Karlmarx 1818 to 2018 : ಅಸ್ಥಿತ್ವದಲ್ಲಿರುವ ಎಲ್ಲದರ ನಿಷ್ಠೂರ ವಿಮರ್ಶೆ- ಕಾರ್ಲ್ ಮಾರ್ಕ್ಸ್..

ಮಾರ್ಕ್ಸ್ ಅವರು ಜನಿಸಿ ೨೦೦ ವರ್ಷಗಳಾಗಿರುವ ಸಂದರ್ಭದಲ್ಲಿ ಬರ್ನಾಡ್ ಡಿಮೆಲ್ಲೋ ಅವರು ಇಂದಿನ ಬಂಡವಾಳ ಮತ್ತು ಒಂದು ಜಾಗತಿಕ ವ್ಯವಸ್ಥೆಯಾಗಿಬಿಟ್ಟಿರುವ ಇಂದಿನ ಜಾಗತಿಕ ಬಂಡವಾಳಶಾಹಿ ವ್ಯವಸ್ಥೆಯ ವಿಮರ್ಶಾತ್ಮಕ ವಿಶ್ಲೇಷಣೆಯೊಂದು ಹೇಗಿರಬಹುದೆಂಬುದನ್ನು ಕಲ್ಪಿಸಿಕೊಟ್ಟಿದ್ದಾರೆ. .

ಮುಲಾಜಿಲ್ಲದ ನಿಷ್ಠೂರ ವಿಮರ್ಶೆ ಎಂಬುದು ಕಾರ್ಲ್ ಮಾರ್ಕ್ಸ್ ಅವರ ಚಿಂತನೆಯ ಪ್ರಮುಖ ಸೂತ್ರವಾಗಿತ್ತು. ಅದನ್ನೇ ಅವರು ಬಂಡವಾಳ ಮತ್ತು ಬಂಡವಾಳಶಾಹಿಯ ಬಗೆಗಿನ ವಿಮರ್ಶಾತ್ಮಕ ವಿಶ್ಲೇಷಣೆಯಲ್ಲಿ ಬಳಸಿದರು ಮತ್ತು ಆ ಮೂಲಕ ಅವುಗಳ ನಾಶಕ್ಕೂ  ನಾಂದಿ ಹಾಡಿದ್ದರು. ಹೀಗಾಗಿಯೇ ೨೦೦ ವರ್ಷಗಳ ತರುವಾಯವೂ ಅವರು ವಿಶ್ವದಲ್ಲಿ ಈವರೆಗೆ ಯಾರೂ ಸರಿಗಟ್ಟಲಾಗದ ಅತ್ಯಂತ ಚಾರಿತ್ರಿಕ ಹಾಗೂ ಪ್ರಭಾವಶಾಲಿ ಮೇಧಾವಿಯಾಗಿಯೇ ಉಳಿದಿದ್ದಾರೆ. ಅಷ್ಟು ಮಾತ್ರವಲ್ಲ. ಈ ನಿಷ್ಠೂರ ವಿಮರ್ಶೆಯ ಮಾನದಂಡವನ್ನು ಅವರು ಯಾವುದೇ ಮುಲಾಜಿಲ್ಲದೆ ತಮ್ಮ ಚಿಂತನೆಗೂ ಅನ್ವಯಿಸಿಕೊಳ್ಳುತ್ತಿದ್ದರು. ಹಾಗೂ ತಮ್ಮ ಬರಹಗಳಲ್ಲಿ ಕಾಳು ಯಾವುದು ಮತ್ತು ಜೊಳ್ಳು ಯಾವುದೆಂಬುದನ್ನು ನಿರಂತರ ಪರಿಶೀಲನೆಗೊಡ್ಡಿಕೊಳ್ಳುತ್ತಿದ್ದರು. ಉದಾಹರಣೆಗೆ, ಅವರು ೧೮೫೩ರಲ್ಲಿ ಬ್ರಿಟೀಷ ವಸಾಹತುಶಾಹಿಗಳ ದಾಖಲೆಗಳನ್ನು ಆಧರಿಸಿ ಬ್ರಿಟಿಷ್ ವಸಾಹತುಶಾಹಿಯು ಭಾರತದ ಆರ್ಥಿಕ ಪರಿವರ್ತನೆಯಲ್ಲಿ ಚರಿತ್ರೆ ವಹಿಸಿದ ಪಾತ್ರವನ್ನು ಅಪ್ರಜ್ನಾಪೂರ್ವಕವಾಗಿ ನಿರ್ವಹಿಸುತ್ತಿದೆ ಎಂದು  ಬರೆದಿದ್ದರು. ಆದರೆ ೧೮೮೧ರಲ್ಲಿ ತಮಗೆ ಲಭ್ಯವಾಗಿದ್ದ ಇತರ ಮತ್ತು ವಸಾಹತುಶಾಹಿಯ ವಿನಾಶಕಾರಿ ಪರಿಣಾಮಗಳನ್ನು ಅರಹುತ್ತಿದ್ದ ಸಾಕ್ಷ್ಯಗಳನ್ನು ಗಮನಿಸಿ ತಮ್ಮ ಮೊದಲಿನ ಗ್ರಹಿಕೆಯನ್ನು ಬದಲಾಯಿಸಿಕೊಂಡರು. ಮತ್ತು ಬ್ರಿಟಿಷರು ಭಾರತವನ್ನು ಆಕ್ರಮಣಕಾರಿಯಾಗಿ ಲೂಟಿ ಹೊಡೆಯುತ್ತಾ ಭಾರತದಲ್ಲಿ ನಿಲ್ಲದ ರಕ್ತಸ್ರಾವಕ್ಕೆ ಕಾರಣರಾಗುತ್ತಿದ್ದಾರೆ ಎಂದು ಬರೆದರು. ಅನುಭವ ಮತ್ತು ಪರಿಣಾಮಗಳಿಂದ ಒದಗುತ್ತಿದ್ದ ಸಾಕ್ಷಿಗಳ ಬಗ್ಗೆ ಅವರು ಸದಾ ತೆರೆದ ಮನಸ್ಸನ್ನು ಹೊಂದಿದ್ದರು. ಮೇಲಾಗಿ ಅವರ ಪರಿಕಲ್ಪನೆಗಳು ಮತ್ತು ನಿರ್ವಚನಗಳು ಹೊಸ ಮತ್ತು ಬದಲಾಗುತ್ತಿರುವ ಚಾರಿತ್ರಿಕ ಸಂದರ್ಭಗಳಿಗೆ ಅಳವಡಿಸಿಕೊಳ್ಳಲು ಅನುವಾಗುವಂತೆ ಮುಕ್ತವಾಗಿರುತ್ತಿದ್ದವು.

ಮೊದಮೊದಲು ಮಾರ್ಕ್ಸ್ ಅವರು ಒಬ್ಬ ಭಾವನಿಷ್ಟ ಆದರ್ಶವಾದಿಯಾಗಿದ್ದರು. ನಂತರ ಅವರು ಕ್ರಮೇಣವಾಗಿ  ಫ್ರೆಡರಿಕ ಹೆಗೆಲ್ ಮತ್ತು  ಲುಡ್ವಿಗ್ ಫ್ಯುಯರಬಾಕ್‌ರನ್ನೂ ಒಳಗೊಂಡಂತೆ ಹಲವಾರು ತತ್ವಶಾಸ್ತ್ರಜ್ನರ ಕಟು ಟೀಕಾಕಾರರಾದರು, ತನ್ನ ಸುತ್ತಲೂ ಅಸ್ಥಿತ್ವದಲ್ಲಿದ್ದ ಕಠೋರ ಜೀವನ ಸ್ಥಿತಿಗತಿಗಳನ್ನು ಬಗ್ಗೆ ಅಪಾರ ಕಾಳಜಿ ವಹಿಸುತ್ತಾ ತಮ್ಮದೇ ಆದ ಗತಿತಾರ್ಕಿಕ ಮತ್ತು ಚಾರಿತ್ರಿಕ ಭೌತಿಕವಾದವನ್ನು ಅವರು ಬೆಳೆಸಿದರು. ಆ ನಂತರ ಅವರ ಚಿಂತನಾ ಮಾದರಿಯಲ್ಲಿ ಯಾವ ತೀವ್ರ ಬದಲಾವಣೆಗಳು ಬರಲಿಲ್ಲ. ಕೆಲವರು ಯುವ ಮಾರ್ಕ್ಸ್  ಮತ್ತು ಪ್ರೌಢ ಮಾರ್ಕ್ಸ್ರ ನಡುವೆ ಒಂದು ಸಾವಯವ ಬಂಧವನ್ನು ಗುರುತಿಸುತ್ತಾರೆನ್ನುವುದೇನೋ ನಿಜವೇ. ಅವರ ಚಿಂತನೆಯ ಮೇಲೆ ಗಾಢ ಪ್ರಭಾವ ಬೀರಿದ ಸಿದ್ಧಾಂತಗಳೆಂದರೆ ಜರ್ಮನ್ ತತ್ವಶಾಸ್ತ್ರ, ಫ್ರೆಂಚ್ ಸಮಾಜವಾದ ಮತ್ತು ಬ್ರೀಟಿಷ್ ರಾಜಕೀಯ ತತ್ವಶಾಸ್ತ್ರ ಹಾಗು ಬಹಳ ಕಾಲದ ನಂತರ ರಷಿಯಾದ ಪಾಪ್ಯುಲಿಸಂ ಕೂಡಾ ಅವರ ಚಿಂತನೆಯ ಮೇಲೆ ಪ್ರಭಾವ ಬೀರಿದ್ದವು.

ತಮ್ಮ ಮೇರುಕೃತಿ ಬಂಡವಾಳದಲ್ಲಿ ಅವರು ಒಂದು ವಿಶಿಷ್ಟ ವಿಶ್ಲೇಷಣಾ ಪದ್ಧತಿಯನ್ನು ಅನುಸರಿಸಿದ್ದಾರೆ. ಹೆಚ್ಚು ಅಮೂರ್ತವಾಗಿರುವ ಒಂದು ಪರಿಕಲ್ಪನೆಯಿಂದ ಪ್ರಾರಂಭಿಸುತ್ತಾ, ಅದನ್ನು ಹಂತಹಂತವಾಗಿ ವಿಶ್ಲೇಷಿಸುತ್ತಾ, ಪ್ರತಿಯೊಂದು ವಿಶ್ಲೇಷಣಾ ಹಂತದಲ್ಲೂ ಸರಳೀಕೃತಗೊಳ್ಳುವ ಅಂದಾಜುಗಳನ್ನು ಕೈಬಿಡುತ್ತಾ ಹೆಚ್ಚೆಚ್ಚು ನಿರ್ದಿಷ್ಟೀಕರಣದೆಡೆಗೆ ಸಾಗುವ ಪದ್ಧತಿಯನ್ನು ಮಾರ್ಕ್ಸ್ ಬಂಡವಾಳದ ವಿಶ್ಲೇಷಣೆಯಲ್ಲಿ ಅಳವಡಿಸಿದ್ದಾರೆ. ಈ ಅಮೂರ್ತವನ್ನು ಮೂರ್ತರೂಪಕ್ಕಿಳಿಸುವ ಪದ್ಧತಿಯೇ ಮುಂದೆ ಹಂತವಾರು ಅಂದಾಜು (ಸಕ್ಸಸೀವ್ ಅಪ್ರಾಕ್ಸಿಮೇಷನ್ಸ್) ಎಂದು ಹೆಸರುವಾಸಿಯಾಯಿತು.

ಪ್ರತಿಯೊಂದು ವಿಶ್ಲೇಷಣಾ ಹಂತಗಳಲ್ಲೂ ಆವರೆಗಿನ ವಾಸ್ತವ ವಿದ್ಯಮಾನಗಳನ್ನು ಸಾರ್ವತ್ರೀಕರಿಸುವ ಸಿದ್ಧಾಂತವು ರೂಪಗೊಳ್ಳುತ್ತದೆ. ಮತ್ತು ಅದು ಆ ವಾಸ್ತವ ವಿದ್ಯಮಾನದ ವಿಸ್ತೃತ ಸ್ವರೂಪವನ್ನು ವಿವರಿಸತೊಡಗುತ್ತದೆ. ಹೀಗೆ ಪ್ರತಿ ಹಂತದ ಅಮೂರ್ತ ಸಿದ್ಧಾಂತೀಕರಣವು ವಾಸ್ತವ ಪ್ರಪಂಚದ ಪ್ರಮುಖ ಅಂಶಗಳನ್ನು ಪ್ರತ್ಯೇಕಗೊಳಿಸಿ ಮತ್ತಷ್ಟು ತೀವ್ರತರನಾದ ಪರಿಶೋಧನೆಗೆ ಅನುವು ಮಾಡಿಕೊಡುತ್ತದೆ. ಉದಾಹರಣೆಗೆ ಬಂಡವಾಳ ಕೃತಿಯ ಸಂಪುಟ ೧ ರಲ್ಲಿರುವ ಬಂಡವಾಳ-ಶ್ರಮದ ನಡುವಿನ ಸಂಬಂಧಗಳನ್ನು ಕುರಿತಾದ ಅಮೂರ್ತೀಕರಣವನ್ನು ಪರಿಶೀಲಿಸಬಹುದು. ಕೆಳಹಂತದ ಅಮೂರ್ತೀಕರಣದಲ್ಲಿ (ಅಬ್ಸ್ಟ್ರಾಕ್ಷನ್) ವಾಸ್ತವತೆಯ ಹೆಚ್ಚಿನ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡಿರಲಾಗುತ್ತದೆ. ಅವು ಉನ್ನತ ಹಂತದ ಅಮೂರ್ತೀಕರಣದಲ್ಲಿ ಅಭಿವ್ಯಕ್ತಿಗೊಳ್ಳುವ ವ್ಯತ್ಯಾಸಗಳನ್ನು ಬದಲಾಯಿಸಬಹುದು.

ಎಲ್ಲಕ್ಕಿಂತ ಮುಖ್ಯವಾಗಿ ಮಾರ್ಕ್ಸ್ ಅವರ ಪದ್ಧತಿಯಲ್ಲಿ ಚಾರಿತ್ರಿಕ ದೃಷ್ಟಿಕೋನವೂ ಹಾಸುಹೊಕ್ಕಾಗಿದೆ. ಒಂದು ನಿರ್ದಿಷ್ಟ ಸಾಮಾಜಿಕ ಸಂಬಂಧಗಳಲ್ಲಿ ಅಂತರ್ಗತವಾಗಿರುವ ಬದಲಾವಣೆಯ ಪ್ರಕ್ರಿಯೆಗಳು ಮಾನವ ಸಮಾಜದ ಒಟ್ಟುಕ್ರಿಯೆಯ ಪರಿಣಾಮವೇ ಆಗಿರುತ್ತದೆ. ಸಮಾಜವು ಬದಲಾಗುತ್ತಿದೆ ಮತ್ತು ಸಮಾಜವನ್ನು ಗತವು ವರ್ತಮಾನಕ್ಕೆ ದಾಟಿಸಿರುವ ಸಂದರ್ಭವು ಹೇರುವ ಮಿತಿಗೆ ಒಳಪಟ್ಟು- ಬದಲಿಲೂಬಹುದು. ಬಂಡವಾಳಶಾಹಿಯೂ ಚಾರಿತ್ರಿಕವಾಗಿ ವಿಕಸನಗೊಂಡಿರುವ ಬಂಡವಾಳಶಾಹಿಯೇ ಆಗಿದೆಯೇ ವಿನಃ ದಿಢೀರ್ ಉದ್ಭವವಾಗಿರುವುದಲ್ಲ. ಹಾಗೆ ಚಾರಿತ್ರಿಕವಾಗಿರದ ಬಂಡವಾಳಶಾಹಿಯೊಂದು ಇರಲು ಸಾಧ್ಯವಿಲ್ಲ. ಹೀಗಾಗಿ ಪಶ್ಚಿಮ ಯೂರೋಪಿನ ಬಂಡವಾಳಶಾಹಿಯನ್ನು ವಿಶ್ಲೇಷಿಸುವಾಗ ಅದು ಹೇಗೆ ಅಸ್ಥಿತ್ವಕ್ಕೆ ಬಂದಿತು, ಯಾವ ರೀತಿಯಲ್ಲಿ ಅದು ಕಾರ್ಯ ನಿರ್ವಹಿಸುತ್ತಿದೆ ಮತ್ತು ಸಮಾಜವನ್ನು ಅದು ಯಾವ ದಿಕ್ಕಿನೆಡೆ ಕೊಂಡೊಯ್ಯಲಿದೆಯೆಂಬುದು ಅತ್ಯಂತ ಪ್ರಮುಖವಾದ ಸಂಗತಿಗಳಾಗಲಿವೆ. ಹೀಗಾಗಿ ಬದಲಾವಣೆಯನ್ನು ಮುಂತೆಗೆದುಕೊಂಡ ಹೋಗಬಯಸುವ ಚಾರಿತ್ರಿಕ ಶಕ್ತಿಗಳಿಗೂ ಮತ್ತು ಯಥಾಸ್ಥಿತಿಯನ್ನು ಕಾಪಾಡಬಯಸುವ ವ್ಯವಸ್ಥೆಗೂ ನಡುವೆ ಸದಾ ಸಂಘರ್ಷವಿದ್ದೇ ಇರುತ್ತದೆ. ಈ ಸಂಘರ್ಷವು ಅಸ್ಥಿತ್ವದಲ್ಲಿದ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಮಾಡಿಕೊಂಡಿದ್ದ ಹೊಂದಾಣಿಕೆಯನ್ನು ಮುರಿಯುವುದರ ಮೂಲಕ ಮಹತ್ವದ ಬದಲಾವಣೆಯನ್ನು ತರುತ್ತದೆ.

ಮಾರ್ಕ್ಸ್ ಅವರು ೧೮೬೦ರಲ್ಲಿ ಬಂಡವಾಳ ಮತ್ತು ಬಂಡವಾಳಶಾಹಿಯ ಬಗ್ಗೆ ಮಾಡಿದ ಈ ವಿಶ್ಲೇಷಣೆಯು ಅತ್ಯಂತ ಕ್ರಾಂತಿಕಾರಕವಾಗಿದ್ದರೂ, ಅಂದಿಗಿಂತ ಇಂದಿನ ಸಮಾಜದಲ್ಲಿ ಮತ್ತು ಆರ್ಥಿಕತೆಗಳಲ್ಲಿ ಅನಿವಾರ್ಯವಾಗಿಯೇ ಅತ್ಯಂತ ಗಣನೀಯವಾದ ಬದಲಾವಣೆಗಳು ಬಂದಿವೆ.  ಹೀಗಾಗಿ ಮಾರ್ಕ್ಸ್ ಅವರು ನಿರಂತರವಾಗಿ ತಮ್ಮ ವಿಧಾನಗಳನ್ನು ಪರಿಷ್ಕರಣೆ ಮಾಡಿಕೊಂಡಂತೆ ನಾವು ಸಹ  ಮಾರ್ಕ್ಸ್ ಪ್ರಾರಂಭಿಸಿದ ಅಧ್ಯಯನವನ್ನು ಈಗಲೂ ಮುಂದುವರೆಸಬೇಕಾದ ಅಗತ್ಯವಿದೆ. ಮಾರ್ಕ್ಸ್ ಅವರ ಸಿದ್ಧಾಂತವು ವಿಮರ್ಶೆ ಮತ್ತು ಬದಲಾವಣೆಗೆ ಮುಕ್ತವಾದ ಸಿದ್ದಾಂತವಾಗಿದ್ದು, ಖಂಡಿತವಾಗಿಯೂ ಮಾರ್ಕ್ಸ್ ಸಹ ತಮ್ಮ ಸಿದ್ಧಾಂತವನ್ನು ಮಾರ್ಕ್ಸ್‌ವಾದಿ ದೃಷ್ಟಿಕೋನದಿಂದ ವಿಮರ್ಶಿಸಿ ಶ್ರೀಮಂತಗೊಳಿಸುವುದನ್ನೇ ಬಯಸುತ್ತಿದ್ದರು.

ಬಂಡವಾಳದ ಸಂಪುಟ ೧ ಪ್ರಕಟಗೊಂಡು ೧೫೦ ವರ್ಷಗಳಾಗಿರುವ ಈ ಸಂದರ್ಭದಲ್ಲಿ ಇಂದಿನ ಹೆಚ್ಚುವರಿ ವಾಸ್ತವ ಸತ್ಯಗಳು  ಅಂದು ಮಾರ್ಕ್ಸ್ ಮಾಡಿದ ಕೆಲವು ಸೈದ್ಧಾಂತಿಕ ಅಮೂರ್ತೀಕರಣಕ್ಕೆ ಹಲವು ಸಾರರೂಪಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕಿರುವುದನ್ನು ಆಗ್ರಹಿಸುತ್ತಿವೆ. ಇಂದು ಬಂಡವಾಳವು ನಿಜವಾಗಿಯೂ ಜಾಗತಿಕವಾಗಿಯೇ ಕಾರ್ಯನಿರ್ವಹಿಸುತ್ತಿದೆ. ಈ ಜಾಗತಿಕ ಬಂಡವಾಳಶಾಹಿ ವ್ಯವಸ್ಥೆಯ ಅಂಚಿನಲ್ಲಿ ಮತ್ತು ಅತಿ ಅಂಚಿನಲ್ಲಿರುವವರು ಈ ವ್ಯವಸ್ಥೆಯ ಕೇಂದ್ರಕ್ಕೆ ಆರ್ಥಿಕವಾಗಿ, ರಾಜಕೀಯವಾಗಿ ಮತ್ತು ಸೈನಿಕವಾಗಿ ಅಧೀನರಾಗಿದ್ದಾರೆ. ಈ ವ್ಯವಸ್ಥೆಯ ಅಂಚಿನಲ್ಲಿ ಮತ್ತು ಅತಿ ಅಂಚಿನಲ್ಲಿರುವವರನ್ನು ಅತಿ ಹೆಚ್ಚಿನ ದರದ ಶೋಷಣೆಗೆ ಗುರಿಪಡಿಸಲಾಗುತ್ತಿದೆ. ಮತ್ತು ಈ ವ್ಯವಸ್ಥೆಯು ಸೃಷ್ಟಿಸುವ ಹೆಚ್ಚುವರಿಯ ಅತಿ ಹೆಚ್ಚು ಪಾಲನ್ನು ವ್ಯವಸ್ಥೆಯ ಕೇಂದ್ರದ ಆಳುವವರ್ಗಗಳು ಮತ್ತು ವೃತ್ತಿಪರ ಆಡಳಿತಗಾರರು ನುಂಗಿಹಾಕುತ್ತಿದ್ದಾರೆ. ಇದು ಈ ವ್ಯವಸ್ಥೆಯ ಶೊಷಕ ಸಾಂಸ್ಥಿಕ ರಚನೆಯ ತಿರುಳಾಗಿದೆ. ಈ ವ್ಯವಸ್ಥೆಯ ಕೇಂದ್ರವು ಇಂದು ಸ್ಥಗಿತತೆಯನ್ನು ಕಾಣುತ್ತಿದೆ. ಅಂದರೆ ಅಗತ್ಯಕ್ಕಿಂತ ಹೆಚ್ಚಿನ ಉತ್ಪಾದನಾ ಸಾಮರ್ಥ್ಯವಿದ್ದರೂ ಆರ್ಥಿಕ ಬೆಳವಣಿಗೆ ಮಂದಗತಿಯಲ್ಲಿದ್ದು , ನಿರುದ್ಯೋಗ ಮತ್ತು ಅರೆ-ಉದ್ಯೋಗದ ಪ್ರಮಾಣಗಳಲ್ಲಿ  ತೀವ್ರವಾದ ಹೆಚ್ಚಳವಾಗಿದೆ. ಇದರಿಂದಾಗಿ ಕೆಲವೇ ಹುರಾಷ್ಟ್ರೀಯ ಕಂಪನಿಗಳ ಅಧಿಪತ್ಯಕ್ಕೆ ಇಡೀ ಜಗ್ಗತ್ತು ಅಧೀನವಾಗಿದೆ. ಮತ್ತು ಬಂಡವಾಳ ಕ್ರೂಢೀಕರಣದ ಪ್ರಕ್ರಿಯೆಯ ಹಣಕಾಸೀಕರಣವು ಹೆಚ್ಚಾಗಿದೆ. ದೊಡ್ಡ ಮತ್ತು ಸಾಪೇಕ್ಷವಾಗಿ ಹೆಚ್ಚು ಸ್ವತಂತ್ರವಾಗಿರುವ ಜಾಗತಿಕ ಹಣಕಾಸು ಸಂಸ್ಥೆಗಳು ಮತ್ತು ಪ್ರಕ್ರಿಯೆಯಗಳು ಜಗತ್ತಿನ ನೈಜ ಆರ್ಥಿಕತೆಯ ಮೇಲೆ ಮತ್ತು ಅದರ ರಾಷ್ಟ್ರೀಯ ಘಟಕಗಳ ಮೇಲೆ ಸವಾರಿ ಮಾಡುತ್ತಿವೆ. ಈ ಹಣಕಾಸು ಮೇಲ್‌ರಚನೆಯು ಪ್ರಪಂಚದ ಪ್ರಮುಖ ನೈಜ ಆರ್ಥಿಕತೆಗಳ ಮೇಲೂ ಹಾಗೂ ಅದರೊಳಗಿನ ಸಂಸ್ಥೆಗಳ ಮೇಲೂ ಪ್ರಭಾವ ಬೀರಿ  ಅವುಗಳ ಆಡಳಿತ ವರ್ಗಗಳೂ ಹಣಕಾಸು ಸಟ್ಟಾಬಾಜಿಯಲ್ಲಿ ತೊಡಗುವಂತೆ ಮನವೊಲಿಸಿವೆ. ನೈಜ ಬಂಡವಾಳ ಕ್ರೂಢೀಕರಣ ಪ್ರಕ್ರಿಯೆಯ ಹಾದಿಗಳು ಲಾಭದಾಯಕವಾಗಿ ಕಾಣದಿರುವುದರಿಂದ ಅವರೂ ತಮ್ಮ ಬಂಡವಾಳವನ್ನು ಹಣಕಾಸು ಸಟ್ಟಾಬಾಜಿ ಉದ್ಯಮದಲ್ಲಿ ಹೂಡುತ್ತಿದ್ದಾರೆ.

ಈ ಮಧ್ಯೆ ನೈಜ ಜಾಗತಿಕ ಆರ್ಥಿಕತೆಯು ಅಂಚಿನಿಂದ ಮತು ಅತಿಅಂಚಿನಿಂದ ಕಾರ್ಮಿಕರು ಕೇಂದ್ರಕ್ಕೆ ವಲಸೆ ಬರುವುದರ ಮೇಲೆ ತೀವ್ರ ನಿರ್ಬಂಧಗಳನ್ನೂ ವಿಧಿಸಿದೆ. ಹಾಗು ಬಹುರಾಷ್ಟ್ರೀಯ ಬಂಡವಾಳವು ಅಂಚು ಮತ್ತು ಅತಿಅಂಚಿನ ರಾಷ್ಟ್ರಗಳ ಉದ್ಯಮಗಳೊಂದಿಗೆ ಅತ್ಯಂತ ಅಸಮಾನವಾದ ಆದರೆ ಪರಸ್ಪರ ಪೂರಕವಾದ ಒಪ್ಪಂದಗಳನ್ನು ಮಾಡಿಕೊಂಡಿದೆ. ಮತ್ತು ಅಲ್ಲಿ ಅಸ್ಥಿತ್ವದಲ್ಲಿರುವ ಅತಿ ಹೆಚ್ಚಿನ ಶೋಷಣಾ ದರದ ಅವಕಾಶಗಳನ್ನು ಬಳಸಿಕೊಂಡು ಆ ಉದ್ಯಮಗಳಲ್ಲಿ ಅಲ್ಲಿನ ಕಾರ್ಮಿಕರು ಸೃಷ್ಟಿಸುವ ಮೌಲ್ಯದ ಬಹು ದೊಡ್ಡ ಪಾಲನ್ನು ಸೂರೆ ಹೊಡೆಯುತ್ತಿವೆ. ಅಂಥ ಬಹುರಾಷ್ಟ್ರೀಯ ಕಾರ್ಪೊರೇಟ್‌ಗಳು ನಡೆಸುವ ಕೊಳ್ಳುಗರ ಆಧಾರಿತ ಜಾಗತಿಕ ಸರಕು ಸಂಸ್ಥೆಗಳ ಸರಣಿ ಜಾಲ ಹಳ್ಳಿಯ ರೈತಾಪಿಯ ಮಟ್ಟಕ್ಕೂ ತಲುಪಿಬಿಟ್ಟಿವೆ. ಯಾವುದೇ ಮಾರುಕಟ್ಟೆ ಶಕ್ತಿಗಳಿಲ್ಲದ ರೈತಾಪಿಯು ಬಂಡವಾಳದ ಶಕ್ತಿಯೆದುರು ಮಂಡಿಯೂರಿ ಮಣಿಯುತ್ತಿದ್ದಾರೆ. ಅವರಿಗೆ ತಮ್ಮ ಉತ್ಪತ್ತಿಯ ಲಾಭವನ್ನು ಮಾತ್ರವಲ್ಲದೆ, ತಾವು ಉತ್ಪತ್ತಿ ಮಾಡುವ ಭೂಮಿಯ ಮೇಲಿನ ಬಾಡಿಗೆಯನ್ನೂ, ಬೆಳೆಯುತ್ತಿರುವ ಸಾಲಕ್ಕೆ ಬಡ್ಡಿಯನ್ನೂ ಹಾಗೂ ತಮ್ಮ ಕೂಲಿಯ ಒಂದು ಭಾಗವನ್ನು ಒಪ್ಪಿಸುತ್ತಾ ಅತ್ಯಧಿಕ ಶೋಷಣೆಗೆ ಒಳಗಾಗುತ್ತಿದ್ದಾರೆ.

ಹೀಗಾಗಿ ವರ್ತಮಾನದ ಬಂಡವಾಳ ಮತ್ತು ಜಾಗತಿಕ ಮಟ್ಟದ ಬಂಡವಾಳಶಾಹಿಯ ವಿಮರ್ಶಾತ್ಮಕ ವಿಶ್ಲೇಷಣೆಯನ್ನು ಒಳಗೊಳ್ಳುವ ಇಂದಿನ ಬಂಡವಾಳ ಕೃತಿಯು ಅಂದಿನ ಬಂಡವಾಳ ಕೃತಿಯ ಸಂಪುಟ ೧, ೨, ಮತ್ತು ೩ಕ್ಕಿಂತ ತುಂಬಾ ಭಿನ್ನಾವಗಿರುತ್ತದೆ. ಸ್ಥಳಾವಕಾಶದ ಕೊರತೆ ಇರುವುದರಿಂದ ಇಂದಿನ ಬಂಡವಾಳ ಕೃತಿಯಲ್ಲಿ ಏನೇನು ಇರಬೇಕಾಗುವುದು ಎನ್ನುವುದನ್ನು ಸಂಕ್ಷಿಪ್ತವಾಗಿ ಹೀಗೆ ಪಟ್ಟಿ ಮಾಡಬಹುದು:

ಜಾಗತಿಮ ಮಟ್ಟದಲ್ಲಿ ವರ್ಗ ವಿಶ್ಲೇಷಣೆ; ಶ್ರಮಶಕ್ತಿಯ ಮೌಲ್ಯ ಮತ್ತು ಅತಿ ಅಂಚಿನಲ್ಲಿ. ಅಂಚಿನಲ್ಲಿ ಮತ್ತು ಕೇಂದ್ರದಲ್ಲಿ ಭಿನ್ನವಾಗುವ ಅದರ ದರಗಳು; ಅತ್ಯಧಿಕ ಶೋಷu (ಸೂಪರ್ ಎಕ್ಸ್‌ಪ್ಲಾಯ್ಟೇಷನ್) ಮತ್ತು ಅಸಮಾನ ಹಂಚಿಕೆಯ ಒಂದು  ಮೌಲ್ಯ ಸಿದ್ಧಾಂತ; ಕೆಲವೇ ಕಾರ್ಪೊರೇಟ್‌ಗಳ ಹಿಡಿತದಲ್ಲಿರುವ ಮಾರುಕಟ್ಟೆ ರಚನೆಯಲ್ಲಿ ಹೆಚ್ಚುವರಿ ಮೌಲ್ಯದ ವಿತರಣೆಯನ್ನು ವಿವರಿಸುವ ಒಂದು ಮೌಲ್ಯ ಸಿದ್ಧಾಂತ; ಬಂಡವಾಳದಿಂದ ಶೋಷಣೆಗೊಳಪಡುವ ಬಡ ರೈತರು ಮತ್ತು ಇತರ ಸಣ್ಣ ಸರಕು ಉತ್ಪಾದಕರು; ಶ್ರಮಶಕ್ತಿಯೆಂಬ ಸರಕನ್ನು ಪುನರುತ್ಪಾದಿಸುವ ಕೂಲಿ ರಹಿತ ಮನೆಗೆಲಸ; ಬಹುಸಂಖ್ಯಾತರನ್ನು ಸಂಪೂರ್ಣವಾಗಿ ಅಧಿಕಾರಹೀನರನ್ನಗಿಸುವ ಶ್ರಮಿಕೀಕರಣ; ನೈಸರ್ಗಿಕ ಸಂಪನ್ಮೂಲಗಳ ದೋಚುವಿಕೆ ಮತ್ತು ಏಕಸ್ವಾಮ್ಯಕ್ಕೆ ಅಧೀನವಾದ ಶುಲ್ಕ ವ್ಯವಸ್ಥೆ; ಅಸಹನೀಯ ಮಟ್ಟದಲ್ಲಿ ಪ್ರಕೃತಿಯಿಂದ ಉಪಯುಕ್ತ ಮೌಲ್ಯಗಳ ಲೂಟಿ ಮತ್ತು ಅದರಿಂದ ಆಗುವ ವ್ಯರ್ಥ ಉತ್ಪಾದನೆಯನ್ನು ಮತ್ತು ಬಳಕೆಯನ್ನು ಪ್ರಕೃತಿಯು ತಾಳಿಕೊಳ್ಳಾಲಾದ ಮಟ್ಟಿಗೆ ಅದರ ಮೇಲೆ ಸುರಿಯುತ್ತಿರುವುದು; ಪರಿಸರ ಸಾಮ್ರಾಜ್ಯವಾದ; ಅಸ್ಥಿರತೆ, ಬಿಕ್ಕಟ್ಟು ಮತ್ತು ನೈಜ ಬೇಡಿಕೆಯ ಸಮಸ್ಯೆ; ಹಣಕಾಸಿಕರಣ (ಫೈನಾನ್ಸಿಯಲಜೇಷನ್), ಹಣಕಾಸು ಮೇಲ್‌ರಚನೆ ಮತ್ತು ನೈಜ ಆರ್ಥಿಕತೆಯೊಂದಿಗೆ ಅದರ ಸಂಬಂಧ ಮತ್ತು ಅದರ ಪರಿಣಾಮಗಳು; ಏಕಸ್ವಾಮ್ಯ ಹಣಕಾಸು ಬಂಡವಾಳ; ಅಸ್ಥಿದ್ವಲ್ಲಿರುವ ಸರಕುಗಳಿಗೆ ಸೇರ್ಪಡೆ ಆಗುವ ಸಂಗ್ರಹವನ್ನೂ ಮತ್ತು ಅಸ್ಥಿತ್ವದಲ್ಲಿರುವ ಹಣಕಾಸು ಆಸ್ತಿ-ಪಾಸ್ತಿಯ ಸಂಗ್ರಹಕ್ಕೆ ಆಗುವ ಸೇರ್ಪಡೆಗಳೆರಡನ್ನೂ ಮತ್ತು ಅವುಗಳೆರಡರ ಅಂತರ್ ಸಂಬಂಧಗಳನ್ನು ಗಣನೆಗೆ ತೆಗೆದುಕೊಳ್ಳುವ ಒಂದು ಬಂಡವಾಳ ಕ್ರೂಢೀಕರಣ ಸಿದ್ಧಾಂತ; ಬಂಡವಾಳದ ಒಂದು ರಾಜಕೀಯ ಮೇಲಾಳ್ವಿಕೆಯ ರಚನೆಯಾಗಿ ಪ್ರಭುತ್ವ; ಮಾರಾಟ ಪ್ರಾಯಾಸಗಳು; ನಾಗರಿಕರ ಸರ್ಕಾರ; ಮಿಲಿಟರಿವಾದ ಮತ್ತು ಸಾಮ್ರಾಜ್ಯವಾದ; ಪ್ರಮುಖ ವೈರುಧ್ಯಗಳು, ಪ್ರಧಾನ ವೈರುಧ್ಯ; ಮತ್ತು ಸಮಾಜವಾದಿ ಸಾಮಾಜಿಕ ಕ್ರಾಂತಿ.

ಮಾರ್ಕ್ಸ್ ಜನಿಸಿ ೨೦೦ ವರ್ಷಗಳಾದ ನಂತರದ ಈ ಸಂದರ್ಭದಲ್ಲಿ ನಮ್ಮ ಮುಂದಿರುವ ಸವಾಲೆಂದರೆ ಆವರ ಚಿಂತನಾ ಮಾದರಿಯಾದ ಚಾರಿತ್ರಿಕ ಮತ್ತು ಗತಿತಾರ್ಕಿಕ ಭೌತಿಕವಾದಿ ವಿಧಾನದಲ್ಲಿ ಇಂದಿನ ಪ್ರಪಂಚವನ್ನು ಮರು ವ್ಯಾಖ್ಯಾನ ಮಾಡುವುದು. ಮಾತು ಆ ಪ್ರಕ್ರಿಯೆಯಲ್ಲಿ ನಾವು ಅನುಸರಿಸಿಕೊಂಡು ಬಂದಿರುವ ಹಳೆಯ ವ್ಯಾಖ್ಯಾನಗಳನ್ನು ಮರು ವಿಮರ್ಶೆಗೊಳಪಡಿಸುವುದು. ಎಲ್ಲಕ್ಕಿಂತ ಮುಖ್ಯವಾಗಿ ಮಾರ್ಕ್ಸ್ ನೀಡಿರುವ ಚಾರಿತ್ರಿಕ ವಿವರಣೆಯು ಮನುಷ್ಯ ಜೀವಿಯು ಬದುಕಿರುವವರೆಗೂ ಅನ್ವಯವಾಗುತ್ತದೆಂಬ ತಪ್ಪು ತಿಳವಳಿಕೆಯನ್ನು ನೀಗಿಕೊಳ್ಳಬೇಕು. ಮತ್ತು ಅಂಥ ತಿಳವಳಿಕೆಯನ್ನು ನೀಡುವ ರೀತಿಯಲ್ಲಿ ಚಾರಿತ್ರಿಕ ಭೌತಿಕವಾದವನ್ನು ಕುಬ್ಜೀಕರಿಸಬಾರದು. ಆ ಮೂಲಕ  ಮಾರ್ಕ್ಸ್‌ವಾದವನ್ನು  ಆರ್ಥಿಕ ನಿಯಾಮಕವಾzವೆಂಬ ರೀತಿಯಲ್ಲಿ ಗ್ರಹಿಸಿಕೊಂಡಿರುವ ಮಾರ್ಕ್ಸ್‌ವಾದದ ಬಗೆಗಿನ ಯಾಂತ್ರಿಕ ತಿಳವಳಿಕೆಯನ್ನು  ತೊಡೆದುಹಾಕಬೇಕಿದೆ.

ಜಗತ್ತನ್ನು ಪುನರ್‌ವ್ಯಾಖ್ಯಾನ ಮಾಡಿಕೊಂಡು ಅದನ್ನು ಒಂದು ಸಮಾಜವಾದಿ ಸಾಮಾಜಿಕ ಕ್ರಾಂತಿಯ ಮೂಲಕ ಬದಲಿಸಬೇಕಾದ ಸವಾಲು ಹಿಂದೆಂದಿಗಿಂತಾ ಇಂದು ಹೆಚ್ಚಿನ ತುರ್ತಿನದಾಗಿದೆ. ಏಕೆಂದರೆ ಬಂಡವಾಳ ಮತ್ತು ಬಂಡವಾಳಶಾಹಿಯು ಹೀಗೆಯೇ ಮುಂದುವರೆದರೆ ಮನುಕುಲಕ್ಕೆ ಇನ್ನು ೨೦೦ ವರ್ಷಗಳ ಕಾಲಾವಧಿಯಂತೂ ದಕ್ಕುವುದಿಲ್ಲ..

 

ಕೃಪೆ: Economic and Political Weekly

ಅನು: ಶಿವಸುಂದರ್

Leave a Reply

Your email address will not be published.

Social Media Auto Publish Powered By : XYZScripts.com