ಕಾಂಗ್ರೆಸ್‌ – ಜೆಡಿಎಸ್‌ ಮೈತ್ರಿ ತಪ್ಪಿಸಲು ಅಮಿತ್ ಶಾ ತಂತ್ರ : ಇದಕ್ಕೆ ಬಲಿಯಾಗ್ತಾರಾ ಯಡಿಯೂರಪ್ಪ ?

ಬೆಂಗಳೂರು : ಬಿಜೆಪಿ ಸದ್ಯ 105 ಸ್ಥಾನದ ಮುನ್ನಡೆ ಸಾಧಿಸಿದ್ದು, ಮ್ಯಾಜಿಕ್‌ ಸಂಖ್ಯೆ 113 ತಲುಪುವುದು ಕಷ್ಟ ಎಂಬಂತಹ ಪರಿಸ್ಥಿತಿ ಎದುರಾಗಿದೆ. ಈ ಮಧ್ಯೆ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಸರ್ಕಾರ ರಚನೆಗೆ  ಮಾತುಕತೆ ನಡೆಯುತ್ತಿದ್ದು,  ಬಿಜೆಪಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಮೊನ್ನೆ ತನಕ ಬೈದಾಡಿಕೊಳ್ಳುತ್ತಿದ್ದ ನಾಯಕರೆಲ್ಲ ಈಗ ಸಾಫ್ಟಾಗಿದ್ದು, ಬಿಜೆಪಿಯಿಂದಲೂ ಕುಮಾರಸ್ವಾಮಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವುದಾಗಿ ಹೇಳಲಾಗುತ್ತಿದೆ. ಇನ್ನು ಯಡಿಯೂರಪ್ಪ ಅವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡುವುದಾಗಿ ಹೇಳಲಾಗುತ್ತಿದ್ದು, ರಾಜ್ಯ ರಾಜಕಾರಣದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ.

ಕೆಲ ಗಂಟೆಗಳ ಹಿಂದೆ ಜೆಡಿಎಸ್‌ಗೆ ಕಾಂಗ್ರೆಸ್ ಬೆಂಬಲಿಸುವುದಾಗಿ ಹೇಳಿತ್ತು. ಆದರೆ ಸ್ಪಷ್ಟ ಬಹುಮತ ಬರುತ್ತದೆ ಎಂದು ಕಾದು ಕುಳಿತಿದ್ದ ಬಿಜೆಪಿಗೆ ನಿರಾಸೆ ಕಾದಿದ್ದು ಸದ್ಯದ ಪರಿಸ್ಥಿತಿಯ ಪ್ರಕಾರ 105 ಸ್ಥಾನಗಳಷ್ಟೇ ಮುನ್ನಡೆ ಸಾಧಿಸಿದೆ. ಇನ್ನೂ ಅನೇಕ ಕ್ಷೇತ್ರಗಳ ಫಲಿತಾಂಶ ಬರಬೇಕಾಗಿದ್ದು, ಜೆಡಿಎಸ್‌ಗೆ ಕಾಂಗ್ರೆಸ್‌ ಬೆಂಬಲ ಸೂಚಿಸಿರುವ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಬಿಜೆಪಿ ನಾಯಕರು, ಜೆಡಿಎಸ್‌, ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಳ್ಳುವುದನ್ನು ತಪ್ಪಿಸಲು ಜೆಡಿಎಸ್‌ ಗೆ ಮುಖ್ಯಮಂತ್ರಿ ಸ್ಥಾನ ನೀಡುವ ಆಫರ್‌ ನೀಡಿದೆ. ಕರ್ನಾಟಕದಲ್ಲಿ ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನ ನೀಡಿ ಸಂಸತ್ತಿನಲ್ಲಿ 20 ಸೀಟು ತಮಗೆ ಬೆಂಬಲಿಸುವಂತೆ ಆಮಿಷ ಒಡ್ಡಿದ್ದಾರೆ ಎನ್ನಲಾಗುತ್ತಿದೆ.

ಆದರೆ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಮುಖ್ಯಮಂತ್ರಿ ಸ್ಥಾನವನ್ನು  ಕುಮಾರಸ್ವಾಮಿ ಅವರಿಗೆ ಬಿಟ್ಟುಕೊಟ್ಟಿದ್ದೇ ಆದರೆ ಇಷ್ಟು ದಿನ ಬಿಎಸ್‌ವೈ ಕಂಡಿದ್ದ ಕನಸು ಭಗ್ನವಾಗುವುದಂತೂ ಸತ್ಯ.

Leave a Reply

Your email address will not be published.

Social Media Auto Publish Powered By : XYZScripts.com