ನೆನಪಿಡಿ…ಬಿಜೆಪಿ ಚುನಾವಣೆಗಾಗಿ ಮಾತ್ರ ಹಿಂದುತ್ವದ ನಾಟಕವಾಡುತ್ತಿದೆ : ಕಮಲ ಪಾಳಯದ ವಿರುದ್ಧ ಮುತಾಲಿಕ್‌ ಕಿಡಿ

ಎರಡು ರಾಷ್ಟ್ರೀಯ ಪಕ್ಷಗಳು ಹಿಂದೂಗಳಿಗೆ ಮೋಸ ಮಾಡುತ್ತಿವೆ ಎಂದು ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ. ಯುಪಿಎ ಹಾಗೂ ಎನ್. ಡಿ.ಎ ರಂಗದ ವಿರುದ್ಧ ಸಮಾನ ಮನಸ್ಕ ಹಿಂದೂ ಸಂಘಟನೆಗಳ ವೇದಿಕೆಗೆ ಇಂದು ಚಾಲನೆ ದೊರೆತಿದೆ.

 

ಇದೇ ವೇಳೆ ಮಾತನಾಡಿದ ಮುತಾಲಿಕ್‌, ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಬಿಜೆಪಿ ಚುನಾವಣೆಯಲ್ಲಿ ಮತಗಳಿಸಲು ಮಾತ್ರ ಹಿಂದುತ್ವ ಉಪಯೋಗಿಸುತ್ತಿದೆ. ಅಧಿಕಾರ ಸಿಕ್ಕ ನಂತರ ಹಿಂದುತ್ವ ಮರೆತು ಅಧಿಕಾರದ ಹಿಂದೆ ಬೀಳುವ ಮೂಲಕ ಹಿಂದೂಗಳಿಗೆ ಮೋಸ ಮಾಡುತ್ತಿದೆ ಎಂದು ಆರೋಪಿಸಿದರು. ಬಿಜೆಪಿ ಪ್ರಣಾಳಿಕೆ ಬಗ್ಗೆ ಟೀಕಿಸಿದ ಪ್ರಮೋದ್ ಮುತಾಲಿಕ್ ಟಿಪ್ಪು ಜಯಂತಿ ನಿಷೇಧ, ಗೋಹತ್ಯೆ ನಿಷೇಧ, ದತ್ತ ಪೀಠದ ವಿಚಾರವಾಗಲಿ ಇದ್ಯಾವುದನ್ನೂ ಪ್ರಣಾಳಿಕೆಯಲ್ಲಿ ಸೇರಿಸದೆ ಹಿಂದೂಗಳಿಗೆ ಮೋಸಮಾಡಿದ್ದು, ಈ ವಿಷಯಗಳ ಬಗ್ಗೆ ಬಿಜೆಪಿ ಭಾಷಣ ಮಾಡಲಷ್ಟೇ ಸೀಮಿತವಾಗಿದೆ ಎಂದರು.

ಮೈಸೂರಿನ ವರುಣಾ ಕ್ಷೇತ್ರದಲ್ಲಿ ಯಡ್ಯೂರಪ್ಪನ ಮಗನಿಗೆ ಟಿಕೆಟ್ ತಪ್ಪಿದ್ದಕ್ಕೆ, ಬಿಜೆಪಿ ಕಾರ್ಯಕರ್ತರು ಭಗವತ್ ದ್ವಜ ಸುಟ್ಟಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು .ಇನ್ನು ಬಿಜೆಪಿ ಭ್ರಷ್ಟಾಚಾರದ ವಿರುದ್ಧ ನಾನು ಹೋರಾಟ ಮಾಡುವುದಾಗಿ ಹೇಳಿರುವ ಮುತಾಲಿಕ್‌, ಪಕ್ಕದಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತಿರುವ ಯಡಿಯೂರಪ್ಪ ನೀಲಿ ಚಿತ್ರ ನೋಡಿದವರನ್ನು ಅತ್ಯಾಚಾರಿಗಳನ್ನು ಸೇರಿಸಿಕೊಂಡಿದೆ ಎಂದು ಹರಿಹಾಯ್ದಿದ್ದಾರೆ.

ಮುತಾಲಿಕ್ ನೇತೃತ್ವದಲ್ಲಿ 6 ಹಿಂದುಪರ ಸಂಘಟನೆಗಳು ಒಟ್ಟುಗೂಡಿ ಸಂಯುಕ್ತ ಕೇಸರಿ ರಂಗ ಎಂಬ ಹೆಸರಿನಲ್ಲಿ ಈ ಸಂಘಟನೆಯನ್ನು ಅನಾವರಣಗೊಳಿಸಲಾಗಿದೆ. ಸದ್ಯ ಕರ್ನಾಟಕ ರಾಜ್ಯದಲ್ಲಿ ಹಿಂದುತ್ವ ಉಳಿವಿಗಾಗಿ ಹೋರಾಟ ನಡೆಸಲಿದೆ. ಮುಂದಿನ ದಿನಗಳಲ್ಲಿ ಭಾರತದಾದ್ಯಂತ ಹೋರಾಟ ನಡೆಸಲಿದೆ. ಈ ರಂಗದಲ್ಲಿ ಶ್ರೀರಾಮಸೇನೆ. ಜನಸಂಘ, ಶಿವಸೇನೆ, ಅಖಿಲ ಭಾರತ ಶಬರಿಮಲೆ ಅಯ್ಯಪ್ಪ ಸ್ವಾಮಿ ಸೇವಾಸಂಸ್ಥೆ ಸೇರಿದಂತೆ 6 ಸಂಘಟನೆಗಳ ಒಕ್ಕೂಟ ಇದು ಎಂದು ಮಾಹಿತಿ ನೀಡಿದ್ದಾರೆ.

Leave a Reply

Your email address will not be published.