ಕರ್ನಾಟಕ ರಾಜ್ಯದ ಫಲಿತಾಂಶ ಬಂದಾಗಿದೆ, ಕನ್ನಡ ನೆಲದ ಪರಂಪರೆ ಗೆದ್ದಾಗಿದೆ!

-ಪಿ.ಕೆ ಮಲ್ಲನಗೌಡರ್
ಶನಿವಾರ ಸಂಜೆ ಮತದಾನ ಮುಗಿದ ಬಳಿಕ ಹೊರಬೀಳಲಿರುವ ನಿರ್ಗಮನ ಸಮೀಕ್ಷೆ (ಮತಗಟ್ಟೆ ಸಮೀಕ್ಷೆ ಅಥವಾ ಎಕ್ಸಿಟ್ ಪೋಲ್)ಗಳು ಹೆಚ್ಚೂ ಕಡಿಮೆ ಒಂದು ಅಂದಾಜು ಟ್ರೆಂಡ್ ಅನ್ನು ನಮ್ಮ ಮುಂದಿಡಲಿವೆ.
ಅದಿರಲಿ, ನಾವು ಹೇಳುತ್ತಿರುವ ಫಲಿತಾಂಶವೇ ಬೇರೆ. ಇದರಲ್ಲಿ ಕನ್ನಡದ ಸೌಹಾರ್ದ ಮತ್ತು ಸಾಂಸ್ಕೃತಿಕ ಪರಂಪರೆಯು ಇಡೀ ದೇಶದ ಪ್ರಜ್ಞಾವಂತ ಮನಸ್ಸುಗಳು ಮತ್ತು ಆಸಕ್ತಿಯುಳ್ಳ ಸಾಮಾನ್ಯ ಜನರನ್ನು ಸೆಳೆದಿದೆ. ಅಷ್ಟರ ಮಟ್ಟಿಗೆ ಇಲ್ಲಿ ರಾಜಕೀಯದಿಂದ ಹೊರತಾಗಿ, ಕರ್ನಾಟಕದ ಅನನ್ಯತೆ, ಕನ್ನಡ ಅಸ್ಮಿತೆಯ ಮಹತ್ವ ದೇಶದ ಗಡಿಯನ್ನೂ ದಾಟಿ ಪಸರಿಸಿದೆ.
ಉತ್ತರಪ್ರದೇಶ ಮತ್ತು ಗುಜರಾತ್ ವಿಧಾನಸಭೆಯ ಚುನಾವಣೆಯ ಸಂದರ್ಭಗಳನ್ನು ನೆನಪಿಸಿಕೊಳ್ಳಿ. ಆಗ ಕರ್ನಾಟಕದಲ್ಲಿ ಮತ್ತು ಒಟ್ಟಾರೆ ದಕ್ಷಿಣ ಭಾರತದಲ್ಲಿ ನಾವೇನು ಚರ್ಚೆ ಮಾಡುತ್ತಿದ್ದೆವು? ಉತ್ತರ ಪ್ರದೇಶದಲ್ಲಿ ಮೇಲ್ನೋಟಕ್ಕೆ ನೋಟು ಅಮಾನ್ಯೀಕರಣದ ವಿಷಯ ಚುನಾವಣಾ ಇಶ್ಯೂ ಅಂತನಿಸಿದರೂ, ಅಲ್ಲಿ ಅಂಡರ್ ಕರೆಂಟ್ ಆಗಿ ಪ್ರವಹಿಸಿದ್ದು ಕೋಮು ಧ್ರುವೀಕರಣ. ಮುಜಫರ್ ನಗರದಲ್ಲಿ ನಡೆದ ಕೋಮುಗಲಭೆಯ ವಿಷಯ ಇಟ್ಟುಕೊಂಡು ಅಲ್ಲಿ ಧ್ರುವೀಕರಣ ಮಾಡಲಾಯಿತು.
ಗುಜರಾತ್ ಚುನಾವಣೆಯ ವೇಳೆ ಅಭಿವೃದ್ಧಿಯ ವಿಷಯ ಗೌಣವಾಗಿ, ಗುಜರಾತ್ ಅಸ್ಮಿತೆಯ ಸಂಗತಿಯನ್ನು ಮುಂದೆ ಇಡಲಾಯಿತು. ಈ ಅಸ್ಮಿತೆಯ ಕುರಿತಾಗಿ ದಕ್ಷಿಣದಲ್ಲಿ ನಾವ್ಯಾರು ಚರ್ಚಿಸಲಿಲ್ಲ. ಮತ್ತಲ್ಲಿ ಪಾಕಿಸ್ತಾನದ ವಿಷಯವೂ ಮುನ್ನೆಲೆಗೆ ಬಂದು ಅವಕಾಶವಾದಿ ರಾಜಕಾರಣ ವಿಜೃಂಭಿಸಿತ್ತು.

ಈಗ ನಮ್ಮ ಈ ಚುನಾವಣಾ ಸಂದರ್ಭ ಗಮನಿಸಿ. ಇಲ್ಲಿ ಎಲ್ಲ ಕಡೆ ಆಗುವಂತೆ ವೈಯಕ್ತಿಕ ನಿಂದನೆ, ಕೀಳುಮಟ್ಟದ ಭಾಷಾ ಪ್ರಯೋಗ ಎಲ್ಲ ನಡೆಯಿತು. ಆದರೆ ರಾಜ್ಯದ ಹೊರಗಡೆ ಹೆಚ್ಚು ಚರ್ಚೆಯಾಗಿದ್ದು, ಬಸವಣ್ಣ. ರಾಜಕೀಯ, ಇತಿಹಾಸ ಮತ್ತು ಸಮಾಜಶಾಸ್ತ್ರದ ಗಂಭೀರ ವಿದ್ಯಾರ್ಥಿಗಳು ಗೂಗಲ್ ಸರ್ಚ್‍ನಲ್ಲಿ ಬಸವಣ್ಣ, ಕರ್ನಾಟಕ ವಚನಕಾರರು, ಕರ್ನಾಟಕ ಇನ್ ಟ್ವೆಲ್ತ್‌ ಸೆಂಚುರಿ ಎಂಬ ಕೀ ವರ್ಡ್ಸ್‌ ಬಳಸಿ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.
ಪ್ರತಿಷ್ಠಿತ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕಾರಿಡಾರ್ ಕಟ್ಟೆಗಳಲ್ಲಿ ‘ಕರ್ನಾಟಕ ಈ ಚುನಾವಣೆಯ ಮೂಲಕ ದೇಶಕ್ಕೆ ಮಾದರಿ ಸಂದೇಶ ನೀಡಬಹುದೇ?’ ಎಂದೆಲ್ಲ ಚರ್ಚೆಗಳು ನಡೆದಿವೆ. ಇಲ್ಲಿನ ಸೌಹಾರ್ದ ಪರಂಪರೆ ಕುರಿತು ಮೆಚ್ಚುಗೆಗಳು ವ್ಯಕ್ತವಾಗಿವೆ. ಅಂದಂತೆ ಜೆಎನ್‍ಯುನ ಎರಡು ಪ್ರಾಡಕ್ಟ್‌ಗಳು ಈ ಸಲ ಕರ್ನಾಟಕದ ಚುನಾವಣಾ ಕಣದಲ್ಲಿವೆ. ಚಿತ್ತಾಪುರದಲ್ಲಿ ಬಿಎಸ್‍ಪಿಯಿಂದ ಸ್ಪರ್ಧಿಸಿರುವ 27ರ ಹರೆಯದ ದೇವರಾಜ್ ಸದ್ಯ ಗುಲಬರ್ಗಾ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿದ್ದು, ಜೆಎನ್‍ಯುನಲ್ಲಿ ಪಿಎಚ್‍ಡಿ ಮಾಡುತ್ತಿದ್ದಾರೆ. ಆನೇಕಲ್‍ನಲ್ಲಿ ಬಿಎಸ್‍ಪಿ ಅಭ್ಯರ್ಥಿಯಾಗಿರುವ ಡಾ. ಶ್ರೀನಿವಾಸ 4 ವರ್ಷಗಳ ಹಿಂದೆ ಜೆಎನ್‍ಯುನಿಂದ ಪಿಎಚ್‍ಡಿ ಪಡೆದಿದ್ದಾರೆ. ಈ ಎರಡು ವಿಷಯಗಳೂ ಕೂಡ ಜೆಎನ್‍ಯು ಕ್ಯಾಂಪಸ್‍ನಲ್ಲಿ ರಾಜ್ಯದ ಚರ್ಚೆ ನಡೆಯಲು ಕಾರಣವಾಗಿವೆ. ಅಲ್ಲಿ ಎಲ್ಲ ಚುನಾವಣೆಗಳ ಕುರಿತು ಚರ್ಚೆ ನಡೆಯುತ್ತದೆ, ಆದರೆ ಕರ್ನಾಟಕದ ಕುರಿತ ಚರ್ಚೆಯು ಈ ನೆಲದ ಅನನ್ಯ ಪರಂಪರೆಯ ಆಯಾಮದ ನೆಲೆಯಲ್ಲಿ ನಡೆಯಿತು.
ಇದೇ ಬಗೆಯ ಚರ್ಚೆಯನ್ನು ವ್ಯಾಪಕಗೊಳಿಸಿದ್ದು ಪ್ರಣಬ್ ರಾಯ್ ನೇತೃತ್ವದ ಎನ್‍ಡಿಟಿವಿಯ ತಂಡ. ಶಿರಹಟ್ಟಯ ಫಕೀರಸ್ವಾಮಿ ಮಠದ ನೆಲವನ್ನು ಚರ್ಚೆಗೆ ಆಯ್ದುಕೊಂಡಿದ್ದ ಎನ್‍ಡಿಟಿವಿಯ ತಂಡ ತಾನು ನಿಂತ ಜಾಗದ ಮೂಲಕವೇ ಇಲ್ಲಿನ ಸೌಹಾರ್ದ ಪರಂಪರೆಯ ಸಂದೇಶವನ್ನು ದೇಶಕ್ಕೆ ತಲುಪಿಸಿತು.
‘ಹೈಪ್ ವರ್ಸಸ್ ಟ್ರೂಥ್’ ಎಂಬ ಸತ್ಯಾನ್ವೇಷಣೆಯ ಕಾರ್ಯಕ್ರಮ ನಡೆಸಿ ಕೊಡುವ ಶ್ರೀನಿವಾಸನ್ ರಾಜ್ಯದಲ್ಲೇ ಠಿಕಾಣಿ ಹೂಡಿ, ಇಲ್ಲಿನ ಸಂಸ್ಕೃತಿ, ಸಾಹಿತ್ಯದಲ್ಲಿ ಅಡಗಿರುವ ಜೀವಪ್ರೀತಿಯ ಆಶಯಗಳನ್ನು ಎತ್ತಿ ತೋರಿಸಿದರು. ರಿಪಬ್ಲಿಕ್ ಟಿವಿಯ ಅರ್ನಾಬ್ ಗೋಸ್ವಾಮಿಗೆ, ಲಿಂಗಾಯತ ಪ್ರತ್ಯೇಕ ಧರ್ಮದ ವಿಷಯ ಧರ್ಮ ಒಡೆಯುವ ಕೆಲಸವಾಗಿ ಕಂಡರೆ, ಶ್ರೀನಿವಾಸನ್ ಈ ಇಶ್ಯೂವನ್ನು ಬೇರೆ ಆಯಾಮಕ್ಕೆ ತೆಗೆದುಕೊಂಡು ಹೋದರು. ಬಸವಣ್ಣ ಮಹಾನ್ ಪ್ರಜಾಪ್ರಭುತ್ವವಾದಿ ಎಂದು, ಸಂವಿಧಾನದ ಆಶಯಗಳೆಲ್ಲ ವಚನಗಳಲ್ಲಿ ಅಡಕವಾಗಿವೆ ಎಂದು ನಮ್ಮ ಶರಣ ಪರಂಪರೆಯ ಮಹತ್ವವನ್ನು ತೋರಿಸಿದರು. ಇದಕ್ಕಾಗಿ ಅವರು ಸುಗತ ಶ್ರೀನಿವಾಸರಾಜು, ಶಿವಸುಂದರ್ ಅವರ ನೆರವು ಪಡೆದರು.

ಉತ್ತರ ಕನ್ನಡ ಮತ್ತು ಕರಾವಳಿಯಲ್ಲಿ ಚುನಾವಣೆ ಘೋಷಣೆಗೂ ಸ್ವಲ್ಪ ಮೊದಲು ನಡೆದ ಮೂರು ಕೊಲೆಗಳು ಕೋಮು ಸ್ವರೂಪ ಪಡೆದುಕೊಂಡಿದ್ದವು. ನಮ್ಮ ಕಾರ್ಯಕರ್ತರನ್ನು ನಿರಂತರವಾಗಿ ಕೊಲೆ ಮಾಡಲಾಗುತ್ತಿದೆ ಎಂಬುದನ್ನು ಚುನಾವಣಾ ವಿಷಯ ಮಾಡಲು ಪಕ್ಷವೊಂದು ಯತ್ನಿಸಿತು. ಆ ಮೂಲಕ ಧ್ರುವೀಕರಣ ಮಾಡುವ ಹುನ್ನಾರ ಇದರ ಹಿಂದೆ ಇತ್ತು.ಆದರೆ ಕರ್ನಾಟಕದ ಜನ ಇದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಇದು ಕೂಡ ಕರ್ನಾಟಕದ, ಒಟ್ಟಾರೆ ದಕ್ಷಿಣ ಭಾರತದ ಪರಂಪರಾಗತ ಸಹಬಾಳ್ವೆಗೆ ದೊರಕಿದ ಗೆಲುವು.
ಹೀಗಾಗಿ, ಚುನಾವಣಾ ರಾಜಕಾರಣದ ಫಲಿತಾಂಶ ಆಚೆಗಿಟ್ಟು ನೋಡಿದಾಗ, ಈಗ ಕನ್ನಡದ ಅನನ್ಯ ಪರಂಪರೆ ಗೆದ್ದಾಗಿದೆ. ಈ ಅಂಶ ಇವಿಎಂಗಳಲ್ಲೂ ಪ್ರತಿಫಲಿಸಿದರೆ ಚುನಾವಣಾ ಫಲಿತಾಂಶವನ್ನು ನೀವೇ ಊಹಿಸಬಹುದು.

ಕನ್ನಡ ನೆಲದ ಗುಣಗಾನ ಮಾಡಿದ ಕನ್ಹಯ್ಯ, ಮೇವಾನಿ
ತನ್ನ ತವರು ರಾಜ್ಯ ಗುಜರಾತ್‍ನೊಂದಿಗೆ ಹೋಲಿಕೆ ಮಾಡುತ್ತಾ ಶಾಸಕ, ದಲಿತ ಹೋರಾಟಗಾರ ಜಿಗ್ನೇಶ್ ಹೀಗೆ ಹೇಳಿದರು: ಇಲ್ಲಿನ ಸಮಾಜದಲ್ಲಿ ಜಾತಿ ಸಂಕುಚಿತತೆ ಅಷ್ಟು ಆಳಕ್ಕಿಲ್ಲ. ಇಲ್ಲಿನ ಸಮಾಜದ ಅರಿವು ಉನ್ನತ ಮಟ್ಟದಲ್ಲಿದೆ. ಇಲ್ಲಿನ ಸಮಾಜ ವೈಬ್ರಂಟ್ ಆಗಿದೆ ಎಂದಿದ್ದರು. ಕನ್ಹಯ್ಯ ಕೂಡ ಇದೇ ಬಗೆಯ ವಿಶ್ಲೇಷಣೆ ನಡೆಸಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com