Aligarh muslim university : ಒಂದು ಕಪೋಲ ಕಲ್ಪಿತ ವಿವಾದ ….!

ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಮೇಲೆ ನಡೆದ ದಾಳಿಗೆ ಜಿನ್ನಾ ಅವರ ಭಾವಚಿತ್ರವಿದ್ದದ್ದು ಕಾರಣವಲ್ಲ.

ಭಾರತೀಯ ಜನತಾ ಪಕ್ಷವು (ಬಿಜೆಪಿ) ವಿಶ್ವವಿದ್ಯಾಲಯದ ಆವರಣಗಳಲ್ಲಿ ಹಿಂದೂತ್ವ ಗೂಂಡಾಗಳ ಗೂಂಡಾಗಿರಿಯನ್ನು ಪ್ರೋತ್ಸಾಹಿಸಲು ಮತ್ತೊಂದು ಅವಕಾಶವನ್ನು ಕಂಡುಕೊಂಡಿದೆ. ಈ ಬಾರಿ ಆವರ ದಾಳಿಗೆ ಗುರಿಯಾಗಿರುವುದು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ (ಎಎಂಯು). ಈ ತಥಾಕಥಿತ ವಿವಾದಕ್ಕೆ ಕಾರಣವಾಗಿರುವುದು ಆ ವಿಶ್ವವಿದ್ಯಾಲಯದಲ್ಲಿ ೧೯೩೮ರಿಂದಲೂ ಇರುವ ಮಹಮ್ಮದ್ ಅಲಿ ಜಿನ್ನಾ ಅವರ ಚಿತ್ರಪಟ. ಸಂಘಪರಿವಾರದ ಹಿಂದೂ ಯುವ ವಾಹಿನಿ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್‌ಗೆ ಸೇರಿದ ಸದಸ್ಯರು ಮೇ ೨ ರಂದು ವಿಶ್ವವಿದ್ಯಾಲಯದ ಆವರಣಕ್ಕೆ ನುಗ್ಗಿ ಜಿನ್ನಾ ಅವರ ಚಿತ್ರವನ್ನು ತೆಗೆದುಹಾಕಬೇಕೆಂದು ಒತ್ತಾಯಿಸಲು ಪ್ರಾರಂಭಿಸಿದರು. ಪೊಲೀಸರು ಈ ದಾಳಿಕೋರರನ್ನು ಬಂಧಿಸುವ ಬದಲು ದಾಳಿಯ ಬಗ್ಗೆ ದೂರು ದಾಖಲಿಸಲು ತೆರಳುತ್ತಿದ್ದ ಎಎಂಯು ವಿದ್ಯಾರ್ಥಿಗಳ ಮೇಳೆ ದಾಳಿ ನಡೆಸಿ ಲಾಠಿ ಮತ್ತು ಅಶ್ರುವಾಯು ಪ್ರಯೋಗ ಮಾಡಿದರು.

ಜಿನ್ನಾ ಅವರ ಭಾವಚಿತ್ರದ ಬಗ್ಗೆ ಹುಟ್ಟುಹಾಕಲಾಗಿರುವ ಈ ಕಪೋಲ ಕಲ್ಪಿತ ವಿವಾದವು ಭಾರತದ ವಿಭಜನೆಯಲ್ಲಿ ಜಿನ್ನಾ ಅವರ ಪಾತ್ರದ ಬಗ್ಗೆ ಮುಗಿದುಹೋದ ಪ್ರಶ್ನೆಯನ್ನು ಮತ್ತೊಮ್ಮೆ ಸಾರ್ವಜನಿಕ ಚರ್ಚೆಗೆ ತಂದಿದೆ. ಯಾವ ನೈಜ ಇತಿಹಾಸಕಾರರೂ ಈಗ ಆ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಏಕೆಂದರೆ ಭಾರತದ ವಿಭಜನೆಯೆಂಬುದು ಒಂದು ಸಂಕೀರ್ಣ ಸಂಗತಿಯಾಗಿದ್ದು ಯಾವೊಬ್ಬ ವ್ಯಕ್ತಿಯನ್ನು ಇದಕ್ಕೆ ಸಂಪೂರ್ಣ ಹೊಣೆಗಾರರನ್ನಾಗಿಸಲಾಗುವುದಿಲ್ಲ  ಎಂಬುದು ಇತಿಹಾಸಕಾರರ ತಿವಳಿಕೆಯಾಗಿದೆ. ಆದರೂ ’ಮಹಾನ್ ವ್ಯಕ್ತಿಗಳ ಬಗೆಗಿನ ಆಸಕ್ತಿ ಮಾಯವಾಗುವುದೇ ಇಲ್ಲ; ಪಾಕಿಸ್ತಾನ ಮತ್ತು ಭಾರತ ದೇಶಗಳೆರಡೂ ತಮ್ಮ ತಮ್ಮ ದೇಶಗಳ ಹಿರಿಮೆಯನ್ನು ಬಣ್ಣಿಸಿಕೊಳ್ಳಲೂ ಮತ್ತು ಎದುರಾಳಿಗಳನ್ನು ಪಾತಕಿಗಳಂತೆ ಚಿತ್ರಿಸಲು ಜಿನ್ನಾರನ್ನು  ಬಳಸಿಕೊಳ್ಳುತ್ತಲೇ ಇವೆ.

ದೇಶ ವಿಭಜನೆಯಲ್ಲಿ ಜಿನ್ನಾ ಅವರ ಪಾತ್ರದ ಬಗ್ಗೆ ಈಗಲೂ ಎಷ್ಟೊಂದು ಗೊಂದಲಗಳಿವೆಯೆಂಬುದು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ ಪ್ರಕರಣದ ಬಗ್ಗೆ  ಬಿಜೆಪಿ ನಾಯಕರು ನೀಡಿರುವ ಭಿನ್ನ ಭಿನ್ನ ಪ್ರತಿಕ್ರಿಯೆಗಳಲ್ಲಿ ವ್ಯಕ್ತವಾಗುತ್ತದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನು ಒಳಗೊಂಡಂತೆ ಬಿಜೆಪಿಯ ಬಹುಪಾಲು ನಾಯಕರು ಎ ಎಂಯು ಮೇಲೆ ದಾಳಿ ಮಾಡಿದ ದಾಳಿಕೋರರ ಕಾಳಜಿಗಳನ್ನು ಸಮರ್ಥಿಸಿಕೊಂಡರೆ, ಉತ್ತರ ಪ್ರದೇಶದ ಕಾರ್ಮಿಕ ಮಂತ್ರಿ ಸ್ವಾಮಿ ಪ್ರಸಾದ್ ಮೌರ್ಯ ಅವರು ಜಿನ್ನಾ ಅವರನ್ನು ಮಹಾ ಪುರುಷನೆಂದು ಹೊಗಳಿದ್ದಾರೆ. ಅದಕ್ಕಾಗಿ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಬೇಕೆಂಬ ಆಗ್ರಹಗಳೂ ಹೆಚ್ಚಾಗುತ್ತಿವೆ. ಇದೇ ಕಾರಣಕ್ಕಾಗಿ ಬಿಜೆಪಿಯ ಹಿರಿಯ ನಾಯಕ ಜಸ್ವಂತ್‌ಸಿಂಗರನ್ನು ೨೦೦೯ರಲ್ಲಿ ಮೂಲೆಗುಂಪು ಮಾಡಲಾಯಿತಲ್ಲದೆ, ೨೦೦೫ರಲ್ಲಿ ಲಾಲ್ ಕೃಷ್ಣ ಅದ್ವಾನಿಯವರು ಸಹ ಇದೇ ಕಾರಣಕ್ಕಾಗಿ ಪಕ್ಷದ ಅಧ್ಯಕ್ಷ ಸ್ಥಾನವನ್ನು ಕಳೆದುಕೊಳ್ಳಬೇಕಾಯಿತು. ಬಿಜೆಪಿಯ ಹಿಂದಿನ ಪಿತಾಮಹರಾದ ಹಿಂದೂ ಮಹಾ ಸಭಾಗೂ ಮತ್ತು ಮುಸ್ಲಿಂ ಲೀಗಿಗೂ ನಡುವೆ ಇದ್ದ ಸೈದ್ಧಾಂತಿಕ ಸಾಮೀಪ್ಯವನ್ನು ದಾಖಲಿಸುವ ಇತಿಹಾಸದ ಅಧ್ಯಾಯಗಳನ್ನು ಮರೆಮಾಚಲು ಬಿಜೆಪಿ ನಡೆಸುತ್ತಿರುವ ವಿಫಲ ಪ್ರಯತ್ನಗಳನ್ನು ಈ ಗೊಂದಲಗಳು ಬಯಲಿಗೆಳೆಯುತ್ತಿದೆ.

ವಾಸ್ತವವಾಗಿ ಯಾವ ಎರಡು ದೇಶಗಳ ಸಿದ್ಧಾಂತವನ್ನಾಧರಿಸಿ ಮುಸ್ಲಿಂ ಲೀಗು ನಂತರದಲ್ಲಿ ಪಾಕಿಸ್ತಾನದ ಬೇಡಿಕೆಯನ್ನು ಮುಂದಿಟ್ಟಿತೋ, ಅದು  ಮೂಲದಲ್ಲಿ ಭಾರತೀಯ ಮುಸ್ಲಿಮರ ಬೇಡಿಕೆಯಾಗಿರಲಿಲ್ಲ. ಅದು ಹಿಂದೂತ್ವವಾದಿಗಳ ಚಿಂತನೆಯ ಕೂಸಾಗಿದ್ದು , ಹಿಂದೂ ಮಹಾ ಸಭಾದ ನಾಯಕರಾದ ವಿನಾಯಕ್ ದಾಮೋದರ್ ಸಾವರ್ಕರ್ ಅವರು ಈ ಪ್ರಸ್ತಾಪವನ್ನು ಮೊಟ್ಟಮೊದಲಿಗೆ ೧೯೨೩ರಲ್ಲಿ ಮುಂದಿಟ್ಟಿದ್ದರು. ಮುಸ್ಲೀಂ ಲೀಗ್ ಮತ್ತು ಹಿಂದೂ ಮಹಾ ಸಭಗಳೆರಡೂ ಎರಡನೆ ಪ್ರಪಂಚ ಯುದ್ಧದ ಅವಧಿಯುದ್ದಕ್ಕೂ ಬ್ರಿಟಿಷರೊಡನೆ ಸಹಕರಿಸಿಕೊಂಡೇ ಬಂದರಲ್ಲದೆ ಬಂಗಾಳ ಪ್ರಾಂತ್ಯದಲ್ಲಿ ಎರಡೂ ಜೊತೆಗೂಡಿ ಸಮ್ಮಿಶ್ರ ಸರ್ಕಾರವನ್ನೂ ನಡೆಸಿದ್ದರು.  ವಾಸ್ತವವಾಗಿ ಮುಸ್ಲಿಂ ಲೀಗು ತಮ್ಮ ಮೂಲಗುರುಗಳ ಪರಿಕಲ್ಪನೆಯನ್ನು ತಾರ್ಕಿಕ ಅಂತ್ಯ ತಲುಪಿಸಿ ಮುಸ್ಲಿಮರಿಗೆಂದು ಪ್ರತ್ಯೇಕ ಸಾರ್ವಭೌಮಿ ಪ್ರಭುತ್ವವನ್ನು ಸ್ಥಾಪಿಸಲು ಯಶಸ್ವಿಯಾದದ್ದರ ಬಗ್ಗೆ ಬಿಜೆಪಿಗೆ ಒಳಗೊಳಗೆ ಅಸೂಯೆ ಇದ್ದರೂ ಇರಬಹುದು. ಹಿಂದೂ ಮಹಾಸಭಾದ ನೈಜ ವಾರಸುದಾರನಾದ ಬಿಜೆಪಿಯು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಇನ್ನೂ ಪ್ರಯತ್ನಗಳನ್ನು ನಡೆಸುತ್ತಲೇ ಇದೆ.

ದೇಶ ವಿಭಜನೆಗೆ ಜಿನ್ನಾ ಅವರೇ ಏಕೈಕ ಕಾರಣಕರ್ತರೆಂಬ ಒಂದು ತಿಳವಳಿಕೆಗೆ ಭಾರತದ ರಾಜಕೀಯ ಚಿಂತನೆಯಲ್ಲಿ ಒಂದು ದೊಡ್ಡ ಇತಿಹಾಸವೇ ಇದೆ ಮತ್ತು ಅದು ಕೇವಲ ಹಿಂದೂತ್ವವಾದಿ ಕಥನಗಳಿಗೆ ಮಾತ್ರ ಸೀಮಿತವಾಗಿಲ್ಲ. ಕಾಂಗ್ರೆಸ್ ಪಕ್ಷದ ಸಿದ್ಧಾಂತಕರ್ತರು ಮತ್ತು ದಶಕಗಳ ಕಾಲ ಭಾರತದ ವಿದ್ವತ್ ವಲಯವನ್ನು ಆಳಿದ ಕಾಂಗ್ರೆಸ್ ಪರವಾದ ಒಲುಮೆಯಿದ್ದ ಇತಿಹಾಸಕಾರರು ಜಿನ್ನಾ ಅವರು ದೇಶವಿಭಜನೆಗೆ ಕಾರಣನಾದ ಖಳನಾಯಕನೆಂಬ ಚಿತ್ರಣಕ್ಕೆ ನೀರೆರೆದು ಗಟ್ಟಿಗೊಳಿಸಿದ್ದಾರೆ. ಇತಿಹಾಸದ ದಾಖಲೆಗಳಲ್ಲಿ ದೇಶವಿಭಜನೆಯ ಬಗ್ಗೆ ಹಲವು ಬಗೆಯ ಚಿತ್ರಗಳಿದ್ದು ಈ ಬಗೆಯ ಏಕರೂಪಿ ಚಿತ್ರಣಕ್ಕೆ ಇತಿಹಾಸವು ಯಾವುದೇ ಪುರಾವೆಯೊದಗಿಸುವುದಿಲ್ಲ. ಉದಾಹರಣೆಗೆ ಜಿನ್ನಾ ಅವರು ತಮ್ಮ ಬಹುಪಾಲು ಜೀವಿತಾವಧಿಯಲ್ಲಿ ನಿಷ್ಠಾವಂತ ಕಾಂಗ್ರೆಸ್ಸಿಗರಾಗಿದ್ದರು. ಅವರನ್ನು ರಾಜಕೀಯಕ್ಕೆ ಕರೆತಂದವರು ದಾದಾಭಾಯಿ ನವರೋಜಿವವರು; ತಮ್ಮ ಜೀವನದುದ್ದಕ್ಕೂ ಅವರಿಗೆ ಗೋಪಾಲ ಕೃಷ್ನ ಗೋಖಲೆಯೆಂದರೆ ಅಪಾರ ಅಭಿಮಾನವಿತ್ತು; ಹಾಗೂ ತಿಲಕರ ಮೇಲೆ ಹೇರಲಾದ ದೇಶದ್ರೋಹಿ ಮೊಕದ್ದಮಯೊಂದರಲ್ಲಿ ತಿಲಕರ ಪರವಾಗಿ ಜಿನ್ನಾ ಅವರೇ ವಕಾಲತ್ತು ವಹಿಸಿದರು. ನಂತರ ೧೯೧೬ರಲ್ಲಿ ರೂಪಿಸಲಾದ ಲಕ್ನೋ ಒಪ್ಪಂದದ ಸಂದರ್ಭದಲ್ಲಿ  ಜಿನ್ನಾ ಅವರು ತಿಲಕರ ಜೊತೆಜೊತೆಗೆ ಅತ್ಯಂತ ನಿಕಟವಾಗಿ ಕೆಲಸ ಮಾಡುತ್ತಾ ಕಾಂಗ್ರೆಸ್ ಮತ್ತು ಮುಸ್ಲೀಮ್ ಲೀಗನ್ನು ಮತ್ತಷ್ಟು ಹತ್ತಿರ ತರುವ ಪ್ರಯತ್ನವನ್ನು ನಡೆಸಿದ್ದರು. ಮುಸ್ಲಿಂ ಲೀಗು ೧೯೦೬ರಲ್ಲೇ ಸ್ಥಾಪನೆಗೊಂಡಿದ್ದರೂ ಬಹಳ ವರ್ಷಗಳವರೆಗೆ ಜಿನ್ನಾ ಅವರು ಲೀಗನ್ನು ಸೇರಿಕೊಂಡಿರಲಿಲ್ಲ ಎಂಬುದೂ ಐತಿಹಾಸಿಕ ಸತ್ಯಗಳಲ್ಲೊಂದು. ಅವರು ೧೯೧೩ರಲ್ಲಿ ಲೀಗಿನ ಸದಸ್ಯತ್ವ ಪಡೆದುಕೊಂಡರು ಮತ್ತು ಮೂರು ವರ್ಷಗಳ ತರುವಾಯ ಅದರ ಅಧ್ಯಕ್ಷರಾದರು.

ಹಿಂದೂ ಮತ್ತು ಮುಸ್ಲಿಮರಿಬ್ಬರೂ ಅಧಿಕಾರವನ್ನು ಹಂಚಿಕೊಳ್ಳಬಲ್ಲ ಒಂದು ಐಕ್ಯ ಭಾರತಕ್ಕಾಗಿ ಜಿನ್ನ ಅವರು ಕೊನೆಯ ಕ್ಷಣದವರೆಗೂ ಮಾತುಕತೆ ನಡೆಸುತ್ತಿದ್ದರೆಂಬುದಕ್ಕೆ ಸಾಕಷ್ಟು ಐತಿಹಾಸಿಕ ಪುರಾವೆಗಳಿವೆ. ಪಾಕಿಸ್ತಾನವನ್ನು ಸಾಧಿಸುವುದೇ ತನ್ನ ಅಂತಿಮ ಗುರಿಯೆಂಬ ಲಕ್ಷ್ಯವನ್ನು ಲೀಗ್ ಅಳವಡಿಸಿಕೊಂಡಿದ್ದು ೧೯೪೦ರಲ್ಲಿ. ಆಗಲೂ ಈ ಆಗ್ರಹವು ಒಂದು ಸಾರ್ವಭೌಮಿ ಪಾಕಿಸ್ತಾನವನ್ನು ಕೋರುತ್ತಿತ್ತೇ ಎಂಬ ಬಗ್ಗೆ ಸಾಕಷ್ಟು ಗೊಂದಲಗಳಿದ್ದವು. ೧೯೪೬ರಲ್ಲಿ ಹಿಂದೂ ಮತ್ತು ಮುಸ್ಲಿಮರ ನಡುವೆ ಅಧಿಕಾರ ಹಂಚಿಕೆಯ ಸೂತ್ರಗಳೊಡನೆ ಕ್ಯಾಬಿನೆಟ್ ಮಿಷನ್ ಮುಂದಿಟ್ಟ ಒಕ್ಕೂಟ ಭಾರತದ ಪರಿಕಲ್ಪನೆಯನ್ನು ಜಿನ್ನಾ ಒಪ್ಪಿಕೊಂಡಿದ್ದರು. ಆದರೆ ಅಂಥ ಒಂದು ಒಕ್ಕೂಟ ಪರಿಕಲ್ಪನೆಯನ್ನು ಕಾಂಗ್ರೆಸ್ ಧಿಕ್ಕರಿಸಿದ್ದರಿಂದಲೇ ಇಡೀ ಮಾತುಕತೆಯ ಪ್ರಕ್ರಿಯೆಗೆ ಹಾನಿಯಾಯಿತು. ಅಂತಿಮವಾಗಿ ಬ್ರಿಟಿಷ ಭಾರತದ ವಿಭಜನೆ ಅನಿವಾರ್ಯ ಎಂಬ ಸಂದರ್ಭ ಉಂಟಾದಾಗ ಬಂಗಾಳ ಮತ್ತು ಪಂಜಾಬ್ ಪ್ರಾಂತ್ಯಗಳೂ ಸಹ ಏಕಕಕಾಲಕ್ಕೆ ವಿಭಜನೆಯಾಗುವುದನ್ನು ಖಾತರಿಪಡಿಸಿಕೊಳ್ಳಲು ಕಾಂಗ್ರೆಸ್ ಮತ್ತು ಹಿಂದೂ ಮಹಾ ಸಭಾ ಎರಡೂ ಒಟ್ಟಿಗೇ ಕೆಲಸ ಮಾಡಿದ್ದವು. ಇದು ಸಾರಾಂಶದಲ್ಲಿ ಎರಡು ದೇಶಗಳ ಸಿದ್ಧಾಂತದ ಅನುಮೋದನೆಯೇ ಆಗಿತು. ಏಕೆಂದರೆ ಮುಸ್ಲಿಮರು ಐಕ್ಯ ಭಾರತದಲ್ಲಿ ಹಿಂದೂಗಳ ಜೊತೆ ಜೀವಿಸಲು ಸಾಧ್ಯವಾಗದಿದ್ದಲ್ಲಿ ಪಂಜಾಬ್ ಮತ್ತು ಬಂಗಾಳ ಪ್ರಾಂತ್ಯದ ಹಿಂದೂಗಳು ಮತ್ತು ಸಿಕ್ಕರೂ ಸಹ ಪಾಕಿಸ್ತಾನದಲ್ಲಿ ಇರಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಹಾಗೂ ಹಿಂದೂ ಮಹಾ ಸಭಾ ಪ್ರತಿಪಾದಿಸಿದವು. ಇಂಥಾ ಐತಿಹಾಸಿಕ ವಿವರಗಳನ್ನು ರಾಷ್ಟ್ರೀಯವಾದಿ ಇತಿಹಾಸಕಾರರು ಸಾರಾಸಗಟಾಗಿ ತಿರಸ್ಕರಿಸುತ್ತಾರಲ್ಲದೆ ಅವು ಕಾಂಗ್ರೆಸ್ಸಿಗೆ ಕೆಟ್ಟ ಹೆಸರನ್ನು ತರಲು ’ನವ ಸಾಮ್ರಾಜ್ಯಶಾಹಿಗಳು’ ಮಾಡುತ್ತಿರುವ ಕುತಂತ್ರವೆಂದೂ ನಿಂದಿಸುತ್ತಾರೆ. ಆದರೆ ಈಗಲಾದರು ಈ ಸತ್ಯ ಸಂಗತಿಗಳನ್ನು ಬಹಿರಂಗವಾಗಿ ಚರ್ಚಿಸುವ ಅಗತ್ಯವಿದೆ.

ಅದೇ ಸಮಯದಲ್ಲಿ ಕಳೆದ ವಾರ ಎಎಂಯು ನಲ್ಲಿ ನಡೆದ ಹಿಂಸಾಚಾರಕ್ಕೆ ಯಾವುದೇ ಐತಿಹಾಸಿಕ ವ್ಯ್ಯಾಖ್ಯಾನಗಳ ಬಗ್ಗೆ ಇದ್ದ ವಿವಾದವು ಕಾರಣವಲ್ಲ ಎಂಬುದನ್ನೂ ಸಹ ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಅದು ವಾಸ್ತವವಾಗಿ ವಿಮರ್ಶಾತ್ಮಕ ಚಿಂತನೆಗಳನ್ನು ಹುಟ್ಟುಹಾಕುವ ಕೇಂದ್ರಗಳನ್ನು ಸರ್ವನಾಶ ಮಾಡಬೇಕೆಂದಿರುವ ಬಿಜೆಪಿಯ ಪ್ರಯತ್ನಗಳಲ್ಲಿ ಒಂದು. ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯವು (ಎಎಂಯು) ಈಗಲೂ ತನ್ಮ ಹೆಸರಿನಲ್ಲಿ ಮುಸ್ಲಿಂ’ ಎಂಬ ಪದವನ್ನು ಉಳಿಸಿಕೊಳ್ಳುವಷ್ಟು ಧೈರ್ಯವನ್ನು ತೋರಿಸುತ್ತಿದೆ. ಹೀಗಾಗಿಯೇ ಅದು  ಮೋದಿಯ ಭಾರತದಲ್ಲಿ ಮತ್ತು ಯೋಗಿ ಆದಿತ್ಯನಾಥರ ಉತ್ತರ ಪ್ರದೇಶದಲ್ಲಿ ದಾಳಿಗೆ ಗುರಿಯಾಗುತ್ತಿರುವುದರಲ್ಲಿ ಏನೂ ಆಶ್ಚರ್ಯವಿಲ್ಲ. ಈ ದಾಳಿಯನ್ನು ಮೋದಿಯವರ ಆಳ್ವಿಕೆಯ ಕೊನೆಯ ವರ್ಷದಲ್ಲಿ ಮಾಡಿರುವ ಉದ್ದೇಶ ಅದರ ಪರಿಣಾಮವು ೨೦೧೯ರ ಚುನಾವಣೆಗಳ ಮೇಲೂ ಬೀರುವಂತೆ ಮಾಡುವುದೇ ಅಗಿದೆ. ಅಷ್ಟಂತೂ ಸ್ಪಷ್ಟ.

ಕೃಪೆ: Economic and Political Weekly

ಅನು: ಶಿವಸುಂದರ್

Leave a Reply

Your email address will not be published.