ನು ಗೆಲ್ಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಬಿಜೆಪಿಯನ್ನು  ಹಿಂದಿ ಭಾಷಿಕರ ಪಕ್ಷ, ಉತ್ತರ ಭಾರತದ ಪಕ್ಷ ಎಂದು ಕರೆಯುತ್ತಿದ್ದವರಿಗೆ ಕರ್ನಾಟಕದ ಜನ ಸರಿಯಾ ದ ಉತ್ತರ ನೀಡಿದ್ದಾರೆ. ಕಾಂಗ್ರೆಸ್‌ ಸೋತಿದ್ದರೂ ಅಡ್ಡದಾರಿ ಮೂಲಕ ಅಧಿಕಾರಕ್ಕೇರಲು ಕಾಂಗ್ರೆಸ್ ಪ್ರಯತ್ನಪಡುತ್ತಿದೆ ಎಂದು ಆರೋಪಿಸಿದ್ದಾರೆ.

ಸೋಲು ಗೆಲುವು ಇದ್ದಿದ್ದೇ. ಆದರೆ ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಜಾತಿ, ಜಾತಿಗಳ ಮಧ್ಯೆ, ಧರ್ಮ ಧರ್ಮಗಳ ಮಧ್ಯೆ ತಂದಿಡುವ ಮನಸ್ಥಿತಿ ದೇಶಕ್ಕೇ ಮಾರಕ. ಇದು ಎಂದೂ ನಡೆಯಬಾರದು. ಆದರೆ ಕರ್ನಾಟಕದ ಜನತೆ ಬಿಜೆಪಿಗೆ,ನನಗೆ ತೋರಿಸಿರುವ ಪ್ರೀತಿಯನ್ನು ನಾನೆಂದೂ ಮರೆಯಲು ಸಾಧ್ಯವಿಲ್ಲ. ಭಾಷಾ ಅಡೆತಡೆಯ ಮಧ್ಯೆಯೂ, ಉರಿಬಿಸಿಲಿನ ಮಧ್ಯೆಯೂ  ಜನ ನನ್ನ ಮಾತನ್ನು ಕೇಳುತ್ತಿದ್ದರು. ಇಂತಹ ಪ್ರೀತಿ ನನಗೆ ಮತ್ತೆಲ್ಲೂ ಸಿಗಲು ಸಾಧ್ಯವಿಲ್ಲ ಎಂದಿದ್ದಾರೆ.

ಬಿಜೆಪಿಯನ್ನು ಗೆಲ್ಲಿಸಿದ ನಿಮ್ಮೆಲ್ಲರಿಗೂ ನಾನು ಕೊಡುವ ಭರವಸೆ ಇಷ್ಟೇ. ದೇಶದ ಅಭಿವೃದ್ಧಿಯ ಜೊತೆಗೆ ಕರ್ನಾಟಕದ ಅಭಿವೃದ್ಧಿಗೂ ನಾವೆಲ್ಲರೂ ಹೆಗಲು ಕೊಡುತ್ತೇವೆ. ಇದು ನನ್ನ ಭರವಸೆ ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಅಮಿತ್ ಶಾ, ಮೋದಿ ಅಭಿವೃದ್ಧಿ ಯಾತ್ರೆಗೆ ಕರ್ನಾಟಕದ ಜನ ಅಭೂತಪೂರ್ವ ಬೆಂಬಲ ಸೂಚಿಸಿದ್ದಾರೆ. ಈ ಹಿಂದೆ 112 ಸ್ಥಾನದಲ್ಲಿದ್ದ ಕಾಂಗ್ರೆಸ್‌ 74ಕ್ಕೆ ಕುಸಿದಿದೆ. ನಾವು 40ರಿಂದ 140ಕ್ಕೆ ತಲುಪಿದೆ. ಕಠಿಣ ಪರಿಶ್ರಮದಿಂದ ಗೆಲುವು ಸಾಧಿಸಿದ್ದೇವೆ. ನಿಜಕ್ಕೂ ಸಂತೋಷವಾಗುತ್ತಿದೆ. ಆದರೆ ಕಾಂಗ್ರೆಸ್ ಅಡ್ಡದಾರಿ ಹಿಡಿದು ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ. ಆದರೆ ಇದು ಸಾಧ್ಯವಿಲ್ಲ. ಇನ್ನು ನಾವು ಲೋಕಸಭೆ ಚುನಾವಣೆಗೆ ಸಿದ್ಧರಾಗೋಣ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com