Ensuddi Election Spl : ಕರಾವಳಿಯಲ್ಲಿ ಬಿಜೆಪಿಗೆ ಕಾದಿದೆ ಮತ್ತದೇ ಶಾಕ್ …!

ಕರಾವಳಿ ತ್ರಿವಳಿ  ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದ ಚುನವಣಾ ಕದನ ಕಣದಲ್ಲಿ ಅಕ್ಷರಶಃ ಧರ್ಮಯುದ್ದ ನಡೆಯುತ್ತಿದೆ. ಹಿಂದುತ್ವ/ಮನುಷ್ಯತ್ವದ ಈ ಜಿದ್ದಾಜಿದ್ದಿಯಲ್ಲಿ ಜೀವ ವಿರೋಧಿ ಸೈತಾನ ಸಂತತಿ ಹಿಮ್ಮೆಟ್ಟುತ್ತಿದೆ! ಸಂಘಪರಿವಾರ ಯಾವ ಕರಾವಳಿಯನ್ನು ತನ್ನ ಕೇಸರಿ ಕ್ರೌರ್ಯದ ಆಡಂಬೋಲವೆಂಬ ಅಹಮ್ಮಿನಿಂದ ಅಟ್ಟಹಾಸ ಮಾಡುತ್ತ ಅನೈತಿಕ ಪೊಲೀಸ್‍ಗಿರಿಯ  ಹಾವಳಿ ಎಬ್ಬಿಸಿತ್ತೋ ಅಲ್ಲೀಗ ಸೆಕ್ಯೂಲರ್ ಚಂಡಮಾರುತ ಜೋರಾಗಿ ಬೀಸುತ್ತಿದೆ. ಸೂತಕದ ಮನೆಯ ಪಡಸಾಲೆಯಲ್ಲಿ ಕುಂತು ಹಿಂದೂತ್ವದ ಹಿಕಮತ್ತು ಮಾಡಿದರೂ ಬಿಜೆಪಿ ಬಾಯಿಬಡುಕರಿಗೆ ಪ್ರಾಪ್ತಿಯೇನೂ ಆಗಿಲ್ಲ.

ಮೂರು ಜಿಲ್ಲೆಯ ಒಟ್ಟು 19 ಅಸೆಂಬ್ಲಿ ಕ್ಷೇತ್ರಗಳ ಪೈಕಿ ಕುಂದಾಪುರ ಒಂದನ್ನು ಬಿಟ್ಟು ಉಳಿದೆಲ್ಲಾ ತಾವೇ ಗೆಲ್ಲುತ್ತೇವೆಂದು ಎದೆತಟ್ಟಿ ಹೇಳುವ ತಾಕತ್ತು ಸಂಘಿ ಸರದಾರರಿಗೆ ಇಲ್ಲ! ಹಿಂದುತ್ವದ ಅಮಲು ಹಿಂದುಳಿದ ವರ್ಗದ ಆಮಾಯಕರಿಗೆ ಏರಿಸಿ ಕಾಲಾಳುಗಳಂತೆ ಬಳಸಿದ ವೈದಿಕಶಾಹಿ ಮತ್ತು ನವ ಪುರೋಹಿತಶಾಹಿ ಸಂತಾನಗಳ ನೆತ್ತರು ದಾಹದ ಮೋಸ ವಂಚನೆ  ಈಗ ಜಗಜ್ಜಾಹೀರಾಗಿದ್ದು. ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ! ಕರಾವಳಿಯ ಯಾವ ಕ್ಷೇತ್ರದಲ್ಲಿ ಎಂಥ ಸೂತ್ರ ಸಮೀಕರಣ ಹೊಸೆದುಕೊಂಡಿದೆ ಎಂಬ ಸಾಕ್ಷಾತ್ ಸಮೀಕ್ಷೆ ಇಲ್ಲಿದೆ.

ಸುಳ್ಯ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ  ಕ್ಷೇತ್ರ ಮೀಸಲಾದರೂ ದರ್ಬಾರೆಲ್ಲ ಬ್ರಾಹ್ಮಣ ಮತ್ತು ಗೌಡ ಒಕ್ಕಲಿಗ ಪಾಳೆಗಾರರದು. ಶಾಸಕ ಅಂಗಾರ 5 ಬಾರಿ ಗೆದ್ದರೂ 3 ಬಿಲ್ಲೆ ಕೆಲಸ ಮಾಡದ ಚೆಡ್ಡಿ ದಲಿತ. ಈತ ಹೆಸರಿಗಷ್ಟೇ ಎಮ್ಮೆಲ್ಲೆ ಸಾಹೇಬ  ಸಂಘಿ ಬ್ರಾಹ್ಮಣ ಕೈಗೊಂಬೆಯಂತಾಗಿರುವ ಅಂಗಾರರಿಗೆ ಕ್ಷೇತ್ರದ ಕಷ್ಟ ಸುಖ, ಬೇಕುಬೇಡ ಯಾವುದೂ ಗೊತ್ತಿಲ್ಲ. ಇಂಥ ಪೆದ್ದನನ್ನು ಪ್ರಬಲ ಬ್ರಾಹ್ಮಣರು ಮತ್ತು ಒಕ್ಕಲಿಗ ಗೌಡರು ತಮಗೆ ಬೇಕಾದಂತೆ  ಬಳಸುತ್ತಿದ್ದಾರೆ. ಈ ಕೆಲಸಕ್ಕೆ ಬಾರದ ಅಂಗಾರರೇ ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್‍ನಿಂದ ಸ್ಪರ್ಧಿಸಿರುವ ಡಾ. ರಘು ಸುಶಿಕ್ಷಿತ, ಸಜ್ಜನ, ಜನಪರ ಯೋಜನೆಯ ಸ್ವಾಭಿಮಾನಿ ದಲಿತ. ತನ್ನವರ ಮತ್ತು ಕ್ಷೇತ್ರದ ಸಮಸ್ಯೆ ಸಂತಸ ಎರಡೂ ಆತನಿಗೆ ಗೊತ್ತು ಕಳೆದ 3 ಬಾರಿ ಸೋತಿರುವ ರಘು ಈ ಬಾರಿ ಗೆಲ್ಲಬೇಕೆಂಬುದು ಕ್ಷೇತ್ರದ ಆಭಿಲಾಷೆ.

ಪುತ್ತೂರು ಬಿಜೆಪಿಯಲ್ಲಿ ಟಿಕೆಟ್ ಭಿನ್ನಮತದ  ಬೆಂಕಿ ಇವತ್ತಿಗೂ ಒಳಗೊಳಗೆ ಹೊಗೆಯಾಡುತ್ತಲೇ ಇದೆ. ಬಿಜೆಪಿ ಅಭ್ಯರ್ಥಿ ಸಂಜೀವ್ ಮಠಂದೂರು ಸಂಸದ ನಳಿನ್ ಕಡೆಯವನೆಂಬ ಸಿಟ್ಟು ಕಲ್ಲಡ್ಕ ಭಟ್ಟರದು. ಮಠಂದೂರು ಕಾಂಗ್ರೆಸ್ ಕ್ಯಾಂಡಿಡೇಟ್ ಕೆಲಸಗಾರ್ತಿ ಖ್ಯಾತಿಯ ಶಕುಂತಲಾ ಶೆಟ್ಟಿ ಎದುರು ತೀರಾ ಸಪ್ಪೆ. ಶಕುಂತಲಾ ಶೆಟ್ಟಿ ಗೆಲ್ಲುವುದು ಗ್ಯಾರಂಟಿ.

ಮಂಗಳೂರು (ಉಳ್ಳಾಲ) ಕ್ಷೇತ್ರದಲ್ಲಿ ಹೇಗಾದರು ಮಾಡಿ ಕ್ರಿಯಾಶೀಲ ಯು.ಟಿ.ಖಾದರ್‍ರನ್ನು ಸೋಲಿಸಲೇಬೇಕೆಂದು ಸ್ಯಾಡಿಸ್ಟ್ ಹಠಕ್ಕೆ ಕಲ್ಲಡ್ಕ ಭಟ್ರು ಬಿದ್ದಿದ್ದಾರೆ. ಇದೇ ಕಾಂಗ್ರೆಸ್‍ನ ಖಾದರ್‍ಗೆ ಕ್ಷೇತ್ರದಾದ್ಯಂತ ಅನುಕೂಲಕರ ವಾತಾವರಣ ಸೃಷ್ಟಿಸಿಕೊಟ್ಟಿದೆ. ಬಿಜೆಪಿಯ ಅಭ್ಯರ್ಥಿ ಸಂತೋಷ್‍ಕುಮಾರ್ ರೈ ಬೋಳಿಯಾರ್ ಅದೆಷ್ಟೇ ತಿಪ್ಪರಲಾಗ ಹಾಕಿದರೂ ಖಾದರ್‍ಗೆ ಬರುವ ಹಿಂದೂ ಮತ ತಡೆಯಲು ಸಾಧ್ಯವಿಲ್ಲ. ಹಿಂದುಗಳೊಂದಿಗೆ ಖಾದರ್ ಅನ್ಯೋನ್ಯ ಒಡನಾಟ ಹೊಂದಿದ್ದಾರೆ. ಕೆಲಸಗಳೂ ಬೇಕಷ್ಟು ಆಗಿದೆ. ಇದೆಲ್ಲಾ ಖಾದರ್‍ರನ್ನು ಮತ್ತೆ ಗೆಲ್ಲಿಸಲಿವೆ.

ಮಂಗಳೂರು ದಕ್ಷಿಣದಲ್ಲಿ ಬಿಜೆಪಿ ಒಡೆದ ಮನೆಯಾಗಿದೆ. ಮಾಹಿತಿಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗ ವೆಂಕಟರಮಣ ದೇವರ ದುಡ್ಡು ತಿಂದ ನಮೋ ಬ್ರಿಗೇಡಿನ ಜನ್ಮದಾತ ನರೇಶ್ ಶೆಣೈ ಎಂಬ ಮಾಫಿಯಾ ದೊರೆಯನ್ನು ಎದುರು ಹಾಕಿಕೊಂಡು ಕೊಲೆಗೀಡಾಗಿದ್ದು ಈ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಅಂಡರ್ ಕರೆಂಟ್ ಪಾಸ್ ಮಾಡುತ್ತಿದೆ. ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಕೊಲೆಗಡುಕ ನರೇಶ್ ಶೆಣೈ ಚೇಲಾ. ನಳಿನ್ ಗ್ಯಾಂಗ್‍ನ ವೇದವ್ಯಾಸ ಕಾಮತ್ ಕಂಡರೆ ಕಲ್ಲಡ್ಕ ಭಟ್ರಿಗೆ ಆಗದು. ಆತನ ಶಿಷ್ಯ ಶ್ರೀಧರ ಪ್ರಭು ಬಂಡಾಯ ಅಭ್ಯರ್ಥಿ. ಬಿಜೆಪಿಯೊಳಗಿನ ಈ ಹುಳುಕು ಕಾಂಗ್ರೆಸ್‍ನ ಜೆ.ಆರ್.ಲೋಬೋಗೆ ಗೆಲುವು ಸುಲಭ ಮಾಡಿದೆ. ಜನರೊಂದಿಗೆ ಸರಳವಾಗಿ ಬೆರೆಯುವ, ಕ್ಷೇತ್ರದ ಸಮಸ್ಯೆ ತಕ್ಷಣ ಪರಿಹರಿಸಲು ಮುಂದಾಗುವ ಲೋಬೋ ಸುಲಭವಾಗಿ ಗೆಲ್ತಾರೆಂದೇ ಜನರು ವಿಶ್ಲೇಷಣೆ ನಡೆಸಿದ್ದಾರೆ.

ಮಂಗಳೂರು ಉತ್ತರ (ಸೂರತ್ಕಲ್) ಕ್ಷೇತ್ರದಲ್ಲಿ ಹಿಂದು ಮತಗಳನ್ನು ದೃವೀಕರಿಸಲು ಸಂಘ ಸರದಾರರು ಮಾಡದ ಪಾತಕವಿಲ್ಲ. ಸ್ಥಳೀಯ ಶಾಸಕ ಮೊಯ್ದೀನ್ ಬಾವಾನನ್ನು ಸಾಬಿ ಎಂಬ ಒಂದೇ ಕಾರಣಕ್ಕೆ ಕಿಚಾಯಿಸುತ್ತಲೇ ಇತ್ತು ಬಿಜೆಪಿ ಪರಿವಾರ. ಆದರೆ ಇದ್ಯಾವುದೂ ಕೇಸರಿ ಪಡೆಗೆ ದೊಡ್ಡ ಲಾಭವೇನೂ ಮಾಡಿಕೊಟ್ಟಿಲ್ಲ. ಶಾಸಕ ಬಾವಾ ಸಾವಿರಾರು ಕೋಟಿ ಅನುದಾನ ತಂದು ಕ್ಷೇತ್ರದಲ್ಲಿ `ಕೆಲಸಗಾರ ಎಮ್ಮೆಲ್ಲೆ’ ಎಂದೇ ಮನೆ ಮಾತಾಗಿದ್ದಾರೆ. ಜತೆಗೆ ಆತ ಹಿಂದೂಗಳೊಡನೆ ಎಂದೂ ದ್ವೇಷ ಕಟ್ಟಿಕೊಳ್ಳದೆ ಪ್ರೀತಿ-ಸ್ನೇಹದಿಂದಿದ್ದಾರೆ. ಹೀಗಾಗಿ ಕ್ಷೇತ್ರದಾದ್ಯಂತ ಹಿಂದೂಗಳು ಬಾವಾ ಬೇಡವೆಂದೇನೂ ಹೇಳುತ್ತಿಲ್ಲ. ಹಿಂದೂಗಳ ನೇಮ, ಕೋಲ ಮುಂತಾದ ಧಾರ್ಮಿಕ ಕಾರ್ಯಕ್ರಮಕ್ಕೆ ಹೋಗುವ ಬಾವಾ ಬೆನ್ನಿಗೆ ಹಿಂದೂಗಳ ದೊಡ್ಡ ಪಡೆಯೇ ಇದೆ. ಬಿಜೆಪಿ ಅಭ್ಯರ್ಥಿ ಕೌಬಾಯ್ ಭರತ್ ಶೆಟ್ಟಿ ಟಿಕೆಟ್ ಸಿಕ್ಕಾಗ ಗೆದ್ದೇ ಬಿಟ್ಟೆನೆಂಬ ಅಹಂನಲ್ಲಿದ್ದ. ಈಗಾತ ಹತಾಶನಾಗುತ್ತಿದ್ದಾನೆ. ಕತ್ತುಕತ್ತಿನ ಈ ಹೋರಾಟದಲ್ಲಿ ಅಂತಿಮವಾಗಿ ಜನರೊಂದಿಗೆ ಆತ್ಮೀಯವಾಗಿ ಬೆರೆವ ಬಾವಾ ಗೆಲ್ಲುವ ಛಾನ್ಸ್ ಇದೆ.

ಕರಾವಳಿಯ ಪ್ರತಿಷ್ಠೆಯ ಕ್ಷೇತ್ರ ಬಂಟ್ವಾಳ. 6 ಬಾರಿ ಬಂಟ್ವಾಳದಿಂದ ಶಾಸಕನಾಗಿರುವ ಬೆಳ್ಳಿಪಾಡಿ ಬೇಬಿಯಣ್ಣ ಯಾನೆ ಅರಣ್ಯ ಮಂತ್ರಿ ರಮಾನಾಥ ರೈ 8ನೇ ಬಾರಿ ಅಖಾಡಕ್ಕೆ ಇಳಿದಿದ್ದಾರೆ. ಇದು ಕರಾವಳಿ ಚೆಡ್ಡಿ ಹೈಕಮಾಂಡ್ ಕಲ್ಲಡ್ಕ ಭಟ್ಟರ ಹೆಡ್‍ಕ್ವಾರ್ಟರ್ಸ್. ರೈ ಮತ್ತು ಭಟ್ಟರ ಜಿದ್ದಾಜಿದ್ದಿ ಲೋಕಪ್ರಸಿದ್ಧಿ. ಬಂಟ್ವಾಳ-ಕಲ್ಲಡ್ಕ ಪರಿಸರದಲ್ಲಿ ಪದೇಪದೇ ನಡೆಯುವ ಕೋಮು ಕ್ರೌರ್ಯ, ಭಟ್ಟರ ಶಾಲೆಗಳಿಗೆ ಕೊಲ್ಲೂರು ದೇವಳದಿಂದ ಬಿಟ್ಟಿಯಾಗಿ ಬರುತ್ತಿದ್ದ ಅನುದಾನ ಕಡಿತ, ಹಿಂದೂ ಹುಡುಗ ಹರೀಶ್ ಪೂಜಾರಿಯನ್ನು ಹಿಂದೂತ್ವದ ಹಂತಕರೇ ಬಲಿಪಡೆದದ್ದು ಎಲೆಕ್ಷನ್ `ವಿಷಯ’ಗಳಾಗಿವೆ. ಕುತೂಹಲಕರ ಅಂಶವೆಂದರೆ, ರಮಾನಾಥ ರೈಗಳನ್ನು ಸೋಲಿಸಿಯೇ ತೀರುತ್ತೇನೆಂಬ ಹಠದಲ್ಲಿದ್ದ ಕಲ್ಲಡ್ಕ ಭಟ್ರು ತನಗೆ ಕೇರ್ ಮಾಡದ ಸ್ವಪಕ್ಷದ ಎಂಪಿ ನಳಿನ್‍ಗೆ ಬುದ್ದಿ ಕಲಿಸಲು ಅನಿವಾರ್ಯವಾಗಿ ತಂತ್ರ ಬದಲಿಸಿದ್ದಾರೆ.

ಕಳೆದ ಬಾರಿ ಕಾಡಿದ್ದ ಎಸ್‍ಡಿಪಿಐ ಈ ಬಾರಿ ಕಣದಿಂದ ಹಿಂದೆ ಸರಿದಿರುವುದು ಸುಮಾರು 58 ಸಾವಿರದಷ್ಟಿರುವ ಮುಸ್ಲಿಮರ ಮತವನ್ನು ರೈಗೆ ಖಾತರಿಪಡೆಸಿದೆ. ಕಲ್ಲಡ್ಕ ಭಟ್ಟರ ಸರ್ವಾಧಿಕಾರದ ದಾದಾಗಿರಿಯಿಂದ ಹತಾಶರಾಗಿರುವ ಹಿಂದೂತ್ವದ ಒಂದು ವರ್ಗ ಬಿಜೆಪಿಯಿಂದ ದೂರ ಸರಿದಿದೆ. ಇದು ರೈ ರೊಟ್ಟಿಯನ್ನು ಸೀದಾ ತುಪ್ಪಕ್ಕೇ ಬೀಳಿಸುತ್ತಿದೆ. ಜತೆಗೆ ಬಿಜೆಪಿ ಒಳಗಿನ ಭಟ್ರು ವರ್ಸಸ್ ನಳಿನ್ ಕಿತ್ತಾಟ ರೈಗೆ ವರವಾಗಿದೆ. ಬಿಜೆಪಿ ಅಭ್ಯರ್ಥಿ ಉಳಿಪಾಡಿ ಗುತ್ತಿನ ರಾಜೇಶ್ ನಾಯಕ್ ಕಲ್ಲಡ್ಕರ ಕ್ಯಾಂಡಿಡೇಟು. ಆದರೂ ಆತನನ್ನು ಸೋಲಿಸಿ ಅದರ ಹೊಣೆಯನ್ನು ನಳಿನ್ ಹೆಗಲಿಗೆ ವರ್ಗಾಯಿಸೋದು ಭಟ್ಟರ ಪ್ಲ್ಯಾನು. ಆನಂತರ ಅದೇ ಕಾರಣವಿಟ್ಟುಕೊಂಡು ನಳಿನ್‍ಗೆ ಎಂಪಿ ಟಿಕೇಟ್ ತಪ್ಪಿಸಿ ತನ್ನ ಶಿಷ್ಯ ರಾಜೇಶ್ ನಾಯಕನಿಗೆ ಎಂಪಿ ಮಾಡೋದು ಅವರ ಹುನ್ನಾರ.

ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ಮೂರು ಪಕ್ಷದಿಂದ ಗೆದ್ದಿರುವ ದಾಖಲೆಯ ವಸಂತ ಬಂಗೇರಾ ಬೆಳ್ತಂಗಡಿಯ ಉದ್ದಗಲಕ್ಕೆ ತನ್ನದೇ ಛಾಪು ಒತ್ತಿರುವ ರಫ್ ಅಂಡ್ ಟಫ್ ರಾಜಕಾರಣಿ. ಆತನ ಸೋಲಿಸುವುದು ಅಷ್ಟು ಸುಲಭವಲ್ಲ. ಇದಕ್ಕಾತನ ಜನಪರ ತುಡಿತ, ಮಿಡಿತ, ಕೆಲಗಾರಿ, ಸರಳತೆಗಳೇ ಕಾರಣ. ಹಿಂದಿನ ಬಾರಿ ಗೌಡ ಸಮುದಾಯದ ಮಾಜಿಮಂತ್ರಿ ಗಂಗಾಧರ ಗೌಡರ ಪುತ್ರ ರಂಜನ್ ಗೌಡರನ್ನು ಅಖಾಡಕ್ಕೆ ಇಳಿಸಿದ್ದ ಬಿಜೆಪಿ ಈ ಬಾರಿ ಬಂಟ ಸಮುದಾಯದ ಹರೀಶ್ ಪೂಂಜಾ ಎಂಬ ಕೌಬಾಯ್ ಭಜರಂಗಿಯನ್ನು ಹುರಿಯಾಳಾಗಿಸಿದೆ. ಈತನಿಗೆ ವಸಂತ ಬಂಗೇರಾ ಎದುರಿಸುವ ಯಾವ ಅರ್ಹತೆ, ಯೋಗ್ಯತೆಯಿಲ್ಲ. ಬಿಜೆಪಿಯಲ್ಲಿ ಟಿಕೆಟ್ ಕಲಹವೇ ನಿಂತಿಲ್ಲ. ಬಂಗೇರಾ ಗೆಲ್ಲುವುದಕ್ಕೆ ಯಾವ ಅನುಮಾನ ಯಾರಿಗೂ ಇಲ್ಲ!

ದಕ್ಷಿಣ ಕನ್ನಡದಲ್ಲಿ ಬಿಜೆಪಿಗೆ ಒಂಚೂರು ಗೆಲ್ಲುವ ಅವಕಾಶ ಇರುವ ಕ್ಷೇತ್ರವೆಂದರೆ ಮುಲ್ಕಿ-ಮೂಡಬಿದಿರೆ ಮಾತ್ರ. ಕಾಂಗ್ರೆಸ್‍ನ ಅಭಯಚಂದ್ರ ಜೈನ್ ಮುಂಗೋಪ, ಜೈನ ಪಾಳೆಗಾರಿಕೆ, ಧಿಮಾಕು, ಸಡಿಲ ನಾಲಿಗೆಯಿಂದಾಗಿ ಕಳೆಗುಂದಿದ್ದಾರೆ. ಹಿಂದೂತ್ವದ ಗಾಳಿಯೂ ಕ್ಷೇತ್ರದಲ್ಲಿದೆ. ಕ್ಷೇತ್ರದ ಬಹುಸಂಖ್ಯಾತ ಬಿಲ್ಲವ ಕೋಮಿನ ಉಮಾನಾಥ ಕೋಟ್ಯಾನ್ ಬಿಜೆಪಿ ಅಭ್ಯರ್ಥಿ. ಕಳೆದ ಬಾರಿ ಸಣ್ಣ ಅಂತರದಲ್ಲಿ ಸೋತಿದ್ದ ಕೋಟ್ಯಾನ್ ಕಳೆದೈದು ವರ್ಷ ಕಾರ್ಯಕರ್ತರ ಸಂಪರ್ಕದಲ್ಲೇ ಇರಲಿಲ್ಲ. ಬಿಜೆಪಿ ಟಿಕೆಟ್‍ಗೆ ಪ್ರಯತ್ನಿಸಿದ್ದ ಜಗದೀಶ್ ಅಧಿಕಾರಿ ಮತ್ತಿತರರು ಅಸಮಾಧಾನದಲ್ಲಿದ್ದಾರೆ. ಇದು ತನಗೆ ಅನುಕೂಲಕರ ಎಂಬ ಭಾವನೆ ಅಭಯರದು. ಇಷ್ಟಾಗಿಯೂ ಎಲೆಕ್ಷನ್ ಗೆಲ್ಲುವ ಕಲೆ ಕರಗತ ಮಾಡಿಕೊಂಡಿರುವ ಎರಡೂವರೆ ದಶಕದ ಶಾಸಕ ಅಭಯ ನಿರ್ಣಾಯಕರಾದ ಕ್ರಿಶ್ಚಿಯನ್ ಮತಗಳ ಮೇಲೆ ಜೀವವಿಟ್ಟಿದ್ದಾರೆ. ಫಿಫ್ಟಿ-ಫಿಫ್ಟಿ ಛಾನ್ಸ್!

ಬಹುಸಂಖ್ಯಾತ ಸ್ವಜಾತಿ ಬಿಲ್ಲವರ, ಕ್ರಿಶ್ಚಿಯನ್ ಮತ್ತು ಮುಸ್ಲಿಂ ಮತ ಸಾರಾಸಗಟಾಗಿ ಎತ್ತುವ ಕಾಂಗ್ರೆಸ್ ಕ್ಯಾಂಡಿಡೇಟ್ ವಿನಯ್ ಕುಮಾರ್ ಸೊರಕೆ ಕಾಪು ಕ್ಷೇತ್ರದ ಫೇವರಿಟ್ ಡಾರ್ಕ್ ಹಾರ್ಸ್! ಮತ್ತೊಂದು ದೊಡ್ಡ ಸಮುದಾಯವಾದ ಮೊಗವೀರರ ಮತ ಬಿಜೆಪಿಯ ಲಾಲಾಜಿ ಮೆಂಡನ್ ಪಡೆಯುತ್ತಾರಾದರೂ ಆತ ಆಕರ್ಷಣೆ ಕಳೆದುಕೊಂಡಿದ್ದಾರೆ. ಬಿಜೆಪಿಯಲ್ಲಿ ಬಣ ಬಡಿದಾಟವಿದೆ. ಟಿಕೆಟ್ ಸಿಗುತ್ತದೆಂದು ಕಳೆದೈದು ವರ್ಷದಿಂದ ಬಿಜೆಪಿ ಕಟ್ಟಿ ಬೆಳೆಸಿದ್ದ ಅದಿರು ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಆಕ್ರೋಶದಲ್ಲಿದ್ದಾರೆ. ಆತನ ಬಂಟ ಸಮುದಾಯದ ಒಂದು ಪಾಲು ಕಾಂಗ್ರೆಸ್ ಪಾಲಾಗಲಿದೆ. ಈ ಐದು ವರ್ಷದಲ್ಲಿ ಸೊರಕೆ ಹಳ್ಳಿಹಳ್ಳಿ ತಿರುಗುತ್ತ ಕೆಲಸ-ಕಾಮಗಾರಿ ಮಾಡುತ್ತಾ ಕ್ಷೇತ್ರದಲ್ಲಿ ಜನಪ್ರಿಯರಾಗಿದ್ದಾರೆ. ಎತ್ತಿಂದೆತ್ತ ಲೆಕ್ಕಹಾಕಿ ತಾಳೆ ನೋಡಿದರೂ ಕಾಂಗ್ರೆಸ್‍ನ ಸೊರಕೆ ವಿಜಯ ಖಚಿತ ಎಂಬಂತೆ ಗೋಚರಿಸುತ್ತಿದೆ.

ಉಡುಪಿ ಕ್ಷೇತ್ರದ ಬಿಜೆಪಿಗೇ ಅಭ್ಯರ್ಥಿ ರಘುಪತಿ ಭಟ್ಟ ಬೇಡವಾಗಿದ್ದಾನೆ. ರಂಗೀಲಾ ರಗಳೆ, ಹೆಂಡತಿಯ ಸಂಶಯಾಸ್ಪದ ಸಾವು, ರಾಸಲೀಲೆ ಸಿಡಿ ರಗಳೆ, ಶಿರೂರು ಸ್ವಾಮಿಯ ವಿರೋಧ, ಕಲ್ಲಡ್ಕ ಭಟ್ಟರ ಅಸಡ್ಡೆಗಳಿಂದ ಭಟ್ಟ ಅಖಾಡದಲ್ಲಿ ವೀಕ್ ಆಗುತ್ತಾ ಸಾಗಿದ್ದಾನೆ. ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಅಭಿವೃದ್ಧಿ ಸಾಧಿಸಿದ್ದಾರೆ. ಕಾರ್ಯಕರ್ತರ ಪಡೆ ಪ್ರಮೋದ್ ಬೆನ್ನಿಗಿದೆ. ಭಟ್ಟರ ಮೇಲಿನ ಸಿಟ್ಟಿಂದ ಶೋಭಾ ಕರಂದ್ಲಾಜೆಯೂ ಪ್ರಮೋದ್‍ಗೆ ಒಳಗೊಳಗೇ ಸಹಾಯ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಹೆಸರು ಕೆಡಿಸಿಕೊಂಡಿರುವ ಭಟ್ಟ ಜನಾನುರಾಗಿ ಪ್ರಮೋದ್ ಎದುರು ಸೋಲೋದು ಶತಸಿದ್ಧ ಎಂದು ಎಲ್ಲರೂ ಹೇಳುತ್ತಾರೆ!

ಕಾರ್ಕಳ ಕಾಂಗ್ರೆಸ್‍ನಲ್ಲಿದ್ದ ಟಿಕೆಟ್ ಹಂಚಿಕೆ ಅಸಮಾಧಾನ ಮೊಯ್ಲಿ ಮಹಾತ್ಮರೇ ಖುದ್ದು ಕುಂತು ಬಗೆಹರಿಸಿದ್ದಾರೆ. ಹೀಗಾಗಿ ಇಷ್ಟು ದಿನ ತಾನು ಗೆದ್ದೇಬಿಟ್ಟೆನೆಂಬ ಸೊಕ್ಕಿನಲ್ಲಿದ್ದ ಬಿಜೆಪಿಯ ಸುನೀಲ್‍ಕುಮಾರ್‍ಗೆ ನಡುಕ ಶುರುವಾಗಿದೆ. ಕ್ಷೇತ್ರದಲ್ಲಿ ನಿರ್ಣಾಯಕರಾದ ಕೊಂಕಣಿಗರು ಸುನೀಲ್‍ಗೆ ಬುದ್ದಿ ಕಲಿಸುವ ತೀರ್ಮಾನಕ್ಕೆ ಬಂದಿದ್ದಾರೆ. ತಾನು ಕ್ಷೇತ್ರದ ಬಹುಸಂಖ್ಯಾತ ಬಿಲ್ಲವನೆಂದು ಸುಳ್ಳು ಹೇಳುವ ಈ ಬ್ರಾಹ್ಮಣ ಕುಲಸಂಜಾತ ಸುನೀಲ್‍ಕುಮಾರ್ ಕಳೆದ ಬಾರಿ ಗೆದ್ದಿದ್ದು ತೀರಾ ಸಣ್ಣ ಅಂತರದಲ್ಲಿ. ಜಾತಿ ಬಲ ಇಲ್ಲದಿದ್ದರೂ ಕ್ಷೇತ್ರಾದ್ಯಂತ ಎಲ್ಲಾ ಜಾತಿ, ಸಮುದಾಯದ ಪ್ರೀತಿ, ವಿಶ್ವಾಸ, ಅನುಕಂಪ ಕಾಂಗ್ರೆಸ್‍ನ ಗೋಪಾಲ ಭಂಡಾರಿ ಮೇಲಿದೆ.

ಬೈಂದೂರಿನ ಬಿಜೆಪಿ ಅಭ್ಯರ್ಥಿ ಬಿ.ಎಂ.ಸುಕುಮಾರ ಶೆಟ್ಟಿ ಎಷ್ಟು ಕಷ್ಟ, ತೊಂದರೆಯಲ್ಲಿದ್ದಾನೋ ಅಷ್ಟೇ ಅನಾನುಕೂಲದಲ್ಲಿ ಕುಂದಾಪುರದ ಕಾಂಗ್ರೆಸ್ ಕ್ಯಾಂಡಿಡೇಟ್ ಮಾಜಿ ರೌಡಿ ರಾಕೇಶ್ ಮಲ್ಲಿಯಿದ್ದಾನೆ! ಕುಂದಾಪುರದ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿಯಂತೆಯೇ ಬೈಂದೂರಿನ ಕಾಂಗ್ರೆಸ್ ಹುರಿಯಾಳು ಗೋಪಾಲ ಪೂಜಾರಿ ಜನ ನಾಯಕ. ಹಾಲಾಡಿಯದು ರಾಬಿನ್‍ಹುಡ್ ಬೂಟಾಟಿಕೆಯಾದರೆ ಪೂಜಾರಿಯದು ಕೆಲಸಗಾರಿಕೆ, ಜನಪರ ನೀತಿ-ನಿಲುವು. ಎರಡೂ ಕ್ಷೇತ್ರಗಳಲ್ಲಿನ ಜಾತಿ ಲೆಕ್ಕಾಚಾರಗಳು ಹಾಲಾಡಿ ಮತ್ತು ಪೂಜಾರಿ ಪರವಾಗಿಯೇ ಇದೆ. ಹಾಗಾಗಿ ಆಯಾ ಕ್ಷೇತ್ರದಲ್ಲಿ ಇಬ್ಬರೂ ಗೆಲ್ಲೋದು ಖಾತ್ರಿ!!

ಉತ್ತರ ಕನ್ನಡದ ಭಟ್ಕಳ ಕುತೂಹಲದ ಕಣ. ಕ್ಷೇತ್ರದಲ್ಲಿ ದೀವರು ಸುಮಾರು 65 ಸಾವಿರದಷ್ಟಿದ್ದಾರೆ. ಈ ಜಾತಿಯ ಬಹುಸಂಖ್ಯಾತ ಜನರಿಗೆ ಕಾಂಗ್ರೆಸ್ ಶಾಸಕ ಕಂ ಅಭ್ಯರ್ಥಿ ಮಂಕಾಳು ವೈದ್ಯರ ಕಂಡರೆ ಆಗದು. ಕ್ಷೇತ್ರದಲ್ಲಿ ನಾಮಧಾರಿಗಳು ಒಂದು ಕಡೆಯಾದರೆ ಇತರರು ಮತ್ತೊಂದು ಕಡೆ ಎಂಬ ರಾಜಕೀಯ ಪರಿಸ್ಥಿತಿ ಲಗಾಯ್ತಿನಿಂದಲೂ ಇದೆ. ಇದನ್ನು ಜಾಣ್ಮೆಯಿಂದ ನಗದೀಕರಿಸಿಕೊಂಡದ್ದು ಮಂಕಾಳು ವೈದ್ಯ. ಇದು ದೀವರನ್ನು ಮತ್ತಷ್ಟು ಕೆರಳಿಸಿದೆ. ಇದಕ್ಕೆ ಸಮನಾಂತರವಾಗಿ ದೀವೇತರರು ದೃವೀಕರಣಗೊಂಡಿದ್ದಾರೆ. ಮಂಕಾಳು ವೈದ್ಯ ಸಾವಿರಾರು ಕೋಟಿ ಅನುದಾನ ತಂದು ಹಳ್ಳಿಹಳ್ಳಿಗಳಲ್ಲಿ ರಸ್ತೆ, ಸೇತುವೆಯಂಥ ಜನರಿಗೆ ಅವಶ್ಯವಿರುವ ಕಾಮಗಾರಿ ಮಾಡಿ ಜನಮೆಚ್ಚುಗೆ ಗಳಿಸಿದ್ದಾರೆ. ವೈಯಕ್ತಿಕ ಸಮಸ್ಯೆಗಳಿಗೂ ತಕ್ಷಣ ಸ್ಪಂದಿಸುವ ವೈದ್ಯ ಕೊಡುಗೈ ದಾನಿ ಎಂದೇ ಹೆಸರುವಾಸಿ. ನಿರ್ಣಾಯಕರಾದ ಮುಸ್ಲಿಮರು ವೈದ್ಯನ ಬೆನ್ನಿಗೆ ನಿಂತಿದ್ದಾರೆ. ಜೆಡಿಎಸ್ ಅಭ್ಯರ್ಥಿ ಇಲ್ಲದಿರುವುದು ವೈದ್ಯರಿಗೆ ಪ್ಲಸ್‍ಪಾಯಿಂಟ್. ಬಿಜೆಪಿಯ ಸುನೀಲ್ ನಾಯ್ಕ ಕಂಡರೆ ಹಳೇ ಚೆಡ್ಡಿ-ಹೊಸ ಬಿಜೆಪಿಗಳ್ಯಾರಿಗೂ ಆಗದು. ಹುಂಬತನ-ಪುಂಡತನದ ಸುನೀಲ್‍ಗಿಂತ ಬಡವರು, ನೊಂದವರೊಂದಿಗೆ ಹಮ್ಮು-ಬಿಮ್ಮು ಇಲ್ಲದೆ ಬೆರೆವ ವೈದ್ಯ ಗೆಲ್ಲುವ ಅವಕಾಶ ಅಪಾರ!

ಕುಮಟಾ-ಹೊನ್ನಾವರ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಶಾರದಾ ಶೆಟ್ಟಿ, ಬಿಜೆಪಿಯ ದಿನಕರ ಶೆಟ್ಟಿ ಮತ್ತು ಜೆಡಿಎಸ್‍ನ ಪ್ರದೀಪ್ ನಾಯಕ್ ನಡುವೆ ಮೂರು ಮೂಲೆ ಮೇಲಾಟ ನಡೆದಿದೆ. ಬಿಜೆಪಿ ಟಿಕೆಟ್ ಸಿಗದ ಸಿಟ್ಟಲ್ಲಿ ನಿಗೂಢ ಸಂಪತ್ತು-ಸಂಪರ್ಕ-ಸಂಬಂಧಗಳ ಮೈಸೂರು ಉದ್ಯಮಿ ಯಶೋಧರ ನಾಯ್ಕ ಮತ್ತು ದನ ಹಿಡಿವರ ನಾಯಕ ಕೌಬಾಯ್ ಸೂರಜ್ ಸೋನಿ ಸ್ವಜಾತಿ ನಾಮಧಾರಿಗಳ ಮತ ಪಡೆಯುತ್ತಾರೆ. ಸೂರಜ್ ನಾಯ್ಕ ಬಿಜೆಪಿಗೆ ಹೋಗುವ ಹಿಂದೂತ್ವದ ಹುಂಬ ಹುಡುಗರ ಮತ ಕತ್ತರಿಸಲಿದ್ದಾರೆ. ಜೆಡಿಎಸ್‍ನಲ್ಲಿದ್ದಾಗ ಸ್ವಂತ ವರ್ಚಸ್ಸು, ಸ್ವತಂತ್ರ ತಂತ್ರಗಾರಿಕೆಯಿಂದ ಗೆಲ್ಲುತ್ತಿದ್ದ ದಿನಕರ ಶೆಟ್ಟಿ ಬಿಜೆಪಿಯಲ್ಲಿ ದುರ್ಬಲನಾಗಿದ್ದಾನೆ. ಹಿಂದೂತ್ವ ಮತ, ಬಿಜೆಪಿ ಒಲವಿನ ಬ್ರಾಹ್ಮಣರು-ಕೊಂಕಣಿಗರ ಮತ ಬಿಟ್ಟರೆ ಆತನಿಗೆ ಇತರ ಸಣ್ಣಪುಟ್ಟ ಜಾತಿಯ ಮತ ಪಡೆಯುವುದು ಮೊದಲಿನಷ್ಟು ಸುಲಭವಲ್ಲ.

ಕಾಂಗ್ರೆಸ್ ಅಭ್ಯರ್ಥಿ ಶಾರದಾ ಶೆಟ್ಟಿ ಶಾಸಕಿಯಾಗಿ ಜನರಿಗೆ ಹತ್ತಿರವಾಗಿದ್ದಾರೆ. ಸಾವಿರಾರು ಕೋಟಿ ಅನುದಾನ ಹಠ ಹಿಡಿದು ತಂದು ಕೆಲಸ ಮಾಡಿದ್ದಾರೆ. ಮೇದಿನಿಯಂಥ ಕುಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕೊಡಿಸಿದ್ದಾರೆ. ಶರಾವತಿ ಕುಡಿಯುವ ನೀರಿನ ಯೋಜನೆ, ಹಳ್ಳಿಯಳ್ಳ ಶಾಶ್ವತ ನೀರಿನ ಪ್ರಾಜೆಕ್ಟ್, ನಡುಗಡ್ಡೆಗಳಿಗೆ ಸೇತುವೆ ಸಂಪರ್ಕದಂಥ ಮಹತ್ವದ ಕಾಮಗಾರಿ ಮಾಡಿದ್ದಾರೆ. ಶಾಸಕಿ ಎಂಬ ಗತ್ತು ತೋರಿಸದೆ ಜನರೊಂದಿಗೆ ಬೆರೆತಿದ್ದಾರೆ. ಇದು ಆಕೆಗೆ ಮತಬ್ಯಾಂಕ್ ಸೃಷ್ಟಿಸಿದೆ. ಸದ್ಯಕ್ಕೆ ಸಮ ಬಲದಲ್ಲಿ ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ಇದೆ. ಅಂತಿಮವಾಗಿ ಮುಸ್ಲಿಮರ ಓಟು ಪಡೆದವರು ಗೆಲ್ಲುತ್ತಾರೆ. ಆ ಯೋಗ ಕಾಂಗ್ರೆಸ್‍ನ ಶಾರದಾ ಶೆಟ್ಟಿಗೆ ಹೆಚ್ಚು!

ಕಾರವಾರ-ಅಂಕೋಲಾದಲ್ಲಿ ಕಾಂಗ್ರೆಸ್‍ನ ಸತೀಶ್ ಸೈಲ್, ಜೆಡಿಎಸ್‍ನ ಆನಂದ ಆಸ್ನೋಟಿಕ್ ಮತ್ತು ಬಿಜೆಪಿಯ ರೂಪಾಲಿ ನಾಯ್ಕ ನಡುವೆ `ಹಣಾ’ಹಣಿ ಜೋರಾಗಿ ನಡೆದಿದೆ. ಆನಂದ ಅಧಿಕಾರದಲ್ಲಿದ್ದಾಗ ಮಾಡಿದ ಅವಾಂತರ-ಅಸಹ್ಯ ಜನರಿನ್ನೂ ಮರೆತಿಲ್ಲ. ಶಾಸಕ ಸೈಲ್ ಎಂಬ ಅದಿರು ಕಳ್ಳ ಸಾಗಾಣಿಕೆದಾರ ಪರ್ಸೆಂಟೇಜ್ ದಂಧೆಯಿಂದ ಹೆಸರು ಕೆಡಿಸಿಕೊಂಡಿದ್ದಾನೆ. ಆತನ ಅಚ್ಚುಮೆಚ್ಚಿನ ಬಂಟರಾದ ಚೆಂಬುಶೆಟ್ಟಿ ಮತ್ತು ಮಂಗು ಕಾಮತ್ ಕರಾಮತ್ತುಗಳು ಕಾಂಗ್ರೆಸ್‍ಗೆ ದೊಡ್ಡ ಡ್ಯಾಮೇಜು ಮಾಡಿದೆ. ಹೀಗಾಗಿ ಹೊಸ ಮುಖ ಬಿಜೆಪಿಯ ರೂಪಾಲಿ ನಾಯ್ಕ ಚಮಕ್ ಜಾದೂ ಮಾಡುತ್ತಿದೆ. ಬಿಜೆಪಿಯಲ್ಲಿ ಭಿನ್ನಮತ ಹೊಗೆಯಾಡುತ್ತಿದ್ದರೂ ಅದರಿಂದ ಆಕೆಗೇನೂ ತೊಂದರೆಯಿಲ್ಲ. ದುಡ್ಡಿನ ದರ್ಪದ ಸೈಲ್‍ಗೆ ಜನರೆಂದರೆ ಅಲರ್ಜಿ. ಆಸ್ನೋಟಿಕರ್ ನಾಲ್ಕೂವರೆ ವರ್ಷ ಕ್ಷೇತ್ರದಿಂದ ಕಣ್ಮರೆಯಾಗಿದ್ದರಿಂದ ಜನ ಸಂಪರ್ಕ ಕಡಿದುಹೋಗಿದೆ. ಸದ್ಯಕ್ಕೆ ರೂಪಾಲಿ ಪಡೆಯ ಪ್ರಚಾರಕ್ಕೆ ರಂಗೇರಿದೆ. ಎಲೆಕ್ಷನ್ ಮುಂಚಿನ ದಿನದ ಕತ್ತಲ ರಾತ್ರಿಯ ಕರಾಮತ್ತು ಬಲ್ಲವರ್ಯಾರು? ಮೂವರೂ ಆ ಕಾಳರಾತ್ರಿ ಕಾದು ಕುಳಿತಿದ್ದಾರೆ.

ಬಿಜೆಪಿಯ ಮಾಜಿ ಮಂತ್ರಿ, ಚೆಡ್ಡಿ ಚಮತ್ಕಾರಿ ಕಾಗೇರಿ ಮಾಣಿ, ಜೆಡಿಎಸ್ ಅಭ್ಯರ್ಥಿ ದಿವಂಗತ ಸಿಎಂ ರಾಮಕೃಷ್ಣ ಹೆಗಡೆಜೀ ದಾಯಾದಿ ಮೊಮ್ಮಗ ಶಶಿಭೂಷಣ ಹೆಗಡೆ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನೂ ದಿವಂಗತ ಸಿಎಂ `ಬಂ’ರ ಭಾಮೈದುನನೂ ಆಗಿರುವ ಭೀಮಣ್ಣ ನಾಯ್ಕರ ಮಾಡು ಇಲ್ಲವೇ ಮಡಿ ಕಾಳಗದಿಂದಾಗಿ ಶಿರಸಿ-ಸಿದ್ದಾಪುರ ಪ್ರತಿಷ್ಠೆಯ ಕ್ಷೇತ್ರದಂತಾಗಿದೆ. ಆರಂಭದಲ್ಲಿ ಮೂವರೂ ಸಮಬಲದಲ್ಲಿದ್ದರು. ದಿನಕಳೆದಂತೆ ಕಾಗೇರಿ ಹೈರಾಣಾಗುತ್ತಿದ್ದಾರೆ. ಆತನಿಗೆ ಸ್ವ-ಪಕ್ಷದ ಕೇಂದ್ರದ ಬುರ್ನಾಸ್ ಬಾಯಿಯ ಮಂತ್ರಿ ಅನಂತ್ಮಾಣಿ ಕಾಡುತ್ತಿದ್ದಾನೆ. ಕಾಗೇರಿಗೆ ಮಾಜಿ ಮಾಡೇತೀರುವ ಹಠ ಅನಂತ್ಮಾಣಿಗೆ. ಹೀಗಾಗಿ ಈಗ ಕಾಗೇರಿ ಮೂರನೇ ಸ್ಥಾನಕ್ಕೆ ಹೋಗಿದ್ದಾರೆ. ಕಾದಾಟ ಭೀಮಣ್ಣ ಮತ್ತು ಶಶಿ ನಡುವೆ ನಡೆದಿದೆ. ಅಲ್ಪಸಂಖ್ಯಾತರ ಓಟು ಯಾರು ಪಡೆಯುತ್ತಾರೋ ಅವನೇ ಶಾಸಕ ಕಪ್ ಹೊಡೆಯುತ್ತಾನೆ. ಭೀಮಣ್ಣನಿಗೆ ಕ್ಷೇತ್ರದ ಬಹುಸಂಖ್ಯಾತ ಸ್ವಜಾತಿಯ ದೀವರು ಬೆಂಬಲಿಸಿದರೆ, ಎರಡನೇ ದೊಡ್ಡ ಜಾತಿಯಾದ ಹವ್ಯಕರ ಮತದ ದೊಡ್ಡ ಪಾಲು ಶಶಿ ಬಾಚುತ್ತಾರೆ. ಕಾಗೇರಿ ಕಂಗಾಲಾಗಿದ್ದಾರೆ. ಗೆಲ್ಲುವ ಛಾನ್ಸ್ ಭೀಮಣ್ಣನಿಗೆ ಜಾಸ್ತಿ.

ಯಲ್ಲಾಪುರ-ಮುಂಡಗೋಡದಲ್ಲಿ ಬಿಜೆಪಿಯ ವಿ.ಎಸ್.ಪಾಟೀಲ, ಕಾಂಗ್ರೆಸ್‍ನ ಹಾಲಿ ಶಾಸಕ ಶಿವರಾಮ ಹೆಬ್ಬಾರ್ ಎಂಬ ಅದಿರುಕಳ್ಳನ ನಡುವೆ ನೇರಾನೇರ ಯುದ್ಧ ನಡೆಯುತ್ತಿದೆ. ಜೆಡಿಎಸ್‍ನ ರವಿನಾಯ್ಕ ಆಟಕ್ಕೆ ಮಾತ್ರ. ವಿ.ಎಸ್.ಪಾಟೀಲ್ ಕಂಡರೆ ಅನಂತ್ಮಾಣಿಗೆ ಆಗೋದಿಲ್ಲ. ಪಾಟೀಲ್‍ಗೆ ಟಿಕೆಟ್ ತಪ್ಪಿಸಲು ವಿಫಲ ಯತ್ನ ಮಾಡಿದ ಮಾಣಿ ಈಗಾತನ ಸೋಲಿಸಿ ಜಾತಿಬಂಧು ಹೆಬ್ಬಾರ್‍ನನ್ನು ಶಾಸಕನಾಗಿಸುವ ತಂತ್ರ ಮಾಡಿದ್ದಾನೆ. ಕ್ಷೇತ್ರದ ಬಹುಸಂಖ್ಯಾತ ಬ್ರಾಹ್ಮಣರ, ದೀವರ, ಮುಸ್ಲಿಂ, ಕ್ರಿಶ್ಚಿಯನ್ ಮತ ಪಡೆವ ಹೆಬ್ಬಾರ್ ಎಮ್ಮೆಲ್ಲೆ ಆಗುವ ಎಲ್ಲಾ ಸಂಕೇತಗಳು ಕಾಣಿಸುತ್ತಿವೆ.

ಹಳಿಯಾಳ-ದಾಂಡೇಲಿ-ಜೋಯಿಡಾ ಕ್ಷೇತ್ರ `ತೂಕದ ಸಚಿವ’ ದೇಶಪಾಂಡೆಯ ಅಖಾಡ. ಆತನಿಗೆ ಬಿಜೆಪಿಯ ಸುನೀಲ್ ಹೆಗಡೆ ಎಂಬ ಸ್ವಜಾತಿ ಪೋರ ಮತ್ತು ಜೆಡಿಎಸ್‍ನ ರಮೇಶ್ ಎಂಬ ಬೆಂಗಳೂರು ಕಡೆಯ ವಲಸಿಗ ಪೈಪೋಟಿ ಕೊಡುತ್ತಿರುವಂತೆ ಭಾಸವಾಗುತ್ತಿದೆ. ಆದರೆ ಹೋರಾಟವಿರುವುದು ದೇಶಪಾಂಡೆ ಮತ್ತು ಆತನ ಗರಡಿಯಲ್ಲೇ ಪಳಗಿದ ಸುನೀಲ್ ನಡುವೆಯಷ್ಟೆ. ದೇಶಪಾಂಡೆ ಮಂತ್ರಿಯಾಗಿ ಕ್ಷೇತ್ರದ ಮೂರೂ ತಾಲ್ಲೂಕಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಕ್ಷೇತ್ರ ಜನರ ಸಮಸ್ಯೆಗೆ ಸ್ಪಂದಿಸಿ ನಿರಂತರ ಸಂಪರ್ಕ ಇಟ್ಟುಕೊಂಡಿದ್ದಾರೆ. ಬಿಜೆಪಿಯ ಸುನೀಲ್ ಅದೇನೇ ಮಾಡಿದರೂ ಅಲ್ಪಸಂಖ್ಯಾತರ ಮತಗಳನ್ನು ದಂಡಿಯಾಗಿ ಪಡೆವ ದೇಶಪಾಂಡೆಯನ್ನು ಮಣಿಸಲಾಗದು.

@ ನಹುಷ

Leave a Reply

Your email address will not be published.