Ensuddi Election Spl : ಮತ್ತೆ ಕಾಂಗ್ರೆಸ್ ಕೈಹಿಡಿಯಲಿದೆ ಸಿಂಪಲ್ ಮೆಜಾರಿಟಿ ….!

ಮತ್ತೆ ಕಾಂಗ್ರೆಸ್ ಕೈಹಿಡಿಯಲಿದೆ

ಸಿಂಪಲ್ ಮೆಜಾರಿಟಿ..

ಕಾಂಗ್ರೆಸ್: 117-122

ಬಿಜೆಪಿ: 55-60

ಜೆಡಿಎಸ್: 34-37

ಇತರರು: 03-05

ಕರ್ನಾಟಕದಲ್ಲಿ ಸದ್ಯಕ್ಕಿರುವ ರಾಜಕೀಯ ಪರಿಸ್ಥಿತಿಯನ್ನಾಧರಿಸಿ ಆಯಾ ವಿಧಾನಸಭಾ ಕ್ಷೇತ್ರಗಳ ಜಿದ್ದಾಜಿದ್ದಿ, ಚುನಾವಣಾ ಟ್ರಂಡ್‍ಗಳನ್ನು ಅಧ್ಯಯನ ನಡೆಸಿ, ನಮ್ಮ ಪತ್ರಿಕಾ ತಂಡ ಕ್ಷೇತ್ರವಾರು ನಡೆಸಿದ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್‍ಗೆ 117-122, ಬಿಜೆಪಿಗೆ 55-60, ಜೆಡಿಎಸ್‍ಗೆ 34-37 ಮತ್ತು ಇತರರಿಗೆ 3-5 ಸ್ಥಾನಗಳು ಲಭಿಸಬಹುದು.

ಮುಖ್ಯವಾಗಿ ತನ್ನ ಪಾರಂಪರಿಕ ಪಾರುಪತ್ಯದ ಹೈದ್ರಾಬಾದ್ ಕರ್ನಾಟಕದಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿರುವುದಲ್ಲದೇ ಬಿಜೆಪಿಯ ಭದ್ರ ನೆಲೆ ಎಂದು ಪರಿಗಣಿತವಾಗಿದ್ದ, ಲಿಂಗಾಯತ ಪ್ರಾಬಲ್ಯದ ಮುಂಬೈ ಕರ್ನಾಟಕದಲ್ಲೂ ಕೈ ಪಡೆ ಮುಂದಿರುವುದು ಸರಳ ಬಹುಮತಕ್ಕೆ ಸನಿಹವಾಗಿಸಿದೆ. ಕಳೆದ ಬಾರಿಯೂ ಕೈ ಪಾರ್ಟಿ ಈ ಎರಡು ಪ್ರಾಂತ್ಯಗಳಲ್ಲಿ ಗಣನೀಯ ಸಾಧನೆ ಮಾಡಿದ್ದು ಅಧಿಕಾರಕ್ಕೆ ಹತ್ತಿರವಾಗಿಸಿತ್ತು. ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಕಾಂಗ್ರೆಸ್‍ಗೆ ಅದ್ಭುತ ಮೈಲೇಜ್ ತಂದುಕೊಡದೆ ಹೋದರೂ ಯಡಿಯೂರಪ್ಪನವರಿಂದ ಲಿಂಗಾಯತ ಲೀಡರಿಕೆಯನ್ನು ವಿಮುಖಗೊಳಿಸಿರುವುದು ಬಿಜೆಪಿಗೆ ಏಟು ನೀಡುತ್ತಿದೆ. ಅದು ಗಣನೀಯವಲ್ಲ, ಆದರೂ ಕೆಜೆಪಿ-ಬಿಜೆಪಿ-ಬಿಎಸ್‍ಆರ್ ಸಮಾಗಮದ ಆಘಾತವನ್ನು ತಡೆದುಕೊಳ್ಳಬಹುದಾದಷ್ಟು ಶಕ್ತಿಯನ್ನು ಅದು ಕಾಂಗ್ರೆಸ್‍ಗೆ ತುಂಬಿದೆ. ಇನ್ನು ಕರಾವಳಿ ಪ್ರಾಂತ್ಯದಲ್ಲಿ ಕಳೆದ ಆಘಾತವೇ ಬಿಜೆಪಿಗೆ ಈ ಸಲವೂ ಮುಂದುವರೆಯುವ ಲಕ್ಷಣಗಳಿವೆ. ಇನ್ನು ಮಧ್ಯ ಕರ್ನಾಟಕದಲ್ಲಿ ಬಿಜೆಪಿ ಅತ್ಯದ್ಭುತವಾಗಿ ಚೇತರಿಸಿಕೊಳ್ಳುವ ಪರಿಸ್ಥಿತಿ ಇಲ್ಲ. ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಮತಗಳು ಹಿಂದೆಂದಿಗಿಂತಲೂ ಹೆಚ್ಚು ದೃವೀಕರಣಗೊಂಡ ದೇವೇಗೌಡರ ಬೆನ್ನಿಗೆ ನಿಂತಿರುವುದರಿಂದ ಇಲ್ಲಿ ಕೈಗೆ ಕಳೆದ ಬಾರಿಗಿಂತ ಅಲ್ಪ ಹಿನ್ನಡೆಯಾಗಬಹುದು. ಆದರೂ ಅದು ಸರಳ ಬಹುಮತದಿಂದ ಕಾಂಗ್ರೆಸ್ಸನ್ನು ದೂರಕ್ಕೆ ತಳ್ಳಲಾರದು. ಬೆಂಗಳೂರು ಸಿಟಿ ಬಿಜೆಪಿ ಮತ್ತು ಕಾಂಗ್ರೆಸ್ ಪಾಲಿಗೆ ಮಿಶ್ರ ಪ್ರತಿಫಲ ಕೊಡಲಿದೆ. ಇಲ್ಲಿ ಬಿಜೆಪಿ ಕಾಂಗ್ರೆಸ್‍ಗಿಂತ ಒಂದು ಹೆಜ್ಜೆ ಮುಂದಕ್ಕೆ ಹೋದರೂ ಅಚ್ಚರಿಯಿಲ್ಲ.

ಒಟ್ಟಾರೆ ಹೇಳಬೇಕೆಂದರೆ ಬಿಜೆಪಿಯೊಳಗಿನ ನಾಯಕತ್ವದ ಗೊಂದಲಗಳು, ಮೋದಿಯ ಎಂಪಿ ಎಲೆಕ್ಷನ್ ಭರವಸೆಗಳು ಜನರನ್ನು ಭ್ರಮ ನಿರಸನಗೊಳಿಸಿರುವುದು, ಕೇಂದ್ರ ಸರ್ಕಾರ ಜನರ ವಿಶ್ವಾಸ ಉಳಿಸಿಕೊಳ್ಳುವಲ್ಲಿ ವಿಫಲವಾಗಿರೋದು, ಕರ್ನಾಟಕದ ಪ್ರಾದೇಶಿಕ ಸವಾಲುಗಳಿಗೆ ಬಿಜೆಪಿ ಸ್ಪಂದಿಸಿದ ನಿರಾಶದಾಯಕ ರೀತಿ, ಕಾಂಗ್ರೆಸ್‍ನೊಳಗೆ ಮಡುಗಟ್ಟಿರುವ ಅಪರೂಪದ ಒಗ್ಗಟ್ಟು, ರಾಜ್ಯ ಸರ್ಕಾರದ ಜನಪ್ರಿಯತೆ, ಪ್ರಧಾನ ಹಗರಣ-ಭ್ರಷ್ಟಾಚಾರ ಮುಕ್ತ ಆಡಳಿತಗಳು ಕಾಂಗ್ರೆಸ್ಸನ್ನು ಮತ್ತೆ ಅಧಿಕಾರಕ್ಕೆ ತರುವ ಸಾಧ್ಯತೆಗಳೇ ದಟ್ಟವಾಗಿ ಕಾಣುತ್ತಿವೆ.

ಕಳೆದ ನಾಲ್ಕು ದಶಕಗಳ ಅವಧಿಯಲ್ಲಿ ಆಡಳಿತ ನಡೆಸಿದ ಪಕ್ಷ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವುದಕ್ಕೆ ಪರದಾಡುತ್ತ ಬಂದಿದ್ದವು. ಪ್ರಭುತ್ವ ವಿರೋಧಿ ಅಲೆಯಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಪಕ್ಷ ತೇಲಿ ಹೋಗುವುದು ಸರ್ವೇ ಸಾಮಾನ್ಯ ಸಂಗತಿಯಾಗಿತ್ತು. 1978ರ ವಿಧಾನಸಭಾ ಚುನಾವಣೆಯಲ್ಲಿ ಆಗ ಐದು ವರ್ಷಗಳ ಅಧಿಕಾರದ ಅವಧಿಯನ್ನು ಪೂರ್ಣಗೊಳಿಸಿದ್ದ ಮುಖ್ಯಮಂತ್ರಿ ದೇವರಾಜ ಅರಸು ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವಿನ ನಗೆ ಬೀರಿತ್ತು. ಅದಾದ ನಂತರದ ದಿನಗಳಲ್ಲಿ ಕರ್ನಾಟಕದಲ್ಲಿ ಯಾವ ಪಕ್ಷವೂ ಪುನರಾಯ್ಕೆ ಆಗಿಲ್ಲ. ದೇವರಾಜ ಅರಸು ನಂತರ ಐದು ವರ್ಷದ ಅವಧಿಯನ್ನು ಪೂರ್ಣಗೊಳಿಸಿದ ಹೆಗ್ಗಳಿಕೆ ಸಿದ್ಧರಾಮಯ್ಯನವರದು. 1978ರಲ್ಲಿ ಅರಸು ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 149 ಸ್ಥಾನ ಪಡೆದಿತ್ತು. ಈಗ ಐದು ವರ್ಷ ಪೂರೈಸಿದ ಸಿದ್ಧರಾಮಯ್ಯ ನೇತೃತ್ವದಲ್ಲಿ ಚುನಾವಣೆ ನಡೆಯುತ್ತಿದೆ. ಹೌದು. ಇತಿಹಾಸ ಮರುಕಳಿಸಲಿದೆ. ಎಷ್ಟೇ ಅಳೆದು ತೂಗಿ ನೋಡಿದರು. ಕಾಂಗ್ರೆಸ್‍ಗೆ ಸರಳ ಬಹುಮತ ಬರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ದುರ್ಬಲ ಹೈಕಮಾಂಡ್‍ಗೆ ಪ್ರತಿಕ್ರಿಯೆಯಾಗಿ ಸ್ಥಳೀಯ ಪ್ರಬಲ ನಾಯಕತ್ವ ರಾಜ್ಯಕ್ಕೆ ಪರ್ಯಾಯ ಎನ್ನುವ ಸಂದೇಶ ಕರ್ನಾಟಕ ಮತ್ತೊಮ್ಮೆ ನೀಡುವ ಸಾಧ್ಯತೆಗಳು ನಿಚ್ಚಳವಾಗಿವೆ. ಸಿದ್ಧರಾಮಯ್ಯನವರ ಅಲೆಯು ‘ಮಾತುಗಾರ’ರ ಮೋಡಿಯನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಲಿದೆ. ದೆಹಲಿಯಿಂದ ಅಧಿಕಾರ ನಡೆಸುವ ಕೇಂದ್ರದ ನಿಲುವಿಗೆ ಕರ್ನಾಟಕ ಯಾವತ್ತೂ ಸೊಪ್ಪು ಹಾಕಿಲ್ಲ. ದೆಹಲಿ ದೊರೆಗಳಿಗೆ ಕರ್ನಾಟಕ ಖಚಿತ ಉತ್ತರ ನೀಡುತ್ತಲೇ ಬಂದಿದೆ. ಅದೇ ಈ ಬಾರಿಯೂ ಪುನರಾವರ್ತನೆ ಆಗಲಿದೆ. ಕಳೆದ ಸಲಕ್ಕಿಂತ ಮತ ಗಳಿಕೆಯ ಪ್ರಮಾಣದಲ್ಲಿ ಉತ್ತಮ ಪ್ರಗತಿ ತೋರಿಸುವ ಸಾಧ್ಯತೆಗಳಿವೆ. ಆಡಳಿತಾರೂಢ ಕಾಂಗ್ರೆಸ್ ಶೇ. 40ರಷ್ಟು ಮತಗಳನ್ನು ಪಡೆಯಬಹುದು ಎಂದು ಅಂದಾಜಿಸಲಾಗುತ್ತದೆ. ಕೇಂದ್ರ ಗುಪ್ತಚರ ಇಲಾಖೆಯ ವರದಿಯೂ ಸರಳ ಬಹುಮತದ ಸೂಚನೆ ಒದಗಿಸಿದೆ ಎನ್ನಲಾಗುತ್ತಿದೆ. ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ ಸೇರಿದಂತೆ ಹಳೆ ಮೈಸೂರು ಮತ್ತು ಕರಾವಳಿಗಳಲ್ಲಿಯೂ ಕಾಂಗ್ರೆಸ್‍ನ ಸಾಧನೆಯು ಕಳೆದ ಬಾರಿಗಿಂತ ಉತ್ತಮವಾಗಿರಲಿದೆ. ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸಿದ ದುರ್ದಿನಗಳನ್ನು ಜನತೆ ಇನ್ನೂ ಮರೆತಿಲ್ಲ. ಕಳೆದ ಬಾರಿ ಸೋಲಿಸಿ ಪಾಠ ಕಲಿಸಿದ್ದ ಮತದಾರ ಈಗ ಮತ್ತೊಮ್ಮೆ ಬಿಜೆಪಿಗೆ ಅದರ ಸ್ಥಾನ ಸೂಚಿಸಲಿದ್ದಾನೆ. ರಾಜ್ಯದಾದ್ಯಂತ ಕಾಂಗ್ರೆಸ್ ಪರವಾಗಿರುವ ಅಭಿಪ್ರಾಯವು ಸರಳ ಬಹುಮತ ತಂದು ಕೊಡುವುದಕ್ಕೆ ಕಾರಣವಾಗಲಿದೆ. ‘ಸುಳ್ಳು’ಗಳ ಮೂಲಕ ಮಾತಿನ ಅರಮನೆ ಕಟ್ಟಲು ಹೊರಟ ‘ಮೋಜು’ಗಾರನಿಗೆ ಕರ್ನಾಟಕ ಸೂಕ್ತ ಉತ್ತರ ನೀಡಲಿದೆ. ಕರ್ನಾಟಕದ ಆಡಳಿತದ ಕೇಂದ್ರ ಬೆಂಗಳೂರೇ ಹೊರತು ದೆಹಲಿ ಅಲ್ಲ ಎಂಬುದು ಮತ್ತೇ ಸಾಬೀತಾಗಲಿದೆ.

ವಿರೋಧ ಪಕ್ಷದ ಸ್ಥಾನವನ್ನು ಸರಿಯಾಗಿ ನಿಭಾಯಿಸಲಾಗದ ಬಿಜೆಪಿಯು ನಾಯಕತ್ವದ ಕೊರತೆಯಿಂದ ಬಳಲಿತು. ಮೋದಿಯಂತಹ ಮಾತುಗಾರ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಾಡಿದರೂ ಸುಸ್ತಾಗುವಷ್ಟು ರ್ಯಾಲಿಗಳನ್ನು ಮಾಡಿದರೂ ಫಲ ನೀಡಲಿಲ್ಲ. ಸಿದ್ಧರಾಮಯ್ಯನವರ ಪರವಾಗಿ ರಾಜ್ಯದಾದ್ಯಂತ ಇರುವÀ ‘ಅಲೆ’ಯ ಪ್ರಮಾಣ ಕಡಿಮೆ ಮಾಡುವದು ಸಾಧ್ಯವಾಗಲೇ ಇಲ್ಲ. ಬಿಜೆಪಿ ಪಕ್ಷದೊಳಗಿನ ಭಿನ್ನಮತ ಮತ್ತು ದೆಹಲಿ ಹೈಕಮಾಂಡ್ ಅಣತಿಯಂತೆ ನಡೆಯಬೇಕಾದ ಅನಿವಾರ್ಯತೆ ಸಿಲುಕಿದ ಯಡಿಯೂರಪ್ಪ ಅವರು ‘ಪ್ರಮಾಣವಚನ’ ಸ್ವೀಕರಿಸುವ ಭ್ರಮಾತ್ಮಕ ಹೇಳಿಕೆ ನೀಡುವುದಕ್ಕ್ಕೆ ಮಾತ್ರ ಸೀಮಿತವಾಯಿತು. ಚುನಾವಣೆಯ ಪ್ರಚಾರ ಭಾಷಣದಲ್ಲಿಯೇ ‘ಬಜೆಟ್’ ಮಂಡಿಸುವ ಮತ್ತು ಸಂಪುಟದ ಸ್ಥಾನ ಹಂಚುವ ತಮಾಷೆಯ ಪ್ರಸಂಗಗಳು ಯಡಿಯೂರಪ್ಪ ಅವರು ತಲುಪಿದ್ದ ಹತಾಶೆಯ ಸ್ಥಿತಿಯನ್ನು ಬಿಂಬಿಸುವಂತಿತ್ತು. ದೆಹಲಿಯ ನಾಯಕರುಗಳ ಚರಿಸ್ಮಾ ತಮಗೆ ಸಹಾಯವಾಗಬಹುದು ಎಂದು ಕಾದು ಕುಳಿತಿದ್ದ ಬಿಜೆಪಿಯ ರಾಜ್ಯ ಮುಖಂಡರಿಗೆ ಕೇವಲ ಕಾದದ್ದಷ್ಟೇ ಲಾಭವಾಯಿತು. ಯಡಿಯೂರಪ್ಪ ಹೊರತು ಪಡಿಸಿದ ಎರಡನೇ ಸಾಲಿನ ನಾಯಕರೇ ಇಲ್ಲದ ಬಿಜೆಪಿಯ ಸ್ಥಿತಿ ಚಿಂತಾಜನಕವಾಗಿತ್ತು. ಮುಂಚೂಣಿಯಲ್ಲಿದ್ದ ನಾಯಕ ಕೂಡ ಎದೆಗುಂದುವಂತಹ ಬೆಳವಣಿಗೆಗಳನ್ನು ಎದುರಿಸಬೇಕಾಯಿತು. ಆಪ್ತರಿಗೇ ಟಿಕೆಟ್ ಕೊಡಿಸಲಾಗದ ಹತಾಶೆ ಒಂದೆಡೆಯಾದರೆ, ಮತದಾನದ ದಿನ ಹತ್ತಿರವಾದಂತೆ ಹೆಚ್ಚುತ್ತ ಹೋದ ಸಿದ್ಧರಾಮಯ್ಯನವರ ಜನಪ್ರಿಯತೆಯು ಕಾಂಗ್ರೆಸ್ ಪಕ್ಷವನ್ನು ಸರಳ ಬಹುಮತದ ಹಂತಕ್ಕೆ ತಂದು ನಿಲ್ಲಿಸಿದೆ.

Leave a Reply

Your email address will not be published.

Social Media Auto Publish Powered By : XYZScripts.com