Ensuddi Election SPl : ಹಳೇ ಮೈಸೂರಿನಲ್ಲಿ ಕೊಂಚ ಕುಂಟಲಿದೆ ಕಾಂಗ್ರೆಸ್ ಪಾರಮ್ಯ …

ಮೈಸೂರು, ಮಂಡ್ಯ, ಚಾ.ನಗರ ತ್ರಿವಳಿ ಜಿಲ್ಲೆಗಳಲ್ಲಿ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರಿನಲ್ಲಿ ಅವರ ಆಡಳಿತದ ಪ್ರಭಾವ ಹೆಚ್ಚಾಗಿರುವುದು ನಿಚ್ಚಳವಾಗಿದೆ. ಸಿದ್ದು ಏಳ್ಗೆಯಿಂದ ಕಂಗೆಟ್ಟ ಎದುರಾಳಿ ಜೆಡಿಎಸ್ ಮತ್ತು ಬಿಜೆಪಿ ಜೊತೆಗೂಡಿ ಕಾಂಗ್ರೆಸ್ ಮಣಿಸಲು ಕಸರತ್ತು ನಡೆಸುತ್ತಿವೆ. ಹಾಟ್‍ಸ್ಪಾಟ್ ಅಖಾಡವಾದ ಚಾಮುಂಡೇಶ್ವರಿಯಲ್ಲಿ ಸಿದ್ದು ಸೋಲಿಸಲು ಜೆ.ಡಿ.ಎಸ್ ಭಾರೀ ರಣತಂತ್ರ ಹೆಣೆದಿದೆ.

ಮೈಸೂರು ಜಿಲ್ಲೆಯ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕಳೆದ ಬಾರಿ 8 ಕ್ಷೇತ್ರಗಳಲ್ಲಿ ಬಾವುಟ ಹಾರಿಸಿತ್ತು. ಈ ಬಾರಿ 5 ಸ್ಥಾನಗಳಲ್ಲಿ ಗೆಲುವಿನ ಹಾದಿ ಸ್ಪಷ್ಟವಾಗಿದ್ದರೂ ಇನ್ನುಳಿದ ಕ್ಷೇತ್ರಗಳಲ್ಲಿ ತೀವ್ರ ಪೈಪೋಟಿ ಎದುರಿಸಬೇಕಾಗಿದೆ. ಸಂಸದನನ್ನು ಹೊಂದಿರುವ ಬಿಜೆಪಿಯದ್ದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಪರಿಸ್ಥಿತಿ.

ಚಾಮರಾಜನಗರ ಜಿಲ್ಲೆಯ ನಾಲ್ಕೂ ಕ್ಷೇತ್ರಗಳು ಕಳೆದ ಬಾರಿ ಕಾಂಗ್ರೆಸ್ ಪಾಲಾಗಿದ್ದವು. ಈ ಬಾರಿ ಕಾಂಗ್ರೆಸ್ 4ರಲ್ಲಿ ಕನಿಷ್ಟ ಮೂರು ಸ್ಥಾನಗಳನ್ನು ಗೆದ್ದುಕೊಳ್ಳುವ ವಿಶ್ವಾಸದಲ್ಲಿದೆ. ಕೊಳ್ಳೇಗಾಲದಲ್ಲಿ ಬಿ.ಎಸ್.ಪಿ ಖಾತೆ ತೆರೆಯಲು ಕಠಿಣ ಪರಿಶ್ರಮ ಹಾಕಿದ್ದರೂ ಅದು ಸುಲಭದ ತುತ್ತಾಗಿಲ್ಲ.

ಇನ್ನು ಜೆ.ಡಿ.ಎಸ್.ನ ಭದ್ರಕೋಟೆ ಎನಿಸಿಕೊಂಡಿರುವ ಮಂಡ್ಯ ಜಿಲ್ಲೆಯಲ್ಲಿ ಒಕ್ಕಲಿಗ ಜಾತಿಯ ಮತಗಳ ಧ್ರುವೀಕರಣ ಹಿಂದೆಂದಿಗಿಂತಲೂ ಈ ಬಾರಿ ಇನ್ನಷ್ಟು ಎದ್ದು ಕಾಣುತ್ತಿದೆ. ಇದು ಜೆ.ಡಿ.ಎಸ್‍ಗೆ ಅನುಕೂಲಕರ ಅಂಶ. ಕಳೆದ ಬಾರಿ 7 ಕ್ಷೇತ್ರಗಳ ಪೈಕಿ 4 ರಲ್ಲಿ ಜೆಡಿಎಸ್, 2 ರಲ್ಲಿ ಕಾಂಗ್ರೆಸ್ ಮತ್ತೊಂದು ಕ್ಷೇತ್ರದಲ್ಲಿ ರೈತನಾಯಕ ಪುಟ್ಟಣ್ಣಯ್ಯ ಆರಿಸಿ ಬಂದಿದ್ದರು.

ಮೈಸೂರು

ಜಿಲ್ಲೆಯ ವರುಣಾ, ಟಿ ನರಸೀಪುರ, ಎಚ್‍ಡಿ ಕೋಟೆ, ಚಾಮರಾಜ, ನಂಜನಗೂಡು ಈ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್‍ಗೆ ಗೆಲುವಿನ ಹಾದಿ ಸುಗಮವಾಗಿದೆ. ಸಿದ್ದರಾಮಯ್ಯನವರ ವರ್ಚಸ್ಸು, ಆಡಳಿತ ವಿರೋಧಿ ಅಲೆ ಇಲ್ಲದಿರುವುದು ಈ ಗೆಲುವಿಗೆ ಕಾರಣ. ಈ ಬಾರಿ ಪಿರಿಯಾಪಟ್ಟಣ ಕ್ಷೇತ್ರ ಜೆ.ಡಿ.ಎಸ್ ಕಡೆಗೆ ವಾಲುವಂತೆ ಕಾಣುತ್ತಿದೆ. ಹಾಲಿ ಶಾಸಕರಾಗಿರುವ ಮುಖ್ಯಮಂತ್ರಿಯವರ ನಿಕಟವರ್ತಿ ವೆಂಕಟೇಶ್ ಅವರಿಗೆ ಇದು ಅಗ್ನಿಪರೀಕ್ಷೆಯ ಚುನಾವಣೆ. ಹಾಗೆಯೇ ಚಾಮುಂಡೇಶ್ವರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಾದಿ ಸುಲಭವಾಗಿಲ್ಲ. ಜೆ.ಡಿ.ಎಸ್ ಅಭ್ಯರ್ಥಿ ಹಾಲಿ ಶಾಸಕ ಜಿ.ಟಿ.ದೇವೇಗೌಡರಿಗೆ ಜಾತಿ ಧ್ರುವೀಕರಣದ ಅನುಕೂಲವಿದೆ, ಕ್ಷೇತ್ರದ ಮೇಲೆ ಹಿಡಿತವೂ ಇದೆ. ಸಿದ್ದರಾಮಯ್ಯನವರು ಸಿಎಂ ಆದ ಮೇಲೆ ಕ್ಷೇತ್ರವನ್ನು ಕಡೆಗಣಿಸಿದರು ಎಂಬ ಪ್ರಚಾರ ಇಲ್ಲಿ ಬಹಳ ಜೋರಾಗಿದೆ.  ಹೀಗೆ ತೀವ್ರ ಕುತೂಹಲ ಕೆರಳಿಸಿರುವ ಈ ಕ್ಷೇತ್ರದಲ್ಲಿ ಇಂತವರೇ ಗೆಲ್ಲುತ್ತಾರೆಂದು ಹೇಳುವುದು ಕಷ್ಟ.

ಅದೇರೀತಿ, ನರಸಿಂಹರಾಜ ಕ್ಷೇತ್ರದ ಚಿತ್ರಣ ಕೂಡ ಸಂಕೀರ್ಣವಾಗಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಎಸ್‍ಡಿಪಿಐ ನಡುವೆ ತ್ರಿಕೋನ ಹಣಾಹಣಿ ಏರ್ಪಟ್ಟಿದೆ. ಮುಸ್ಲಿಮರೇ ಅಧಿಕ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಹಾಲಿ ಸಚಿವ ತನ್ವೀರ್ ಸೇಠ್ ಬಗ್ಗೆ ತೀವ್ರ ಅಸಮಾಧಾನ ಇದೆ. ಇಲ್ಲಿ ಎಸ್‍ಡಿಪಿಐನಿಂದ ಅಬ್ದುಲ್ ಮಜೀದ್ ತೀವ್ರ ಪೈಪೋಟಿ ಒಡ್ಡುತ್ತಿದ್ದಾರೆ. ಬಿಜೆಪಿಯಿಂದ ಸಂದೇಶ್ ನಾಗರಾಜು ತಮ್ಮ ಸಂದೇಶ್‍ಸ್ವಾಮಿ ಕಣದಲ್ಲಿದ್ದು, ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂಬಂತಾದರೂ ಆಶ್ಚರ್ಯವಿಲ್ಲ.

ಕೃಷ್ಣರಾಜ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿ ಇದ್ದು ಬಿಜೆಪಿಯ ಎ.ರಾಮದಾಸ್ ಗೆಲ್ಲುವ ಸಾಧ್ಯತೆಯಿದೆ. ಇಡೀ ಜಿಲ್ಲೆಯಾದ್ಯಂತ ಬಿಜೆಪಿ ಗೆಲ್ಲುವ ಸಾಧ್ಯತೆಯಿರುವುದು ಇದೊಂದೇ ಕ್ಷೇತ್ರದಲ್ಲಿ. ಉಳಿದ ಕಡೆ ಬಿಜೆಪಿ ಪ್ರಭಾವ ಗಣನೀಯವಾಗಿ ಕುಸಿದಿದೆ.

ಇನ್ನುಳಿದಂತೆ ಚಾಮರಾಜನಗರ, ಕೆ.ಆರ್.ನಗರ ಹಾಗೂ ಹುಣಸೂರುಗಳಲ್ಲಿ ಜೆ.ಡಿ.ಎಸ್ ಮತ್ತು ಕಾಂಗ್ರೆಸ್ ನಡುವೆಯೇ ನೇರ ಪೈಪೋಟಿ. ಹುಣಸೂರು ಮತ್ತು ಕೆ.ಆರ್.ನಗರಗಳಲ್ಲಿ ಜೆಡಿಎಸ್‍ಗೆ ಅನುಕೂಲಕರ ವಾತಾವರಣವಿದ್ದರೂ ವಲಸೆ ಹಕ್ಕಿ ಎಚ್.ವಿಶ್ವನಾಥ್ ಸೇರುಗಟ್ಟಲೆ ಬೆವರು ಸುರಿಸಬೇಕಾಗಿದೆ.

ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯ ದಲಿತ ಓಟುಗಳು ಅಂತಿಮ ನಿರ್ಣಾಯಕವಾಗಿರುತ್ತವೆ ಎನ್ನಲಾಗುತ್ತಿದೆ. ಇದನ್ನರಿತ ಜೆಡಿಎಸ್, ಕಾಂಗ್ರೆಸ್ ಪಕ್ಷ ದಲಿತ ಮುಖ್ಯಮಂತ್ರಿ ಮಾಡಲಿಲ್ಲ, ದಲಿತ ನಾಯಕ ಪರಮೇಶ್ವರ್‍ರನ್ನು ಸಿದ್ದರಾಮಯ್ಯ ಸೋಲಿಸಿದರು ಎಂಬ ಆರೋಪ ಮತ್ತು ಪ್ರಚಾರವನ್ನು ಜೋರಾಗಿ ಮಾಡುತ್ತಿದೆ. ಜೊತೆಗೆ ಸಿದ್ದರಾಮಯ್ಯ ಒಕ್ಕಲಿಗರ ವಿರೋಧಿ ಎಂಬ ಹೇಳಿಕೆಯನ್ನು ಪದೇಪದೇ ಹೇಳಿ, ಇಡೀ ಒಕ್ಕಲಿಗ ಓಟುಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲು ಜೆ.ಡಿ.ಎಸ್ ಹವಣಿಸುತ್ತಿದೆ.

ಚಾಮರಾಜನಗರ

ಕೊಳ್ಳೇಗಾಲ ಹೊರತುಪಡಿಸಿ ಉಳಿದ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವುದು ಸ್ಪಷ್ಟವಾಗಿದೆ. ಹನೂರು ಕ್ಷೇತ್ರದಲ್ಲಿ ಹಿಂದಿನಿಂದಲೂ ಕಾಂಗ್ರೆಸ್ ಗೆಲ್ಲುತ್ತಾ ಬಂದಿದ್ದು ಈ ಬಾರಿಯೂ ಅದೇ ಫಲಿತಾಂಶದ ನಿರೀಕ್ಷೆಯಿದೆ. ಹಾಗೆಯೇ ಚಾಮರಾಜನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿನ ಪತಾಕೆ ಹಾರಿಸಲು ರಂಗ ಸಜ್ಜಾಗಿದೆ.

ಕಳೆದ ಬಾರಿ ಕೊಳ್ಳೇಗಾಲದಲ್ಲಿ ಗೆದ್ದಿದ್ದರೂ ಕಾಂಗ್ರೆಸ್‍ಗೆ ಈ ಸಲ  ಬಿ.ಎಸ್.ಪಿ.ಯ  ಎನ್.ಮಹೇಶ್ ಕಠಿಣ ಸ್ಪರ್ಧೆ ಒಡ್ಡುತ್ತಿದ್ದಾರೆ. ಸತತ ಮೂರು ಬಾರಿ ಇದೇ ಕ್ಷೇತ್ರದಲ್ಲಿ ಸೋತ ಅನುಕಂಪ ಮತ್ತು ರಾಜ್ಯಮಟ್ಟದಲ್ಲಿ ಜೆಡಿಎಸ್ ಜೊತೆ ಮಾಡಿಕೊಂಡಿರುವ ಮೈತ್ರಿ ಅವರಿಗೆ ಬಲ ತುಂಬಿವೆ. ಕಳೆದ ಬಾರಿಯೇ ಕಾಂಗ್ರೆಸ್‍ನ ಎಸ್.ಜಯಣ್ಣನ ಬೆವರಿಳಿಸಿ 37,209 ಮತ ಪಡೆದು ಎರಡನೇ ಸ್ಥಾನ ಪಡೆದಿದ್ದರು. ಈ ಬಾರಿ ಕಾಂಗ್ರೆಸ್ ಜಯಣ್ಣನವರಿಗೆ ಟಿಕೆಟ್ ನೀಡದೇ ಬಿಜೆಪಿಯಿಂದ ವಲಸೆ ಬಂದ ಎ.ಆರ್ ಕೃಷ್ಣಮೂರ್ತಿಯನ್ನು ಕಣಕ್ಕಿಳಿಸಿದೆ. ಇಡೀ ಐದು ವರ್ಷ ಕ್ಷೇತ್ರದಲ್ಲಿಯೇ ಉಳಿದು ಕೆಲಸ ಮಾಡಿರುವ ಎನ್ ಮಹೇಶ್‍ರವರು ಜೆಡಿಎಸ್‍ನ ಬೆಂಬಲದಿಂದ ಗೆದ್ದು ಬರಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಆದರೆ ದಲಿತರಿಗೆ ಜೆಡಿಎಸ್ ಬಗ್ಗೆ ಅಷ್ಟಾಗಿ ಒಲವಿಲ್ಲದೇ ಇರುವುದು ಮಹೇಶ್ ಅವರಿಗೆ ನಕಾರಾತ್ಮಕವಾಗಿ ಪರಿಣಮಿಸಬಹುದು.

ಬಿಜೆಪಿಯಿಂದ ವಿ.ಸೋಮಣ್ಣ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದ್ದ ಹನೂರಿನಲ್ಲಿ ಬಿಜೆಪಿ ಪ್ರೀತಂ ನಾಗಪ್ಪನನ್ನು ಕಣಕ್ಕಳಿಸಿರೋದರಿಂದ ಹಾಲಿ ಕೈ ಶಾಸಕ ನರೇಂದ್ರಗೆ ದಾರಿ ಸುಗಮವಾಗಿದೆ. ಇನ್ನು  ಗುಂಡ್ಲುಪೇಟೆ ಈ ಬಾರಿ ಕಾಂಗ್ರೆಸ್‍ಗೆ ಅಷ್ಟು ಸಲೀಸಲ್ಲ. ಹಾಲಿ ಶಾಸಕಿ ಕಂ ಸಚಿವೆ ಗೀತಾ ಮಹದೇವಪ್ರಸಾದ್ ಪಾಲಿಗೆ ಉಪಚುನಾವಣೆಯಲ್ಲಿದ್ದ ಇಡೀ ಸರ್ಕಾರದ ಬೆಂಬಲ ಮತ್ತು ಅನುಕಂಪ ಈಗಿಲ್ಲ. ಹಾಗಾಗಿ ಫೋಟೋ ಫಿನಿಷ್ ಸಾಧ್ಯತೆಯೇ ಹೆಚ್ಚು.

ಮಂಡ್ಯ

7 ವಿಧಾನಸಭಾ ಕ್ಷೇತ್ರಗಳ ಮಂಡ್ಯ ಜಿಲ್ಲೆ ಹಿಂದಿನಿಂದಲೂ ಜೆ.ಡಿ.ಎಸ್.ನ ಭದ್ರಕೋಟೆ. ಮಂಡ್ಯ ಮತ್ತು ಮದ್ದೂರು ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲುವ ಸಾಧ್ಯತೆಯಿದೆ. ಮಂಡ್ಯದಲ್ಲಿ ಕಾಂಗ್ರೆಸ್‍ನಿಂದ ಅಂತಿಮ ಕ್ಷಣದಲ್ಲಿ ಅಂಬರೀಶ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದರಿಂದ ಗಣಿಗ ರವಿಕುಮಾರ್ ಅಭ್ಯರ್ಥಿ. ಇವರಿಗೆ ಕಾಂಗ್ರೆಸ್‍ನ ಹಿರಿಯರು ಬೆಂಬಲಿಸುತ್ತಿಲ್ಲ. ಜೆ.ಡಿ.ಎಸ್‍ನಲ್ಲಿದ್ದು ಟಿಕೆಟ್ ಸಿಗದಿದ್ದಕ್ಕೆ ಬಂಡಾಯ ಎದ್ದು ಬಿಜೆಪಿ ಸೇರಿರುವ ಚಂದಗಾಲು ಶಿವಣ್ಣ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ 5 ರುಪಾಯಿ ಡಾಕ್ಟರ್ ಡಾ.ಶಂಕರೇಗೌಡರು ಕಣದಲ್ಲಿದ್ದಾರೆ. ಶಿವಣ್ಣ ಒಂದಷ್ಟು ಜೆಡಿಎಸ್ ಮತಗಳನ್ನು ಕೀಳಬಹುದಾದರೂ, ಶಂಕರೇಗೌಡರು ಕೀಳುವ ಮತ ಯಾರದ್ದೆಂದು ಹೇಳಲಾಗದು. ಜೆಡಿಎಸ್‍ನ ಅಭ್ಯರ್ಥಿ ಎಂ.ಶ್ರೀನಿವಾಸ್ ಸರಳ ವ್ಯಕ್ತಿ ಎಂಬ ಕಾರಣಕ್ಕೂ ಗೆದ್ದು ಬರುವ ಸಾಧ್ಯತೆಯಿದೆ.

ಮದ್ದೂರಿನಲ್ಲಿ ಜೆಡಿಎಸ್‍ನ ಡಿ.ಸಿ.ತಮ್ಮಣ್ಣ ವಿರುದ್ಧ ಕಾಂಗ್ರೆಸ್‍ನ ಮಧು.ಜಿ ಮಾದೇಗೌಡ ಅಭ್ಯರ್ಥಿ. ಕಾಂಗ್ರೆಸ್‍ನಿಂದ ಟಿಕೆಟ್ ಸಿಗದಿದ್ದರಿಂದ ಬೇಸತ್ತ ಕಲ್ಪನಾ ಸಿದ್ದರಾಜು ಜೆಡಿಎಸ್ ಸೇರಿರುವುದರಿಂದ ತಮ್ಮಣ್ಣ ಗೆಲುವು ಖಚಿತ ಎನ್ನಲಾಗುತ್ತಿತ್ತು. ಆದರೆ ಬಿಜೆಪಿಯ ಟಿಕೆಟ್ ವಂಚಿತ ಅಭ್ಯರ್ಥಿ ಮಧು ಜೊತೆ ಸೇರಿರುವುದು ಮತ್ತು ಹೊನ್ನಲಗೆರೆ ರಾಮಕೃಷ್ಣ, ಚೆಲುವರಾಯಸ್ವಾಮಿಯವರ ನೇರ ಬೆಂಬಲ ಕಾಂಗ್ರೆಸ್‍ಗೆ ಸಿಕ್ಕಿರೋದು ಕಣಕ್ಕೆ ಒಂದಷ್ಟು ರಂಗನ್ನು ತಂದಿದೆ.

ರೈತ ನಾಯಕ ಕೆ.ಎಸ್ ಪುಟ್ಟಣ್ಣಯ್ಯ ಪ್ರತಿನಿಧಿಸುತ್ತಿದ್ದ ಮೇಲುಕೋಟೆಯಲ್ಲಿ ಅವರ ಮಗ ದರ್ಶನ್ ಪುಟ್ಟಣ್ಣಯ್ಯ ಸ್ವರಾಜ್ ಇಂಡಿಯಾ ಅಭ್ಯರ್ಥಿ. ಅವರಿಗೆ ಕ್ಷೇತ್ರದಾದ್ಯಂತ ಅಪಾರ ಬೆಂಬಲವಿದ್ದು, ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಹಾಕದೇ ದರ್ಶನ್ ಪುಟ್ಟಣ್ಣಯ್ಯಗೆ ಬೆಂಬಲ ನೀಡಿದೆ. ಹಾಲಿ ಲೋಕಸಭಾ ಸದಸ್ಯ ಸಿ.ಎಸ್.ಪುಟ್ಟರಾಜು ಜೆಡಿಎಸ್‍ನಿಂಧ ಸ್ಪರ್ಧಿಸುತ್ತಿದ್ದು ಹೇಗಾದರೂ ಗೆಲ್ಲಬೇಕೆಂದು ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ. ಆದರೂ ಗೆಲುವು ಅವರ ಕೈಗೆಟುಕುವ ಸಾಧ್ಯತೆ ತುಂಬಾ ಕ್ಷೀಣ.

ಇನ್ನುಳಿದ ನಾಲ್ಕು ಕ್ಷೇತ್ರಗಳಾದ ಮಳವಳ್ಳಿ, ಶ್ರೀರಂಗಪಟ್ಟಣ, ಕೆ.ಆರ್.ಪೇಟೆ ಮತ್ತು ನಾಗಮಂಗಲದಲ್ಲಿ ಕಾಂಗ್ರೆಸ್ ಮತ್ತು ಜೆ.ಡಿ.ಎಸ್ ನಡುವೆ ನೇರ ಹಣಾಹಣಿ ಇದೆ. ವಿಶೇಷವೆಂದರೆ ಶ್ರೀರಂಗಪಟ್ಟಣ ಮತ್ತು ನಾಗಮಂಗಲ ಕ್ಷೇತ್ರದಲ್ಲಿ ಜೆ.ಡಿ.ಎಸ್‍ನಿಂದ ಕಳೆದ ಬಾರಿ ಶಾಸಕರಾಗಿದ್ದ ರಮೇಶ್ ಬಾಬು ಬಂಡಿಸಿದ್ದೇಗೌಡ ಮತ್ತು ಚೆಲುವರಾಯಸ್ವಾಮಿ ಜೆ.ಡಿ.ಎಸ್ ತೊರೆದು ಕಾಂಗ್ರೆಸ್‍ನಿಂದ ಕಣಕ್ಕಿಳಿದಿದ್ದಾರೆ. ಇವರನ್ನು ಹೇಗಾದರೂ ಮಾಡಿ ಸೋಲಿಸಬೇಕೆಂದು ದೇವೇಗೌಡರು ಹಠತೊಟ್ಟು ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‍ನಲ್ಲಿದ್ದ ರವೀಂದ್ರ ಶ್ರೀಕಂಠಯ್ಯ ಮತ್ತು ಸುರೇಶ್ ಗೌಡರನ್ನು ಜೆ.ಡಿ.ಎಸ್‍ಗೆ ಕರೆತಂದು ಟಿಕೆಟ್ ನೀಡಿ ಕಣಕ್ಕಿಳಿಸಿದ್ದಾರೆ. ಇಲ್ಲಿ ತೀವ್ರ ಹಣಾಹಣಿಯಂತೂ ನಡೆಯಲಿದೆ. ಮಳವಳ್ಳಿಯಲ್ಲಿ ನರೇಂದ್ರ ಸ್ವಾಮಿ ಮತ್ತು ಅನ್ನದಾನಿಯವರ ನಡುವಿನ ಫೈಟ್ ಹೋದ ಸಾರಿಯಷ್ಟೇ ಫೋಟೋ ಫಿನಿಷ್ ಆಗುವುದಕ್ಕಿಂತ ಅನ್ನದಾನಿಯವರ ಕೈ ಮೇಲಾಗುವ ಸಾಧ್ಯತೆಯೇ ಹೆಚ್ಚು.

ಈ ಮೂರು ಜಿಲ್ಲೆಗಳ ಒಟ್ಟು 22 ಕ್ಷೇತ್ರಗಳಲ್ಲಿ ಬೆನೆಫಿಟ್ ಆಫ್ ಡೌಟ್‍ಅನ್ನು ಸಮಾನವಾಗಿ ಪರಿಗಣಿಸಿದರೆ ಕಾಂಗ್ರೆಸ್ 10, ಜೆಡಿಎಸ್ 9, ಬಿಜೆಪಿ 1ರಿಂದ 2, ಇತರರು 1ರಿಂದ 2 ಸ್ಥಾನಗಳಲ್ಲಿ ಆರಿಸಿ ಬರುವ ಲಕ್ಷಣಗಳಿವೆ.

Leave a Reply

Your email address will not be published.

Social Media Auto Publish Powered By : XYZScripts.com