ಕರ್ನಾಟಕ ಚುನಾವಣೆ : ರಾಜ್ಯದ ಮತದಾರ ಬಂಧುಗಳಲ್ಲಿ ಸಿದ್ದರಾಮಯ್ಯನವರ ಅರಿಕೆ…..

ಪ್ರೀತಿಯ ಮತದಾರ ಬಂಧುಗಳೇ,
ನಿಮ್ಮಲ್ಲಿ ಪ್ರತಿಯೊಬ್ಬರ ಮನೆಬಾಗಿಲಿಗೆ ಬಂದು ನಿಮ್ಮನ್ನು ಮಾತನಾಡಿಸಲಾಗಿಲ್ಲ, ಇದಕ್ಕೆ ಕ್ಷಮೆ ಇರಲಿ. ಆದರೆಚುನಾಯಿತ ಸರ್ಕಾರ ತನ್ನ ಸಾಧನೆಗಳ ಮೂಲಕ ಜನತೆಯ ಮನೆಗಳನ್ನು, ಅವರ ಮನಸ್ಸುಗಳನ್ನು ಮುಟ್ಟಬೇಕೆಂಬ ಸಾಂವಿಧಾನಿಕ ಜವಾಬ್ದಾರಿಯನ್ನು ನಮ್ಮ ಸರ್ಕಾರ ನಿರ್ವಹಿಸಿದೆ ಎಂದು ವಿನಯಪೂರ್ವಕವಾಗಿ ಅಷ್ಟೇ ಆತ್ಮವಿಶ್ವಾಸದಿಂದ ಹೇಳಬಲ್ಲೆ. ಮತದಾನಕ್ಕೆ ಸಿದ್ದರಾಗುತ್ತಿರುವ ನಿಮಗೆ ಇದನ್ನು ನೆನಪು ಮಾಡಿಕೊಳ್ಳಲು ಈ ಪತ್ರ.
ರಾಜಕೀಯ ಪಕ್ಷಗಳು ಚುನಾವಣೆಯನ್ನು ಸಾಧನೆಯ ಬಲದಿಂದ ಎದುರಿಸಬೇಕು, ನಮ್ಮನ್ನು ನಂಬಿ ಮತ ನೀಡಿದ ಮತದಾರರಿಗೆ ಸುಳ್ಳು ಹೇಳಿ ದಾರಿ ತಪ್ಪಿಸಬಾರದು. ಚುನಾವಣಾ ಪ್ರಚಾರ ದುರುದ್ದೇಶಪೂರಿತ ನಿಂದನೆ ಮತ್ತು ನಿರಾಧಾರವಾದ ಆರೋಪಗಳಿಗೆ ವೇದಿಕೆಯಾಗಬಾರದು ಎನ್ನುವ ನೀತಿ ಸಂಹಿತೆಗೆ ಬದ್ಧವಾಗಿ ನಮ್ಮ ಪಕ್ಷ ಚುನಾವಣೆಯನ್ನು ಎದುರಿಸುತ್ತಿದೆ.
ನಾಲ್ಕು ದಶಕಗಳ ನಂತರ ವಿಧಾನಸಭೆ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸುವ ಮೂಲಕ ರಾಜ್ಯದಜನತೆಯ ಸುಭದ್ರ ಸರ್ಕಾರದಆಶಯವನ್ನು ಸಾಕಾರಗೊಳಿಸಿದ ಹೆಮ್ಮೆ ನಮ್ಮದು.ಇದಕ್ಕೆ ಸಹಕಾರ ನೀಡಿದ ಜನತಾ ಜನಾರ್ದನರಾದ ನಿಮಗೆ ತಲೆಬಾಗುವೆ.
ಕೋಮುವಾದ ಎನ್ನುವುದು ಸಂವಿಧಾನ ವಿರೋಧಿ ಮಾತ್ರವಲ್ಲ, ಅದು ಅಭಿವೃದ್ಧಿ ವಿರೋಧಿಯೂ ಹೌದು. ಕೆಲಸಗಳ್ಳ ನಾಯಕರು ತಮ್ಮ ವೈಫಲ್ಯಗಳನ್ನು ಜನರಿಂದ ಮುಚ್ಚಿಡಲು ಕೋಮುವಾದದ ಬೆಂಕಿ ಹಚ್ಚುತ್ತಾ ಬಂದಿದ್ದಾರೆ. ನಮ್ಮದು ಸೌಹಾರ್ದ ಪರಂಪರೆಯ ಕರ್ನಾಟಕ ಈ ನಾಡಿನ ಮಹಾ ಪುರುಷರು-ಮಹಿಳೆಯರು ಸಾಧುಗಳು, ಗುರುಗಳು, ಸಂತರು, ದಾಸರು, ಸೂಪಿಗಳು ಈ ನೆಲದಲ್ಲಿ ಬಿತ್ತಿಹೋದ ಸೌಹಾರ್ದ ಪರಂಪರೆಯ ಬೀಜ ಹೆಮ್ಮರವಾಗಿ ಬೆಳೆದು ಇಂದು ನಮಗೆ ಆಸರೆಯಾಗಿದೆ.


ಈ ಹಿಂದೆಯೂ ಹಲವಾರು ಬಾರಿ ಇದನ್ನು ಹೇಳಿದ್ದೆ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ನನ್ನ ಮನಸ್ಸಲ್ಲಿಇನ್ನೊಂದು ಪ್ರಮಾಣ ಮಾಡಿದ್ದೆ. ಅದು ನುಡಿದಂತೆ ನಡೆಯಬೇಕೆಂಬ ಪ್ರಮಾಣ. ಇದನ್ನೇ ನಾನು ನನ್ನ ರಾಜಧರ್ಮ ಎಂದು ತಿಳಿದು ಕೊಂಡು ಆ ನಿಷ್ಠೆಯಿಂದ ನಡೆದು ಕೊಂಡಿದ್ದೇನೆ
ನಾವು ಕೇವಲ ಮಾತುಗಾರರಲ್ಲ, ಕೆಲಸಗಾರರು. ಚುನಾವಣಾ ಪೂರ್ವದಲ್ಲಿ ನುಡಿದಂತೆ ಆಡಳಿತದ ಕಾಲದಲ್ಲಿ ನಡೆದು, ಪ್ರಣಾಳಿಕೆಯಲ್ಲಿ ನೀಡಿರುವ ಬಹುತೇಕ ಭರವಸೆಗಳ ಈಡೇರಿಸಿದ್ದೇವೆ. ಇದರ ಜತೆ ಜನಮನವನ್ನರಿತು ಸ್ವಯಂ ಪ್ರೇರಣೆಯಿಂದ 30ಕ್ಕೂ ಹೆಚ್ಚು ಹೊಸ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ.
ನಮ್ಮದು ಸರ್ವರನ್ನೂ ಒಳಗೊಂಡಿರುವ, ಸರ್ವರನ್ನೂ ಬೆಸೆಯುವ ಮತ್ತು ಸರ್ವರಿಗೂ ಸಮಪಾಲು-ಸಮಪಾಲು ನೀಡುವವ ಸರ್ವೋದಯ ತತ್ವದ ಅಭಿವೃದ್ಧಿ ಮಾದರಿ. ಈ ಕರ್ನಾಟಕ ಅಭಿವೃದ್ಧಿ ಮಾದರಿ’’ಎಂದು ಇಡೀ ದೇಶದಲ್ಲಿ ಚರ್ಚೆಯಾಗುತ್ತಿದೆ. ಬಸವಣ್ಣ, ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿಯವರ ತತ್ವಗಳು ಇದಕ್ಕೆ ಪ್ರೇರಣೆ.
ರಾಜ್ಯದ ಕಟ್ಟಕಡೆಯ ಮನುಷ್ಯನಿಗೂ ಬದುಕಿನ ಪ್ರಾಥಮಿಕ ಅವಶ್ಯಕತೆಗಳಾದ ಅನ್ನ, ಆರೋಗ್ಯ, ಶಿಕ್ಷಣ, ವಸತಿ ಮತ್ತು ಉದ್ಯೋಗದ ಭಾಗ್ಯ ಲಭಿಸಬೇಕು. ಬಡವ-ಬಲ್ಲಿದನೆಂಬ ಭೇದ ಇಲ್ಲದೆ ಎಲ್ಲರೂ ನಿರ್ಭಯವಾಗಿಘನತೆ ಮತ್ತು ಗೌರವದಿಂದ ಬದುಕುವ ವಾತಾವರಣವನ್ನು ನಿರ್ಮಾಣ ಮಾಡಬೇಕು. ಕೃಷಿ ಸಂಪತ್ತು ಬೆಳೆಯಬೇಕು, ಉದ್ಯಮ ಕ್ಷೇತ್ರದಲ್ಲಿ ಪ್ರಗತಿಯಾಗಬೇಕು, ದುಡಿಯುವ ಕೈಗಳಿಗೆ ಉದ್ಯೋಗ ಸಿಗಬೇಕು, ಮೂಲ ಸೌಲಭ್ಯಗಳು ವೃದ್ಧಿಯಾಗಬೇಕು. ನೆಮ್ಮದಿಯಿಂದ ಬದುಕುವಷ್ಟು ಆದಾಯ ಪ್ರತಿಕುಟುಂಬದ ಪಾಲಿಗಿರಬೇಕು. ಸಂಪತ್ತು, ಅಧಿಕಾರ ಮತ್ತು ಅವಕಾಶ ಸಮಾನವಾಗಿ ಎಲ್ಲರಿಗೂ ಹಂಚಿಕೆಯಾಗಬೇಕು – ಇದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನ ನಮ್ಮ ಸರ್ಕಾರಕಂಡ ಕನಸು.
ನಾವು ಕೇವಲ ಕನಸು ಬಿತ್ತುವವರಲ್ಲ, ಬಿತ್ತಿದಕನಸನ್ನು ಬೆಳೆಸಿ ನನಸು ಮಾಡುವವರು. ಈ ಪ್ರಾಮಾಣಿಕ ಪ್ರಯತ್ನದ ಫಲವಾಗಿಯೇ ಕರ್ನಾಟಕ ರಾಜ್ಯ ದೇಶಕ್ಕೆ ಮಾದರಿ ರಾಜ್ಯವಾಗಿ ರೂಪುಗೊಳ್ಳುತ್ತಿದೆ. ಸಾಧನೆಯ ಹಾದಿಯಲ್ಲಿ ಅರಸಿ ಬಂದ ಹಲವು ಪ್ರಥಮಗಳ ಗರಿ ಕರ್ನಾಟಕ ಯಶಸ್ಸಿನ ಕಿರೀಟವನ್ನು ಅಲಂಕರಿಸಿವೆ.
ಉಚಿತವಾಗಿ ಅಕ್ಕಿ ನೀಡುವ ಅನ್ನಭಾಗ್ಯ, ಹಾಲಿಗೆ ಸಹಾಯಧನ ನೀಡುವ ಕ್ಷೀರಧಾರೆ, ಹಾಸ್ಟೆಲ್ ಸೌಲಭ್ಯಇಲ್ಲದವರಿಗೆ ವಿದ್ಯಾಸಿರಿ, ರೈತರ ಆದಾಯ ಹೆಚ್ಚಿಸಿದ ಕೃಷಿ ಇ-ಮಾರುಕಟ್ಟೆ, ಸರ್ವರಿಗೂ ಆರೋಗ್ಯ, ಮಹಿಳಾ ಮೀಸಲು ಕೈಗಾರಿಕಾ ಪಾರ್ಕ, ರೈತರಿಗೆ ಬಡ್ಡಿರಹಿತ ಸಾಲ, ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆಗುತ್ತಿಗೆಕಾಮಗಾರಿಯಲ್ಲಿ ಮೀಸಲಾತಿ, ಇಂದಿರಾಕ್ಯಾಂಟೀನ್, ಹಿಂದುಳಿದ ವರ್ಗಗಳ ಬ್ಯಾಕ್ ಲಾಗ್ ಹುದ್ದೆ ಭರ್ತಿ, ನೂತನ ಸ್ಟಾರ್ಟ ಅಪ್ ನೀತಿ, ಎಲೆಕ್ಟ್ರಿಕ್ ವಾಹನ ಮತ್ತು ಇಂಧನ ಸಂಗ್ರಹ ನೀತಿ, ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಉಚಿತ ಡಯಾಲಿಸಿಸ್ ಸೌಲಭ್ಯ – ಈ ಎಲ್ಲ ಯೋಜನೆಗಳು ನಮ್ಮ ಸರ್ಕಾರದ ಮೂಲ ದೇಶದಲ್ಲಿಯೇ ಮೊದಲು ಕಾರ್ಯರೂಪಕ್ಕೆ ಬಂದಿರುವುದು ಕರ್ನಾಟಕದ ನೆಲದಲ್ಲಿ ಎನ್ನುವುದನ್ನು ವಿನಮ್ರತೆಯಿಂದ ನೆನಪು ಮಾಡಿಕೊಡಲು ಬಯಸುತ್ತೇನೆ.
ಕೈಗಾರಿಕಾ ಬಂಡವಾಳ ಸೆಳೆಯುವಲ್ಲಿ ಸತತ ಎರಡನೇ ವರ್ಷವೂ ಕರ್ನಾಟಕ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ. ಕರ್ನಾಟಕ ಭಾರತದ ಐಟಿ ರಾಜಧಾನಿ ಮಾತ್ರವಲ್ಲ, ವಿಶ್ವದ ನಾಲ್ಕನೇ ಅತಿದೊಡ್ಡಟೆ ಕ್ನಾಲಜಿ ವಲಯ. ಐಟಿ ರಫ್ತಿನಲ್ಲಿ ನಾವೇ ನಂಬರ್‍ ಒನ್. ದೇಶದಒಟ್ಟು ಬಯೋಟೆಕ್ನಾಲಜಿ ಉದ್ದಿಮೆ ಆದಾಯದ ಶೇಕಡಾ 35ರಷ್ಟು ಪಾಲು ನಮ್ಮದು. ದೇಶದ ಉತ್ಪಾದನಾ ವಲಯದ ಹೂಡಿಕೆ ಪಾಲುದಾರಿಕೆಯಲ್ಲಿ ನಮ್ಮ ಪಾಲು ಶೇಕಡಾ 32.
ಪರಿಶಿಷ್ಟ ಸಮುದಾಯಕ್ಕೆ ಅವರ ಜನಸಂಖ್ಯೆಗೆ ಅನುಗುಣವಾಗಿ ಯೋಜನೆಯ ಗಾತ್ರದಲ್ಲಿ ಪಾಲು ನೀಡುವ ಪರಿಶಿಷ್ಟಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಕಾಯಿದೆ, ಮೌಡ್ಯ ನಿಷೇಧ ಕಾಯಿದೆ, ತಾಂಡಾ, ಹಟ್ಟಿ, ಹಾಡಿಗಳಲ್ಲಿ ವಾಸಿಸುತ್ತಿರುವವರಿಗೆ ಒಡೆತನ ನೀಡುವ ಭೂಸುಧಾರಣೆ ತಿದ್ದುಪಡಿಕಾಯಿದೆ ಮತ್ತು ಲಿಂಗತ್ವ ಅಲ್ಪಸಂಖ್ಯಾತ ಕಲ್ಯಾಣ ಮೊದಲಾದನಮ್ಮ ಪ್ರಗತಿಪರ ನೀತಿಗಳು ದೇಶಕ್ಕೆ ಮಾದರಿಯಾಗಿವೆ.
ಇಂದು ಇಡೀ ದೇಶ ಕರ್ನಾಟಕದ ಕಡೆಗೆ ಅಭಿಮಾನದಿಂದ ನೋಡುವಂತಾಗಿದೆ. ಈ ಸಾಧನೆಗಳಿಂದ ಕನ್ನಡಿಗರು ಎದೆಯುಬ್ಬಿಸಿ ನಾಡಿನ ಬಗ್ಗೆ ಹೆಮ್ಮೆ ಪಡುವಂತಾಗಿದೆ. ಇದೇ ನಿಜವಾದ ಕನ್ನಡ ಅಸ್ಮಿತೆ ಎಂದು ನಾವು ತಿಳಿದುಕೊಂಡಿದ್ದೇನೆ. ನಾವು ಜನರನ್ನು ನಂಬಿ ರಾಜಕೀಯ ಮಾಡಿಕೊಂಡು ಬಂದವರು. ಕರ್ನಾಟಕದ ಜನ ಅನ್ನ, ನೀರು, ಹಾಲು, ಮನೆ, ಔಷಧಿ ಕೊಟ್ಟವರನ್ನು, ಸಾಲ ತೀರಿಸಿದವರನ್ನು, ಸುರಕ್ಷಿತ ಬದುಕು ನೀಡಿದವರನ್ನು ಖಂಡಿತ ಮರೆಯುವುದಿಲ್ಲ ಎನ್ನುವ ವಿಶ್ವಾಸನಮಗಿದೆ.
ಕೊನೆಯಲ್ಲಿ ನಿಮ್ಮಲ್ಲಿ ಅರಿಕೆ ಮಾಡಿಕೊಳ್ಳುವುದಿಷ್ಟೆ: ಕೆಲಸ ಮಾಡಿದ್ದೇವೆ ಕೂಲಿ ಕೊಡಿ. ಮತದಾನದ ದಿನ ನೀವು ಪ್ರತಿಯೊಬ್ಬರು ತಪ್ಪದೆ ಮತಗಟ್ಟೆಗೆ ಹೋಗಿ ನಮ್ಮ ಪಕ್ಷದ ಹಸ್ತದ ಚಿಹ್ನೆಗೆ ಮತಚಲಾಯಿಸಿ ಸಮೃದ್ಧ, ಸೌಹಾರ್ದ, ಸ್ವಾವಲಂಬಿ ರಾಜ್ಯ ಮಾಡಬೇಕೆಂಬ ನಮ್ಮ ಸಂಕಲ್ಪಕ್ಕೆ ಬಲ ತುಂಬಬೇಕೆಂದು ಕೈಮುಗಿದು ಕೇಳಿಕೊಳ್ಳುತ್ತಿದ್ದೇವೆ.

One thought on “ಕರ್ನಾಟಕ ಚುನಾವಣೆ : ರಾಜ್ಯದ ಮತದಾರ ಬಂಧುಗಳಲ್ಲಿ ಸಿದ್ದರಾಮಯ್ಯನವರ ಅರಿಕೆ…..

Leave a Reply

Your email address will not be published.

Social Media Auto Publish Powered By : XYZScripts.com