ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿಯವರಿಗೆ ವಿನಮ್ರವಾಗಿ ಸವಾಲೆಸೆದ ದರ್ಶನ್‌ ಪುಟ್ಟಣ್ಣಯ್ಯ !

ಮಂಡ್ಯ : ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ಚುನಾವಣಾ ಪ್ರಚಾರ ಸಂದರ್ಭದಲ್ಲಿ ರೈತರ ನಾಯಕ ಪುಟ್ಟಣ್ಣಯ್ಯ ಕುರಿ ತು ಅವಹೇಳನಕಾರಿ ಮಾತುಗಳನ್ನಾಡಿದ್ದರು. ರೈತರ ಹೆಸರು ಹೇಳಿಕೊಂಡು ಕಳೆದ ಐದು ವರ್ಷಗಳ ಕಾಲ ಶಾಸಕರು ಯಾವ ರೀತಿಯಲ್ಲಿ ಕೆಲಸ ಮಾಡಿದ್ದಾರೆ, ಹೇಗೆಲ್ಲಾ ದುಡ್ಡು ಮಾಡಿದ್ದಾರೆ ಎಂಬುವುದು ನನಗೆ ಗೊತ್ತು ಎಂದು ಆರೋಪ ಮಾಡಿದ್ದರು. ಈ ಮಾತಿಗೆ ಇದೀಗ ಪುಟ್ಟಣ್ಣಯ್ಯರವರ ಪುತ್ರ ದರ್ಶನ್ ಫೇಸ್ ಬುಕ್ ಮೂಲಕ ಪ್ರತಿಕ್ರಿಯೆ ನಿಡಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಆರೋಪ, ಪ್ರತ್ಯಾರೋಪ ಇದ್ದೇ ಇರುತ್ತದೆ. ನಾನಂತೂ ಯಾರ ಮೇಲೂ ಸುಳ್ಳು ಆರೋಪ ಮಾಡುವುದಿಲ್ಲ. ಹಿರಿಯರಾದ ಶ್ರೀ ಕುಮಾರಣ್ಣನವರಿಗೆ ಸುಳ್ಳು ಆರೋಪ ಮಾಡಬೇಡಿ ಎಂದು ವಿನಂತಿಸುವುದು ತಪ್ಪಲ್ಲ ಎಂದುಕೊಂಡಿದ್ದೇನೆ. ಇಡೀ ರಾಜ್ಯಕ್ಕೆ ಗೊತ್ತು, ನನ್ನ ಅಪ್ಪ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸಿಲ್ಲ ಹಾಗೂ ನಾಟಕವಾಡಿಲ್ಲ. ಕುಮಾರಣ್ಣನವರು ನನ್ನ ತಂದೆಯ ಬಗ್ಗೆ ಸುಳ್ಳು ಆರೋಪ ಮಾಡಬಾರದಿತ್ತು.

ಶ್ರೀ ಕುಮಾರಣ್ಣನವರ ಹತಾಶೆಯನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ, ನಾನು ಭೇಟಿ ಮಾಡಿದ ಅನೇಕ ಜೆಡಿಎಸ್ ಮುಖಂಡರು ನಮ್ಮ ಹುಡುಗರು ಈಗ ನಿನ್ನ ಪರ ಆಗಿಬಿಟ್ಟಿದ್ದಾರಪ್ಪ. ನಮ್ಮ ಮನೆಯ ಹೆಣ್ಣು ಮಕ್ಕಳು ನಿನಗೇ ಓಟು ಹಾಕೋದು ಗ್ಯಾರಂಟಿ ಅನಿಸ್ತಾ ಇದೆ. ಈಗ ಅವ್ರು ನಮ್ಮ ಮಾತು ಕೇಳುತ್ತಿಲ್ಲ, ನಿಮ್ಮಪ್ಪನ ಕಾಲದಲ್ಲಿ ಈ ರೀತಿ ಆಗಿರಲಿಲ್ಲ. ನಮಗೆ ನುಂಗಲಾರದ ತುತ್ತಾಗಿದೆ ಎಂದು ಹೇಳುತ್ತಿದ್ದಾರೆ. ಹೀಗಿರುವಾಗ ಹತಾಶೆ ಸಹಜವೇ. ಆದರೂ ನಮ್ಮ ಅಪ್ಪನ ಬಗ್ಗೆ ಇಂಥ ಅನ್ಯಾಯದ ಮಾತು ಆಡಬೇಡಿ ಎಂದು ವಿನಂತಿಸುವೆ.

ಅಥವಾ ನನ್ನ ಅಪ್ಪನ ಆಸ್ತಿ ಹಾಗೂ ಶ್ರೀ ಪುಟ್ಟರಾಜಣ್ಣನವರ ಆಸ್ತಿಯನ್ನು ಅದಲು ಬದಲು ಮಾಡಿಸಿಕೊಡಿ. ತಾವು ಕೃಪೆ ತೋರಿ ಹಾಗೆ ಮಾಡಿಕೊಡಿಸುವುದಾದರೆ ನನಗೆ ಬರುವ ನೂರಾರು ಕೋಟಿ ರೂಪಾಯಿಗಳನ್ನು ಕ್ಷೇತ್ರದ ಅಭಿವೃದ್ಧಿಗೆ ವಿನಿಯೋಗಿಸುತ್ತೇನೆ ಎಂದು ನಾನು ತಮಗೆ ವಚನ ಕೊಡುತ್ತೇನೆ. ನಾನು ವಚನ ಭ್ರಷ್ಟ ಆಗುವುದಿಲ್ಲ. ಇದು ನನ್ನ ವಿನಮ್ರ ಸವಾಲು ಎಂದು ಪ್ರತಿಕ್ರಿಯೆ ನಿಡಿದ್ದಾರೆ.

Leave a Reply

Your email address will not be published.