ಪ್ರಧಾನಿ ಮೋದಿಯ ಬೇಜವಾಬ್ದಾರಿ ಸವಾಲಿಗೆ ಖರ್ಗೆಯ ಜವಾಬ್ದಾರಿಯುತ ಜವಾಬು

ಬೆಂಗಳೂರು : ನನ್ನ ಕ್ಷೇತ್ರಕ್ಕೆ ಬಂದು ಹೈದ್ರಾಬಾದ್ ಕರ್ನಾಟಕದ ಅಭಿವೃದ್ದಿಗೆ ನನ್ನ‌ ಕೊಡುಗೆ ಏನು ಅಂತ ಕೇಳ್ತಿರಾ? ಸಂವಿಧಾನಕ್ಕೆ 371(J) ವಿಧಿ ಸೇರಿಸಿ ಈ ಭಾಗಕ್ಕೆ ವಿಶೇಷ ಸ್ಥಾನಮಾನ ಕೊಟ್ಟಿದ್ದು ನೀವಾ? ಎಂದು  ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ಮೋದಿ ಅವರಿಗೆ ಪ್ರಶ್ನಿಸಿದ್ದಾರೆ.

ಈ ಭಾಗ ಹಿಂದುಳಿದಿದೆ, ಇಲ್ಲಿನ ಮಕ್ಕಳಿಗೆ ಶಿಕ್ಷಣದಲ್ಲಿ, ಉದ್ಯೋಗದಲ್ಲಿ ಮೀಸಲಾತಿ ಕೊಡುವ ಹಾಗೆ ಸಂವಿಧಾನಕ್ಕೆ 371(J) ವಿಧಿ ಸೇರಿಸಿ ವಿಶೇಷ ಸ್ಥಾನಮಾನ ಕೊಡಿ ಅಂತ ನಾವೆಲ್ಲಾ ಬಂದು ನಿಮ್ಮ NDA ಸರ್ಕಾರವನ್ನು ಕೇಳಿಕೊಂಡಾಗ ನೀವು ಏನು ಹೇಳಿದ್ರಿ ನೆನಪಿದೆಯಾ? ವಾಜಪೇಯಿ ಸರ್ಕಾರದಲ್ಲಿ ಉಪಪ್ರಧಾನಿಯಾಗಿದ್ದ ಎಲ್.ಕೆ.ಅಡ್ವಾಣಿ “ಇದು ಎಂದಿಗೂ ಸಾಧ್ಯವಿಲ್ಲ” ಅಂತ ಲಿಖಿತವಾಗಿ ಕರ್ನಾಟಕದ ಎಸ್.ಎಂ. ಕೃಷ್ಣ ಸರ್ಕಾರಕ್ಕೆ ಪತ್ರ ಬರೆದು ನಿರಾಕರಿಸಿದ್ದು ನಿಮಗೆ ನೆನಪಿದೆಯೋ ಇಲ್ಲವೋ? ನೀವು ಯಾವುದನ್ನು ಸಾಧ್ಯವೇ ಇಲ್ಲ ಅಂದಿದ್ರೋ ಅದನ್ನು ನಾವು ಮಾಡಿ ತೋರಿಸಿದ್ದೇವೆ. ವರ್ಷಕ್ಕೆ ಈ ಭಾಗಕ್ಕೆ 100 ಮೆಡಿಕಲ್ ಸೀಟು ಸಿಗುತ್ತಿರಲಿಲ್ಲ. ಈಗ ನಾವು ವಿಶೇಷ ಸ್ಥಾನಮಾನ ಕೊಟ್ಟ ಮೇಲೆ ವರ್ಷಕ್ಕೆ 780 ಸೀಟು ಸಿಗುತ್ತಿವೆ. ಅರ್ಜಿ ಹಾಕಿದ ಎಲ್ಲರಿಗೂ ಎಂಜಿನಿಯರಿಂಗ್ ಸೀಟು ಸಿಗುತ್ತಿವೆ. ರಾಜ್ಯದ ಎಲ್ಲಾ ಭಾಗಕ್ಕೂ ಸಿಗುವ ಬಜೆಟ್ ಅನುದಾನವಲ್ಲದೇ ಈ ಭಾಗಕ್ಕೆ ನಾಲ್ಕು ವರ್ಷದಲ್ಲಿ ನಾಲ್ಕೂವರೆ ಸಾವಿರ ಕೋಟಿ ರೂಪಾಯಿ ವಿಶೇಷ ಅನುದಾನ ಹೆಚ್ಚುವರಿಯಾಗಿ ಸಿಕ್ಕಿದೆ. ಇದೆಲ್ಲಾ ನೀವು ಮಾಡಿದ ಅಭಿವೃದ್ಧಿ ಕೆಲಸವಾ? ಎಂದು ತರಾಟೆ ತೆಗೆದುಕೊಂಡಿದ್ದಾರೆ.

ಇಡೀ ದೇಶದಲ್ಲಿ ಎಲ್ಲೂ ಇಲ್ಲದಂತಹ ಭವ್ಯವಾದ ESIC ಆಸ್ಪತ್ರೆಯನ್ನು ಕಟ್ಟಿದ್ದು ನಾನು. ಕೇಂದ್ರದಲ್ಲಿ ಕಾರ್ಮಿಕ ಸಚಿವನಾಗಿದ್ದಾಗಲೇ. ಅದರಲ್ಲಿ ಮೆಡಿಕಲ್, ಫಾರ್ಮಸಿ, ಡೆಂಟಲ್ ಕಾಲೇಜು ಪ್ರಾರಂಭ ಮಾಡಿದ್ದೆ. ಪ್ಯಾರಾ ಮೆಡಿಕಲ್ ಕಾಲೇಜು ಸ್ಥಾಪಿಸುವ ಕೆಲಸವೂ 90% ಮುಗಿಸಿದ್ದೆ. ಅಷ್ಟರಲ್ಲಿ ನೀವು ಅಧಿಕಾರಕ್ಕೆ ಬಂದ್ರಿ. ನೀವು ಬಂದು ನಾಲ್ಕು ವರ್ಷ ಆಯಿತು. ನಾನು 90% ಕೆಲಸ ಮಾಡಿದ್ದ ಪ್ಯಾರಾ ಮೆಡಿಕಲ್ ಕಾಲೇಜಿನ ಕೆಲಸ ಮುಗಿಸಿ ಉದ್ಳಾಟನೆ ಮಾಡೋ ಯೋಗ್ಯತೆ ಇಲ್ಲ ನಿಮಗೆ ನಾನೇನು ಮಾಡಿದ್ದೀನಿ ಅಂತ ನನ್ನ ಕ್ಷೇತ್ರಕ್ಕೇ ಬಂದು ಕೇಳ್ತೀರೇನು?ಎಂದು ಹರಿಹಾಯ್ದಿದ್ದಾರೆ.

ಬೀದರ್-ಗುಲ್ಬರ್ಗಾ ರೇಲ್ವೇ ಲೈನ್ ಬಹುತೇಕ ಭಾಗ ಮುಗಿಸಿದ್ದು ನಾನು ರೇಲ್ವೆ ಮಂತ್ರಿಯಾಗಿದ್ದಾಗಲೇ. ಬೀದರ್ – ಹುನ್ನಾಬಾದ್ ನಡುವಿನ ಕೆಲಸ ಮುಗಿಸಿ ಅಲ್ಲಿ ರೈಲು ಸಂಚಾರವನ್ನು ನಾನೇ ಉದ್ಘಾಟನೆ ಮಾಡಿದ್ದು. ಹುಮ್ನಾಬಾದ್ – ಗುಲ್ಬರ್ಗಾ ನಡುವಿನ ಕೆಲಸ ಕೂಡ ಬಹುತೇಕ ಮುಗಿಸಿದ್ದೆ. ಒಂದು ಸುರಂಗ ಕೆಲಸ‌ ಪದೇ ಪದೇ ಸಮಸ್ಯೆ ಮಾಡ್ತಾ ಇತ್ತು. ಅದನ್ನೂ‌ ಸರಿಪಡಿಸಿ ಇನ್ನೇನು ಹುಮ್ನಾಬಾದ್-ಗುಲ್ಬರ್ಗಾ ನಡುವೆಯೂ ರೈಲು ಸಂಚಾರ ಶುರು ಮಾಡಬೇಕೆನ್ನುವಷ್ಟರಲ್ಲಿ ನೀವು ಅಧಿಕಾರಕ್ಕೆ ಬಂದ್ರಿ. ಈಗ ಉಳಿದ ಆ 10% ಕೆಲಸ ಮುಗಿಸಿ ಇಡೀ ಬೀದರ್-ಗುಲ್ಬರ್ಗಾ ರೇಲ್ವೇ ಲೈನ್ ನಾವೇ ಮಾಡಿದ್ದು ಅಂತ ಕೊಚ್ಚಿಕೊಂಡು ಅದರ ಉದ್ಘಾಟನೆ ಮಾಡಿದ್ರಿ. ನಾನು ಮಾಡಿದ ಕೆಲಸಕ್ಕೆ ನಾಚಿಕೆ ಇಲ್ಲದೇ ನೀವು ಕ್ರೆಡಿಟ್ ತಗೊಂಡ್ರಿ. 20 ವರ್ಷದ ಹಿಂದೆ ನಾನು ರಾಜ್ಯದ ಸಹಕಾರಿ ಸಚಿವನಾಗಿದ್ದಾಗ ನಿಂತುಹೋಗಿದ್ದ ಬೀದರಿನ BSSK ಸಕ್ಕರೆ ಕಾರ್ಖಾನೆಯನ್ನು ಪುನಃ ಪ್ರಾರಂಭಿಸಿ ಕಬ್ಬು ಬೆಳೆಗಾರರಿಗೆ ಅನುಕೂಲ ಮಾಡಿದ್ದೆ. ಬಿಜೆಪಿ, ಜೆಡಿಎಸ್ ಆ ಕಾರ್ಖಾನೆಗೆ‌ ಅಧ್ಯಕ್ಷರಾಗಿ ಬಂದು ಅದನ್ನು ಸರ್ವನಾಶ ಮಾಡಿ ಮುಚ್ಚುವಂತೆ ಮಾಡಿದ್ರು.

ಈಗ ನನ್ನ ಕ್ಷೇತ್ರಕ್ಕೆ ಬಂದು ಈ ಭಾಗದ ಅಭಿವೃದ್ಧಿಗೆ ನನ್ನ ಕೊಡುಗೆ ಏನು ಅಂತ ಕೇಳ್ತಿರೇನು? ಅದನ್ನು ಕೇಳುವ ಮೊದಲು ಹೈದರಾಬಾದ್ – ಕರ್ನಾಟಕ ಭಾಗಕ್ಕೆ ನಿಮ್ಮ ಕೊಡುಗೆ ಏನು ಅಂತ ಹೇಳಿ ಎಂದು ಮೋದಿಗೆ ತಿರುಗೇಟು ನೀಡಿದ್ದಾರೆ.

Leave a Reply

Your email address will not be published.