Ensuddi Election Spl : ಚುನಾವಣಾ ಸಮೀಕ್ಷೆಗಳ ರಾಜಕಾರಣದ ಪರಾಮರ್ಶೆ…

ಕರ್ನಾಟಕದ ವಿಧಾನ ಸಭಾ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ನಗರ, ಪಟ್ಟಣ ಹಳ್ಳಿಗಳ ಹಾದಿಬೀದಿಗಳಲ್ಲಿ ಅಬ್ಬರದ ಚುನಾವಣಾ ಪ್ರಚಾರ ತಾರಕಕ್ಕೇರಿದೆ. ರಾಜಕೀಯ ಮುಖಂಡರ ಸಾರ್ವಜನಿಕ ಭಾಷಣಗಳು ಸೌಜನ್ಯದ ಎಲ್ಲಿ ಮೀರುತ್ತಿವೆ. ದಂಡಿ ದಂಡಿ ಸುಳ್ಳುಗಳು, ಆಧಾರರಹಿತ ಆರೋಪಗಳು, ಈಡೇರಿಸಲು ಸಾಧ್ಯವೇ ಆಗದ ಚುನಾವಣಾ ಭರವಸೆಗಳು ಕರ್ನಾಟಕದ ರಾಜಕೀಯ ಪರಿಸರವನ್ನು ಕಲುಷಿತಗೊಳಿಸುತ್ತಿವೆ. ತಾವೇನೂ ಕಮ್ಮಿ ಇಲ್ಲ ಎಂದು ಸಾಬೀತು ಮಾಡಲು ಹಲವು ನ್ಯೂಸ್ ಚಾನಲ್‍ಗಳು ಚುನಾವಣಾ ಸಮೀಕ್ಷೆಗಳನ್ನು ವೀರಾವೇಶದಿಂದ ಪ್ರಸಾರ ಮಾಡುತ್ತಿವೆ. ಈ ಹಿಂದಿನ ಚುನಾವಣಾ ಸಮೀಕ್ಷೆಗಳು ಇಂತಹ ಅತಿಯಾದ ಆತ್ಮವಿಶ್ವಾಸದಿಂದ ಪ್ರಸಾರವಾಗುತ್ತಿರಲಿಲ್ಲ. 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ `ಮತದಾರರ ನಾಡಿ ಮಿಡಿತದ ಆಳಕ್ಕಿಳಿದು ಅಧ್ಯಯನ ಮಾಡಿದ್ದೇವೆ’ ಎಂಬ ದಾಷ್ಟ್ರ್ಯದಿಂದ ಹಲವು ನ್ಯೂಸ್ ಚಾನಲ್‍ಗಳು ಚುನಾವಣಾ ಸಮೀಕ್ಷೆಗಳನ್ನು ಪ್ರಸಾರ ಮಾಡಿದವು. ‘ತಾವು ಗೆಲ್ಲಿಸಲೇಬೇಕು’ ಎಂದುಕೊಂಡಿದ್ದ ವ್ಯಕ್ತಿಯ ಪರ ಜಗತ್ತೇ ಧ್ಯಾನಿಸುತ್ತಿದೆ ಎಂಬಂತ ವಾತಾವರಣವನ್ನು ಈ 24/7 ನ್ಯೂಸ್ ಚಾನಲ್‍ಗಳು ಸೃಷ್ಟಿಸಿಬಿಟ್ಟವು. ಅಂದಿನಿಂದ ಚುನಾವಣಾ ಸಮೀಕ್ಷೆಗಳನ್ನು ಯಾರುಬೇಕಾದರೂ, ಹೇಗೆ ಬೇಕಾದರೂ ಮಾಡಿಬಿಡಬಹುದು ಎಂಬ ವಾತಾವರಣ ಸೃಷ್ಟಿಯಾಗಿ ಹೋಗಿದೆ. ಇಂತಿಪ್ಪ ಚುನಾವಣಾ ಸಮೀಕ್ಷೆಗಳಿಗೆ ಭಾರತದ ರಾಜಕೀಯ ಚರಿತ್ರೆಯಲ್ಲಿ ವಿಶಿಷ್ಟ ಹಿನ್ನೆಲೆ ಇದೆ.

ಸ್ವಾತಂತ್ರ್ಯಾನಂತರ ನಡೆದ ಮೊದಲ ಚುನಾವಣೆಯ ನಂತರ ದೆಹಲಿಯ ಸೆಂಟರ್ ಫಾರ್ ಸ್ಟಡೀಸ್ ಆಫ್ ಡೆವೆಲಪಿಂಗ್ ಸೊಸೈಟೀಸ್ (ಸಿಎಸ್‍ಡಿಎಸ್) ಸಂಸ್ಥೆ ಮೊದಲ ಬಾರಿಗೆ 1960ರಲ್ಲಿ ಚುನಾವಣೆಗಳನ್ನು ಅಧ್ಯಯನ ಮಾಡುವ ಯೋಜನೆಯನ್ನು ಹಾಕಿಕೊಂಡಿತು. ಅಲ್ಲಿಯವರೆಗೂ ಚುನಾವಣಾ ಅಧ್ಯಯನ/ಸಮೀಕ್ಷೆಗಳು ಯುರೋಪ್ ಮತ್ತು ಅಮೇರಿಕಾಗಳಲ್ಲಿ ಜನಪ್ರಿಯವಾಗಿದ್ದವು. ಆದರೆ ಸಿಎಸ್‍ಡಿಎಸ್ ಸಂಸ್ಥೆ ಚುನಾವಣೆಗಳ `ಸಮೀಕ್ಷೆಗಳನ್ನು’ ಮಾಡದೆ ತನ್ನ ಶೈಕ್ಷಣಿಕ ಚಟುವಟಿಕೆಗಳ ಭಾಗವಾಗಿ ವ್ಯವಸ್ಥಿತವಾದ `ಅಧ್ಯಯನಗಳನ್ನು’ ಮಾಡಲು ಮುಂದಾಯಿತು. ಮುಖ್ಯವಾಗಿ, ಮತದಾರರ ಒಲವು, ಅವರ ರಾಜಕೀಯ ನಿಲುವುಗಳಲ್ಲಿ ಆಗುತ್ತಿದ್ದ ಬದಲಾವಣೆಗಳು, ಅವರು ಪ್ರತಿ ಐದು ವರ್ಷಗಳಲ್ಲಿ ಮುಂದು ಮಾಡುತ್ತಿದ್ದ ಆದ್ಯತೆ ಗಳನ್ನು ಅಧ್ಯಯನ ಮಾಡಲು ಈ ಸಂಸ್ಥೆ ಮಹತ್ವ ನೀಡುತ್ತಿತ್ತು. ಈ ಅಧ್ಯಯನಗಳು ಶುದ್ಧ ಶೈಕ್ಷಣಿಕ ಕಾಳಜಿಗಳಿಂದ ನಡೆಯದೇ ಇದ್ದರೂ ಅಲ್ಲಿ ಬರೀ ರಾಜಕೀಯ ಕಾರಣಗಳು ಮಾತ್ರ ಪ್ರಮುಖ ಪಾತ್ರ ವಹಿಸುತ್ತಿರಲಿಲ್ಲ. ಜೊತೆಗೆ ಈಗಿನ ಚುನಾವಣಾ ಸಮೀಕ್ಷೆಗಳಂತೆ ಅವಸರದಲ್ಲಿ, ತಪ್ಪುತಪ್ಪಾಗಿ ಸಿಎಸ್‍ಡಿಎಸ್ ಸಂಸ್ಥೆಯ ಅಧ್ಯಯನಗಳು ನಡೆಯುತ್ತಿರಲಿಲ್ಲ. ಈ ಅಧ್ಯಯನಗಳಿಗೆ ಸಮಾಜ ವಿಜ್ಞಾನಗಳ ಅಧ್ಯಯನ ವಿಧಾನದ ಶಾಸ್ತ್ರೀಯ ಚೌಕಟ್ಟು ಇರುತ್ತಿತ್ತು. ರಾಜಕೀಯ ವಿಶ್ಲೇಷಕರು, ತರಬೇತುಗೊಂಡ ಕ್ಷೇತ್ರಕಾರ್ಯ ತಜ್ಞರು, ಸಮಾಜಶಾಸ್ತ್ರಜ್ಞರು, ಮಾನವಶಾಸ್ತ್ರಜ್ಞರೆಲ್ಲ ಸೇರಿ ತಾವು ಮಾಡುವ ಚುನಾವಣಾ ಅಧ್ಯಯನದ `ಉದ್ದೇಶಗಳನ್ನು’ ನಿಖರಗೊಳಿಸುತ್ತಿದ್ದರು. ಪರಿಣಿತರ ಈ ತಂಡ ನಿಶ್ಚಿತ ಪ್ರಶ್ನಾವಳಿಯನ್ನು ರೂಪಿಸಿ, ಯಾರಿಂದ, ಹೇಗೆ ಮತ್ತು ಏಕೆ ಜನಾಭಿಪ್ರಾಯಗಳನ್ನು ಸಂಗ್ರಹಿಸಬೇಕು ಎಂದು ನಿರ್ಧರಿಸುತ್ತಿತ್ತು. ಜನಾಭಿಪ್ರಾಯಗಳನ್ನು ಸಂಗ್ರಹಿಸುವಾಗ, ಯಾವ ಪ್ರದೇಶದ, ಯಾವ ಸಾಮಾಜಿಕ ಸ್ತರಕ್ಕೆ ಸೇರಿದ ಜನ, ಯಾವ ವರ್ಗ ಹಿನ್ನೆಲೆಗೆ ಸೇರಿದವರನ್ನು ಆಯ್ಕೆ ಮಾಡಿಕೊಳ್ಳಬೇಕು? ಎಂಬುದನ್ನು ಸಮಾಜ ವಿಜ್ಞಾನಗಳ ಅಧ್ಯಯನದ ವೈಜ್ಞಾನಿಕ ವಿಧಾನದ ಆಧಾರದಲ್ಲಿ ನಿರ್ಧರಿಸುತ್ತಿದ್ದರು. ಇದನ್ನು ಸಮಾಜ ವಿಜ್ಞಾನ ಸಂಶೋಧನೆಯಲ್ಲಿ ಮಾದರಿ ಆಯ್ಕೆ (Random Sampling) ಎಂದು ಕರೆಯಲಾಗುತ್ತದೆ.

1980ರಲ್ಲಿ ದೆಹಲಿಯ ದೂರದರ್ಶನ ವಾರ್ತೆಗಳನ್ನು ಪ್ರಸಾರ ಮಾಡಲಾರಂಭಿಸಿತು. ದೂರದರ್ಶನದ ವಾರ್ತೆಗಳಿಗೆ ಸುದ್ದಿಗಳನ್ನು ಸಂಪಾದಿಸಿ ಕೊಡುತ್ತಿದ್ದವರು ಈಗಿನ NDTVಯ ಪ್ರಣಯ್ ರಾಯ್. ಪ್ರಣಯ್ ರಾಯ್ 80ರ ದಶಕದಲ್ಲಿ ಮೊದಲ ಬಾರಿಗೆ ಚುನಾವಣಾ ಸಮೀಕ್ಷೆಗಳನ್ನು ಮಾಡತೊಡಗಿದರು. ದೆಹಲಿಯ ಸಿಎಸ್‍ಡಿಎಸ್ ಸಂಸ್ಥೆಯ ಮಾದರಿಯನ್ನು ರಾಯ್ ಅನುಕಸರಿಸಿದರೂ ಈತ ಚುನಾವಣೆಗಳನ್ನು ಅಧ್ಯಯನ ಮಾಡದೆ, ಚುನಾವಣಾ ಸಮೀಕ್ಷೆಗಳನ್ನು ಮಾಡಲಾರಂಭಿಸದರು. ಆ ನಂತರ ಭಾರತದಲ್ಲಿ ಚುನಾವಣಾ ಸಮೀಕ್ಷೆಗಳ ಭರಾಟೆ ಶುರುವಾಯಿತು. 90ರ ದಶಕದ ನಂತರ ಭಾರತದಲ್ಲಿ ಚುನಾವಣಾ ರಾಜಕೀಯದ ಸ್ವರೂಪವೇ ಬದಲಾಗಿ ಹೋಗಿತ್ತು. ಗ್ಯಾಟ್ ಒಪ್ಪಂದ, ಬಾಬ್ರಿ ಮಸೀದಿ ಧ್ವಂಸ, ಕೋಮುವಾದಿ ಕಾರ್ಯಾಚರಣೆಯ ವಿರಾಟ್ ಬೆಳವಣಿಗೆಗಳು ಭಾರತದ ರಾಜಕಾರಣದ ದಿಕ್ಕನ್ನೂ ಬದಲಿಸಿ ಹಾಕಿದ್ದವು. ಜನಸೇವೆ, ಸಮಾಜಸೇವೆ ಎಂದು ಚುನಾವಣಾ ರಾಜಕಾರಣದಲ್ಲಿ ಸಕ್ರೀಯರಾಗಿದ್ದ ಹಳೆ ತಲೆಮಾರಿನ ಖಾದಿಧಾರಿಗಳು ನೇಪಥ್ಯಕ್ಕೆ ಸರಿದರು. ಜಾಗತಿಕ ಬಂಡವಾಳದ ಹರಿವು ಭಾರತದಲ್ಲಿ ಸಾಮ್ರಾಜ್ಯಶಾಹಿ ಶಕ್ತಿಗಳು ಬೆಳೆದು ನಿಲ್ಲಲು ಸಹಾಯ ಮಾಡಿತು. ಬಂಡವಾಳಶಾಹಿಗಳು, ವಿದೇಶಿ ಬಂಡವಾಳಕ್ಕೆ ಪೂರಕವಾಗಿದ್ದ ಸ್ಥಳೀಯ ಮೇಲ್ವರ್ಗದ ಧನಿಕರು ನೇರ ಚುನಾವಣೆಗಳಲ್ಲಿ ಸ್ಪರ್ಧಿಸಲಾರಂಭಿಸಿದರು. ತಮಗೆ ಬೇಕಾದ ಸರ್ಕಾರವನ್ನು ಅಸ್ತಿತ್ವಕ್ಕೆ ತರಲು ಸಾಮ್ರಾಜ್ಯಶಾಹಿಗಳು ಚುನಾವಣೆಗಳಲ್ಲಿ ಹಣ ಖರ್ಚು ಮಾಡಲಾರಂಭಿಸಿದರು. ಇದರ ಭಾಗವಾಗಿ ಭಾರತದ ಸ್ಥಳೀಯ ಮಾಧ್ಯಮಗಳನ್ನು, ಅದರಲ್ಲೂ ದೃಶ್ಯ ಮಾಧ್ಯಮವನ್ನು ಸಾಮ್ರಾಜ್ಯಶಾಹಿಗಳು ಸಾರಾಸಗಟಾಗಿ ಖರೀಸಿದರು. ಈ ಮಾಧ್ಯಮಗಳ ಮೂಲಕ ತಮಗೆ ಬೇಕಾದವರನ್ನು ಗೆಲ್ಲಿಸುವ ತಂತ್ರಗಳನ್ನು ಸದ್ದಿಲ್ಲದೆ ಜಾರಿಗೆ ತಂದರು. ಪರಮ ಕೊಳಕನನ್ನೂ, ಕೊಲೆಗಡುಕನನ್ನೂ ಮಹಾತ್ಮನೆಂಬಂತೆ ಬಿಂಬಿಸಲಾಯಿತು. ಮಾಧ್ಯಮಗಳು ಕೊಲೆಗಡುಕರನ್ನ, ಪ್ರಚ್ಛನ್ನ ಲೂಟಿಕೋರರನ್ನು ಜನರ ನೇತರರೆಂಬಂತೆ ಮರುಸೃಷ್ಟಿಸಿದವು. ಅಮಾಯಕ ಜನ ಈ ಸಮಾಜ ವಿರೋಧಿಗಳನ್ನು `ಒಪ್ಪಿಕೊಳ್ಳುವಂತಹ’ ವಾತಾವರಣವನ್ನು ಸೃಷ್ಟಿಸಲಾಯಿತು. ತಾವು ಮರುಸೃಷ್ಟಿಸಿದ ಜನವಿರೋಧಿಗಳಿಗೆ ಜನ `ಸಮ್ಮತಿ’ ದೊರಕುವಂತಹ ವಾತಾವರಣವನ್ನು ಈ ಮಾಧ್ಯಮಗಳ ಮೂಲಕ ಬಂಡವಾಳಶಾಹಿಗಳು ರೂಪಿಸಿದರು. ಇಲ್ಲವೆ ತಮ್ಮ ಹಿತಾಸಕ್ತಿಗೆ ಅಷ್ಟೇನೂ ಪೂರಕವಾಗಿರದ ಪಕ್ಷದ ವಿರುದ್ಧ ಜನರಲ್ಲಿ ‘ನಿರಾಕರಣೆಯನ್ನೂ’ ಈ ಮಾಧ್ಯಮಗಳು ಹುಟ್ಟುಹಾಕಿದವು. ಅಲ್ಲಿಯವರೆಗೂ ಸಾಮಾನ್ಯ ಓಟುದಾರ ಯಾವ ಪಕ್ಷಕ್ಕೆ ತನ್ನ `ಸಮ್ಮತಿ’ ಮತ್ತು ಯಾವ ಪಕ್ಷಕ್ಕೆ ತನ್ನ `ನಿರಾಕರಣೆ’ ಎಂಬುದನ್ನು ತನ್ನ ರಾಜಕೀಯ ಆದ್ಯತೆಗಳಿಂದ ನಿರ್ಧರಿಸುತ್ತಿದ್ದ. ಆದರೆ ಮಾಧ್ಯಮಗಳು ಈ `ಸಮ್ಮತಿ’ ಮತ್ತು `ನಿರಾಕರಣೆ’ಗಳನ್ನು ತಾವೇ ಉತ್ಪಾದಿಸಿ ಜನರ ಮೇಲೆ ಹೇರಿದವು. ಈ ಎಲ್ಲ ಕಾರಣಗಳಿಂದ ಚುನಾವಣಾ ಸಮೀಕ್ಷೆಗಳನ್ನು ಇಂದು ತಮಗೆ ಬೇಕಾದ ಪಕ್ಷದ ಪರವಾಗಿ ಅಥವಾ ತಮ್ಮ ಧಣಿಗಳು ಯಾವ ಪಕ್ಷವನ್ನು ಬೆಂಬಲಿಸುತ್ತಾನೋ ಆ ಪಕ್ಷದ ಪರವಾಗಿ ಮಾಧ್ಯಮಗಳು ಸಿದ್ಧಪಡಿಸುತ್ತವೆ.

ಇರಲಿ ಈ ಚುನಾವಣಾ ಸಮೀಕ್ಷೆಗಳು ಸಾಮಾನ್ಯವಾಗಿ ಮೂರು ಹಂತದಲ್ಲಿ  ನಡೆಯುತ್ತವೆ. 1. ಚುನಾವಣಾ ಪೂರ್ವ ಸಮೀಕ್ಷೆ, (Pre Poll) 2. ಮತಗಟ್ಟೆ ಸಮೀಕ್ಷೆ, (Exit Poll) 3. ಚುನಾವಣೋತ್ತರ ಸಮೀಕ್ಷೆ (Post Poll) ಎಂಬ ಮೂರು ಹಂತದಲ್ಲಿ ಜನಾಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತದೆ. 1. ಚುನಾವಣಾ ಪೂರ್ವ ಸಮೀಕ್ಷೆಯು ಚುನಾವಣಾ ವರ್ಷದ ಆರಂಭದಲ್ಲಿಯೇ ಶುರುವಾಗಿ, ಮೂರ್ನಾಲ್ಕು ಹಂತಗಳಲ್ಲಿ ಜನಾಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತದೆ. 2. ಮತಗಟ್ಟೆ ಸಮೀಕ್ಷೆಯಲ್ಲಿ, ಮತ ಚಲಾವಣೆ ಮಾಡಿದ ಓಟುದಾರ ಮತಗಟ್ಟೆಯಿಂದ ಹೊರಬಂದಾಕ್ಷಣ ಆತ ಯಾವ ಪಕ್ಷಕ್ಕೆ ಮತ ಚಲಾಯಿಸಿದ ಎಂದು ಕೇಳಿ ಜನಮತ ಗಣನೆ ಮಾಡಲಾಗುತ್ತದೆ. 3. ಚುನಾವಣೋತ್ತರ ಸಮೀಕ್ಷೆಯಲ್ಲಿ ಚುನಾವಣೆ ಮುಗಿದ ಮೇಲೆ ಮತದಾರರನ್ನು ಅವರಿರುವ ಸ್ಥಳದಲ್ಲಿಯೇ ಸಂದರ್ಶಿಸಿ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತದೆ. ಈ ಮೂರು ಸಮೀಕ್ಷೆಗಳಲ್ಲಿ ಮಾದರಿ ಆಯ್ಕೆ (Random Sampling) ವಿಧಾನದಲ್ಲಿಯೇ ಜನಾಭಿಪ್ರಾಯವನ್ನು ಸಂಗ್ರಹಿಸಲಾಗುತ್ತದೆ ಎಂದು ಹೇಳಲಾಗುತ್ತದೆ.

ಈ ಸಮೀಕ್ಷೆಗಳ ವೈಧಾನಿಕತೆಯ ಸಮಸ್ಯೆಗಳಾವವು?

ಈ ಹಿಂದೆ ವಿವರಿಸಿದಂತೆ ಜನಮತ ಗಣನೆಗಾಗಿ ನಡೆಯುವ ಸಮೀಕ್ಷೆಯು ವಸ್ತುನಿಷ್ಟವಾಗಿರಬೇಕೆಂದರೆ, ಸಮೀಕ್ಷೆ ಮಾಡುವವರ ವೈಜ್ಞಾನಿಕ ವಿಧಾನದ ಮೂಲಕ ಕ್ಷೇತ್ರಕಾರ್ಯ ಮಾಡಿ ಜನಾಭಿಪ್ರಾಯಗಳನ್ನು ಸಂಗ್ರಹಿಸಿರಬೇಕು. ಯಾವ ಕಾರಣಕ್ಕಾಗಿ ಸಮೀಕ್ಷೆ? ಯಾರಿಗಾಗಿ ಈ ಸಮೀಕ್ಷೆ? ಯಾಕಾಗಿ ಈ ಸಮೀಕ್ಷೆ? ಎಂಬ ಸಂಗತಿಗಳು ಸಮೀಕ್ಷೆಯ ಸ್ವರೂಪವನ್ನು ನಿರ್ಧರಿಸುತ್ತವೆ. ಜೊತೆಗೆ ಭಾರತದ ಸರಿಸುಮಾರು ನೂರು ಕೋಟಿ ಅಥವಾ ಕರ್ನಾಟಕದ ಸುಮಾರು ಐದು ಕೋಟಿ ಮತದಾರರನ್ನು ಮನೆ ಮನೆ ಸರ್ವೆ (House hold Survey) ಮೂಲಕ ಸಂಪರ್ಕಿಸಲು ಸಾಧ್ಯವಾಗುವುದಿಲ್ಲ. ಸಮಾಜ ವಿಜ್ಞಾನಿಗಳು ಈ ಕಾರಣಕ್ಕಾಗಿ ಮಾದರಿ ಆಯ್ಕೆ (Random Sampling) ಮೂಲಕ ಜನಾಭಿಪ್ರಾಯಯವನ್ನು ಸಂಗ್ರಹಿಸುವ ವಿಧಾನವನ್ನು ವೈಜ್ಞಾನಿಕವಾಗಿ ಕಂಡುಕೊಂಡಿದ್ದಾರೆ. ಭಾರತದಂತಹ ವಿವಿಧ ಜಾತಿ ಶ್ರೇಣಿಯ ಮತ್ತು  ವೈರುಧ್ಯಮಯ ವರ್ಗ ಸಮಾಜದಲ್ಲಿ ಯಾವ ಯಾವ ಸ್ತರದ ಜನರನ್ನು ಹೇಗೆ ಸಮೀಕ್ಷೆಯಲ್ಲಿ ಒಳಗೊಳ್ಳಬೇಕು? ಈ ವಿವಿಧ ಸ್ತರಗಳಲ್ಲಿ ಎಷ್ಟು ಜನರನ್ನು ಮಾದರಿ (Sample)ಯಾಗಿ ಆಯ್ಕೆ ಮಾಡಿಕೊಳ್ಳಬೇಕು? ಜನಮತ ಗಣನೆಯಲ್ಲಿ ನಾವು ಕೇಳುವ ಪ್ರಶ್ನೆಗಳು ಹೇಗಿರಬೇಕು? ಎಂದು ಮೊದಲೇ ನಿರ್ಧರಿಸಲಾಗುತ್ತದೆ.

ಆದರೆ, ಇಂದಿನ ಚುನಾವಣಾ ಸಮೀಕ್ಷೆಗಳು ಈ ವೈಜ್ಞಾನಿಕ ವಿಧಾನವನ್ನು ಅನುಸರಿಸುತ್ತಿಲ್ಲ. ಈ ಹಿಂದೆ ನ್ಯೂಸ್ ಚಾನೆಲ್‍ಗಳು ಕೆಲವು ವೃತ್ತಿಪರ ಸಂಶೋಧನಾ ಸಂಸ್ಥೆಗಳ ಜೊತೆಗೂಡಿ ಸಮೀಕ್ಷೆಗಳನ್ನು ಕೈಗೊಳ್ಳೊತ್ತಿದ್ದವು. CSDS, Jain University, Ac Neilson, CMS, Org Marg, C-Voter, C-Fore, MDRAದಂತಹ ವೃತ್ತಿಪರ ಮತ್ತು ಅರೆವೃತ್ತಿಪರ ಸಂಸ್ಥೆಗಳ ಸಹಯೋಗದಲ್ಲಿ ಸಮೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಆದರೆ ಇತ್ತೀಚೆಗೆ ನ್ಯೂಸ್ ಚಾನೆಲ್‍ಗಳು ನೇರವಾಗಿ ತಾವೇ ಸಮೀಕ್ಷೆಗಳನ್ನು ನಡೆಸುತ್ತಿವೆ. ಈ ಸಮೀಕ್ಷೆಗಳಿಗೆ ಒಂದು ವೃತ್ತಿಪರರ ತಜ್ಞತೆಯೇ ಬೇಕಾಗಿಲ್ಲ. ಇದಲ್ಲದೆ ಕೆಲವು ರಾಜಕೀಯ ಪಕ್ಷಗಳು ತಮಗೆ ಬೇಕಾದ ಸಮೀಕ್ಷೆ ಮಾಡಿಸಲು ಕೆಲವು ವೃತ್ತಿಪರ ಸಂಸ್ಥೆಗಳನ್ನೂ ಹುಟ್ಟು ಹಾಕಿವೆ. ಇಲ್ಲಿ ತಮಗೆ ಬೇಕಾದಂತೆ ಮಾದರಿ(Sample)ಗಳನ್ನು ಆಯ್ದುಕೊಳ್ಳಲಾಗುತ್ತದೆ. ತಮ್ಮ ಹಿತಾಸಕ್ತಿಗೆ ಪೂರಕವಾದ ಪ್ರಶ್ನೆಗಳನ್ನು ಪಟ್ಟಿಮಾಡಿಕೊಳ್ಳಲಾಗುತ್ತದೆ. ತಮಗೆ ಬೇಕಾದ ಕಡೆ ಸಮೀಕ್ಷೆಗಳನ್ನು ಮಾಡಲಾಗುತ್ತದೆ. ಜೊತೆಗೆ ತಮಗೆ ಬೇಕಾದಂತೆ ಸಮೀಕ್ಷೆಗಳ ವರದಿಗಳನ್ನು ಸಿದ್ಧಪಡಿಸಲಾಗುತ್ತದೆ. ಇಂತಹ ಸಮೀಕ್ಷೆಗಳು ಸಾರರೂಪದಲ್ಲಿ ಸತ್ಯದ ಹತ್ತಿರಕ್ಕೂ ಬರಲು ಸಾಧ್ಯವಿಲ್ಲ. ಇತ್ತೀಚಿನ ಬಹುಪಾಲು ಸಮೀಕ್ಷೆಗಳು ಪಟ್ಟಣ ಮತ್ತು ನಗರ ಪ್ರದೇಶದ ಜನರನ್ನು ಸಮೀಕ್ಷೆಗಾಗಿ ಪರಿಗಣಿಸುತ್ತವೆ. ಹೆಚ್ಚಾಗಿ ಮೇಲ್‍ವರ್ಗ, ಮೇಲ್ಮಧ್ಯಮ ವರ್ಗ, ಮಧ್ಯಮ ವರ್ಗಗಳನ್ನು ಸಮೀಕ್ಷೆಗಾಗಿ ಆಯ್ದುಕೊಳ್ಳಲಾಗುತ್ತದೆ. ಈ ವರ್ಗಗಳ ಅಭಿಪ್ರಾಯಗಳೇ ಭಾರತದ ವಿಶಾಲ ಸಮುದಾಯದ ಅಭಿಪ್ರಾಯ ಎಂದು ಬಿಂಬಿಸಲಾಗುತ್ತದೆ. 2004ರಿಂದ 2014 ರವರೆಗೆ ನಡೆದ ಭಾರತದ ಮೂರು ಲೋಕಸಭಾ ಚುನಾವಣಾ ಸಮೀಕ್ಷೆಗಳನ್ನು ಇದಕ್ಕೆ ಉದಾಹರಿಸಬಹುದು.

ಇನ್ನು ಕರ್ನಾಟಕದ 2018ರ ಚುನಾವಣಾ ಸಮೀಕ್ಷೆಗಳನ್ನು ನೋಡೋಣ. 2017-18ರ ಚುನಾವಣಾ ವರ್ಷಾರಂಭದಲ್ಲಿಯೇ ಕರ್ನಾಟಕದಲ್ಲಿ ಚುನಾವಣಾ ಸಮೀಕ್ಷೆಗಳು ಆರಂಭವಾಗಿವೆ. ಮುಖ್ಯವಾಗಿ, SDS, Jain University, Today’s Chanakya, C-Voter, C-Fore, Jan ki Baath, MDRA, ನಂತಹ ವೃತ್ತಿಪರ ಮತ್ತು ವೃತ್ತಿಪರ ಎಂದು ಹೇಳಲಾಗುತ್ತಿರುವ ಸಂಸ್ಥೆಗಳ ಜೊತೆ ಕನ್ನಡದ ಟಿವಿ9, ಪಬ್ಲಿಕ್ ಟಿವಿ, ಟಿವಿ5, ಏಶಿಯಾನೆಟ್ ಸುವರ್ಣದಂತಹ ಟಿವಿ ಚಾನಲ್‍ಗಳು ಮತ್ತು ಕನ್ನಡಪ್ರಭದಂತಹ ದಿನಪತ್ರಿಕೆಗಳು ಸಮೀಕ್ಷೆಗಳನ್ನು ಮಾಡಿವೆ. ಅ-ಈoಡಿe ಸಂಸ್ಥೆ ಟಿವಿ9 ಜೊತೆ ಸೇರಿ ಕಳೆದ ವರ್ಷದ ಜ್ಯೂನ್ ತಿಂಗಳಿನಿಂದಲೇ ಚುನಾವಣಾ ಪೂರ್ವ ಸಮೀಕ್ಷೆಯನ್ನು ಆರಂಭಿಸಿದೆ. ಈ ಸಂಸ್ಥೆ/ಚಾನಲ್‍ಗಳು ಸಮೀಕ್ಷೆಗಾಗಿ ತಾವು ಮಾದರಿ ಆಯ್ಕೆ (Random Sampling) ಮೂಲಕ ಜನಾಭಿಪ್ರಾಯಯವನ್ನು ಸಂಗ್ರಹಿಸಿದ್ದೇವೆ ಎಂದು ಹೇಳಿಕೊಂಡಿವೆ. ಆದರೆ ಈ ಸಂಸ್ಥೆ/ಚಾನಲ್‍ಗಳು 14,000 ಮತದಾರರಿಂದ ಹಿಡಿದು 25,000 ಮತದಾರರನ್ನು ಸಮೀಕ್ಷೆಯಲ್ಲಿ ಸಂದರ್ಶಿಸಲಾಗಿದೆ ಎಂದು ಹೇಳಿಕೊಂಡಿವೆ. Today’s Chanakya 14,000 ಮತದಾರರನ್ನು, C-Fore ಸಂಸ್ಥೆ 25,000 ಮತದಾರರನ್ನು ಸಮೀಕ್ಷೆಯಲ್ಲಿ ಪರಿಗಣಿಸಿವೆ. ಒಟ್ಟಾರೆ ಸರಾಸರಿ 25,000 ಮತದಾರರನ್ನು ಈ ಸಂಸ್ಥೆಗಳು ಜನಮತ ಗಣನೆಗೆ ಆಯ್ಕೆ ಮಾಡಿಕೊಂಡಿವೆ ಎಂದು ಭಾವಿಸೋಣ.  ಕರ್ನಾಟಕದಲ್ಲಿ ಸುಮಾರು 5 ಕೋಟಿ ಜನ (ಹೊಸ ಮತದಾರರನ್ನೂ ಒಳಗೊಂಡಂತೆ) ಮತದಾರರಿದ್ದಾರೆ. ಈ 5ಕೋಟಿ ಮತದಾರರಲ್ಲಿ, ಸಮೀಕ್ಷೆ ಮಾಡಿರುವ ಸಂಸ್ಥೆ/ಚಾನಲ್‍ಗಳು ಕೇವಲ 25,000 ಸಾವಿರ ಮತದಾರರನ್ನು ಮಾತ್ರ ಜನಮತ ಗಣನೆಗೆ ಆಯ್ಕೆ ಮಾಡಿಕೊಂಡಿವೆ. ಅಂದರೆ ಒಟ್ಟು ಮತದಾರರ ಸಂಖೈಯಲ್ಲಿ ಶೇ 0.05% ಮತದಾರರನ್ನು ಮಾತ್ರ ಸಮೀಕ್ಷೆಗೆ ಒಳಪಡಿಸಿದಂತಾಗಿದೆ. ಪ್ರಶ್ನೆ ಇರುವುದು ಈ ಎಲ್ಲ ಸಂಸ್ಥೆಗಳು ಆಯ್ಕೆ ಮಾಡಿಕೊಂಡಿರುವ ಸ್ಯಾಂಪಲ್ ಸೈಜ್ ಬಗ್ಗೆ. ಶೇ 0.05% ಮತದಾರ ಅಭಿಪ್ರಾಯವನ್ನೇ 5ಕೋಟಿ ಮತದಾರರ ಜನಮತ ಎಂದು ಹೇಗೆ ಭಾವಿಸುವುದು? ಇಷ್ಟು ಚಿಕ್ಕ ಸಂಖ್ಯೆಯ ಮತದಾರರ ಒಲವು ನಿಲುವುಗಳು ವಿಶಾಲ ಜನ ಸಮುದಾಯಗಳ ಆಶಯಗಳನ್ನು ಪ್ರತಿನಿಧಿಸಲು ಸಾಧ್ಯವೇ? ಎಂಬ ಪ್ರಶ್ನೆಗಳು ಸಹಜವಾಗಿ ಮುನ್ನೆಲೆಗೆ ಬರುತ್ತವೆ. ಪಬ್ಲಿಕ್ ಟಿವಿಯ ಸಂಪಾದಕ ರಂಗನಾಥ್ ತಾವು ಮಾಡಿದ ಇಂತಹ ಸಮೀಕ್ಷೆಯನ್ನು ಗಟ್ಟಿ ದನಿಯಲ್ಲಿ ಸಮರ್ಥಿಸಿಕೊಳ್ಳುತ್ತಾರೆ. ಹೀಗೆ ಸಮರ್ಥಿಸಿಕೊಳ್ಳುವಾಗ ಸಮೀಕ್ಷೆಗಾಗಿ ತಾವು ಅನುಸರಿಸಿದ ಮಾನದಂಡವೇನು? ಯಾವ ಯಾವ ಜನರನ್ನು ಹೇಗೆ ಸಂದರ್ಶಿಸಲಾಯಿತು? ಕೇವಲ 0.05% ಸ್ಯಾಂಪಲ್ ಸೈಜ್‍ನ್ನು ಆಯ್ದುಕೊಳ್ಳಲು ಕಾರಣಗಳೇನು? ಎಂಬ ಪ್ರಶ್ನೆಗಳನ್ನು ಅವರು ನಿರ್ಲಕ್ಷಿಸುತ್ತಾರೆ.

ಟಿವಿ9-ಸಿಫೋರ್ ಸಂಸ್ಥೆಯನ್ನು ಹೊರತುಪಡಿಸಿ, ಸಮೀಕ್ಷೆ ಮಾಡಿದ ಯಾವ ಸಂಸ್ಥೆ/ಚಾನೆಲ್‍ಗಳೂ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಹೇಳುತ್ತಿಲ್ಲ. ಸುವರ್ಣ ಚಾನಲ್, ಕನ್ನಡಪ್ರಭ/ಜನ್‍ಕಿ ಬಾತ್ ಮತ್ತು ಟಿವಿ5 ಚಾನಲ್‍ಗಳು ಮಾತ್ರ ಬಿಜೆಪಿಗೆ ಸರಕಾರ ರಚಿಸುವಷ್ಟು ಸ್ಥಾನಗಳು ದೊರಕುತ್ತವೆ ಎಂದು ಭವಿಷ್ಯ ನುಡಿದಿವೆ. ಉಳಿದಂತೆ ಎಲ್ಲ ಸಮೀಕ್ಷೆಗಳು ಅತಂತ್ರ ಫಲಿತಾಂಶ ಬರುವ ಕುರಿತು ತೀರ್ಪು ನೀಡಿವೆ.  ಇಲ್ಲಿ ಇನ್ನೊಂದು ಸೂಕ್ಷ್ಮವಿದೆ. ಕರ್ನಾಟಕದ 2018ರ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಸ್ಪಷ್ಟ ಬಹುಮತ ಪಡೆದು ಸರಕಾರ ರಚಿಸಲು ಸಾಧ್ಯವಿಲ್ಲ ಎಂಬುದು ರಾಜಕೀಯ ಪಕ್ಷಗಳು ತಾವೇ ನಡೆಸಿದ ಹಲವು ಸುತ್ತುಗಳ ಸಮೀಕ್ಷೆಯಲ್ಲಿ ಗೊತ್ತಾಗಿ ಹೋಗಿದೆ. ಬಿಜೆಪಿಯ ಮಾತೃ ಸಂಸ್ಥೆಯಾದ ಆರ್‍ಎಸೆಸ್ ಸಹ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂಬುದನ್ನು ತನ್ನ ಸಮೀಕ್ಷೆಯಿಂದ ಕಂಡುಕೊಂಡಿದೆ. ಇಂತಹ ಸಂದಿಗ್ಧದ ಸಂದರ್ಭದಲ್ಲಿ ಹೇಗಾದರೂ ಮಾಡಿ ವಿಕಲ ಫಲಿತಾಂಶ (Fractured Verdict) ಬಂದುಬಿಡಲಿ ಎಂಬ ದುರುದ್ದೇಶವೂ ಈ ಸಮೀಕ್ಷೆಗಳ ಹಿಂದೆ ಕೆಲಸ ಮಾಡಿದಂತಿದೆ. ಆಡಳಿತ ವಿರೋಧಿ ಅಲೆ ಇಲ್ಲದ, ತೀವ್ರ ಭ್ರಷ್ಟಾಚಾರದ ಹಗರಣಗಳಿಲ್ಲದ, ದಲಿತ ದಮನಿತರ ಪರವಾದ ಜನಪ್ರಿಯ ಯೋಜನೆಗಳ ಮೂಲಕ ಆಡಳಿತ ನಡೆಸಿದ ಸಿದ್ದರಾಮಯ್ಯನವರ ಸರ್ಕಾರದ ಕುರಿತು ಜನರಲ್ಲಿ ಒಳ್ಳೆಯ ಅಭಿಪ್ರಾಯವಿದ್ದಂತಿದೆ. ಜೊತೆಗೆ ಚುನಾವಣೆಯ ನಂತರ ಏಕೈಕ ದೊಡ್ಡ ಪಕ್ಷವಾಗಿ ಕಾಂಗ್ರೆಸ್ ಹೊರಹೊಮಮ್ಮುವ ಸಾಧ್ಯತೆಗಳಿವೆ. ಆದರೆ ಒಬ್ಬ ಹಿಂದುಳಿದ ಜಾತಿಗೆ ಸೇರಿದವನು ರಾಜ್ಯದ ಮುಖ್ಯಮಂತ್ರಿಯಾಗುವುದನ್ನು ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಮೇಲ್ವರ್ಗಗಳು ಯಾವತ್ತೂ ಸಹಿಸಿದ ಉದಾಹಣೆಗಳಿಲ್ಲ. ಅದರಲ್ಲೂ ಉತ್ತಮ ಬಜೆಟ್‍ಗಳನ್ನು ಮಂಡಿಸುತ್ತ, ಶೋಷಿತರ ಪರವಾದ ಬದ್ಧತೆಯ ಆಡಳಿತ ನಡೆಸಿದ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಬಾರದು ಎಂಬ ಹುನ್ನಾರು ಈ ಸಮೀಕ್ಷೆಗಳ ಹಿಂದೆ ಕೆಲಸ ಮಾಡಿದಂತಿದೆ. ಆ ಕಾರಣಕ್ಕಾಗಿ ಬಹುತೇಕ ಎಲ್ಲ ಸಮೀಕ್ಷೆಗಳು ಅತಂತ್ರ ವಿಧಾನಸಭೆಯ ಜಪ ಮಾಡುತ್ತಿವೆ. ಹಾಗಾಗಿ ಈ ಚುನಾವಣಾ ಸಮೀಕ್ಷೆಗಳನ್ನು ಜನ ನಂಬದೆ ತಮ್ಮ ಎದೆಯ ದನಿಗೆ ಓಗೊಟ್ಟು ಮತ ಚಲಾವಣೆ ಮಾಡುವ ಅಗತ್ಯವಿದೆ. ಒಟ್ಟಾರೆ ಈ ಚುನಾವಣಾ ಸಮೀಕ್ಷೆಗಳ ಮಿತಿಗಳನ್ನ ಹೀಗೆ ಪಟ್ಟಿ ಮಾಡಬಹುದು.

  1. ಜನಮತ ಸಂಗ್ರಹಕ್ಕೆ ಆಯಾ ಸಂಸ್ಥೆ/ಚಾನಲ್‍ಗಳು ಅನುಸರಿಸುತ್ತಿರುವ ಅಧ್ಯಯನ ವಿಧಾನ ಮೂಲಭೂತ ಲೋಪದೋಷಗಳಿಂದ ಕೂಡಿದೆ. ಮಾದರಿ ಆಯ್ಕೆ, ಸ್ಯಾಂಪಲಿಂಗ್ ಸೈಜ್, ಸಂದರ್ಶನ ವಿಧಾನಗಳು ಮೇಲುನೋಟಕ್ಕೆ ಪಾಕ್ಷಪಾತ ಧೋರಣೆಯಿಂದ ಕೂಡಿವೆ. ಸಮೀಕ್ಷೆ ನಡೆಸುವ ತಾವು ವೃತ್ತಿಪರ ಸಂಸ್ಥೆಗಳು ಎಂದು ಬಿಂಬಿಸಿಕೊಳ್ಳುವ ಹಲವು ಗುಂಪುಗಳು ತಮ್ಮ ಅನುಮಾನಾಸ್ಪದ ಮೂಲಗಳನ್ನು ಮುಚ್ಚಿಡುತ್ತಿವೆ. ತಮ್ಮ ಹಿನ್ನೆಲೆಯಲ್ಲಿ, ಉದ್ದೇಶ ಮತ್ತು ಆಶಯಗಳನ್ನೂ ಅವು ಮುಕ್ತವಾಗಿಟ್ಟಿರುವುದಿಲ್ಲ. ಈ ಸಂಸ್ಥೆ/ಚಾನಲ್‍ಗಳು ತಮ್ಮನ್ನು ಪೋಷಿಸುವ ಯಜಮಾನರ ಹಿತಾಸಕ್ತಿಗಳಿಗೆ ಪೂರಕವಾದ ಜನಾಭಿಪ್ರಾಯವನ್ನು ಉತ್ಪಾದಿಸಲು ಉತ್ಸಾಹ ತೋರುತ್ತಿವೆ.
  2. 5ಕೋಟಿ ಮತದಾರರಲ್ಲಿ ಕೇವಲ 25 ಸಾವಿರ ಜನರನ್ನು ಸಂದರ್ಶಿಸಿ ಪಡೆದ ಡೆಟಾವನ್ನೇ ಇವರು ಪರಮ ಸತ್ಯ ಎಂದು ಭಾವಿಸುತ್ತಿದ್ದಾರೆ. ಅನೇಕ ಸ್ತರಗಳ, ಭಿನ್ನ ವರ್ಗ ಸ್ವಭಾವದ ಜನರನ್ನು ಈ ಸ್ಯಾಂಪಲ್ ಸರ್ವೆಗಳು ಒಳಗೊಳಂಡಿರಲು ಸಾಧ್ಯವಿಲ್ಲ. ಗಟ್ಟಿಯಾಗಿ ತಮ್ಮ ಅಭಿಪ್ರಾಯಗಳನ್ನು ಹೇಳುವ ಒಂದು ವರ್ಗದ ಅಭಿಪ್ರಾಯವನ್ನೇ ಸಕಲ ಜನಸಮುದಾಯಗಳ ಅಭಿಪ್ರಾಯ ಎಂದು ಬಿಂಬಿಸಲಾಗುತ್ತಿದೆ.
  3. ತಾತ್ವಿಕವಾಗಿ, ಚುನಾವಣಾಪೂರ್ವ ಸಮೀಕ್ಷೆಗಳು ಪ್ರಜಾಪ್ರಭುತ್ವ ಎಂದು ಹೇಳಲಾಗುವ ಈ ವ್ಯವಸ್ಥೆಯ ಒಟ್ಟು ಆಶಯಗಳಿಗೆ ಮಾರಕ. ಪ್ರತಿ ಐದು ವರ್ಷಗಳಿಗೊಮ್ಮೆ ಮತದಾರ ತನ್ನ ಮತವನ್ನು ತನ್ನ ಸ್ವಂತ ನಿರ್ಧಾರದಿಂದ ಚಲಾಯಿಸುವಂತಾಗಬೇಕೆನ್ನುವುದು ಪ್ರಜಾಪ್ರಭುತ್ವದ ವಿಶಾಲ ಆಶಯಗಳಲ್ಲಿ ಒಂದು. ಆದರೆ, ಚುನಾವಣಾಪೂರ್ವ ಸಮೀಕ್ಷೆಗಳು ತಾವು ಬೆಂಬಲಿಸುವ ರಾಜಕೀಯ ಪಕ್ಷಗಳ ಪರ ಅಂಕಿಅಂಶಗಳನ್ನು ಸಿದ್ಧಪಡಿಸಿ ಮತದಾರರನ್ನು ತಪ್ಪು ದಾರಿಗೆ ಎಳೆಯುತ್ತವೆ. ಅಥವಾ ತಾವು ಉತ್ಪಾದಿಸಿದ ಸುಳ್ಳನ್ನೇ ಸತ್ಯವೆಂದು ಪ್ರತಿಷ್ಠಾಪಿಸಿ ಜನ ಅದನ್ನು ಒಪ್ಪಿಕೊಳ್ಳುವಂತೆ ಮಾಡಲಾಗುತ್ತಿದೆ.

ಈ ಎಲ್ಲ ಕಾರಣಗಳಿಂದ ಕರ್ನಾಟಕದ ಚುನಾವಣಾಪೂರ್ವ ಸಮೀಕ್ಷೆಗಳನ್ನು ನಾವು ತಾತ್ವಿಕವಾಗಿ ವಿಶ್ಲೇಷಣೆ ಮಾಡಬೇಕಿದೆ. ಮತ್ತು ಈ ಸಮೀಕ್ಷೆಗಳ ಹಿಂದಿರುವ ರಾಜಕೀಯ ಹಿತಾಸಕ್ತಿಗಳನ್ನು ಗುರುತಿಸಬೇಕಿದೆ. ಇಲ್ಲದಿದ್ದಲ್ಲಿ, ಚುನಾವಣಾಪೂರ್ವ ಸಮೀಕ್ಷೆ ನಡೆಸುವ ವೃತ್ತಿಪರ ಸಂಸ್ಥೆಗಳು ಎಂದು ಬಿಂಬಿಸಿಕೊಳ್ಳುವ ಹಲವು ಗುಂಪುಗಳು ಜನತಂತ್ರ ವ್ಯವಸ್ಥೆಯನ್ನೇ ಮೂಲೋತ್ಪಾಟನೆ ಮಾಡುವ ಕಾಲ ದೂರವಿಲ್ಲ.

@ ಡಾ. ಎ ಎಸ್ ಪ್ರಭಾಕರ |

Leave a Reply

Your email address will not be published.

Social Media Auto Publish Powered By : XYZScripts.com