ಬಿಜೆಪಿಗೆ ಸಿದ್ಧಾಂತವಿಲ್ಲ, ಬೇರೆಯವರ ಸಿದ್ದಾಂತವನ್ನು ನಮ್ಮ ಮೇಲೆ ಹೇರುತ್ತಿದ್ದಾರೆ ಅಷ್ಟೇ : ಪ್ರಕಾಶ್ ರೈ

ಹಾಸನ : ಬೇರೆಯವರ ಸಿದ್ಧಾಂತವನ್ನು ನಮ್ಮ ಮೇಲೆ ಹೇರುತ್ತಿದ್ದಾರೆ. ಬಿಜೆಪಿ ಪಕ್ಷಕ್ಕೆ ಯಾವುದೇ ಸಿದ್ಧಾಂತ ಇಲ್ಲ. ನಾನು ಧರ್ಮ ವಿರೋಧಿಯಲ್ಲ. ಧರ್ಮವನ್ನು ರಾಜಕೀಯದಿಂದ ದೂರ ಇಡಿ ಎಂದು ಬಿಜೆಪಿಗೆ ಹೇಳಿರುವುದಾಗಿ ಪ್ರಕಾಶ್ ರೈ ಸ್ಪಷ್ಟಪಡಿಸಿದ್ದಾರೆ.

ಹಾಸನದ ಪತ್ರಕರ್ತರ ಸಂಘದಲ್ಲಿ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಬಿಜೆಪಿ ವಿರುದ್ಧ ಪ್ರಕಾಶ್ ರೈ ವಾಗ್ದಾಳಿ ಮುಂದುವರಿಸಿದರು. ನಾನು ನೂರಿಪ್ಪತ್ತು ರೂಪಾಯಿಯನ್ನು ಇಟ್ಕೊಂಡು ಚೆನ್ನೈಗೆ ಹೋಗಿ ಚಿತ್ರರಂಗದಲ್ಲಿ ಬೆಳೆದು ಈಗ ದಕ್ಷಿಣ ಭಾರತದ ನಟನಾಗಿದ್ದೇನೆ. ಗೌರಿ ಲಂಕೇಶ್ ಕೊಲೆಯಾದ ಬಳಿಕ ನಾನು ವಿಚಲಿತನಾದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿದಂತೆ ಬಿಜೆಪಿ ಪಕ್ಷದಲ್ಲಿಯೂ ಕೊಲೆಗಳಾಗಿವೆ. ಬಹುಸಂಖ್ಯಾತ ಪ್ರಜೆಗಳು ಅಲ್ಪಸಂಖ್ಯಾತರೆ ಇದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ರಾಜಕೀಯಕ್ಕೆ ಬರಬಾರದು ಅಂತ ಏನಿಲ್ಲ. ಆದ್ರೆ ಜವಾಬ್ದಾರಿಯುತ ಪ್ರಜೆಯಾಗಿ ನನಗನ್ನಿಸಿದ್ದನ್ನು ನಾನು ಮಾಡುತ್ತಿದ್ದೇನೆ. ಬಿಜೆಪಿ ಪಕ್ಷಕ್ಕೆ ಯಾವುದೇ ಸಿದ್ಧಾಂತ ಇಲ್ಲ ಎಂದು ಮತ್ತೆ ಪುನರುಚ್ಚರಿಸಿದರು. ನಾನು ಧರ್ಮ ವಿರೋಧಿಯಲ್ಲ ಧರ್ಮವನ್ನು ರಾಜಕೀಯದಿಂದ ದೂರ ಇಡಿ ಎಂದು ಬಿಜೆಪಿಗೆ ಸಲಹೆ ನೀಡಿದೆ ಅಷ್ಟೇ. ನಿಮ್ಮ ಮಗ ಸತ್ತಾಗ ಹೆಂಡ್ತಿ ಜೊತೆ ಓಡಿಹೋಗಿದ್ದಾಗಿ ಬಿಜೆಪಿಯವರು ಟೀಕೆ ಮಾಡಿದರು. ನನ್ನ ಹೆಂಡತಿ ಜೊತೆ ಓದಲು ಹೋದಾಗ ನಾನು ಬೇರೆಯವರ ಜೊತೆ ಪಲ್ಲಂಗದಾಟವಾಡಿದೆ ಅಂತ ಹೀಯಾಳಿಸಿದರು. ಇದು ನನಗೆ ಸಹಿಸಲಾಗಲಿಲ್ಲ. ನಾನು ಯಾವುದೇ ರಾಜಕೀಯ ಪಕ್ಷದ ಜೊತೆಗೆ ನಿಲ್ಲದೆ ಪ್ರಶ್ನೆ ಮಾಡುತ್ತಲೇ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.

ಒಂದು ಪಕ್ಷದವರು ನನ್ನ ವಿರುದ್ಧ ತಿರುಗಿ ಬಿದ್ದು, ನನ್ನ ವೈಯಕ್ತಿಕ ವಿಚಾರಗಳನ್ನು ಕೂಡ ಎಳೆದು ತಂದರು. ಅವರಿಂದ ಸಾಕಷ್ಟು ತೊಂದರೆಯಾಗಿದ್ದರಿಂದ ನಾನು ಅವರ ವಿರುದ್ಧ ಮಾತನಾಡುತ್ತಿದ್ದೇನೆ ಎಂದು ಬಿಜೆಪಿ ವಾಗ್ದಾಳಿಗೆ ಸಮರ್ಥನೆ ಮಾಡಿಕೊಂಡಿದ್ದಾರೆ.

ಬಿಜೆಪಿ ಬಲವಾಗಲು ಸಂಘ ಪರಿವಾರ ಕಾರಣ. ಬಿಜೆಪಿ ಜನರಿಗಾಗಿ ಕೆಲಸ ಮಾಡಲ್ಲ ಅವರ ಸಿದ್ಧಾಂತವನ್ನು ಜನರ ಮೇಲೆ ಹೇರಲು ಮುಂದಾಗಿದ್ದಾರೆ. ಧರ್ಮವನ್ನು ರಾಜಕೀಯದಿಂದ ದೂರವೇ ಬಿಡಿ ಎಂದು ಸಲಹೆ ನೀಡಿದೆ. ಆದರೆ ನಾನು ಹಿಂದೂ ವಿರೋಧಿಯಲ್ಲ ಯಾವುದೇ ಪಕ್ಷಕ್ಕೆ ನಾನು ಸೀಮಿತವಾಗಿಲ್ಲ ಎಂದು ಸ್ಪಷ್ಟಪಡಿಸಿದರು .

Leave a Reply

Your email address will not be published.

Social Media Auto Publish Powered By : XYZScripts.com