ಅಪರಾ ತಪರಾ – ಹೊಸ ಸಫಾರಿಯಲ್ಲಿ ಯಡ್ಯೂರಣ್ಣ, ಕುಟುಂಬ ಬೇಕು ಎಂದ ಚೋಬಕ್ಕ

ಅಪರಾತಪರಾ -ಪಿ.ಕೆ. ಮಲ್ಲನಗೌಡರ್
ಹೊಸ ಸಫಾರಿಯಲ್ಲಿ ಸಿಎಂ ಯಡ್ಯೂರಣ್ಣ
ಕುಟುಂಬ ಬೇಕು ಎಂದ ಚೋಭಕ್ಕ
ಒಂದು ಕಡೆ ಖುಷಿ, ಒಳಗೊಳಗೆ ಉದ್ವೇಗ, ತಳಮಳ. ಯಡ್ಯೂರಣ್ಣರು ‘ಕೈ’ ಹಿಸುಕಿಕೊಳ್ಳುತ್ತ ಕುಳಿತಿದ್ದರು. ಧಡ್ ಅಂತಾ ಒಳಕ್ಕೆ ನುಗ್ಗಿದ ಚೋಭಕ್ಕ, ತಮ್ಮ ಜೊತೆ ಕರೆತಂದಿದ್ದ ಯುವಕನನ್ನು ಯಡ್ಯೂರಣ್ಣರಿಗೆ ಪರಿಚಯಿಸುತ್ತ, ‘ಈತ ಶರಣಪ್ಪ ಅಂತ. ಒಂದಿಷ್ಟು ಜ್ಯೋತಿಷ್ಯ ಗೊತ್ತು. ಈತ ಇದ್ದಲ್ಲಿ ಅದೃಷ್ಟ ಇರುತ್ತೆ ಸರ್. ನಿಮ್ಮ ಜೊತೆನೇ ಇರ್ಲಿ ಅಂತ…..’ ಎನ್ನುವರು.
ಯಡ್ಯೂರಣ್ಣ: ‘ಆಯ್ತು ಆಯ್ತು ಕೂಡಿ’
ಶರಣಪ್ಪ: ನೋ ನೋ… ನಾನ್ ಕೂಡೋದೇ ಇಲ್ಲ ಸರ್.
ಚೋಭಕ್ಕ: ಹೌದು ಸರ್, ಈ ಶರಣಪ್ಪ ಎರಡು ವರ್ಷದಿಂದ ಕೂಡೋದನ್ನೇ ಬಿಟ್ಟಿದ್ದಾರೆ.
ಯಡ್ಯೂರಣ್ಣ: ಏನಮ್ಮ, ಅದೆಲ್ಲ ಸಾಧ್ಯನಾ?
ಚೋಭಕ್ಕ: ಸಾಧ್ಯ ಸರ್, ಮೋದಿಯವರಿಂದ ಇದೆಲ್ಲ ಆಗಿದ್ದು.
ಯಡ್ಯೂರಣ್ಣ: ಇವ್ನು ಕೂಡದೇ ಇರೋದಕ್ಕೂ ಮೋದಿಗೂ ಏನ್ ಸಂಬಂಧ?
ಚೋಭಕ್ಕ: ಮೋದಿಯವರು ಈ ‘ಸ್ಟಾರ್ಟ್ ಅಪ್ ಇಂಡಿಯಾ’ಕ್ಕೂ ಮೊದಲು ‘ಸ್ಟ್ಯಾಂಡ್ ಅಪ್ ಇಂಡಿಯಾ’ ಅಂತ ಒಂದು ಘೋಷಣೆ ಮಾಡಿದ್ರಲ್ಲ, ಆಗಿಂದ ಈ ಶರಣಪ್ಪ ನಿಂತೇ ಇದ್ದಾನೆ. ಇವತ್ತಿಗೂ ಕುಳಿತಿಲ್ಲ. ನಿದ್ದೆ ಮಾಡೋವಾಗಷ್ಟೇ ಈತ ನಿಲ್ಲಲ್ಲ.
ಯಡ್ಯೂರಣ್ಣ: (ಶರಣಪ್ಪನನ್ನು ಮೇಲಿನಿಂದ ಕೆಳಕ್ಕೆ ನೋಡುತ್ತ) ಟಾಯ್ಲೆಟ್‍ನಲ್ಲಿ ಹೇಗೆ?
ಶರಣಪ್ಪ: ನೋ ಸರ್, ಅಲ್ಲೂ ಕೂಡಲ್ಲ. ದೇಶಭಕ್ತ ಮೋದಿ ಸಾಹೇಬ್ರು ಸ್ಟ್ಯಾಂಡ್ ಅಪ್ ಇಂಡಿಯಾ ಅಂತ ಹೇಳಿದಾಗಿಂದ ಕೂತೇ ಇಲ್ಲ. ಟಾಯ್ಲೆಟ್‍ನಲ್ಲೂ ಅಷ್ಟೇ.
ಯಡ್ಯೂರಣ್ಣ: ಚೋಭಮ್ಮ, ಭಯಂಕರ ಶಿಷ್ಯನನ್ನ ಬೆಳೆಸಿದ್ದಿಯಾ.
ಚೋಭಕ್ಕ: 150 ಸೀಟು ಪಕ್ಕಾ ಆಗಿದ್ರೂ ತಾವ್ಯಾಕೋ ತುಂಬ ಡಲ್ ಆಗಿದ್ದಿರಲ್ಲ ಸರ್?
ಯಡ್ಯೂರಣ್ಣ: ಅಲ್ಲಮ್ಮ, ಅದ್ಯಾವ ನನ್ಮಗ ಹೇಳಿದ್ದು 150 ಸೀಟು ಅಂತಾ?
ಶರಣಪ್ಪ: ಅವ್ನ ಮPಕಕ್ಕೆ ಉಗಿಯಾ
ಚೋಭಕ್ಕ: ಶರಣಪ್ಪ ಸುಮ್ನಿರು. 150 ಅಂತಾ ಸಾಹೇಬರೇ ನಿನ್ನೆ ಹೇಳಿದ್ದಾರೆ.
ಶರಣಪ್ಪ: ಸಾರಿ ಸರ್.
ಚೋಭಕ್ಕ: ಸರ್, ಇರ್ಲಿ ಬಿಡಿ. ಹಂಗ್ ಆದರೂ ನೀೀವೇ ಸಿಎಂ ಅಲ್ವಾ?
ಯಡ್ಯೂರಣ್ಣ: ಥೂ ದಡ್ಡಿ, ಆ ಸುಮಾರಸ್ವಾಮಿ ಸಿಂಗಪೂರಲ್ಲಿ ಕುಂತವ್ನೆ. ಇಲ್ಲಿ ಅವರಪ್ಪ ಥರ್ಡ್ ಫ್ರಂಟ್ ಜತೆ ಗುಸುಗುಸು ನಡೆಸಿದ್ದಾರೆ.
ಚೋಭಕ್ಕ: ಥರ್ಡ್ ಫ್ರಂಟ್ ಅದೆಲ್ಲಿದೆ ಸರ್?
ಯಡ್ಯೂರಣ್ಣ: ಇಂತಾ ಸಂದರ್ಭದಲ್ಲಿ ಅದು ಫಟ್ಟಂತ ಹುಟ್ಟಿಬಿಡುತ್ತೆ. ಆ ಹನ್ಮಂತ ಹೆಗಡೆ, ಪರಿತಾಪ ಸಿಮ್ಮರನ್ನ ಗೌಡರಿಗೆ ತೋರಿಸಿ, ಕೋಮುವಾದಿಗಳನ್ನ ದೂರ ಇಡಿ ಅಂದುಬಿಡುತ್ತೆ. ಅಲ್ಲಿಗೆ ನನ್ನ ಕತೆ ಮುಗಿದಂಗೆ ಕಣಮ್ಮ.
(ಅಷ್ಟರಲ್ಲಿ ಒಬ್ಬ ವ್ಯಕ್ತಿ ಬಂದು, ಸರ್ 6 ಜೊತೆನೂ ರೆಡಿ ಎಂದು ಬ್ಯಾಗ್ ಒಂದನ್ನು ಇಟ್ಟು ಹೋಗುವನು.)
ಚೋಭಕ್ಕ: ಬ್ಯಾಗ್‍ನಲ್ಲಿ ಏನಿದೆ ಸರ್?
ಯಟ್ಯೂರಣ್ಣ: ಬಿಡಮ್ಮ, ಅದರಲ್ಲಿ 6 ಜೊತೆ ಹೊಸ ಸಫಾರಿ ಡ್ರೆಸ್ ಇವೆ.
ಶರಣಪ್ಪ: ಇದಕ್ಕೆ ಅನ್ನೋದು ಶುಭ ಗಳಿಗೆ ಅಂತಾ ಸರ್. ನೀವು ಸಿಎಂ ವಿಷಯ ಮಾತಾಡುವಾಗ್ಲೇ ಸಫಾರಿ ಬಂದ್ವು ತಾನೇ? ಅಂದರೆ ಹಂಗ್ ಆದ್ರೂ ಹೆಂಗ್ ಆದ್ರೂ ನೀವೇ ಸಿಎಂ ಸರ್.
ಚೋಭಕ್ಕ: ನಮ್ ಶರಣಪ್ಪ ಹೇಳಿದ ಮೇಲೆ ನೀವೇ ಸಿಎಂ ಬಿಡಿ ಸರ್. ನನಗೆ ಮಾತ್ರ ಕುಟುಂಬ ಬೇಕು ನೋಡಿ.
ಯಡ್ಯೂರಣ್ಣ: ಏನ್ ಮಾತಾಡ್ತಾ ಇದ್ದಿಯಾ ನೀನು? ಕುಟುಂಬ ಗಿಟುಂಬ ಅಂತೆಲ್ಲ ಈ ಶರಣಪ್ಪನ ಮುಂದೆನೇ ಮಾತಾಡ್ತಿಯಲ್ಲ?
ಶರಣಪ್ಪ: ನಂಗೆಲ್ಲ ಗೊತ್ತು ಬಿಡಿ ಸರ್.
ಯಡ್ಯೂರಣ್ಣ: ಏ ಮೂರ್ಖ, ಏನೋ ಗೊತ್ತು ನಿಂಗೆ. ಬಾಯ್ಮುಚ್ಚಿಕೊಂಡು ಕೂಡು.
ಶರಣಪ್ಪ: ಸಾರಿ ಸರ್, ಬಾಯಿ ಮುಚ್ಕೊಂತಿನಿ. ಆದರೆ ಕೂಡಲ್ಲ. ಸ್ಟ್ಯಾಂಡ್‍ಅಪ್ ಇಂಡಿಯಾ ಸರ್ ನಮ್ದು ಸ್ಟ್ಯಾಂಡ್‍ಅಪ್ ಇಂಡಿಯಾ.
ಯಡ್ಯೂರಣ್ಣ: ನಿಂತೇ ಇರು. ಚೋಭಮ್ಮ ಏನ್ ಕುಟುಂಬನಮ್ಮ ನಿಂದು?
ಚೋಭಕ್ಕ: ಕುಟುಂಬ ಕಲ್ಯಾಣ ಖಾತೆ ಸರ್.
ಯಡ್ಯೂರಣ್ಣ: ಚೋಭಮ್ಮ ಇನ್ನೂ ಟೈಮ್ ಐತೆ ತಡಿಯಮ್ಮ. ಕುಟುಂಬದ ಜತೆಗೆ ಮಕ್ಕಳ್ನೂ ಕೊಡೋಣ..
ಚೋಭಕ್ಕ: ಸರ್, ಬೋ ಚೆನ್ನಾಗಿರ್ತದೆ.
ಯಡ್ಯೂರಣ್ಣ: ಛೇ ಛೇ, ನಾ ಹಂಗ್ ಹೇಳ್ಲಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆನೂ ಕೊಡ್ತಿನಿ ಅಂತಾ. ಆದರೆ ನಾ ಸಿಎಂ ಆಗೋದೇ ಡೌಟ್ ಇದೆಯಲ್ಲಮ್ಮ.
ಚೋಭಕ್ಕ: ನೀವ್ ಈ ಮಾತ್ ಹೇಳಬಾರದು.
ಶರಣಪ್ಪ: ಹೌದು ಸರ್, ನೀವು ಹಿಂಗೆಲ್ಲ ಅನಬಾರದು. ಹಂಗ್ ಅಸೆಂಬ್ಲಿಯಾಗಿ ನಿಮಗೆ ಕೊಡದೇ ಹೋದ್ರೆ ‘ಹ್ಯಾಂಗ್ ಅಸೆಂಬ್ಲಿ’ ಅಂತ ಚಳವಳಿ ಕಟ್ಟೋಣವಾ ಸರ್?
ಚೋಭಕ್ಕ: ಹಂಗ್ ಹ್ಯಾಂಗ್ ಎಂತಹ ರೈಮಿಂಗ್ ವಡ್ರ್ಸ್, ಸೂಪರ್..
ಯಡ್ಯೂರಣ್ಣ: ನೀವಿಬ್ಬರು ಇನ್ ಸ್ವಲ್ಪ ಹೊತ್ತು ಇದ್ರೆ ನಾನೇ ಹ್ಯಾಂಗ್ ಮಾಡಿಕೊಳ್ತಿನಿ. ಜಾಗ ಖಾಲಿ ಮಾಡಿ.
ಚೋಭಮ್ಮ: (ಕಾಲ್ ರಿಸೀವ್ ಮಾಡ್ತಾ) ಥಾಂಕ್ಯೂ ಸರ್ ಥ್ಯಾಂಕ್ಯೂ. ನಂದು ಕುಟುಂಬ, ನಿಮ್ದು?
ಆ ಕಡೆ ಧ್ವನಿ: ಕುಟುಂಬ ನೀವೇ ಕಟ್ಕೊಳ್ಳಿ. ಬೈ ಬೈ.
ಯಡ್ಯೂರಣ್ಣ: ಯಾರದಮ್ಮ ಫೋನು? ಥ್ಯಾಂಕ್ಸ್ ಹೇಳ್ತಾ ಇದ್ದೆ.
ಚೋಭಕ್ಕ: ಈಶಪ್ಪಣ್ಣಂದು ಸರ್. ನೀವೇ ಸಿಎಂ ಅಂತೆ, ಕಂಗ್ರಾಟ್ಸ್ ಹೇಳಿಬಿಡಮ್ಮ ಅಂದ್ರು.
ಯಡ್ಯೂರಣ್ಣ: ಏ ಹುಚ್ಚಿ, ಅವ್ನು ಗೇಲಿ ಮಾಡ್ತಾ ಇದ್ದರೆ ನೀನು ಖುಷಿಪಡ್ತಾ ಇದ್ದಿಯಲ್ಲ. ಮುಗೀತು ನನ್ ಕತೆ.. ನೀವು ನಡಿರಿ ನಡಿರಿ.
ಚೋಭಕ್ಕ: ಸರ್, ಶರಣಪ್ಪ ನಿಮ್ಮ ಜೊತೆಗೆ ಇರಲಿ ಅಲ್ಲವಾ?
ಯಡ್ಯೂರಣ್ಣ: ಅಯ್ಯೋ, ಆ ಲಿಂಗಾಯತ ಶರಣರ ಕಾಟನೇ ತಾಳಿಕೊಳ್ಳಕೆ ಆಗ್ತಿಲ್ಲ. ಈ ಸ್ಟ್ಯಾಂಡ್ ಅಪ್ ಶರಣನ್ನ ತೆಗೆದುಕೊಂಡು ಎಲ್ಲಿ ಸಾಯಲಿ.
ಚೋಭಾ, ಶರಣಪ್ಪ ಹೊರಡಲು ಅನುವಾಗುವರು.
ಯಡ್ಯೂರಣ್ಣ: ಚೋಭಮ್ಮ, ಈಗ ನೀನು ಟ್ರ್ಯಾಕ್ಟರಿಯಲ್ಲಿ ಬಂದಿರುವೆಯಾ?
ಚೋಭಕ್ಕ: ಯಾಕೆ ಸರ್, ಜೋಕ್ ಮಾಡ್ತೀರಿ? ನನ್ನ ಕಾರಲ್ಲಿ ಬಂದಿದಿನಿ.
ಯಡ್ಯೂರಣ್ಣ: ಮತ್ತೆ ಈ ಸ್ಟ್ಯಾಂಡ್ ಅಪ್ ಶರಣ ಕಾರಲ್ಲಿ ಕೂಡಲೇಬೇಕಲ್ಲವಾ?
ಶರಣಪ್ಪ: ನೋ ಸರ್ ನೋ. ಹಿಂದಿನ ಸೀಟ್ ಮುಂದೆ ಸ್ಪೇಸ್ ಇರುತ್ತಲ್ಲ? ಅಲ್ಲೇ ಬಾಗಿಕೊಂಡು ನಿಲ್ಲತೀನಿ ಸರ್, ಮೋದಿಯವರ ಸ್ಟ್ಯಾಂಡ್ ಅಪ್ ಇಂಡಿಯಾಗೆ ನಾನು ಬದ್ಧ ಸರ್.
ಯಡ್ಯೂರಪ್ಪ: ಚೋಭಮ್ಮ, ಒಂದ್ಸಲ ಮೋದಿಯವರಿಗೆ ಈ ಶರಣನ್ನ ಭೇಟಿ ಮಾಡಿಸಮ್ಮ. (ತಾವೇ ಗೊಣಗಿಕೊಳ್ಳುತ್ತ, ‘ಈ ನಮೋ-ಸ್ಯಾ ನನಗೂ ಸ್ಟ್ಯಾಂಡ್‍ಅಪ್ ಅಂತ ಹೇಳ್ತಾ ಇದ್ದಾರಾ?’ ಎಂದು ಕಣ್ಮುಚ್ಚಿ ಕೂಡುವರು)

Leave a Reply

Your email address will not be published.

Social Media Auto Publish Powered By : XYZScripts.com