ಅಪರಾತಪರಾ : ಖ್ಯಾತ ಪತ್ರಕರ್ತ ಎಡವಟ್‌ ಎಲ್ಲಪ್ಪ ಮೀಟ್ಸ್‌ ರೋಗಿ ಆದಿತ್ಯನಾಥ್‌…

-ಪಿ.ಕೆ.ಮಲ್ಲನಗೌಡರ್

ವಿಡಂಬನೆ: ಅಪರಾತಪರಾ
ರೋಗಿ ಆದಿತ್ಯನಾಥರ (ಸಂ)ದರ್ಶನ
ಕಲರ್ ಕೇಳಿದ್ರಾ? ನಾ ಹಾಕೋದೇ ಇಲ್ವಲ್ಲ?
ರೋಗಿ ಆದಿತ್ಯನಾಥರ ಮಹಾನ್ ಅಭಿಮಾನಿಯಾಗಿರುವ ಪತ್ರಕರ್ತ ಎಡವಟ್ ಎಲ್ಲಪ್ಪ ಹೇಗಾದರೂ ಮಾಡಿ ಈ ಸಲ ರೋಗಿ ಆದಿತ್ಯರ ದರ್ಶನ ಪಡೆದು, ಒಂದ್ ಸಂದರ್ಶನಾನೂ ಮಾಡಿಯೇ ಬಿಡಾಣ ಎಂದು ಬಹುದಿನದಿಂದ ಕಾಯ್ದೇ ಕಾಯ್ದ. ಅವರು ರಾಜ್ಯಕ್ಕೆ ಬಂದು ಇಲ್ಲಿ ಅಧರ್ಮದ ಧೂಳ್ ಎಬ್ಬಿಸುತ್ತಿದ್ದಾಗ ಅಲ್ಲಿ ಅವರ ರಾಮರಾಜ್ಯದಲ್ಲಿ ಬಿರುಗಾಳಿ ಬೀಸಿದ್ದರಿಂದ ವಾಪಸ್ ಹೋಗಿಬಿಟ್ಟರು.
ಆದರೆ ಎಡವಟ್ ಎಲ್ಲಪ್ಪ ಬಿಡಬೇಕಲ್ಲ. ಹಾಗೂ ಹೀಗೂ ಯುಪಿ ತಲುಪೇ ಬಿಟ್ಟ. ರೋಗಿ ಆದಿತ್ಯರ ಅಲಂಕೃತ ಕಚೇರಿ ತಲುಪಿ, ಮೊದಲೇ ನಿಗದಿ ಮಾಡಿಕೊಂಡಿದ್ದ ಅಪಾಯಿಂಟ್‍ಮೆಂಟ್ ಸಮಯಕ್ಕೆ ಕಾಯ್ದ. ಆಹಾ, ಎಷ್ಟೊಂದು ಸ್ವಾಮಿ, ಸಾಧು ಸಂತರು ಕಾದಿದ್ದಾರೆ ನಮ್ಮ ಆದಿತ್ಯರ ಭೇಟಿಗಾಗಿ ಎಂದು ಪುಲಕಗೊಂಡ .
ಎಲ್ಲಪ್ಪನ ಪಾಳೆ ಬಂತು. ಸಂದರ್ಶನಕ್ಕೂ ಮೊದಲು ಆದಿತ್ಯರ ಕಾಲುಮುಟ್ಟಿ ದರ್ಶನ ಪಡೆದ.

ಎಲ್ಲಪ್ಪ: ರೇಪು, ಕೊಲೆ ಎಲ್ಲ ನಡೆತಿದ್ದರೂ ತಾವು ಎಷ್ಟು ನಿರಾಳರಾಗಿ ಸಾಧು ಸಂತರ ಭೇಟಿಯಲ್ಲಿ ಆನಂದವಾಗಿದ್ದರಲ್ಲ?
ಆದಿತ್ಯ: (ಇಷ್ಟಗಲ ಬಾಯಗಲಿಸಿ ನಕ್ಕು) ಯುಪಿಗೆ ಒಬ್ಬ ಸನ್ಯಾಸಿಯೇ ಸಿಎಂ ಆಗಬೇಕೆಂದು ನಮ್ಮ ದೊಡ್ಡ ನಾಯಕರು ಚುನಾವಣೆಗೂ ಮೊದಲೇ ನಿರ್ಧರಿಸಿದ್ದರು. ಈಗ ನೊಡು, ರಾಜ್ಯದೆಲ್ಲೆಡೆ ಈಗ ಸಾಮಾಜಿಕ ಉದ್ವಿಗ್ನತೆ ಇದೆ. ಬೇರೆಯವರಾಗಿದ್ದರೆ ಹೆದರಿ ಬಿಡುತ್ತಿದ್ದರು. ನಮ್ಮಂತಹ ಸನ್ಯಾಸಿಗಳಷ್ಟೇ ಇಷ್ಟು ನಿರಾಳವಾಗಿ ಕೂಡಲು ಸಾಧ್ಯ.
ಎಲ್ಲಪ್ಪ: ಸರ್, ಸಾರಿ, ಗುರೂಜಿಯವರೇ, ರೇಪು, ಕೊಲೆಗಳ ಬಗ್ಗೆ ಹೇಳಿ.
ಆದಿತ್ಯ: ಸಾಮಾನ್ಯ ಮನುಷ್ಯರಿಗೆ ಕಾಮವನ್ನು ನಿಯಂತ್ರಿಸಲಾಗುವುದಿಲ್ಲ. ಅದು ಮಾನವ ಸಹಜ ಗುಣವೇ ಅಲ್ಲವೇ? ಈ ರೇಪು ಸಮಸ್ಯೆ ಬಗೆಹರಿಸಲು ನಾವೊಂದು ಯೋಜನೆ ಘೋಷಿಸಲಿದ್ದೇವೆ. ‘ಯುವ ಸನ್ಯಾಸ್’ ಹೆಸರಿನ ಈ ಯೋಜನೆಯಲ್ಲಿ ಯುವಕರಿಗೆ ಸನ್ಯಾಸ ದೀಕ್ಷೆ ನೀಡಿ, ತಿಂಗಳಿಗೆ ಎರಡು ಸಾವಿರ ‘ಕಾಮ ನಿಯಂತ್ರಣ ಭತ್ಯೆ’ ನೀಡಲಿದ್ದೇವೆ. ಇದು ಒಂದು ರೀತಿಯಲ್ಲಿ ಉದ್ಯೋಗ ಯೋಜನೆಯೂ ಹೌದು. ಇನ್ನು ಕೊಲೆಯ ವಿಷಯ. ಅದನ್ನ ಕೊಲೆ ಅನ್ನಲ್ಲ. ಧರ್ಮ ಸಂಘರ್ಷ ಅದು.
ಎಲ್ಲಪ್ಪ: ಮತ್ತೆ ಎಲ್ಲದಕ್ಕೂ ಕೇಸರಿ ಬಣ್ಣಾನೇ ಹಚ್ಚೋದ್ಯಾಕೆ?
ಆದಿತ್ಯ: ಇನ್ನೇನು ಕೆಂಪು ಬಣ್ಣ ಹಚ್ಚೋಕಾಗುತ್ತ? ಬಸ್ಸಿಗೂ ಕೇಸರಿ, ಶೌಚಾಲಯಕ್ಕೂ ಕೇಸರಿ, ಅಂಬೇಡ್ಕರ್ ಮೂರ್ತಿಗೂ ಕೇಸರಿ, ಶಾಲಾ ಮಕ್ಕಳ ಬುಕ್ಕಿಗೂ ಕೇಸರಿ…
ಎಲ್ಲಪ್ಪ: ನಿಮ್ಮ ಡ್ರೆಸ್ಸೇ ಕೇಸರಿ ಅಲ್ಲವೇ ಗುರೂಜಿ?
ಆದಿತ್ಯ: ಅದಕ್ಕೆ ಅಲ್ಲವೇ ಎಲ್ಲ ಕೇಸರಿಮಯ ಮಾಡ್ತಿರೋದು.
ಎಲ್ಲಪ್ಪ: ಗುರೂಜಿ, ತಪ್ಪು ತಿಳಿಬೇಡಿ. ಕೊನೆ ಪ್ರಶ್ನೆ. (ಆದಿತ್ಯರ ಕಡೆ ಬಾಗಿ, ಮೆಲ್ಲಗೆ) ಗುರೂಜಿ, ನಿಮ್ಮ ಅಂಡರ್‌ವೇರ್‌ ಕಲರೂ ಕೇಸರಿನಾ?
ಆದಿತ್ಯ: (ಜೋರಾಗಿ ನಗುತ್ತ) ಹಹಹಹಹಹಹ ಹಾ….ಚೆಡ್ಡಿ ಕಲರಾ? ನಾನ್ ಹಾಕೋದೇ ಇಲ್ಲ. ನಾವು ಸನ್ಯಾಸಿಗಳು. ಚೆಡ್ಡಿ ಇಲ್ಲದೆಯೂ ನಿಗ್ರಹಿಸಬಲ್ಲೆವು..
ಎಲ್ಲಪ್ಪ: ಗುರೂಜಿ, ಮತ್ತೆ ನಿಮ್ಮನ್ನು ಸಿಎಂ ಮಾಡಿದರಲ್ಲ ಆ ನಿಮ್ಮ ಮಹಾಗುರು ಏನ್ ಮಾಡ್ತಾರೆ?
ಆದಿತ್ಯ: ಅವರು ಅರೆ ಬ್ರಹ್ಮಚಾರಿ. ಹೀಗಾಗಿ ಕೇಸರಿ ಕಲರ್ ಚೆಡ್ಡಿ ಹಾಕ್ತಾರೆ. ಒಮ್ಮೊಮ್ಮೆ ಪಿಂಕ್ ಕೂಡ ಹಾಕ್ತಾರೆ.

Leave a Reply

Your email address will not be published.

Social Media Auto Publish Powered By : XYZScripts.com