Ensuddi Election Spl : ಮುಂಬೈ ಕರ್ನಾಟಕ – ಕಮಲ ಕೋಟೆಯಲ್ಲಿ ಕೈ ಮುನ್ನಡೆ …

ಮುಂಬೈ ಕರ್ನಾಟಕ

ಬೆಳಗಾವಿ, ಧಾರವಾಡ, ಗದಗ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳನ್ನು ಒಳಗೊಂಡ ಮುಂಬೈ ಕರ್ನಾಟಕದಲ್ಲಿ 44 ವಿಧಾನಸಭೆ ಸೀಟುಗಳಿಗಾಗಿ ಜಿದ್ದಾಜಿದ್ದಿನ ಹೋರಾಟ ನಡೆದಿದೆ. ಲಿಂಗಾಯತ ಪ್ರಾಬಲ್ಯವಿರುವ ಇದು ಬಿಜೆಪಿಯು ನೆಚ್ಚಿನ ತಾಣ. ಆದರೆ ಬದಲಾದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಗತ ಹಿಡಿತವನ್ನು ಪುನರ್‍ಸ್ಥಾಪಿಸಲು ಪುನಃ ಗಳಿಸುವಲ್ಲಿ ತಕ್ಕಮಟ್ಟಿಗೆ ಯಶಸ್ಸು ಕಂಡಿದೆ…

ಕಾಂಗ್ರೆಸ್-ಮುಕ್ತ ಭಾರತ ಮಾಡಲು ಹೊರಟಿರುವ ಮೋದಿ ಗ್ಯಾಂಗಿನ ಕನಸು ನನಸಾಗಿ ದಕ್ಷಿಣ ಭಾರತದಲ್ಲಿ ಕೇಸರಿಧ್ವಜ ಹೊರಡಬೇಕಾದರೆ ಮುಂಬೈ ಕರ್ನಾಟಕದಲ್ಲಿ ಯಡ್ಡಿ ಗ್ಯಾಂಗ್ ಉತ್ತಮ ಪ್ರದರ್ಶನ ನೀಡಲೇಬೇಕು. ಆದರೆ ವಾಸ್ತವ ಸ್ಥಿತಿ ಹಾಗೇ ಕಂಡುಬರುವುದಿಲ್ಲ. ಇನ್ನು ಈ ಬಾರಿ ಅಧಿಕಾರ ಸಿಗದಿದ್ದರೆ ಪಕ್ಷವನ್ನು ಉಳಿಸಿಕೊಳ್ಳುವುದೇ ಕಷ್ಟವೆನ್ನುವ ಸ್ಥಿತಿಯಲ್ಲಿರುವ ದೇವೇಗೌಡರ ಜೆಡಿಎಸ್ ಬೆರಳೆಣಿಕೆ ಕ್ಷೇತ್ರಗಳಲ್ಲಿ ಗೆಲ್ಲುವ ಸ್ಥಿತಿಯಲ್ಲಿದೆ, ಇನ್ನು ಕೆಲವೆಡೆ ಮತ್ತೊಬ್ಬರ ಗೆಲುವು ಸೋಲಿನ ಆಟಕ್ಕೆ ಅಡ್ಡಿಯಾಗಲಿದೆ ಎನ್ನಬಹುದು.

2008ರ ಚುನಾವಣೆಯಲ್ಲಿ ಬಿಜೆಪಿಯ ನೂರರ ಗಡಿ ದಾಟಲು ಮುಂಬೈ ಕರ್ನಾಟಕದಲ್ಲಿನ ಪ್ರದರ್ಶನವೇ ಮುಖ್ಯ ಕಾರಣವಾಗಿತ್ತು. ಅಂದು ಬಿಜೆಪಿ 44ರಲ್ಲಿ 31 ಸೀಟುಗಳನ್ನು ಗೆದ್ದುಕೊಂಡಿದ್ದು ಕಾಂಗ್ರೆಸ್ ಹನ್ನೊಂದು ಮತ್ತು ಜೆಡಿಎಸ್ ನಾಲ್ಕು ಸೀಟುಗಳನ್ನು ಪಡೆದುಕೊಂಡಿದ್ದವು. ಆದರೆ 2013ರಲ್ಲಿ ಚಿತ್ರಣ ಸಂಪೂರ್ಣ ತಿರುವುಮುರುವಾಯಿತು ಬಿಜೆಪಿ ತನ್ನ ಅಂಗಳದಲ್ಲೇ ಶ್ರೇಷ್ಠ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಇದಕ್ಕೆ ಲಿಂಗಾಯತ ನಾಯಕ ಯಡಿಯೂರಪ್ಪ ಪಕ್ಷ ತೊರೆದು ಕೆಜೆಪಿ ಸ್ಥಾಪಿಸಿದ್ದೆ ಕಾರಣ. ಕಳೆದ ಚುನಾವಣೆಯಲ್ಲಿ ಬಿಜೆಪಿ ಹನ್ನೆರಡು ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರೆ ಕಾಂಗ್ರೆಸ್ 27 ಮತ್ತು ಜೆಡಿಎಸ್ ಒಂದು ಸ್ಥಾನಗಳನ್ನು ಗೆಲ್ಲುವಲ್ಲಿ ಸಫಲವಾದವು. ನಾಲ್ಕು ಸ್ಥಾನಗಳು ಇತರರ ಪಾಲಾದವು. ಈ ಬಾರಿ ಮೇಲ್ನೋಟಕ್ಕೆ ಜಿದ್ದಾಜಿದ್ದಿನ ಹೋರಾಟ ಕಂಡುಬಂದರೂ ಬಿಜೆಪಿ 2008ರ ಪ್ರದರ್ಶನ ಪುನರಾವರ್ತಿಸುತ್ತದೆ ಎಂದು ಹೇಳಲು ಯಾವುದೇ ಕಾರಣಗಳು ಕಾಣುತ್ತಿಲ್ಲ..

ಬೆಳಗಾವಿ

ರಾಜ್ಯದಲ್ಲಿ ಹದಿನೆಂಟು ಕ್ಷೇತ್ರಗಳನ್ನು ಒಳಗೊಂಡ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ಬಿಜೆಪಿ ಕೆಟ್ಟ ದಿನಗಳಲ್ಲೂ ಎಂಟು ಸೀಟು ಗೆದ್ದುಕೊಂಡಿತ್ತು. ಈ ಬಾರಿ ಅದು ಅಥಣಿ, ಕುಡಚಿ, ಅರಬಾವಿ, ಬೈಲಹೊಂಗಲ, ಸವದತ್ತಿ ಮತ್ತು ಕಿತ್ತೂರಿನಲ್ಲಿ ಸ್ಪಷ್ಟ ಮುನ್ನಡೆ ಪಡೆದಿದೆ. ಬಾಲಚಂದ್ರ ಜಾರಕಿಹೊಳಿ ಸುಲಭವಾಗಿ ಗೆಲ್ಲುವ ಹಾಗೆ ಕಂಡರೆ ಬಾಹುಬಲಿ ಉಮೇಶ್ ಕತ್ತಿ ಸೋಲುವ ಭೀತಿ ಎದುರಿಸುತ್ತಿದ್ದಾರೆ. ಕಾಂಗ್ರೆಸ್ ಚಿಕ್ಕೋಡಿ, ಕಾಗವಾಡ, ರಾಯಭಾಗ, ಹುಕ್ಕೇರಿ ಗೋಕಾಕ್, ಯಮಕನಮರಡಿ, ಬೆಳಗಾವಿ ಉತ್ತರ ಮತ್ತು ರಾಮದುರ್ಗದಲ್ಲಿ ಉತ್ತಮ ಸ್ಥಿತಿಯಲ್ಲಿದೆ. ಜಾರಕಿಹೊಳಿ ಸಹೋದರರು, ಗಣೇಶ್ ಹುಕ್ಕೇರಿ ಮತ್ತು ಫಿರೋಜ್ ಸೆಟ್ ಗೆಲ್ಲುವ ಸನಿಹದಲ್ಲಿದ್ದಾರೆ. ಉಳಿದ ಬೆಳಗಾವಿ ದಕ್ಷಿಣ, ಬೆಳಗಾವಿ ಗ್ರಾಮೀಣ ಮತ್ತು ಖಾನಾಪುರದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಎಂಇಎಸ್ ನಡುವೆ ತ್ರಿಕೋನ ಸ್ಪರ್ಧೆ ಇದ್ದು ಫೋಟೋ ಫಿನಿಷಿಂಗ್ ಕಾದಿದೆ. ಹೀಗಾಗಿ ಇಲ್ಲಿ ಕಾಂಗ್ರೆಸ್ಸಿಗೆ ಅಲ್ಪ ಲಾಭವಾಗಬಹುದೇ ಹೊರತು ಬಿಜೆಪಿಗೆ ಅಲ್ಲ. ಜೊತೆಗೆ ಜೆಡಿಎಸ್ ಇಲ್ಲಿ ಖಾತೆ ತೆರೆಯುವುದಿಲ್ಲ.

ವಿಜಯಪುರ

2008ರಲ್ಲಿ 8 ಸ್ಥಾನಗಳಲ್ಲಿ 5ರಲ್ಲಿ ಗೆದ್ದಿದ್ದ ಬಿಜೆಪಿ 2013ರಲ್ಲಿ ಒಂದಕ್ಕೆ ಕುಸಿದಿತ್ತು. ಕಾಂಗ್ರೆಸ್ ಮೂರರಿಂದ ಏಳಕ್ಕೆ ತನ್ನ ಬಲವನ್ನು ಹೆಚ್ಚಿಸಿಕೊಂಡಿತು. ಜೆಡಿಎಸ್ ಸಾಧನೆ ಶೂನ್ಯ. ಈ ಬಾರಿ ಲಿಂಗಾಯತ ಪ್ರತ್ಯೇಕ ಧರ್ಮದ ಲೆಕ್ಕಾಚಾರ, ಟಿಕೆಟ್ ಹಂಚಿಕೆಯ ಗೊಂದಲ, ರಾಜ್ಯ ಮಟ್ಟದ ಯಾವುದೇ ಅಲೆ ಇಲ್ಲದಿರುವುದು ಸ್ಥಳೀಯ ಮಟ್ಟಕ್ಕೆ ಹೋರಾಟವನ್ನು ತಂದು ನಿಲ್ಲಿಸಿದೆ. ರಾಷ್ಟ್ರೀಯ ನಾಯಕರ ಸತತ ಪ್ರಚಾರವೂ ಈ ಲೆಕ್ಕಾಚಾರವನ್ನು ಅಲುಗಾಡಿಸಿಲ್ಲ. ಒಟ್ಟು 8 ಸ್ಥಾನಗಳಲ್ಲಿ ಕಾಂಗ್ರೆಸ್ ಇಂಡಿ, ಬಬಲೇಶ್ವರ, ಬಿಜಾಪುರ ಸಿಟಿಯಲ್ಲಿ ಉತ್ತಮ ಸ್ಥಿತಿಯಲ್ಲಿದ್ದರೆ, ಮುದ್ದೇಬಿಹಾಳ ಮತ್ತು ದೇವರಹಿಪ್ಪರಗಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿನ ಹೋರಾಟವಿದೆ. ನಾಗಠಾಣ ಮತ್ತು ಬಸವನಬಾಗೇವಾಡಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಪೈಪೋಟಿ ಇದೆ.

ಎಸ್.ಕೆ.ಬೆಳ್ಳುಬ್ಬಿಯಂಥ ನಾಯಕರಿಗೆ ಟಿಕೆಟ್ ಕೊಡದೆ ಇರುವುದು ಬಿಜೆಪಿಗೆ ಎರಡು ಕ್ಷೇತ್ರಗಳಲ್ಲಿ ಹಾನಿ ಉಂಟುಮಾಡಿದೆ. ಇದರ ನೇರ ಲಾಭ ಕಾಂಗ್ರೆಸ್‍ಗೆ. ಎಂ.ಬಿ.ಪಾಟೀಲ್, ಶಿವಾನಂದ ಪಾಟೀಲ್ ಮತ್ತು ಯಶವಂತರಾಯಗೌಡ ಪಾಟೀಲ್ ತಮ್ಮ ಕ್ಷೇತ್ರಗಳನ್ನು ಉಳಿಸಿಕೊಂಡರೆÀ ಕಾಂಗ್ರೆಸ್ 5, ಬಿಜೆಪಿ 02 ಮತ್ತು ಜೆಡಿಎಸ್ ಒಂದು ಸ್ಥಾನ ಗೆಲ್ಲುವ ಸಾಧ್ಯತೆ ಕಂಡುಬರುತ್ತದೆ. ಇದು ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಯಡ್ಡಿ ಕನಸಿಗೆ ಪೂರಕವಾಗಿಲ್ಲ.

ಬಾಗಲಕೋಟೆ

2008ರಲ್ಲಿ ಲಿಂಗಾಯತ ಪ್ರಾಬಲ್ಯದ ಬಸವಣ್ಣನ ನಾಡಿನಲ್ಲಿ ಬಿಜೆಪಿ ಏಳು ಸ್ಥಾನಗಳನ್ನು ಗೆದ್ದು ಕ್ಲೀನ್‍ಸ್ವೀಪ್ ಮಾಡಿತ್ತು. ಆದರೆ 2013 ರ ಹೊತ್ತಿಗೆ ಮೂರು ಹೋಳಾಗಿದ್ದ ಕೇಸರಿ ಪಕ್ಷ ಒಂದು ಸ್ಥಾನಕ್ಕೆ ಕುಸಿತ ಕಂಡಿತ್ತು. ಇಲ್ಲಿ ಜೆಡಿಎಸ್ ಕಳೆದೆರಡು ಚುನಾವಣೆಗಳಲ್ಲಿ ಖಾತೆ ತೆರೆದಿಲ್ಲ. ಈ ಬಾರಿಯೂ ಆ ಸಾಧ್ಯತೆಯಿಲ್ಲ. ಹಾಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರಾನೇರ ಹೋರಾಟ.

ಆರ್.ಬಿ.ತಿಮ್ಮಾಪುರಗೆ ಟಿಕೆಟ್ ತಪ್ಪಿದ್ದರಿಂದ ಮುಧೋಳದಲ್ಲಿ ಗೋವಿಂದ್ ಕಾರಜೋಳ ಗೆಲುವು ಸುಲಭವಾಗಿದೆ. ಉಳಿದಂತೆ ತೇರದಾಳದಲ್ಲಿ ಬಿಜೆಪಿಯ ಸಿದ್ದು ಸೌದಿ, ಹುನಗುಂದದಲ್ಲಿ ಅದೇ ಪಾರ್ಟಿಯ ದೊಡ್ಡನಗೌಡ ಪಾಟೀಲ್ ಗೆಲ್ಲುವ ಕುದುರೆಗಳು. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಿರುವ ಬಾದಾಮಿಯಲ್ಲಿ ಬಿ ಶ್ರೀರಾಮುಲು ಪ್ರಬಲ ಪೈಪೋಟಿ ನೀಡುತ್ತಿದ್ದಾರಾದರೂ ಜಾತಿ ಲೆಕ್ಕಾಚಾರ, ಕಾಂಗ್ರೆಸ್ ನಾಯಕರ ಹೊಂದಾಣಿಕೆಯ ಪ್ರಚಾರ ಸಿಎಂ ಸಿದ್ದುರÀನ್ನು ಗೆಲುವಿನ ದಡ ಸೇರಿಸುತ್ತದೆ. ಅಂತಿಮವಾಗಿ ಬಾಗಲಕೋಟೆಯಲ್ಲಿ ಕಾಂಗ್ರೆಸ್ 4 ಮತ್ತು ಬಿಜೆಪಿ 3 ಸ್ಥಾನ ಗೆಲ್ಲುವ ಸಾಧ್ಯತೆ ಹೆಚ್ಚು.

ಗದಗ

ನಾಲ್ಕು ಕ್ಷೇತ್ರಗಳಿರುವ ಈ ಜಿಲ್ಲೆಯನ್ನು 2008ರಲ್ಲ್ಲಿ ಬಿಜೆಪಿ ಕ್ಲೀನ್‍ಸ್ವೀಪ್ ಮಾಡಿದ್ದರೆ, 2013ರಲ್ಲಿ ಕಾಂಗ್ರೆಸ್ ಆ ಸಾಧನೆ ಮಾಡಿತ್ತು. ಈ ಬಾರಿ ಮಾತ್ರ ಉಭಯ ಪಕ್ಷಗಳಿಗೂ ಈ ಸಾಧ್ಯತೆ ಇಲ.್ಲ ಗದಗನಲ್ಲಿ ಎಚ್.ಕೆ.ಪಾಟೀಲ್ ಗೆಲುವಿನ ಸವಾರಿ ಮುಂದುವರಿಸಿದರೆ, ಶಿರಹಟ್ಟಿಯಲ್ಲಿ ಬಿಜೆಪಿಯ ಲಮಾಣಿ ಮುನ್ನಡೆಯಲಿದ್ದಾರೆ. ಇನ್ನು ನರಗುಂದದಲ್ಲಿ ಬಿಆರ್ ಯಾವಗಲ್ ಮತ್ತು ಬಿಜೆಪಿಯ ಬ್ಲ್ಯೂ ಫಿಲ್ಮ್ ಹೀರೋ ಸಿಸಿ ಪಾಟೀಲ್ ನಡುವೆ ಹಾಗೂ ರೋಣದಲ್ಲಿ ಜಿಎಸ್ ಪಾಟೀಲ್ ಮತ್ತು ಕಳಕಪ್ಪ ಬಂಡಿ ಮಧ್ಯೆ ಸಮಬಲದ ಹೋರಾಟ ಕಂಡುಬರುತ್ತಿದೆ. ನರಗುಂದದಲ್ಲಿ ಮುತ್ಸದ್ಧಿ ಹೋರಾಟಗಾರ ಬಿಆರ್ ಯಾವಗಲ್ ಗೆಲ್ಲುವ ಅವಶ್ಯಕತೆ ಇದೆ. ಗದಗದಲ್ಲಿ ಉಭಯ ಪಕ್ಷಗಳು ಸಮ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ.

ಧಾರವಾಡ

2008ರಲ್ಲಿ ವಚನಭ್ರಷ್ಟ ಅಲೆಯಲ್ಲಿ ಬಿಜೆಪಿ ಇಲ್ಲಿನ ಆರು ಸ್ಥಾನ ಗೆಲ್ಲುವಲ್ಲಿ ಸಫಲವಾಗಿತ್ತು. ಆದರೆ 2013ರಲ್ಲಿ ಅದರ ಸಾಧನೆ ಎರಡು ಸ್ಥಾನಕ್ಕೆ ಕುಸಿದಿತ್ತು. ಜೆಡಿಎಸ್ ನವಲಗುಂದದಲ್ಲಿ ಕೋನಾರೆಡ್ಡಿ ಮೂಲಕ ಖಾತೆ ತೆರೆದಿತ್ತು. ಕಾಂಗ್ರೆಸ್ ನಾಲ್ಕರಲ್ಲಿ ನಗೆಬೀರಿತ್ತು. ಈ ಬಾರಿ ಜಿಲ್ಲೆಯ ಪ್ರಬಲ ನಾಯಕರಾದ ಬಿಜೆಪಿಯ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಕಾಂಗ್ರೆಸ್‍ನ ಸಚಿವ ವಿನಯ್ ಕುಲಕರ್ಣಿ ಹಾಗೂ ಗಣಿಧಣಿ ಸಂತೋಷ್ ಲಾಡ್ ಸೋಲಿನ ಭೀತಿ ಎದುರಿಸುತ್ತಿದ್ದಾರೆ. ಜೆಡಿಎಸ್ ತನ್ನ ಸ್ಥಾನ ಉಳಿಸಿಕೊಳ್ಳುವ ಹೋರಾಟದಲ್ಲಿದೆ.

ಉಳಿದಂತೆ ಹುಬ್ಬಳ್ಳಿ-ಧಾರವಾಡ ಪೂರ್ವದಲ್ಲಿ ಕಾಂಗ್ರೆಸ್‍ನ ಪ್ರಸಾದ ಅಬ್ಬಯ್ಯ, ಹುಬ್ಬಳ್ಳಿ-ಧಾರವಾಡ ಪಶ್ಚಿಮದಲ್ಲಿ ಕಾಂಗ್ರೆಸ್‍ನ ತಮಟಗಾರ ಗೆಲುವಿನ ಸನಿಹದಲ್ಲಿದ್ದಾರೆ. ಕುಂದಗೋಳದಲ್ಲಿ ಬಿಜೆಪಿಯ ಚಿಕ್ಕನಗೌಡರ ಮತ್ತು ಕಾಂಗ್ರೆಸ್‍ನ ಶಿವಳ್ಳಿ ನಡುವಿನ ಫೋಟೋ ಫಿನಿಷ್ ಇದ್ದರೆ, ಕಲಘಟಗಿಯಲ್ಲಿ ಗಣಿದಣಿ ಸಂತೋಷ್ ಲಾಡ್ ಬಿಜೆಪಿ ನಿಂಬಣ್ಣನವರಿಗಿಂತ ಹಿನ್ನಡೆಯಲ್ಲಿದ್ದಾರೆ.

ಅಂತಿಮವಾಗಿ ಕಳೆದ ಬಾರಿಯಂತೆ ಕಾಂಗ್ರೆಸ್ ನಾಲ್ಕು ಬಿಜೆಪಿ ಎರಡು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಮುಂಬೈ ಕರ್ನಾಟಕದಲ್ಲಿ ಜೆಡಿಎಸ್‍ಗೆ ವಿಜಯಪುರ ಬಿಟ್ಟರೆ ಖಾತೆ ತೆರೆಯಲು ಸಾಧ್ಯತೆ ಇರುವುದು ಇಲ್ಲಿ ಮಾತ್ರ.

ಒಟ್ಟಾರೆ ನಲವತ್ತು ನಾಲ್ಕರಲ್ಲಿ ಬಿಜೆಪಿ 15 ರಿಂದ 17, ಕಾಂಗ್ರೆಸ್ 20 ರಿಂದ 23 ಮತ್ತು ಜೆಡಿಎಸ್ 2 ರಿಂದ 3 ಸ್ಥಾನ ಗೆಲ್ಲುವ ಸಾಧ್ಯತೆ ಇದೆ. ಹೀಗಾಗಿ ಯಡ್ಡಿ ಮತ್ತು ಗ್ಯಾಂಗಿನ ಸ್ಪಷ್ಟ ಬಹುಮತದ ಸಾಧ್ಯತೆ ಕಂಡುಬರುತ್ತಿಲ್ಲ. ಅದೇರೀತಿ ಮೋದಿ ಗ್ಯಾಂಗ್‍ನ ಕಾಂಗ್ರೆಸ್-ಮುಕ್ತ ಭಾರತ ಮಾಡುವ ಕನಸಿಗೂ ಪೂರಕವಾಗುವ ಅಲೆ ಮುಂಬೈ ಕರ್ನಾಟಕದಲ್ಲಿ ಕಂಡುಬರುತ್ತಿಲ್ಲ.

@ ಸು-NIL

Leave a Reply

Your email address will not be published.

Social Media Auto Publish Powered By : XYZScripts.com