ಚುನಾವಣಾ ಅಕ್ರಮ : ಬೆಂಗಳೂರಿನಲ್ಲಿ 9 ಸಾವಿರಕ್ಕೂ ಅಧಿಕ ನಕಲಿ ವೋಟರ್‌ ಐಡಿ ಪತ್ತೆ !

ಬೆಂಗಳೂರು : ರಾಜ್ಯ ವಿಧಾನಸಭಾ  ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಈ ಹೊತ್ತಿನಲ್ಲೇ ಬೆಂಗಳೂರಿನಲ್ಲಿ ಭಾರೀ ಅಕ್ರಮವೊಂದು ನಡೆದಿದ್ದು, ರಾಜರಾಜೇಶ್ವರಿ ನಗರದ ಅಪಾರ್ಟ್‌ಮೆಂಟ್ ಒಂದರಲ್ಲಿ 9ಸಾವಿರಕ್ಕೂ ಅಧಿಕ ವೋಟರ್‌ ಐಡಿಗಳು ಪತ್ತೆಯಾಗಿವೆ.
ಅಲ್ಲದೆ ಅಪಾರ್ಟ್‌ಮೆಂಟ್‌ನಲ್ಲಿ ಐದು ಲ್ಯಾಪ್‌ಟಾಪ್‌, ಒಂದು ಪ್ರಿಂಟರ್‌, ಎರಡು ಟ್ರಂಕ್‌ ಮತದಾರರ ಗುರುತಿನ ಚೀಟಿ ಸಿಕ್ಕಿದೆ. ಈ ವಿಚಾರ ಬಯಲಾಗುತ್ತಿದ್ದಂತೆ ಮತದಾನವನ್ನು ಮುಂದೂಡುವಂತೆ ಬಿಜೆಪಿ ಹಾಗೂ ಜೆಡಿಎಸ್‌ ಪಟ್ಟು ಹಿಡಿದಿದೆ. ಆರ್ ಆರ್‌ ನಗರದಲ್ಲಿ ಮತದಾನ ಮುಂದೂಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ ಈ ಸಂಬಂಧ ದೂರು ನೀಡಿದ್ದು, ತನಿಖೆ ನಡೆಸಲಾಗುತ್ತಿದೆ.
ನಕಲಿ ಮತದಾರರ ಗುರುತಿನ ಚೀಟಿ ಸಿಕ್ಕ ಅಪಾರ್ಟ್‌ಮೆಂಟ್‌ ಮಂಜುಳಾ ನಂಜಾಮರಿ ಎಂಬುವವರಿಗೆ ಸೇರಿದ್ದು, ಅದನ್ನು ರಾಕೇಶ್ ಎಂಬುವವರು ಬಾಡಿಗೆಗೆ ಪಡೆದಿದ್ದಾರೆ. ಐಡಿ ಕಾರ್ಡ್‌ಗಳ ಜೊತೆ ಮತದಾರ ಹೆಸರು ಸೇರಿಸುವ ಫಾರಂ 6ರ ಕೌಂಟರ್‌ ಫೈಲ್‌ಗಳು ಪತ್ತೆಯಾಗಿವೆ.ಜೊತೆಗೆ ಸ್ಥಳದಲ್ಲಿ ಸ್ಥಳೀಯ ಅಭ್ಯರ್ಥಿ ಮುನಿರತ್ನ ಅವರ ಭಾವಚಿತ್ರವೂ ಪತ್ತೆಯಾಗಿದೆ ಎಂದು ಚುನಾವಣಾ ಅಧಿಕಾರಿ ಸಂಜೀವ್‌ಕುಮಾರ್‌ ಹೇಳಿದ್ದಾರೆ.

 ಪ್ರಕರಣ ಸಂಬಂಧ ಮೂವರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಈ ಮಧ್ಯೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಭೇಟಿ ನೀಡಿ, ಸಾವಿರಾರು ಗುರುತಿನ ಚೀಟಿಗಳು ಪತ್ತೆಯಾಗಿರುವುದಕ್ಕೆ ಆತಂಕ ವ್ಯಕ್ತಪಡಿಸಿದ್ದಾರೆ. ಈ ಕೃತ್ಯದ ಹಿಂದೆ ಆರ್‌.ಆರ್‌.ನಗರ ಶಾಸಕ ಮುನಿರತ್ನ ನಾಯ್ಡು ಕೈವಾಡವಿದೆ ಎಂದು ವಾಗ್ಧಾಳಿ ನಡೆಸಿದ್ದಾರೆ.

Leave a Reply

Your email address will not be published.