Ensuddi Election Spl : ದಾವಣಗೆರೆ – ಕೈಗೆ ಬೆಣ್ಣೆದೋಸೆ ಕಮಲಕ್ಕೆ ಖಾರ ಮಿರ್ಚಿ …

ದಾವಣಗೆರೆ

ಕಳೆದ ಸಲ ಬಹುಪಾಲು `ಕೈ’ವಶವಾಗಿದ್ದ ದಾವಣಗೆರೆ ಜಿಲ್ಲೆಯಲ್ಲಿ ಈ ಸಲ ಬಿಜೆಪಿ ಪೈಪೋಟಿ ನೀಡುತ್ತಿದೆಯಾದರೂ ಹಳೆಯ ಫಲಿತಾಂಶ ಸಂಪೂರ್ಣ ಬುಡಮೇಲಾಗುವ ಸಾಧ್ಯತೆ ಇಲ್ಲ. ಒಟ್ಟು ಎಂಟು ಕ್ಷೇತ್ರಗಳ ಪೈಕಿ 2013ರಲ್ಲಿ ಕಾಂಗ್ರೆಸ್ ಏಳರಲ್ಲಿ ಗೆದ್ದಿದ್ದರೆ ಹರಿಹರ ಮಾತ್ರ ಜೆಡಿಎಸ್ ಪಾಲಾಗಿತ್ತು. ಒಂದು ಕಾಲಕ್ಕೆ ಅಖಂಡ ಪ್ರಾಬಲ್ಯ ಸಾಧಿಸಿದ್ದ ಬಿಜೆಪಿ ಶೂನ್ಯ ಸಾಧನೆ ಮೂಲಕ ನೆಲ ಕಚ್ಚಿತ್ತು.

ಈ ಸಲ ಸ್ಪರ್ಧಿಸುವುದಿಲ್ಲ ಎಂದಿದ್ದ ವಯೋವೃದ್ಧ ಶಾಮನೂರು ಶಿವಶಂಕರಪ್ಪನವರು ಮತ್ತೆ ದಾವಣಗೆರೆ ದಕ್ಷಿಣದಿಂದ ಕೈ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿರುವ ಯಶವಂತರಾವ್ ಯಾವ ನಿಟ್ಟಿನಿಂದ ನೋಡಿದರೂ ಶಾಮನೂರು ಧಣಿಗೆ ಸರಿಸಾಟಿಯಾದ ಅಭ್ಯರ್ಥಿಯೇ ಅಲ್ಲ. ಕಾಂಗ್ರೆಸ್‍ಗೆ ಹರಿದುಹೋಗುವ ಮುಸ್ಲಿಂ ಮತಗಳನ್ನು ತನ್ನತ್ತ ತಿರುಗಿಸಿಕೊಳ್ಳಲು ಜೆಡಿಎಸ್ ಇಲ್ಲಿ ಅಮಾನುಲ್ಲಾ ಖಾನ್‍ನನ್ನು ಅಭ್ಯರ್ಥಿಯಾಗಿಸಿದೆ. ಆದರೆ ಈತ ಮೂರನೇ ಸ್ಥಾನಕ್ಕೆ ತಿಣುಕಾಡಬೇಕಾದ ಪರಿಸ್ಥಿತಿಯಿದೆ. ಬಿಜೆಪಿಯ ಯಶವಂತ ಕಳೆದ ಬಾರಿಗಿಂತ ತನ್ನ ಮತಗಳನ್ನು ಒಂದಷ್ಟು ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆಯಾದರು ಶಿವಶಂಕರಪ್ಪರನ್ನು ಸೋಲಿಸುವಷ್ಟು ಆತನ ಅಖಾಡ ಪಕ್ವವಾಗಿಲ್ಲ.

ದಾವಣಗೆರೆ ಉತ್ತರದಲ್ಲಿ ಹಾಲಿ ಮತ್ತು ಮಾಜಿ ತರಕಾರಿ ಮಂತ್ರಿಗಳದ್ದೇ ಕಾದಾಟ. ಆದಾಗ್ಯೂ ಕಾಂಗ್ರೆಸ್‍ನ ಎಸ್.ಎಸ್.ಮಲ್ಲಿಕಾರ್ಜುನ ಜಯದ ನಗೆ ಬೀರಲು ಹಲವು ಕಾರಣಗಳಿವೆ. ಬಿಜೆಪಿ ರವೀಂದ್ರನಾಥನನ್ನು ಯಡ್ಯೂರಪ್ಪ ಜೊತೆ ಆತ ಕಟ್ಟಿಕೊಂಡಿರುವ ದುಷ್ಮನಿ ಅಡ್ಡಡ್ಡ ಮಲಗಿಸಿದರೆ, ಕಳೆದ ಐದು ವರ್ಷದ ಅಭಿವೃದ್ಧಿ ಕಾರ್ಯಗಳು ಮಲ್ಲಿಕಾರ್ಜುನ್‍ರ ಕೈಹಿಡಿಯಲಿವೆ.

ಹರಪನಹಳ್ಳಿಯಲ್ಲಿ ಮೇಲ್ನೋಟಕ್ಕೆ ಹಾಲಿ ಕೈ ಶಾಸಕ ಎಂ.ಪಿ.ರವೀಂದ್ರನಿಗೆ ಇಕ್ಕಟ್ಟಿನಂತೆ ಕಂಡುಬಂದರೂ ಬಿಜೆಪಿಯ ಆಂತರಿಕ ಗುದಮುರಗಿ ರವಿಗೆ ನೆರವಾಗುವ ಸಾಧ್ಯತೆ ಇದೆ. ಜೆಡಿಎಸ್‍ನಿಂದ ಸ್ಪರ್ಧಿಸಿರುವ ಕೊಟ್ರೇಶ್ ಕೂಡಾ ಲಿಂಗಾಯತನಾಗಿರುವುದರಿಂದ ರವೀಂದ್ರನ ಜಾತಿ ಮತಗಳು ಹಂಚಿಹೋಗುತ್ತವೆ ಎಂಬ ವಾದವಿದೆ. ಆದರೆ ಅಸಲಿಯತ್ತೇನೆಂದರೆ ಮೊದಲಿನಿಂದಲೂ ಇಲ್ಲಿನ ಬಹುಪಾಲು ಲಿಂಗಾಯತ ಮತಗಳು ಹೋಗುತ್ತಿದ್ದುದು ಬಿಜೆಪಿಯ ಕರುಣಾಕರ ರೆಡ್ಡಿಗೆ, ಯಡ್ಯೂರಪ್ಪನ ಕಾರಣಕ್ಕೆ. ಜೆಡಿಎಸ್‍ನ ಕೊಟ್ರೇಶಿ ಪಕ್ಕಾ ಯಡಿಯೂರಪ್ಪನ ಶಿಷ್ಯ. ಕಳೆದ ಸಲ ಕೆಜೆಪಿಯಿಂದ ಸ್ಪರ್ಧಿಸಿದ್ದ. ಆತನಿಗೇ ಬಿಜೆಪಿ ಟಿಕೇಟ್ ಕೊಡಿಸಬೇಕೆನ್ನುವುದು ಯಡ್ಯೂರಪ್ಪ ಇಂಗಿತವಾಗಿತ್ತು. ಆದರೆ ರೆಡ್ಡಿಯೇ ಟಿಕೇಟ್ ಗಿಟ್ಟಿಸಿಕೊಂಡಿರುವುದರಿಂದ ಕೊಟ್ರೇಶಿ ಜೆಡಿಎಸ್‍ನಿಂದ ಸ್ಪರ್ಧಿಸಿದ್ದಾನೆ. ಅಂದರೆ ಆತ ಕೀಳಲಿರುವುದು ಬಿಜೆಪಿಯ ಮತಗಳನ್ನೇ ಹೊರತು ಕಾಂಗ್ರೆಸ್ ಓಟುಗಳನ್ನಲ್ಲ. ಅಲ್ಲಿಗೆ ರವಿಯ ಗೆಲ್ಲುವ ಸಂಭವ ಹೆಚ್ಚಾಗಿದೆ. ಆದರೆ ರವಿ ಕ್ಷೇತ್ರವನ್ನು ನಿರ್ಲಕ್ಷಿಸಿದ್ದಾನೆ ಎನ್ನುವ ವಾದವೂ ಇದ್ದು ಅದು ಫಲಿತಾಂಶದ ಮೇಲೆ ಪ್ರಭಾವ ಬೀರಿದರೆ ಅಚ್ಚರಿಯಿಲ್ಲ.

ಹರಿಹರದಲ್ಲಿ ಹಾಲಿ ಜೆಡಿಎಸ್ ಶಾಸಕ ಶಿವಶಂಕರನ ದರ್ಪ ಮತ್ತು ಮತದಾರರನ್ನು ಕಡೆಗಣಿಸಿದ ಅಪರಾಧವೇ ಆತನ ಸೋಲಿಗೆ ಮುನ್ನುಡಿಯಾಗುವ ಸಾಧ್ಯತೆಗಳಿವೆ. ಕೈ ಪಾರ್ಟಿಯಿಂದ ಹಳೇ ಹುಲಿ ರಾಮಪ್ಪಜ್ಜ ಕಣಕ್ಕಿಳಿದಿರೋದರಿಂದ ಬಿಜೆಪಿಯ ಹರೀಶನ ಬಿಪಿಯೂ ಯದ್ವತದ್ವಾ ಏರತೊಡಗಿದೆ. ರಾಮಪ್ಪನಿಗೆ ಸ್ವಜಾತಿ ಕುರುಬರು ಮಾತ್ರವಲ್ಲದೇ ಮುಸ್ಲಿಮರು, ನಾಯಕರು, ದಲಿತರ ಮತಗಳೂ ಹರಿದುಬರುವ ಸಾಧ್ಯತೆಯಿದ್ದು ಅಜ್ಜ ಗೆಲುವಿನ ನಗೆ ಬೀರಬಲ್ಲರು.

ಚನ್ನಗಿರಿಯಲ್ಲಿ ತ್ರಿಕೋನ ಸ್ಪರ್ಧೆಯಿದೆ. ಕಾಂಗ್ರೆಸ್‍ನ ಹಾಲಿ ಶಾಸಕ ವಡ್ನಾಳು ರಾಜಣ್ಣ, ಬಿಜೆಪಿಯ ಮಾಡಾಳು ವಿರುಪಾಕ್ಷಪ್ಪ, ಜೆಡಿಯು ಮಹಿಮಾ ಪಟೇಲ್ ಆ ತ್ರಿವಳಿ ವೀರರು. ಇವರ ನಡುವೆ ಜೆಡಿಎಸ್‍ನ ಹೊದಿಗೆರೆ ರಮೇಶ ಆಟಕ್ಕೂ ಇಲ್ಲ ಲೆಕ್ಕಕ್ಕೂ ಇಲ್ಲ. ನಾಯಕ ಜಾತಿಯ ಹೊದಿಗೆರೆ ರಮೇಶನನ್ನು ಹೊರತುಪಡಿಸಿದರೆ ಉಳಿದ ಮೂವರೂ ಲಿಂಗಾಯತರು. ವಡ್ನಾಳು ರಾಜಣ್ಣನಿಗೆ ಜಾತಿ ಮತಗಳು ಕೈಕೊಡುವ ಸಾಧ್ಯತೆಯಿದ್ದು ಅವು  ಮಾಡಾಳು ವಿರುಪಾಕ್ಷಪ್ಪನತ್ತ ಮುಖ ಮಾಡಿವೆ. ಆದರೆ ಈ ಮತಗಳ ಮೇಲೆ ಮಹಿಮಾ ಕೂಡಾ ದಾಳಿ ಮಾಡಬಹುದಾದ್ದರಿಂದ ಇನ್ನುಳಿದ ಸಮುದಾಯದ ಮತಗಳು ಯಾರತ್ತ ನುಗ್ಗಲಿವೆ ಎಂಬುದು ಸೋಲುಗೆಲುವನ್ನು ನಿರ್ಧರಿಸಲಿದೆ. ಸದ್ಯಕ್ಕಂತೂ ಬಿಜೆಪಿಯ ಮಾಡಾಳು ಮುಂಚೂಣಿಯಲ್ಲಿದ್ದಾರೆ.

ಜಗಳೂರಿನಲ್ಲಿ ಉದ್ಭವಿಸಿದ ಕಾಂಗ್ರೆಸ್ ಟಿಕೇಟ್ ಬಂಡಾಯದ ಯಡವಟ್ಟು ಬಿಜೆಪಿಯ ಎಸ್.ವಿ.ರಾಮಚಂದ್ರನಿಗೆ ಅನುಕೂಲ ಆಗಬಹುದು. ಮೊದಲು ಪುಷ್ಟಾಗೆ ಟಿಕೇಟ್ ಕೊಟ್ಟ ಕಾಂಗ್ರೆಸ್ ನಂತರ ನಿರ್ಧಾರದಿಂದ ಹಿಂದೆ ಸರಿದು ಹಾಲಿ ಶಾಸಕ ರಾಜೇಶನಿಗೆ ಬಿ ಫಾರಂ ದಯಪಾಲಿಸಿದೆ. ಈ ಕಣ್ಣಾಮುಚ್ಚಾಲೆಯಿಂದ ಸಿಟ್ಟಿಗೆದ್ದ ಪುಷ್ಟ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿರೋದು ಕಾಂಗ್ರೆಸ್‍ಗೆ ದುಬಾರಿಯಾಗಲಿದೆ.

ಮಾಯಕೊಂಡದಲ್ಲಿ ಕಾಂಗ್ರೆಸ್‍ನ ಮೇಲುಗೈ ಕಾಣಿಸುತ್ತೆ. ಮಂತ್ರಿ ಆಂಜನೇಯರ ಅಳಿಯ ಬಸವರಾಜನನ್ನು ಕಾಂಗ್ರೆಸ್ ಅಖಾಡಕ್ಕಿಳಿಸಿದೆ. ಯಡ್ಯೂರಪ್ಪ ತನ್ನ ಭಂಟ ಲಿಂಗಪ್ಪನಿಗೆ ಟಿಕೇಟ್ ಕೊಡಿಸಿರುವುದರಿಂದ ಬೇಸತ್ತಿರುವ ಮಾಜಿ ಶಾಸಕ ಬಸವರಾಜ ನಾಯ್ಕ ಜೆಡಿಯು ಸೇರಿ ಕಣದಲ್ಲಿದ್ದಾನೆ. ಸಾಲದ್ದಕ್ಕೆ ಆನಂದಪ್ಪ ಎಂಬ ಮತ್ತೊಬ್ಬ ಅಭ್ಯರ್ಥಿಯೂ ಬಿಜೆಪಿ ಬಂಡಾಯಗಾರನಾಗಿ ಮತ ಬೇಟೆಯಲ್ಲಿ ತೊಡಗಿದ್ದಾನೆ. ಬಿಜೆಪಿಗೆ ಈ ಇಬ್ಬರ ಬಂಡಾಯ ದುಬಾರಿಯಾಗಲಿದೆ. ಮುಖ್ಯವಾಗಿ ಲಂಬಾಣಿ ಮತಗಳು ಬಿಜೆಪಿಯಿಂದ ದೂರ ಸರಿದಿವೆ. ಶಾಮನೂರು ಪಾಳೆಗಾರಿಕೆ ಕಾರಣಕ್ಕೆ ಒಂದಷ್ಟು ಲಿಂಗಾಯತ ಮತಗಳು ಕಾಂಗ್ರೆಸ್‍ಗೆ ಒಲಿಯಲಿವೆ. ಜೊತೆಗೆ ಕುರುಬ, ನಾಯಕ, ಮಾದಿಗ ಮೊದಲಾದ ಅಹಿಂದ ಮತಗಳೂ ಕೈಹಿಡಿಯಲಿವೆ. ಲಂಬಾಣಿ ಮತಗಳು ಬಸವರಾಜ ನಾಯ್ಕ ಮತ್ತು ಜೆಡಿಎಸ್‍ನ ಶೀಲಾ ನಾಯ್ಕ ನಡುವೆ ಹರಿದು ಹಂಚಿಹೋಗಲಿವೆ. ಬಿಜೆಪಿಯ ಲಿಂಗಪ್ಪನಿಗೆ ಸ್ವಜಾತಿಯ ಮಾದಿಗ ಮತಗಳು ಬೀಳೋದೂ ಡೌಟು. ಏನಿದ್ದರೂ ಯಡ್ಯೂರಪ್ಪನ ವಶೀಲಿಬಾಜಿಯ ಒಂದಷ್ಟು ಲಿಂಗಾಯತ ಮತಗಳಷ್ಟೇ ಗಟ್ಟಿ.

ಹೊನ್ನಾಳಿಯಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ನೆಕ್-ಟು-ನೆಕ್ ಹಣಾಹಣಿಯಿದೆ. ಕಾಂಗ್ರೆಸ್ ಟಿಕೇಟ್ ಕೈತಪ್ಪಿದ ಕಾರಣಕ್ಕೆ ಕುರುಬರ ಎಚ್.ಬಿ.ಮಂಜಪ್ಪ ಆರಂಭದಲ್ಲಿ ಬಂಡಾಯವೆದ್ದರೂ ಈಗ ಹಾಲಿ ಶಾಸಕ ಶಾಂತನಗೌಡನ ಪರ ಲವಲವಿಕೆಯಿಂದ ಪ್ರಚಾರ ಮಾಡುತ್ತಿದ್ದಾನೆ. ಇನ್ನು ಬಿಜೆಪಿಯಿಂದ ಕಣದಲ್ಲಿರುವ ನರ್ಸ್ ರೇಣುಕಾಚಾರ್ಯ ಯುವಜನರು ಮತ್ತು ನೊಣಬ, ಬಣಜಿಗ ಲಿಂಗಾಯತರ ಮತಗಳನ್ನು ನಂಬಿ ಹೋರಾಟ ನಡೆಸಿದ್ದಾನೆ. ಕಾಂಗ್ರೆಸ್‍ಗೆ ಹೆಚ್ಚಿನ ಸಂಖ್ಯೆಯಲ್ಲಿರುವ ಸಾದರ ಲಿಂಗಾಯತರ ಜೊತೆಗೆ ಅಹಿಂದ ವರ್ಗದ ಮತಗಳೂ ಬೀಳುವುದರಿಂದ ಇಲ್ಲಿ ಈ ಸಲವೂ ರೇಣುಕಾರ್ಯನಿಗೆ ಕಷ್ಟವಿದೆ.

Leave a Reply

Your email address will not be published.

Social Media Auto Publish Powered By : XYZScripts.com